ಹಾಸನ- ಇತ್ತೀಚಿಗಷ್ಟೇ ಸಂಚಲನ ಮೂಡಿಸಿದ್ದ ಮಂಗಗಳ ಸಾಮೂಹಿಕ ಸಾವು ಪ್ರಕರಣದ ಬೆನ್ನಲ್ಲೇ ಮೃತಪಟ್ಟ ಮಂಗಗಳ 11ನೇ ದಿನದ ಆರಾಧನೆಯನ್ನು ಗ್ರಾಮಸ್ಥರು ನೆರವೇರಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚೌಡನಹಳ್ಳಿಯ ತಗರೆ ಎಂಬಲ್ಲಿನ ಅರಣ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ಪೂರೈಸಿ ಮೃತಪಟ್ಟ ವಾನರರಿಗೆ ಪೂಜೆ ಸಲ್ಲಿಸಲಾಗಿದೆ. ಸಂಪ್ರದಾಯದಂತೆ ಪೂಜೆ ಮಾಡಿ ಅನ್ನ ಸಂತರ್ಪಣೆ ನಡೆಸಲಾಗಿದೆ. ಹಿಂದೂಪರ ಸಂಘಟನೆ ಹಾಗು ಸ್ಥಳೀಯರಿಂದ ಪೂಜೆ ಸಲ್ಲಿಸಿದ್ದು, ಅಂತ್ಯಸಂಸ್ಕಾರ ಸ್ಥಳದಲ್ಲಿ ದೇಗುಲ ನಿರ್ಮಿಸುವಂತೆ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಲಿಂಗೇಶ್ ಅವರಲ್ಲಿ ಮನವಿ ಮಾಡಲಾಗಿದೆ.
ಮಾನವೀಯತೆ ಮೆರೆದ ಜನ
ಅದು ಇಡೀ ದೇಶದಲ್ಲಿಯೇ ತಲ್ಲಣ ಸೃಷ್ಟಿಮಾಡಿದ್ದ ಮೂಕ ವಾನರರ ಹತ್ಯೆ ಪ್ರಕರಣ, ಬೆಳೆ ಹಾನಿ ಮಾಡುತ್ತಿವೆ ಎಂದು 38 ಮಂಗಗಳನ್ನು ಕೊಂದರೆ, ಮಂಗಗಳ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದಲ್ಲಿ ಪೂಜೆ ಮಾಡುವ ಮೂಲಕ ಜನರೇ ಹಿಂದೂ ಸಂಪ್ರದಾಯದಂತೆ ಶ್ರದ್ಧಾಕಾರ್ಯ ನೆರವೇರಿಸಿ ಮಾನವೀಯತೆ ಮರೆದಿದ್ದಾರೆ. ಬೇಲೂರು ತಾಲ್ಲೂಕಿನ ತಗರೆ ಮೀಸಲು ಅರಣ್ಯದಲ್ಲಿ 38 ಮಂಗಗಳ ಸಾಮೂಹಿತ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು, ಮಂಗಗಳ ಮಾರಣ ಹೋಮ ನಡೆದು ಇಂದಿಗೆ 11 ದಿನ ಆದ ಹಿನ್ನೆಲೆಯಲ್ಲಿ ಭಜರಂಗದಳ ಸೇರಿ ವಿವಿದ ಹಿಂದೂಪರ ಸಂಗಟನೆಗಳು ಹಾಗು ಘಟನೆ ನಡೆದ ಚೌಡನಹಳ್ಳಿಯ ಗ್ರಾಮಸ್ಥರು ಸೇರಿ ಸಂಪ್ರದಾಯದಂತೆ ದೈವ ಸ್ವರೂಪಿ ವಾನರರಿಗೆ ವಿಧಿವಿಧಾನ ನೆರವೇರಿಸಿದ್ದಾರೆ, ಮೃತಪಟ್ಟ ದಿನವೂ ಕೂಡ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರೆವೇರಿಸಿದ್ದ ಜನರು 11ನೇ ದಿನದ ಕಾರ್ಯವನ್ನೂ ಮಾಡಿ ಮಾನವೀಯತೆ ಮೆರೆದಿದ್ದಾರೆ, ಬೆಳಿಗ್ಗೆ 10-30ರಿಂದ 11 ಗಂಟೆ ಸಮಯದಲ್ಲಿ ಸಮಾಧಿ ಸ್ಥಳವನ್ನ ಸಂಪೂರ್ಣ ಹೂಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ರು, ಅಹಾರ ಅರಸಿ ಬಂದು ಬಲಿಯಾದ ಮೂಕ ಪ್ರಾಣಿಗಳ ಬಲಿಗೆ ಮರುಗಿದ್ರು, ಎಲ್ಲರೂ ಅಮಾಯಕ ಪ್ರಾಣಿಗಳ ಹತ್ಯೆಗೆ ಖಂಡಿಸಿದ್ರು. ಕಡೆಗೆ ಅನ್ನ ಸಂತರ್ಪಣೆ ಮಾಡಿ ವಾನರರನ್ನು ಸ್ಮರಿಸಿದರು.
