ಹಾಸನ: ಯಾರಾದ್ರು ಮೋಸ ಮಾಡಿದ್ರೆ, ವಂಚನೆ ಮಾಡಿದ್ರೆ ಬೇರೆ ದಾರಿಯಿಲ್ಲದೆ ನಾವು ಪೊಲೀಸ್ ಠಾಣೆ ಮೆಟ್ಟಿಲೇರ್ತೇವೆ. ಆದ್ರೆ ಹಾಸನದಲ್ಲಿ ನಡೆದಿರೋ ಈ ಮಹಾ ಮೋಸ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ. ಇಲ್ಲಿ ವಂಚಕರು ರಕ್ಷಣೆ ಮಾಡಬೇಕಾದ ಪೊಲೀಸರೇ, ಮೋಸ ಹೋದವರೂ ಕೂಡ ಬಡಪಾಯಿ ಪೊಲೀಸರೆ.
ಕೋಟಿ ಕೋಟಿ ಹಣ ನುಂಗಿದ್ರಾ ಪೊಲೀಸರು?
ಹೌದು ಬಡಪಾಯಿ KSRP ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಸಂದಾಯವಾಗಬೇಕಿದ್ದ ಕೋಟಿ ಕೋಟಿ ಹಣವನ್ನ ನುಂಗಿ ನೀರು ಕುಡಿದ ಆರೋಪದ ಮೇಲೆ ಹಾಸನದ 11ನೇ ಬೆಟಾಲಿಯನ್ KSRPಯ ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ 420 ಕೇಸ್ ದಾಖಲಾಗಿದೆ.
ಹೌದು ಇಂತಹದ್ದೊಂದು ವಿಚಾರ ಬಯಲಾಗಿದ್ದು ಇಲಾಖೆ ಇದೇ ಮಾರ್ಚ್ 20ರಿಂದ 30ವರೆಗೆ ನಡೆಸಿದ ಲೆಕ್ಕ ಪರಿಶೋಧನೆಯಲ್ಲಿ. ಪರಿಶೀಲನೆ ವೇಳೆ 2015 ಹಾಗೂ 16ನೇ ಸಾಲಿನ ಲೆಕ್ಕ ಪತ್ರದಲ್ಲಿ ಭಾರೀ ಮೊತ್ತದ ಹಣ ಅವ್ಯವಹಾರ ಆಗಿರೋದು ಸಾಬೀತಾದ ಹಿನ್ನೆಲೆಯಲ್ಲಿ ಎಸ್ಪಿ ಗ್ರೇಡ್ ಅಧಿಕಾರಿ ಕೃಷ್ಣಪ್ಪ ಹಾಗೂ ಹಾಸನ KSRP ಕಚೇರಿಯ 6 ಸಿಬ್ಬಂದಿ ವಿರುದ್ಧ ಹಾಸನ ತಾಲೂಕಿನ ಶಾಂತಿಗ್ರಾಮ ಠಾಣೆಯಲ್ಲಿ FIR ದಾಖಲಾಗಿದೆ.
ಹಣಕಾಸು ವ್ಯವಹಾರದಲ್ಲಿ ಗೋಲ್ ಮಾಲ್?
ಬೆಂಗಳೂರಿನ ಆಡಳಿತ ಕಚೇರಿಯ ಸಹಾಯಕ ಆಡಳಿತ ಅಧಿಕಾರಿ ಜೆ.ಆರ್.ಸುಮಾ ಅವರು ನೀಡಿದ ದೂರು ಆಧರಿಸಿ ಕೇಸ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿಯಾದ ಯೋಗೇಶ್, ಲತಾಮಣಿ, ಮನು, ಸತ್ಯ ಪ್ರಕಾಶ್, ಚಂದ್ರು, ಕಮಾಂಡೆಂಟ್ ಕೃಷ್ಣಪ್ಪ ಹಾಗು ಮಾದೇಗೌಡರ ವಿರುದ್ಧ FIR ದಾಖಲಾಗಿದೆ.
ಒಂದು ಕಚೇರಿಯ ಹಣಕಾಸು ವ್ಯವಹಾರದಲ್ಲಿ ದೊಡ್ಡ ಗೋಲ್ ಮಾಲ್ ನಡೆದಿದ್ದು ಆ ಹಿರಿಯ ಅಧಿಕಾರಿಯನ್ನ 6ನೇ ಆರೋಪಿ ಮಾಡಿ ಸಿಬ್ಬಂದಿಯನ್ನ ಪ್ರಮುಖ ಆರೋಪಿಗಳಾಗಿ ಮಾಡಿ ಕೇಸ್ ದಾಖಲಿಸಿರೋದು ಅಚ್ಚರಿಗೆ ಕಾರಣವಾಗಿದೆ. ಈ ಅಧಿಕಾರಿ ವಿರುದ್ಧ ಈ ಹಿಂದೆಯೂ ಇಂತಹದೆ ಹಲವು ಆರೋಪಗಳು ಕೇಳಿ ಬಂದಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಜನ ಆಗ್ರಹಿಸಿದ್ದಾರೆ.
Published On - 11:47 am, Fri, 29 May 20