ಬೆಂಗಳೂರು: ನಗರದಲ್ಲಿ ದಿನೇ ದಿನೇ ಟ್ರಾಫಿಕ್ ಹೆಚ್ಚಳವಾಗ್ತಿದ್ದು, ವಾಯುಮಾಲಿನ್ಯ ಏರುತ್ತಲೇ ಇದೆ. ದೆಹಲಿಯಂತೆಯೇ ಬೆಂಗಳೂರು ವಾಯುಮಾಲಿನ್ಯದ ಕೇಂದ್ರ ಸ್ಥಾನವಾಗ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ 15 ವರ್ಷ ಹಾಗೂ 20 ವರ್ಷ ದಾಟಿದ ವಾಹನಗಳನ್ನು ನಿಷೇಧಿಸುವ ವಾಹನ ಗುಜರಿ ಯೋಜನೆಯನ್ನ ಬಜೆಟ್ನಲ್ಲಿ ಪ್ರಸ್ತಾಪಿಸಿತ್ತು. ಈಗ ಬೆಂಗಳೂರಿನಲ್ಲಿ ಈ ಯೋಜನೆ ಜಾರಿಗೆ ಸಕಲ ರೀತಿಯ ತಯಾರಿ ನಡೀತಿದೆ.
ಬೆಂಗಳೂರಿನಲ್ಲಿ 2020ರ ವೇಳೆಗೆ ರೆಜಿಸ್ಟರ್ ಆದ ವಾಹನಗಳ ಸಂಖ್ಯೆ ಒಂದು ಕೋಟಿ ದಾಟಿದೆ. ಇಷ್ಟೊಂದು ವಾಹನ ದಟ್ಟಣೆ ತಡೆದುಕೊಳ್ಳಲು ಸಿಟಿಯ ರಸ್ತೆಗಳಿಗೆ ತಾಕತ್ತಿಲ್ಲ. ಜೊತೆಗೆ ಮಾಲಿನ್ಯ ಹೆಚ್ಚಾಗ್ತಿದೆ. ಹೀಗಾಗಿ, 15 ವರ್ಷ ಮೇಲ್ಪಟ್ಟ ಕಮರ್ಷಿಯಲ್ ವಾಹನ, 20 ವರ್ಷ ಮೇಲ್ಪಟ್ಟ ಪರ್ಸನಲ್ ವಾಹನ ಗುಜರಿಗೆ ಹಾಕಲು ರೂಲ್ಸ್ ಸಿದ್ಧಪಡಿಸಲಾಗ್ತಿದೆ. ಈಗಾಗ್ಲೇ ಈ ಯೋಜನೆಯ ಡ್ರಾಫ್ಟ್ ಸಿದ್ಧವಾಗಿದೆಯಂತೆ. 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು ಸಾರಿಗೆ ಇಲಾಖೆ ಚಿಂತನೆ ಪ್ಲ್ಯಾನ್ ಮಾಡ್ತಿದೆ.
ವಾಹನ ಗುಜರಿ ಯೋಜನೆ ಜಾರಿಯಾದ್ರೆ ಬೆಂಗಳೂರಿನ ಲಕ್ಷಾಂತರ ವಾಹನಗಳು ರಸ್ತೆಯಲ್ಲಿ ಓಡಾಡುವಂತೆ ಇಲ್ಲ. ಆದ್ರೆ, ಈ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಪ್ರಶ್ನೆಗಳಿವೆ. ಬ್ಯಾನ್ ಆದ ವಾಹನಗಳನ್ನ ಏನ್ ಮಾಡೋದು? ಸ್ಕ್ರ್ಯಾಪ್ ಹೇಗೆ ಮಾಡ್ತಾರೆ? ಹಳೇ ವಾಹನಗಳನ್ನ ಸೇಲ್ ಮಾಡ್ಬೇಕಾ? ಇಲ್ಲ ಅದರ ಕಥೆ ಮುಗಿದೋಯ್ತಾ? ಇಂತಹ ಅನೇಕ ಪ್ರಶ್ನೆಗಳು ಎಲ್ಲರಿಗೂ ಕಾಡುತ್ತಿವೆ.
ಸದ್ಯ ಸರ್ಕಾರದ ಈ ಪ್ರಯತ್ನ ನಿಯಮಾವಳಿ ಜಾರಿಗೊಳಿಸುವ ಹಂತದಲ್ಲಿದೆ. ಹೀಗಾಗಿ, ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಯೋಜನೆ ಜಾರಿಗೆ ತರುತ್ತೆ ಅಂತಾ ಗೊತ್ತಿಲ್ಲ. ಆದ್ರೆ, ನಿಮ್ಮ ಬಳಿ ಇರೋ ಹಳೇ ವಾಹನಗಳಂತು ಸದ್ಯದಲ್ಲೇ ಗುಜರಿ ಸೇರಬೇಕಿರೋದಂತೂ ಕಹಿಯಾದ ಸತ್ಯ.
ಇದನ್ನೂ ಓದಿ: ಹಳೇ ವಾಹನಗಳಿಗೆ ಹಸಿರು ತೆರಿಗೆ ವಿಧಿಸಲು ಕೇಂದ್ರದ ಸಮ್ಮತಿ
Published On - 7:13 am, Thu, 11 February 21