ಅಂತರ್ಜಲ ಅಧ್ಯಯನಕ್ಕಾಗಿಯೇ ರಾಜ್ಯದ 1199 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಲು ಸಿದ್ಧತೆ

| Updated By: ಸಾಧು ಶ್ರೀನಾಥ್​

Updated on: Jan 22, 2021 | 11:09 AM

ಅಂತರ್ಜಲ ನಿರ್ದೇಶನಾಲಯವು ಅಧ್ಯಯನಕ್ಕಾಗಿ ಕೊಳವೆ ಬಾವಿ ಕೊರೆಯಿಸುವ ಸಂಬಂಧ ಗ್ರಾಮಗಳ ಪಟ್ಟಿ ಮತ್ತು ಎಲ್ಲೆಲ್ಲಿ ಎಷ್ಟು ಕೊಳವೆ ಬಾವಿ ಕೊರೆಯಿಸಬೇಕೆಂಬ ಕುರಿತು ಮಾಹಿತಿ ನೀಡುವಂತೆ ಜಿಲ್ಲಾ ಅಂತರ್ಜಲ ಕಚೇರಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಅಂತರ್ಜಲ ಅಧ್ಯಯನಕ್ಕಾಗಿಯೇ ರಾಜ್ಯದ 1199 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಲು ಸಿದ್ಧತೆ
ಪ್ರಾತಿನಿಧಿಕ ಚಿತ್ರ
Follow us on

ಕೋಲಾರ: ಅಂತರ್ಜಲ ಮಟ್ಟದ ನಿಖರ ಮಾಹಿತಿ ಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರ, ಅಟಲ್ ಭೂಜಲ ಯೋಜನೆಗೆ ಆಯ್ಕೆಯಾದ ಗ್ರಾಮ ಪಂಚಾಯತಿಗಳಲ್ಲಿ ಅಂತರ್ಜಲ ಅಧ್ಯಯನಕ್ಕಾಗಿಯೇ ಕೊಳವೆ ಬಾವಿಗಳನ್ನು ಕೊರೆಯಲು ಮುಂದಾಗಿದೆ. ಮಳೆಯ ತೀವ್ರ ಕೊರತೆಗೆ ಒಳಗಾಗುವ ಪ್ರದೇಶಗಳನ್ನು ಸರ್ಕಾರ ಪ್ರತಿವರ್ಷ ಬರಪೀಡಿತ ಪ್ರದೇಶಗಳೆಂದು ಘೋಷಿಸುತ್ತಿದ್ದು, ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ.

ಬರಪೀಡಿತ ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟ ಅಧ್ಯಯನ ಹಾಗೂ ಫ್ಲೋರೈಡ್​ಯುಕ್ತ ನೀರಿನ ಸಮಸ್ಯೆಗೆ ಒಳಗಾದ ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ಅಟಲ್ ಭೂ ಜಲ ಯೋಜನೆ ಆಯ್ಕೆ ಮಾಡಲಾಗಿದೆ. ಆ ಜಿಲ್ಲೆಗಳಲ್ಲಿನ ಅಂತರ್ಜಲ ಮಟ್ಟದ ನಿಖರ ಅಧ್ಯಯನ ನಡೆಸುವ ಉದ್ದೇಶದಿಂದ ಯೋಜನೆಗೆ ಆಯ್ಕೆಯಾಗಿರುವ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಅಂತರ್ಜಲ ಮೌಲೀಕರಣಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಯಲು ಯೋಜನೆ ರೂಪಿಸಲಾಗಿದೆ.

ಅಂತರ್ಜಲ ಅಧ್ಯಯನ ಕೊಳವೆ ಬಾವಿಯಿಂದ ಅನುಕೂಲವೇನು?
ಅಂತರ್ಜಲ ನಿರ್ದೇಶನಾಲಯ, ಕರ್ನಾಟಕ ಅಂತರ್ಜಲ ಪ್ರಾಧಿಕಾರಗಳು ರಾಜ್ಯದಲ್ಲಿ ಒಟ್ಟು 1,784 ಕೊಳವೆ ಬಾವಿಗಳನ್ನು ಅಧ್ಯಯನಕ್ಕಾಗಿ ಕೊರೆದಿದ್ದು, ಪ್ರತಿ ತಿಂಗಳು ಅಂತರ್ಜಲ ಮಟ್ಟವನ್ನು ದಾಖಲಿಸುತ್ತಿವೆ. ಆದರೆ, ಅಧ್ಯಯನಕ್ಕಿರುವ ಕೊಳವೆ ಬಾವಿಗಳ ಸಂಖ್ಯೆ ಕಡಿಮೆಯಿರುವುದರಿಂದ ನಿಖರವಾದ ಮಾಹಿತಿ ಸರಕಾರಕ್ಕೆ ಲಭ್ಯವಾಗುತ್ತಿಲ್ಲ ಎನ್ನಲಾಗಿದ್ದು, ಆ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕೇವಲ ಅಧ್ಯಯನಕ್ಕಾಗಿಯೇ ಒಂದು ಕೊಳವೆಬಾವಿ ಕೊರೆಯಲು ಯೋಜನೆ ರೂಪಿಸಲಾಗಿದೆ.

