ಬೆಂಗಳೂರು: ಕೊರೊನಾ ವಿರುದ್ಧ ರಾಜ್ಯದ ಜನರು ಹೋರಾಡಿದ್ದಾರೆ. ರಕ್ಕಸ ಸೋಂಕಿನ ವಿರುದ್ಧ ಹೋರಾಟದಲ್ಲಿ ಸರ್ಕಾರ ಯಶಸ್ಸು ಕಂಡಿದೆ ಎಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ ಸರ್ಕಾರದ ನಿಯಮಗಳನ್ನು ಜನ ಅಚ್ಚುಕಟ್ಟಾಗಿ ಪಾಲಿಸಿದ್ದಾರೆಂದು ರಾಜ್ಯದಲ್ಲಿರುವ ಕೊರೊನಾ ವಾರಿಯರ್ಸ್ಗೆ ಧನ್ಯವಾದ ತಿಳಿಸಿದರು.
15ನೇ ವಿಧಾನಸಭೆಯ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಫೆಬ್ರವರಿ 5ರ ವರಗೆ ನಡೆಯಲಿದೆ. ಅದಾದ ಬಳಿಕ, ಮುಂದಿನ ಬಜೆಟ್ ಅಧಿವೇಶನದಲ್ಲಿ ಮಾರ್ಚ್ 5 ಶುಕ್ರವಾರ ದಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 2021-22 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.
ಕೊರೊನಾಗೆ ಬಲಿಯಾದ ವಾರಿಯರ್ಸ್ಗೆ 30 ಲಕ್ಷ ರೂಪಾಯಿ ಪರಿಹಾರ ಘೋಷಣೆಯಾಗಿದೆ. ಲಾಕ್ಡೌನ್ ವೇಳೆ ಜನರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿತ್ತು. ಸಂಕಷ್ಟದಲ್ಲಿದ್ದ ಜನರಿಗೆ ನಮ್ಮ ಸರ್ಕಾರ ಪರಿಹಾರ ಕಲ್ಪಿಸಿತ್ತು. ರಾಜ್ಯ ಸರ್ಕಾರ ರೈತರ ಕಲ್ಯಾಣಕ್ಕೆ ಹಲವು ಯೋಜನೆ ನೀಡಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲದೇ ವಿದ್ಯುತ್ ಉತ್ಪಾದನೆಯಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದೇವೆ. ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ ರಾಜ್ಯಪಾಲರು ‘ನನ್ನ ಶಾಲೆ, ನನ್ನ ಕೊಡುಗೆ’ ಯೋಜನೆ ಆರಂಭಿಸಿದ್ದೇವೆ ಎಂದರು.
ಜೊತೆಗೆ ‘ಆತ್ಮ ನಿರ್ಭರ ಭಾರತ’ ಕಾರ್ಯಕ್ರಮ ಉತ್ತಮ ಹೆಜ್ಜೆಯಾಗಿದೆ. ಇದು ಪ್ರಧಾನಿ ಮೋದಿ ದೂರದೃಷ್ಟಿಯ ಕಾರ್ಯಕ್ರಮವಾಗಿದೆ ಎಂದರು. ಭಾರತ ಕೊರೊನಾ ಲಸಿಕೆಯನ್ನು ಉತ್ಪಾದನೆ ಮಾಡಿ ವಿದೇಶಗಳಿಗೂ ಸಹ ಕೊರೊನಾ ಲಸಿಕೆಗಳನ್ನು ರಫ್ತು ಮಾಡುತ್ತಿದೆ. ಇದು ನಮ್ಮ ದೇಶದ ಹೆಮ್ಮೆ ಎಂದು ಹೇಳಿದರು.
ವಿವಿಧ ಕ್ಷೇತ್ರದ ಸ್ಥಾನ
ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2ನೇ, ಸಾರ್ವಜನಿಕ ವ್ಯವಹಾರ ಸೂಚ್ಯಂಕದಲ್ಲಿ 4ನೇ, ಎಸ್ಡಿಜಿ ಭಾರತ ಸೂಚ್ಯಂಕದಲ್ಲಿ 6ನೇ ಸ್ಥಾನದಲ್ಲಿದ್ದು, ಮೀನುಗಾರಿಕೆಯಲ್ಲಿ ವಾರ್ಷಿಕ ಸರಾಸರಿ ಶೇ.2.9ರಷ್ಟು ವೃದ್ದಿಯಾಗಿದೆ ಎಂದರು.
ಅತಿ ಹೆಚ್ಚು ಕೊವಿಡ್ ಟೆಸ್ಟ್
ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ ವಜುಭಾಯಿ ವಾಲಾ 248 ಕೋಟಿ ರೂಪಾಯಿ ವೆಚ್ಚದಲ್ಲಿ 1.36 ಲಕ್ಷ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದರು.
ಉಚಿತ ಪಡಿತರ ವಿತರಣೆ
ದಾಸೋಹ ಯೋಜನೆಯಡಿ ಉಚಿತವಾಗಿ ಪಡಿತರ ಚೀಟಿ ವಿತರಣೆ ಮಾಡಿದ್ದು, 8,919 ಕುಟಂಬಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿ ವಿತರಣೆ ಮಾಡಲಾಗಿದೆ. ಜೊತೆಗೆ ಲಾಕ್ಡೌನ್ ವೇಳೆ 90 ಲಕ್ಷ ಪೌಷ್ಟಿಕ ಆಹಾರ ಪೊಟ್ಟಣಗಳನ್ನು ನೀಡಲಾಗಿದೆ ಎಂದು ಹೇಳಿದರು.
ಹಣಕಾಸು ನೆರವು
ಆಟೋ ಚಾಲಕರು ಮತ್ತು ಮಡಿವಾಳರು ಸೇರಿ ಒಟ್ಟು 63,59,000 ಫಲಾನುಭವಿಗಳಿಗೆ 5,372 ಕೋಟಿ ರೂ. 16.45 ಲಕ್ಷ ಕಾರ್ಮಿಕರಿಗೆ 824 ಕೋಟಿ ರೂ. 11,770 ಚರ್ಮ ಕುಶಲ ಕರ್ಮಿಗಳಿಗೆ ತಲಾ 5 ಸಾವಿರ ಧನ ಸಹಾಯ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರ ಖಾತೆಗೆ ತಲಾ 2000 ಹೆಚ್ಚುವರಿ ಹಣ ನೀಡಿದ್ದು, ಇದಕ್ಕಾಗಿ ಒಟ್ಟು 1,020 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ
1,602 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಾಜ್ಯಾದ್ಯಂತ ನೀರು ಸರಬರಾಜು ಯೋಜನೆ ಮಾಡಲಾಗಿದ್ದು, 2022 ರೊಳಗೆ 72 ಕಿಲೋಮೀಟರ್ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆ BMTCಗೆ 6 ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿದೆ ಎಂದು ತಿಳಿಸಿದರು. ನಂತರ 202 ಸೇತುವೆಗಳನ್ನು, 3,459 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಭೂ ಒಡೆತನ ಯೋಜನೆಯಡಿ 3,061 ಎಕರೆ ಭೂಮಿಯನ್ನು ಖರೀದಿಸಿ ಫಲಾನುಭವಿಗಳಿಗೆ ಭೂಮಿ ನೀಡಲಾಗಿದೆ ಎಂದು ಹೇಳಿದರು.
ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ ಮಹಿಳೆಯರು: ವೇದಿಕ್ ಸಂಸ್ಥೆ ಮೂಲಕ ಸ್ವಾವಲಂಬಿ ಬದುಕು