ವಾನನರಿಗೊಂದು ಗುಡಿಕಟ್ಟಿ
ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ, ಅಮಾನವೀಯವಾಗಿ 38 ಮಂಗಗಳನ್ನ ಕೊಂದು ಗೋಣಿ ಚೀಲಕ್ಕೆ ತುಂಬಿ ರಸ್ತೆ ಬದಿಗೆ ಬಿಸಾಡಿ ಹೋಗಿದ್ದರು. ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದ ಜನರು ಚೀಲ ಬಿಚ್ಚಿ ನೋಡಿದಾಗ 38 ಮಂಗಗಳು ಮೃತಪಟ್ಟಿದ್ದರೆ 15ಕ್ಕೂ ಹೆಚ್ಚು ಮಂಗಳು ಸಾವು ಬದುಕಿನ ನಡುವೆ ಹೊರಾಟ ನಡೆಸುತ್ತಿದ್ದವು, ಕಡೆಗೆ ಅವೆಲ್ಲಾ ಅಲ್ಲಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದವು. ಹಾಸನ ತಾಲ್ಲೂಕಿನ ಉಗನೆ ಹಾಗು ಕ್ಯಾತನಹಳ್ಲಿ ಭಾಗದಲ್ಲಿ ಬೆಳೆ ಹಾನಿ ಮಾಡುತ್ತಿವೆ ಎಂದು 21 ರೈತರು ಒಟ್ಟಾಗಿ 40 ಸಾವಿರಕ್ಕೆ ಕೋತಿಗಳನ್ನ ಸೆರೆಹಿಡಯೋಕೆ ಗುತ್ತಿಗೆ ನೀಡಿದ್ದರು. ಅದರಂತೆ ಜುಲೈ 28ರಂದು ಮಂಗಗಳನ್ನ ಸೆರೆಹಿಡಿದು ಅವುಗಳನ್ನ ಬೇರೆಡೆಗೆ ಸಾಗಿಸೋ ವೇಳೆ ಒಂದೇ ಚೀಲದಲ್ಲಿ ತುಂಬಿದ್ದರಿಂದ ಉಸಿರುಗಟ್ಟಿಸಿ ಮೃತಪಟ್ಟಿರಬಹುದೆಂದು ಹೇಳಲಾಗಿತ್ತು. ವಿಷಪ್ರಾಷನ ಆಗಿರೋ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ಇಡೀ ದೇಶವೇ ತಲ್ಲಣಗೊಳ್ಳುವಂತೆ ನಡೆದಿದ್ದ ಮೂಕ ಪ್ರಾಣಿಗಳ ಮಾರಣ ಹೋಮದ ಬಗ್ಗೆ ಕರ್ನಾಟಕ ಉಚ್ಛ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಮಗ್ರ ತನಿಖೆಗೆ ಸೂಚಿಸಿತ್ತು, ತನಿಖೆ ನಡೆಸಿದ್ದ ಪೊಲೀಸ್ ಹಾಗು ಅರಣ್ಯ ಇಲಾಕೆ ಮಂಗಗಳ ಹಿಡಿದ ದಂಪತಿ ಸೇರಿ 7 ಜನರನ್ನ ಬಂಧಿಸಿ ಜೈಲಿಗಟ್ಟಿದೆ, ಇನ್ನೂ ತನಿಖೆ ನಡೆಯುತ್ತಿದೆ, ಈ ನಡುವೆ ಇಂದು 11ನೇ ದಿನ ಕಾರ್ಯ ನೆರವೇರಿಸಿದ ಜನರು ಮಂಗಗಳ ಅಂತ್ಯಕ್ರಿಯೆ ಸ್ಥಳದಲ್ಲಿ ಒಂದು ಗುಡಿ ಕಟ್ಟಿಸಿ, ನಮಗೆ ಪೂಜೆ ಸಲ್ಲಿಸಲು ಅವಕಾಶ ನೀಡಿ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಬೇಲೂರು ಶಾಸಕ ಲಿಂಗೇಶ್ ರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಗಳಿಗೆ ಸ್ಮಾರಕ ನಿರ್ಮಿಸುವ ಭರವಸೆ
