ಹಾಸನ: ಕತ್ತಲೆಯಲ್ಲಿ ಮುಳುಗಿದ ಬದುಕು.. ವಿದ್ಯುತ್​ ಭಾಗ್ಯಕ್ಕೆ ಗ್ರಾಮಸ್ಥರ ಆಗ್ರಹ

|

Updated on: Mar 24, 2021 | 12:43 PM

ಬರೊಬ್ಬರಿ ಎರಡು ದಶಕಗಳಿಂದ ಅಕ್ಷರಶಃ ನರಕದಲ್ಲಿ ಬದುಕುತ್ತಿರುವ ಗ್ರಾಮದ ಅಮಾಯಕ ಜನರ ಕಣ್ಣೀರು ಯಾವೊಬ್ಬ ಅಧಿಕಾರಿಯ ಮನಸ್ಸನ್ನೂ ಕರಗಿಸಿಲ್ಲ ಎನ್ನುವುದು ದುರಂತ. ದುಮ್ಮಿ ಗ್ರಾಮದ 8 ಬಡ ಕುಟುಂಬಗಳ ಗೋಳೂ ಹೇಳತೀರದ ಕಣ್ಣೀರ ಕಥೆಯಾಗಿದೆ.

ಹಾಸನ: ಕತ್ತಲೆಯಲ್ಲಿ ಮುಳುಗಿದ ಬದುಕು.. ವಿದ್ಯುತ್​ ಭಾಗ್ಯಕ್ಕೆ ಗ್ರಾಮಸ್ಥರ ಆಗ್ರಹ
ದೀಪದ ಬೆಳಕಿನಲ್ಲಿ ಓದುತತ್ತಿರುವ ಮಕ್ಕಳು
Follow us on

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದ ಮನೆಗಳ ಎದುರು ಸುಸಜ್ಜಿತ ರಸ್ತೆ ಇದೆ. ರಸ್ತೆಯ ಎರಡೂ ಬದಿಗಳಲ್ಲಿ ಹೈ ಪವರ್ ವಿದ್ಯುತ್ ಲೈನ್ ಕೂಡ ಇದೆ. ಮನೆಯಿದೆ, ರೇಷನ್ ಕಾರ್ಡ್, ಆಧಾರ್, ಓಟರ್ ಐಡಿ ಎಲ್ಲವೂ ಇದೆ. ಬರೊಬ್ಬರಿ ನಾಲ್ಕು ವಿಧಾನಸಭೆ, ನಾಲ್ಕು ಲೋಕಸಭಾ ಚುನಾವಣೆಗೆ ಗ್ರಾಮದ ಜನರು ಮತ ಹಾಕಿದ್ದಾರೆ. ಮತ ಪಡೆದವರು ಗೆದ್ದು ಅಧಿಕಾರದ ಗದ್ದುಗೆ ಏರಿ ಆಗಿದೆ. ಆದರೆ ಇಷ್ಟೆಲ್ಲಾ ಇರುವ ಗ್ರಾಮದ ಜನರಿಗೆ ಬೆಳಕೇ ಇಲ್ಲಾ. ಸುಮಾರು ಎರಡು ದಶಕಗಳಿಂದ ಕಗ್ಗತ್ತಲ ರಾತ್ರಿಗಳನ್ನು ಕಳೆಯುತ್ತಿರುವ ಗ್ರಾಮದ ಜನರಿಗೆ ರಾತ್ರಿಯಾದರೆ ಸಾಕು ಭಯ, ಆತಂಕ ಶುರುವಾಗುತ್ತದೆ. ಮಕ್ಕಳಿಗೆ ಓದಲು ಬೆಳಕಿಲ್ಲ ಎಂಬ ತಳಮಳ ಶುರುವಾಗುತ್ತದೆ. ಸೀಮೆಎಣ್ಣೆ ದೀಪದ ಬೆಳಕೇ ಈ ಜನರ ಬಾಳಿನ ನಂದಾದೀಪಾವಾಗಿದೆ. ಎಲ್ಲವೂ ಗೊತ್ತಿದ್ದು ಸುಮ್ಮನಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ಬರೊಬ್ಬರಿ ಎರಡು ದಶಕಗಳಿಂದ ಅಕ್ಷರಶಃ ನರಕದಲ್ಲಿ ಬದುಕುತ್ತಿರುವ ಗ್ರಾಮದ ಅಮಾಯಕ ಜನರ ಕಣ್ಣೀರು ಯಾವೊಬ್ಬ ಅಧಿಕಾರಿಯ ಮನಸ್ಸನ್ನೂ ಕರಗಿಸಿಲ್ಲ ಎನ್ನುವುದು ದುರಂತ. ದುಮ್ಮಿ ಗ್ರಾಮದ 8 ಬಡ ಕುಟುಂಬಗಳ ಗೋಳೂ ಹೇಳತೀರದ ಕಣ್ಣೀರ ಕಥೆಯಾಗಿದೆ. 20 ವರ್ಷಗಳ ಹಿಂದೆ ಮಳೆಯಿಂದ ಮನೆಗಳು ಬಿದ್ದು ಹೋಗಿದ್ದರಿಂದ ತಮ್ಮ ಜಮೀನಿನ ಬಳಿಗೆ ಬಂದು ಮನೆ ಕಟ್ಟಿಕೊಂಡ ಗ್ರಾಮದ ಕುಮಾರ್, ಸರೋಜ, ಹುಚ್ಚಯ್ಯ ಸೇರಿ 8 ಕುಟುಂಬಗಳಿಗೆ ರೇಷನ್ ಕಾರ್ಡ್ ಇದೆ, ಓಟರ್ ಐಡಿ ಇದೆ, ಆಧಾರ್ ಕೂಡ ಇದೆ ಮನೆಗೆ ಹಕ್ಕು ಪತ್ರವೂ ಇದೆ, ರಸ್ತೆಯಿದೆ, ಕುಡಿಯಲು ನೀರಿದೆ. ಆದರೆ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲದೆ ಕುಟುಂಬಗಳು ನರಳುತ್ತಿವೆ. ಕರೆಂಟ್ ಸಂಪರ್ಕವಿಲ್ಲದೆ ಈ ಕುಟುಂಬಗಳ ಶಾಲಾ ಮಕ್ಕಳು ನಿತ್ಯವೂ ಸೀಮೆಎಣ್ಣೆ ದೀಪದ ಆಶ್ರಯದಲ್ಲೇ ಓದಬೇಕು.

