ಹಾಸನ, ಸೆಪ್ಟೆಂಬರ್ 19: ಹತ್ತಾರು ದಶಕಗಳಿಂದ ಕೃಷಿ ಮಾಡುತ್ತಿರುವ ಭೂಮಿಯಿಂದ ಕೂಡ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸುವ ಆತಂಕ ಹಾಸನ ಜಿಲ್ಲೆಯಲ್ಲೂ ಕೂಡ ಸೃಷ್ಟಿಯಾಗಿದೆ. ಇದು ಜಿಲ್ಲೆಯ ಕಾಡಂಚಿನ ಜನರನ್ನು ಆತಂಕಕ್ಕೆ ದೂಡಿದೆ. ಕಾಡಂಚಿನಲ್ಲಿ ಅಥವಾ ಅರಣ್ಯ ಪ್ರದೇಶವನ್ನು ಒತ್ತವರಿ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದನ್ನು ನಿಯಂತ್ರಣ ಮಾಡಿದರೆ ಸಮಸ್ಯೆ ಇಲ್ಲ. ಆದರೆ ಇದನ್ನೇ ನೆಪಮಾಡಿ ಶತಮಾನಗಳಿಂದ ಕೃಷಿ ಮಾಡಿಕೊಂಡು ಬರ್ತಿರೊ ಜನರ ಬದುಕಿಗೆ ಕೊಳ್ಳಿ ಇಟ್ಟರೆ ಕತೆ ಏನು ಎಂಬ ಮಾತು ಜಿಲ್ಲೆಯ ರೈತರ ಬಾಯಲ್ಲಿ ಬರುತ್ತಿದೆ.
ಅರಣ್ಯ ರಕ್ಷಣೆ ಹೆಸರಿನಲ್ಲಿ ಜನರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪ ಇದೀಗ ಕೇಳಿಬರುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ. ವಾಣಿಜ್ಯ ಚಟುವಟಿಕೆ ನಿಯಂತ್ರಣ ಮಾಡಲಿ. ಆದರೆ ಕೃಷಿ ಚಟುವಟಿಕೆ ಮೇಲೆ ದೌರ್ಜನ್ಯ ಯಾಕೆ ಎಂಬ ಕೂಗು ಕೇಳಿಬರುತ್ತಿದೆ.
ಕೇರಳದ ವಯನಾಡು ದುರಂತದ ಬಳಿಕ ಎಚ್ಚೆತ್ತಿರುವ ಸರ್ಕಾರ ಅರಣ್ಯ ರಕ್ಷಣೆಗಾಗಿ ಒಂದಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಾಣವಾಗಿರುವ ರೆಸಾರ್ಟ್, ಹೋಂ ಸ್ಟೇಗಳನ್ನು ಶೀಘ್ರವಾಗಿ ತೆರವು ಮಾಡಬೇಕು ಎಂಬ ಆದೇಶವನ್ನು ಜನರೂ ಸ್ವಾಗತಿಸಿದ್ದಾರೆ. ಆದರೆ ಶತಮಾನಗಳಿಂದ ಕೃಷಿಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಜನರನ್ನು ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಾಸನ ಜಿಲ್ಲೆಯ ಆಲೂರು ಬೇಲೂರು, ಸಕಲೇಶಫುರ ಭಾಗದಲ್ಲಿ ಸಾಕಷ್ಟು ಜನರು ತುಂಡು ಭೂಮಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಈಗ ನೂರಾರು ಕುಟುಂಬಗಳಿಗೆ ಡೀಮ್ಡ್ ಅರಣ್ಯದ ಹೆಸರಿನಲ್ಲಿ ನೆಲೆಕಳೆದುಕೊಳ್ಳುವ ಭೀತಿ ಶುರುವಾಗಿದೆ.
