ಬೆಳಗಾವಿ, ಜುಲೈ.06: ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಇರುವ ಜಲ ವಿವಾದ ಮಹದಾಯಿ ಯೋಜನೆ (Mahadayi Yojane). ಸದ್ಯ ಈಗ ಮಹದಾಯಿ ಯೋಜನೆಗೆ ಗೋವಾ ಸರ್ಕಾರ (Goa Government)ಮತ್ತೆ ಕ್ಯಾತೆ ತೆಗೆದಿದೆ. ಕೇಂದ್ರ ಸರ್ಕಾರದ ಮೇಲೆ ಗೋವಾ ಸಿಎಂ ಪ್ರಮೋದ್ ಸಾವಂತ (Pramod Sawant) ಒತ್ತಡ ಹಾಕಿದ್ದಾರೆ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ‘ಮಹದಾಯಿ ಪ್ರವಾಹ’ ತಂಡ ರಚಿಸಿದ್ದು ಈ ಬಗ್ಗೆ ಗೋವಾ ಸಿಎಂ ಪ್ರಮೋದ್ ಸಾವಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಗೋವಾ ಸರ್ಕಾರದ ಒತ್ತಡದಿಂದ ಮಹದಾಯಿ ಪ್ರವಾಹ ತಂಡ ಕಣಕುಂಬಿಗೆ ಭೇಟಿ ಕೊಡ್ತಿದೆ ಎಂದು ಗೋವಾ ಸಿಎಂ ಪೋಸ್ಟ್ ಹಾಕಿದ್ದಾರೆ. ನಾಳೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಯ ಮಹದಾಯಿ ಜಲನಯನ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಲಿದೆ. ಸದ್ಯದ ವಸ್ತು ಸ್ಥಿತಿ, ನೀರು ಹರಿದು ಎಲ್ಲಿಗೆ ಹೋಗ್ತಿದೆ ಎಂದು ಪರಿಶೀಲನೆ ನಡೆಸಲಿದೆ.
ಇದನ್ನೂ ಓದಿ: Karnataka Dam Water Level: ತುಂಗಭದ್ರಾ ಅಣೆಕಟ್ಟಿಗೆ ಒಳಹರಿವು ಹೆಚ್ಚಳ, ಜು.06ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ
ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಸಿಎಂ ಸಿದ್ದರಾಮಯ್ಯ, ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಆದಷ್ಟು ಬೇಗ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸುವಂತೆ ಒತ್ತಾಯಿಸಿದ್ರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮಹದಾಯಿ ಪ್ರವಾಹ ತಂಡ ಭೇಟಿ ಕೊಡ್ತಿದೆ. ನಾಳೆ 9 ಗಂಟೆಗೆ ಕಳಸಾ ಮತ್ತು ಬಂಡೂರಿ ನಾಲೆಗೆ ಕೇಂದ್ರ ತಂಡ ಭೇಟಿ ನೀಡಲಿದೆ. ನಾಡಿದ್ದು ಬೆಂಗಳೂರಿನಲ್ಲಿ ಕೆಎನ್ಎಲ್ಎಲ್ ಅಧಿಕಾರಿಗಳ ಜೊತೆಗೆ ಸಭೆ ನಡೆಯಲಿದೆ. ಆ ಬಳಿಕ ತನ್ನದೇ ಆದ ವರದಿಯನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಕಳಸಾ, ಬಂಡೂರಿ ನಾಲೆ ತುಂಬಿ ಹರಿಯುತ್ತಿದೆ.
2018ರಲ್ಲಿಯೇ ಕರ್ನಾಟಕ ರಾಜ್ಯಕ್ಕೆ 13 ಟಿಎಂಸಿ ನೀರು ಹಂಚಿಕೆ ಸಂಬಂಧ ಮಹದಾಯಿ ನ್ಯಾಯಾಧೀಕರಣದಿಂದ ತೀರ್ಪು ಹೊರ ಬಿದ್ದಿತ್ತು. ಇದರಲ್ಲಿ ಕಳಸಾದಿಂದ 1.72 ಟಿಎಂಸಿ, ಬಂಡೂರಿಯಿಂದ 2.18 ಟಿಎಂಸಿ ನೀರು ಹಂಚಿಕೆ ಇದೆ. ಮಹದಾಯಿ ತೀರ್ಪು ಬಂದು 6 ವರ್ಷ ಕಳೆದರೂ ಇದುವರೆಗೂ ಒಂದೇ ಒಂದು ಹನಿ ನೀರು ಸಹ ಕರ್ನಾಟಕಕ್ಕೆ ಸಿಕ್ಕಿಲ್ಲ. ನಾಲ್ಕು ಜಿಲ್ಲೆಯ 13 ತಾಲೂಕಿನ ಜನತೆಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಇನ್ನು ಪರಿಸರ ಇಲಾಖೆ ಅನುಮತಿ ಕರ್ನಾಟಕಕ್ಕೆ ಸಿಗದಂತೆ ತಡೆಯಲು ಗೋವಾ ಸರ್ಕಾರ ಹುನ್ನಾರ ಮಾಡುತ್ತಿದೆ. ಇದೇ ಕಾರಣಕ್ಕೆ ಮಹದಾಯಿ ತೀರ್ಪು ಬಂದರೂ ಪ್ರವಾಹ ತಂಡದ ನೆಪದಲ್ಲಿ ಯೋಜನೆಗೆ ಮತ್ತೆ ಅಡ್ಡಗಾಲು ಹಾಕಲಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