ದೀಪದ ಬೆಳಕಿನಲ್ಲಿ ಅಡುಗೆ ಮಾಡುತ್ತಿರುವ ಮಹಿಳೆ

ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮ

ಎಲ್ಲರ ಮನೆಗೂ ಗ್ಯಾಸ್ ಸಂಪರ್ಕ ಇರುವುದರಿಂದ ಇದೇ ನೆಪಮಾಡಿ ಸರ್ಕಾರ ತಿಂಗಳಿಗೆ ಕೇವಲ 1 ಲೀಟರ್ ಸೀಮೆಎಣ್ಣೆ ಕೊಡುತ್ತದೆ. ಅದೂ ಒಂದು ವಾರಕ್ಕೂ ಆಗುವುದಿಲ್ಲ ಎಂದು ತಮ್ಮ ನೋವು ತೋಡಿಕೊಳ್ಳುವ ಜನರು, ಹರಳೆಣ್ಣೆ ದೀಪದ ಬೆಳಕಲ್ಲೇ ಮಕ್ಕಳು ಓದುತ್ತಾರೆ. ಎಷ್ಟೋ ಸಮಯದಲ್ಲಿ ನಿದ್ದೆ ಮಂಪರಿನಲ್ಲಿ ಅಪಾಯಕ್ಕೆ ಸಿಲುಕುವ ಪರಿಸ್ಥಿತಿಯೂ ಎದುರಾಗಿದೆ. ಟಿವಿ ನೋಡುವ ಭಾಗ್ಯವಂತೂ ಈ ಜನರಿಗೆ ಇಲ್ಲವೇ ಇಲ್ಲಾ. ಇಷ್ಟೆಲ್ಲಾ ಆಧುನಿಕತೆ ಇದ್ದರೂ ಮನೆಯಲ್ಲೊಂದು ಮಿಕ್ಸಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಮೊಬೈಲ್ ಇದ್ದರೂ ಚಾರ್ಜ್ ಮಾಡುವುದಕ್ಕೆ ಕರೆಂಟ್ ಇಲ್ಲದೆ ಪರಿತಪಿಸುವ ಜನರು ನಮಗೊಂದು ಕರೆಂಟ್ ಭಾಗ್ಯ ಕೊಡಿ ಸ್ವಾಮಿ ಎಂದು ಕೈಮುಗಿಯುತ್ತಿದ್ದಾರೆ.