ಕೊಳವೆ ಬಾವಿ ಪಟ್ಟಿ ಸಿದ್ಧಪಡಿಸಿ ಕಳಿಸಿರುವ ಅಧಿಕಾರಿಗಳು!
ಅಂತರ್ಜಲ ನಿರ್ದೇಶನಾಲಯವು ಅಧ್ಯಯನಕ್ಕಾಗಿ ಕೊಳವೆ ಬಾವಿ ಕೊರೆಯಿಸುವ ಸಂಬಂಧ ಗ್ರಾಮಗಳ ಪಟ್ಟಿ ಮತ್ತು ಎಲ್ಲೆಲ್ಲಿ ಎಷ್ಟು ಕೊಳವೆ ಬಾವಿ ಕೊರೆಯಿಸಬೇಕೆಂಬ ಕುರಿತು ಮಾಹಿತಿ ನೀಡುವಂತೆ ಜಿಲ್ಲಾ ಅಂತರ್ಜಲ ಕಚೇರಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಅದರಂತೆ ಹಲವು ಜಿಲ್ಲೆಗಳ ಅಧಿಕಾರಿಗಳು ಈಗಾಗಲೇ ಯೋಜನೆಗೆ ಒಳಪಡುವ ಗ್ರಾಮಗಳ ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಕೆ ಮಾಡಿದ್ದು, ಶೀಘ್ರದಲ್ಲಿ ಕೆಲಸಕ್ಕೆ ಚಾಲನೆ ದೊರೆಯಲಿದೆ ಎನ್ನಲಾಗಿದೆ.

ಅಧ್ಯಯನ ಕೊಳವೆಬಾವಿ ಅನುಕೂಲವೇನು?
ಸರ್ಕಾರದಿಂದ ಬರಪೀಡಿತ ಪ್ರದೇಶ, ತಾಲೂಕುಗಳೆಂದು ಘೋಷಿಸಲು ಅಂತರ್ಜಲ ಮಟ್ಟದ ನಿಖರ ಮಾಹಿತಿ ಲಭ್ಯವಾಗುತ್ತದೆ. ಜತೆಗೆ ಅಂತರ್ಜಲ ಮಟ್ಟ ಕುಸಿಯುತ್ತಿರುವ ಅಥವಾ ಹೆಚ್ಚಾಗುತ್ತಿರುವ ಬಗ್ಗೆ ಕಾಲಕಾಲಕ್ಕೆ ಅಂಕಿ-ಅಂಶಗಳು ಸರಕಾರಕ್ಕೆ ಲಭ್ಯವಾಗಲಿವೆ. ಬರಪೀಡಿತ ತಾಲೂಕುಗಳಲ್ಲಿ ಸರ್ಕಾರದ ಕುಡಿಯುವ ನೀರು, ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಮೂಲಕ ನಿರ್ಮಿಸುವ ಕೊಳವೆಬಾವಿಗಳಿಗೆ ಸ್ಥಳ ಆಯ್ಕೆ ಮಾಡುವುದಕ್ಕೂ ಪರೋಕ್ಷವಾಗಿ ಅನುಕೂಲವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಏನಿದು ಅಟಲ್ ಭೂ ಜಲ ಯೋಜನೆ?
ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರವು ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿರುವ ಏಳು ರಾಜ್ಯಗಳಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಅಟಲ್ ಭೂ ಜಲ ಯೋಜನೆ ಆರಂಭಿಸಿದೆ. ಅತಿಯಾದ ಅಂತರ್ಜಲ ಬಳಕೆಯಿಂದ ಫ್ಲೋರೈಡ್​ ಅಂಶವನ್ನೊಳಗೊಂಡ ನೀರಿನ ಸಮಸ್ಯೆ )Fluoride Water) ಎದುರಿಸುತ್ತಿರುವ ರಾಜ್ಯದ 14 ಜಿಲ್ಲೆಗಳ 41 ತಾಲೂಕುಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, 1,199 ಗ್ರಾಮ ಪಂಚಾಯತಿಗಳಲ್ಲಿ ಯೋಜನೆ ಜಾರಿಯಾಗಲಿದೆ. ಯೋಜನೆಗಾಗಿ ಕೇಂದ್ರದಿಂದ ರಾಜ್ಯ ಸರಕಾರಕ್ಕೆ ₹1,234 ಕೋಟಿ ಅನುದಾನ ಲಭ್ಯವಾಗಲಿದೆ.


ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಮಟ್ಟ ಅಧ್ಯಯನ ನಡೆಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಕೊಳವೆ ಬಾವಿ ಕೊರೆಯಿಸಲು ಸೂಕ್ತ ಸ್ಥಳ ಆಯ್ಕೆ ಮಾಡುವಂತೆ ಕೇಂದ್ರ ಕಚೇರಿಯಿಂದ ಸುತ್ತೋಲೆ ಬಂದಿದ್ದು, ಅದರಂತೆ ಪಟ್ಟಿ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ಹಾಗೂ ಕೋಲಾರ ಜಿಲ್ಲಾ ಅಂತರ್ಜಲ ಅಧಿಕಾರಿ ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.

10 ವರ್ಷದಿಂದ ಬತ್ತಿದ್ದ ಕೊಳವೆ ಬಾವಿಗಳಿಗೆ ಮರು ಜೀವ! ಉಕ್ಕುತ್ತಿದ್ದಾಳೆ ಗಂಗೆ..

Published On - 11:05 am, Fri, 22 January 21