ಮಂಗಳ ಮಾರಣ ಹೋಮ ಆಗಿದೆ, ನಾವೆಲ್ಲಾ ತಲೆ ತಗ್ಗಿಸುವಂತಾ ಘಟನೆ ನಡೆದು ಹೋಗಿದೆ ಇಲ್ಲಿ ಗುಡಿ ಕಟ್ಟೋದಲ್ಲ ಈ ಸ್ಥಳದಲ್ಲಿ ಒಂದು ಸ್ಮಾರಕದ ಪಾರ್ಕ್ ಆಗಬೇಕು, ಎಲ್ಲಾ ರೀತಿಯ ಹಣ್ಣು ಹಂಪಲು ಬೆಳೆಯಬೇಕು, ಇಲ್ಲಿಗೆ ಬಂದ ಜನರಿಗೆ ನಡೆದ ಘಟನೆ ಗೊತ್ತಾಗಿ ಈ ಭೂಮಿ ಇರೋದು ಕೇವಲ ಮಾನವರಿಗಲ್ಲ ಸಕಲಜೀವಿಗಳಿಗೂ ಎನ್ನೋ ಅರಿವಾಗಬೇಕು ಆ ರೀತಿಯ ಸ್ಮಾರಕ ಮಾಡೋಣ ಎಂದು ಶಾಸಕ ಲಿಂಗೇಶ್ ಹೇಳಿದರು. ಜನರ ಮನವಿಗೆ ಸ್ಪಂದಿಸಿದ ಅವರು ಸ್ಮಾರಕ ನಿರ್ಮಿಸೋ ಭರವಸೆ ನೀಡಿದ್ದಾರೆ.
ಮಂಗಗಳ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಗುಡಿಕಟ್ಟಲು ಅವಕಾಶ ನೀಡಬೇಕು. ನಾವು ಜನರು ಇಲ್ಲಿ ಪೂಜೆ ಮಾಡಿಕೊಂಡು ಹೋಗುತ್ತೇವೆ. ಇಂತಹ ಘಟನೆ ಮರುಕಳಿಸದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಸ್ಥಳೀಯ ಯುವಕ ಆದೇಶ್ ಅವರು ಟಿವಿ9 ಕನ್ನಡ ಡಿಜಿಟಲ್ಗೆ ಪ್ರತಿಕ್ರಿಯಿಸಿದರು.
ವಿಶೇಷ ವರದಿ: ಮಂಜುನಾಥ್-ಕೆ.ಬಿ
ಟಿವಿ9
ಹಾಸನ
ಇದನ್ನೂ ಓದಿ:
39 ಮಂಗಗಳ ಮಾರಣಹೋಮದ ಹಿಂದೆ ಯಾರಿದ್ದರೂ ಬಿಡಬೇಡಿ; ತನಿಖಾಧಿಕಾರಿಗೆ ಹಾಸನ ಜಿಲ್ಲಾಧಿಕಾರಿ ಸೂಚನೆ
ಹಾಸನದಲ್ಲಿ ಮಂಗಗಳ ಮಾರಣಹೋಮ: ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್
(funeral done of 38 monkeys who died of asphyxiation Request to build a shrine)
Published On - 4:25 pm, Sat, 7 August 21