ಹಾಸನ ಜಿಲ್ಲೆಯಲ್ಲಿ ಅರಣ್ಯ ಕಾಯ್ದೆ ಸೆಕ್ಷನ್ 4ರ ಅನ್ವಯ ಘೋಷಿತ ಅರಣ್ಯ ಎಂದು ಹೇಳಲಾಗಿರುವ ಪ್ರದೇಶದಲ್ಲಿ 19 ರೆಸಾರ್ಟ್ 18ಕ್ಕೂ ಹೆಚ್ಚು ಹೋಂ ಸ್ಟೇಗಳಿವೆ. ಸಕಲೇಶಪುರ ತಾಲ್ಲೂಕಿನ ಮೂರ್ಕಣ್ಣು ಗುಡ್ಡ ಪ್ರೆದಶದಲ್ಲೇ ಹೆಚ್ಚಾಗಿ ಇಂಥವುಗಳಿವೆ. ಸರ್ಕಾರ ಗಣಿಗಾರಿಗೆ, ವಾಣಿಜ್ಯ ಚಟುವಟಿಕೆ ನಿಯಂತ್ರಣ ಮಾಡಿದರೆ ಮಾಡಲಿ. ಇದೇ ಹೆಸರಿನಲ್ಲಿ ಕೃಷಿ ಮಾಡುತ್ತಿರುವ ಜನರಿಗೆ ತೋಂದರೆ ಕೊಡುವುದು ಬೇಡ. ಈ ನಿಟ್ಟಿನಲ್ಲಿ ನಾವು ಜನರ ಪರವಾಗಿ ನಿಲ್ಲುತ್ತೇವೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಹಾಗು ಚನ್ನರಾಯಪಟ್ಟಣ ತಾಲ್ಲೂಕಿನ ಎರಡು ಕಡೆ ಡೀಮ್ಡ್ ಅರಣ್ಯದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಹಿಂದೊಮ್ಮೆ ಅದನ್ನ ರದ್ದು ಮಾಡಿದ್ದರೂ ಅಧಿಕಾರಿಗಳು ಮತ್ತೆ ಅವಕಾಶ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಎಂದು ಅರಣ್ಯ ಸಚಿವರು ಇತ್ತೀಚೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಈ ತಂಡ ಜಿಲ್ಲೆಗೆ ಬಂದು ಮಾಹಿತಿ ಸಂಗ್ರಹ ಮಾಡಿ ಹೋಗಿದೆ. ಆದರೆ, ವಾಣಿಜ್ಯ ಚಟುವಟಿಕೆ ಮಾತ್ರವಲ್ಲ, ಕೃಷಿ ಭೂಮಿಯ ಹೆಸರಿನಲ್ಲಿ ಒತ್ತುವರಿ ಆಗಿದ್ದರೂ ತೆರವು ಪ್ರಕ್ರಿಯೆ ನಡೆಯಲಿದೆ ಎಂಬ ಅನುಮಾನ ಜನರನ್ನ ಆತಂಕ್ಕೆ ದೂಡಿದೆ.
ಆದ್ರೆ ಡೀಮ್ಟ್ ಫಾರೆಸ್ಟ್ ಅಥವಾ ಸೆಕ್ಷೆನ್ 4ರ ಘೊಷಿಯ ಅರಣ್ಯ ಪ್ರದೇಶದಲ್ಲಿ ಯಾರಾದ್ರು ಕೃಷಿ ಮಾಡಿಕೊಂಡಿದ್ದರೆ ಅಥವಾ ವಾಣಿಜ್ಯ ಚಟುವಟಿಕೆ ಮಾಡಿಕೊಂಡಿದ್ದರೆ ಅಂತಹ ಪ್ರಕರಣಗಳನ್ನ ವಿಚಾರಣೆ ನಡೆಸಲು ಅರಣ್ಯ ವ್ಯವಸ್ಥಾಪನಾ ಅದಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಜನರು ತಮ್ಮ ಅನುಭೋಗ ಸ್ವಾಧೀನ ಹಕ್ಕಿನ ಬಗ್ಗೆ ವಿವರಣೆ ನೀಡಿದರೆ ಖಂಡಿತಾ ಅವರಿಗೆ ನ್ಯಾಯ ಸಿಗಲಿದೆ ಎಂದು ಹಾಸನ ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ; ಗುಂಪು ಆನೆಗಳ ಓಡಾಟದ ವಿಡಿಯೋ ವೈರಲ್
ಒಟ್ಟಿನಲ್ಲಿ ನಾಡಿನಲ್ಲಿ ಜೀವ ಸಂಕುಲ ಉಳಿಯಬೇಕು ಎಂದರೆ ಕಾಡು ಉಳಿಯಬೇಕು. ಕಾಡು ಉಳಿದರೆ ಮಾತ್ರ ನಾಡು ಎಂಬ ಮಾತೇನೋ ನಿಜ. ಆದರೆ ಕಾಡನ್ನು ಉಳಿಸುವ ಹೆಸರಿನಲ್ಲಿ ಜನರಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯಬಾರದು. ಅರಣ್ಯ ರಕ್ಷಣೆಯ ಜೊತೆಗೆ ಜನರ ಬದುಕನ್ನು ರಕ್ಷಣೆ ಮಾಡುವ ಹೊಣೆ ಸರ್ಕಾರದ ಮೇಲಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಲಿ ಎಂಬುದು ಹಾಸನ ಜಿಲ್ಲೆಯ ಜನರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