HD Revanna: ಹಾಸನ ಜಿಲ್ಲೆಗೆ ಅನ್ಯಾಯ ಮಾಡಿದ ಯಡಿಯೂರಪ್ಪ: ರೇವಣ್ಣ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2022 | 7:33 PM

ಹಾಸನ ನಗರಸಭೆಯ ಆಯುಕ್ತರ ಕಾರ್ಯನಿರ್ವಹಣೆಯ ಬಗ್ಗೆ ಕೂಲಂಕಶ ತನಿಖೆ ಆಗಬೇಕು. ಈ ವಿಚಾರವನ್ನು ಸರ್ಕಾರ ನಿರ್ಲಕ್ಷಿಸಿದರೆ ನಾವು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಶಾಸಕ ಎಚ್​.ಡಿ.ರೇವಣ್ಣ ಎಚ್ಚರಿಕೆ ನೀಡಿದರು.

HD Revanna: ಹಾಸನ ಜಿಲ್ಲೆಗೆ ಅನ್ಯಾಯ ಮಾಡಿದ ಯಡಿಯೂರಪ್ಪ: ರೇವಣ್ಣ ವಾಗ್ದಾಳಿ
ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ
Follow us on

ಹಾಸನ: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ತಮ್ಮ ಅಧಿಕಾರ ಅವಧಿಯಲ್ಲಿ ಹಾಸನ ಜಿಲ್ಲೆಗೆ ಮಾಡಿರುವ ಅನ್ಯಾಯಗಳು ಒಂದೆರೆಡಲ್ಲ. ಬಿಜೆಪಿಯ ಐದು ವರ್ಷ ಮತ್ತು ಕಾಂಗ್ರೆಸ್​ನ ಐದು ವರ್ಷದ ಅಧಿಕಾರ ಅವಧಿಯಲ್ಲಿ ಹಾಸನ ಜಿಲ್ಲೆಗೆ ಏನೂ ಕೊಡುಗೆ ಸಿಕ್ಕಿಲ್ಲ. ಈ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತನಿಖೆ ಆಗಬೇಕು. ಹಾಸನ ನಗರಸಭೆಯ ಹಿಂದಿನ ಆಯುಕ್ತರು ಮತ್ತು ಈಗಿನ ಆಯುಕ್ತರ ಕಾರ್ಯನಿರ್ವಹಣೆಯ ಬಗ್ಗೆ ಕೂಲಂಕಶ ತನಿಖೆ ಆಗಬೇಕು. ಈ ವಿಚಾರವನ್ನು ಸರ್ಕಾರ ನಿರ್ಲಕ್ಷಿಸಿದರೆ ನಾವು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಶಾಸಕ ಎಚ್​.ಡಿ.ರೇವಣ್ಣ (JDS Leader HD Revanna) ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನ ನಗರವನ್ನು ಯಾರಿಗೂ ಬರೆದುಕೊಟ್ಟಿಲ್ಲ. ಇದು ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಕ್ಷಗಳು ಅಣ್ಣ ತಮ್ಮಂದಿರು, ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮಗೆ ಜಿಲ್ಲಾ ಪಂಚಾಯಿತಿಯಲ್ಲಿ ಬಹುಮತ ಇದ್ದರೂ ಕಾಂಗ್ರೆಸ್ ಸರ್ಕಾರವು ಎಸ್​ಟಿ ಮೀಸಲಾತಿ ಜಾರಿಗೆ ತಂದರು. ನಗರಸಭೆಯಲ್ಲಿ ನಮಗೆ ಬಹುಮತ ಇದ್ದರೂ ಬಿಜೆಪಿಯು ಎಸ್​ಟಿ ಮೀಸಲಾತಿ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನ ನಗರದ ಮಹಾರಾಜ ಪಾರ್ಕ್​ನಲ್ಲಿ ₹ 44 ಕೋಟಿ ವೆಚ್ಚದ ಕಾಮಗಾರಿ ಮಾಡಿದ್ದಾರೆ. ಆದರೆ ನಗರಸಭೆಯಲ್ಲಿ ಚರ್ಚೆಯನ್ನೇ ಮಾಡಿಲ್ಲ. ಹಾಸನ ನಗರದಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಅಕ್ಷರಶಃ ಲೂಟಿ ನಡೆಯುತ್ತಿದೆ. ಕಾನೂನುಬಾಹಿರವಾಗಿ ಏನೇ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಅದನ್ನು ತಡೆಯಬೇಕು. ಹಾಸನ ನಗರದಲ್ಲಿ ಬೋಗಸ್ ಕೆಲಸ ನಡೆಯುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಸತ್ತುಹೋಗಿದ್ದಾರೆ. ಎಸಿಬಿ ಅಧಿಕಾರಿಗಳು ಏನೂ ಕ್ರಮ ವಹಿಸುತ್ತಿಲ್ಲ. ಹಾಸನ ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸಮರ್ಪಕ ತನಿಖೆ ಅಗಬೇಕು. ನಗರಸಭೆಯ ಆಯುಕ್ತರನ್ನು ಅಮಾನತು ಮಾಡಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಸದನದಲ್ಲೂ ಈ ಬಗ್ಗೆ ಹೋರಾಟ ನಡೆಸುತ್ತೇವೆ. ಸೂಕ್ತ ಕ್ರಮ ಆಗದಿದ್ದರೆ ನಮ್ಮ ಸದಸ್ಯರು ನಗರಸಭೆಯಲ್ಲಿ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.

ಉಕ್ರೇನ್​ನಲ್ಲಿ ಹಾಸನದ ವಿದ್ಯಾರ್ಥಿ ಗಗನ್ ಗೌಡ ಸಿಲುಕಿರುವ ಬಗ್ಗೆ ಹಾಗೂ ಅಲ್ಲಿ ಆತ ಪರದಾಡುತ್ತಿರುವ ಬಗ್ಗೆ ಮಾಜಿ ಸಚಿವ ಎಚ್​.ಡಿ.ರೇವಣ್ಣ ಪ್ರತಿಕ್ರಿಯಿಸಿದರು. ಈಗಾಗಲೆ ದೇವೇಗೌಡರು ಕೇಂದ್ರದ ಜತೆ ಮಾತಾಡಿದ್ದಾರೆ. ಅವರ ತಾಯಿ ಮತ್ತು ವಿದ್ಯಾರ್ಥಿ ಜತೆ ನಾನೂ ಮಾತಾಡಿದ್ದೇನೆ. ಕೇಂದ್ರ ಸರ್ಕಾರವು ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಸದನದಲ್ಲಿ ಕಾಂಗ್ರೆಸ್ ಸದಸ್ಯರು ಮಾಡುತ್ತಿದ್ದ ಗಲಾಟೆ ಹೆಚ್ ಡಿ ರೇವಣ್ಣನವರಿಗೆ ಮಾತಾಡುವ ಅವಕಾಶ ನೀಡಲಿಲ್ಲ!

ಇದನ್ನೂ ಓದಿ: ಹಾಸನ ಜಿಲ್ಲೆ ರೈತರಿಗೆ ಅನ್ಯಾಯ: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಜೆಡಿಎಸ್ ನಾಯಕ ರೇವಣ್ಣ ಆಗ್ರಹ