ಓದುತ್ತಿರುವ ಮಕ್ಕಳು

ಕೈ ಮುಗಿದ ಮಕ್ಕಳು
ಕಳೆದ 20 ವರ್ಷಗಳಲ್ಲಿ ಅರಕಲಗೂಡು ಕ್ಷೇತ್ರವನ್ನು ಎರಡು ಭಾರಿ ಎ.ಟಿ.ರಾಮಸ್ವಾಮಿಯವರು ಪ್ರತಿನಿಧಿಸಿದ್ದರೆ, ಎರಡು ಬಾರಿ ಮಾಜಿ ಸಚಿವ ಎ.ಮಂಜು ಪ್ರತಿನಿಧಿಸಿದ್ದಾರೆ. ಹತ್ತಾರು ಬಾರಿ ಈ ಜನರು ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಕರೆಂಟ್ಗಾಗಿ ಮೊರೆಯಿಟ್ಟಿದ್ದಾರೆ. ಆದರೆ ಚುನಾವಣೆ ವೇಳೆಯಲ್ಲಿ ಮೂಗಿಗೆ ತುಪ್ಪ ಸವರಿ ಮತ ಹಾಕಿಸಿಕೊಂಡ ನಾಯಕರು ಮತ್ತೆ ಇವರತ್ತ ತಿರುಗಿಯೂ ನೋಡಿಲ್ಲವಂತೆ. ಮನೆ ಎದುರುಗಡೆಯೇ ಎರಡು ಪವರ್ ಲೈನ್ ಹೋಗಿದೆ. ಆ ಲೈನ್​ನಿಂದ ಕರೆಂಟ್ ಸಂಪರ್ಕ ಕೊಡುವುದಕ್ಕೆ ಆಗುವುದಿಲ್ಲವಾದರೂ, ಸಮೀಪದ 300 ಮೀಟರ್ ದೂರದಲ್ಲಿಯೇ ಗೃಹ ಸಂಪರ್ಕದ ಲೈನ್ ಇದೆ. ಕೇವಲ 7 ವಿದ್ಯುತ್ ಕಂಬ ಹಾಕಿದರೆ ಸಾಕು ಈ ಮನೆಗಳಿಗೆ ಕರೆಂಟ್ ಕೊಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಯಾರೊಬ್ಬರು ಈ ಬಗ್ಗೆ ಮನಸ್ಸು ಮಾಡಿಲ್ಲ. ಸುಮಾರು 15 ಪುಟ್ಟ ಮಕ್ಕಳು ಈ ಮನೆಗಳಿಂದ ಶಾಲೆಗೆ ಹೋಗುತ್ತವೆ. ಶಾಲೆಯಿಂದ ವಾಪಸ್ ಬರುತ್ತಲೆ ತಮ್ಮ ಶಾಲಾ ಹೋಂ ವರ್ಕ್ ಮಾಡಿ ಮುಗಿಸುವ ಮಕ್ಕಳು ರಾತ್ರಿಯಾಗುತ್ತಲೆ ಹೊಗೆಯ ನಡುವೆಯೇ ದೀಪದ ಬೆಳಕಲ್ಲಿ ಓದುತ್ತಾರೆ. ಕರೆಂಟ್ ಇಲ್ಲದ ಕಾರಣದಿಂದಲೇ ಈ ಕುಟುಂಬಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಹಿನ್ನಡೆಯಾಗಿದೆ ಎನ್ನುವುದು ನೊಂದ ಕುಟುಂಬಗಳ ಅಳಲು. ಮಕ್ಕಳೂ ಕೂಡ ನಮಗೆ ಕನಸಿದೆ ನಾವು ಓದುತ್ತೇವೆ ನಮಗೂ ಕರೆಂಟ್ ಕೊಡಿ ಎಂದು ಕೈ ಮುಗಿಯುತ್ತಿದ್ದಾರೆ.

ಇದನ್ನೂ ಒದಿ

ಯಾದಗಿರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಸಿಗುತ್ತಿಲ್ಲ; ವಿದ್ಯಾರ್ಥಿಗಳ ಆರೋಪ

Happy Birthday Krunal Pandya: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕೃನಾಲ್​ಗೆ ಇಂದು 30ನೇ ಜನ್ಮದಿನ.. ತಮ್ಮನಿಂದ ಭಾವನಾತ್ಮಕ ವಿಡಿಯೋ