ರಾಜ್ಯದ 5 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ: ಹಾಸನದಲ್ಲಿ ಬಾಲಕನ ಶಾಲಾ ಬ್ಯಾಗ್, ಪ್ಯಾಂಟ್ ಜೇಬಿನಲ್ಲಿ ನೋಟಿನ ಕಂತೆ ಪತ್ತೆ

ರಾಜ್ಯಾದ್ಯಂತ ನವೆಂಬರ್ 18ರಂದು ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಹಾಸನ, ಚಿತ್ರದುರ್ಗ, ಬಾಗಲಕೋಟೆ, ಬೀದರ್, ಹುಬ್ಬಳ್ಳಿಯ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಆದಾಯ ಮೀರಿ ಆಸ್ತಿ ಗಳಿಸಿರುವ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳನ್ನು ಜಾಲಾಡಿದ್ದಾರೆ. ಲೋಕಾಯುಕ್ತದ ಈ ಕಾರ್ಯಾಚರಣೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದೆ. ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ರಾಜ್ಯದ 5 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ: ಹಾಸನದಲ್ಲಿ ಬಾಲಕನ ಶಾಲಾ ಬ್ಯಾಗ್, ಪ್ಯಾಂಟ್ ಜೇಬಿನಲ್ಲಿ ನೋಟಿನ ಕಂತೆ ಪತ್ತೆ
ರಾಜ್ಯದ 5 ಕಡೆ ಲೋಕಾಯುಕ್ತ ದಾಳಿ

Updated on: Nov 18, 2026 | 9:14 AM

ಬೆಂಗಳೂರು, ನ.18: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಹಾಸನ, ಚಿತ್ರದುರ್ಗ, ಬಾಗಲಕೋಟೆ, ಬೀದರ್ ಮತ್ತು ಹುಬ್ಬಳ್ಳಿಯಲ್ಲಿ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ನಡೆದಿದ್ದು, ಮಹತ್ವದ ದಾಖಲಾತಿಗಳ ಪರಿಶೀಲನೆ ಮುಂದುವರಿದಿದೆ.

ಹಾಸನ: ಬಾಲಕನನ್ನು ಶಾಲೆಗೆ ಕಳುಹಿಸುವ ನೆಪದಲ್ಲಿ ಹಣ ಸಾಗಾಟಕ್ಕೆ ಯತ್ನ

ಸಕಲೇಶಪುರ ವಲಯ ಅರಣ್ಯಾಧಿಕಾರಿ (RFO) ಹೇಮಂತ್ ಕುಮಾರ್ ಅವರ ಹಾಸನ ನಗರದ ಚಿಕ್ಕಹೊನ್ನೇನಹಳ್ಳಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮನೆಯಲ್ಲಿದ್ದ ಬಾಲಕನನ್ನು ಶಾಲೆಗೆ ಕಳುಹಿಸುವ ನೆಪದಲ್ಲಿ ಕುಟುಂಬ ಸದಸ್ಯರು ಹಣ ಸಾಗಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅನುಮಾನಗೊಂಡ ಲೋಕಾಯುಕ್ತ ಸಿಬ್ಬಂದಿ ಮನೆಯ ಬಾಗಿಲಲ್ಲೇ ಕುಳಿತು ಬಾಲಕನ ಶಾಲಾ ಬ್ಯಾಗ್ ಮತ್ತು ಪ್ಯಾಂಟ್ ಜೇಬನ್ನು ಪರಿಶೀಲಿಸಿದಾಗ 500 ರೂ. ಮುಖಬೆಲೆಯ ಒಂದು ಕಂತೆ ಹಣ ಪತ್ತೆಯಾಗಿದೆ. ಈ ಘಟನೆಯಿಂದ ತೀವ್ರ ಅಸಮಾಧಾನ ಹೊರಹಾಕಿದ ಅಧಿಕಾರಿಗಳು, “ನಮಗೆ ಸರಿಯಾಗಿ ತಪಾಸಣೆ ಮಾಡಲು ಅವಕಾಶ ಕೊಡಿ” ಎಂದು ಕುಟುಂಬಸ್ಥರಿಗೆ ಖಡಕ್ ತಾಕೀತು ಮಾಡಿದ್ದಾರೆ.

Loading...

ಚಿತ್ರದುರ್ಗ: ಜಿಲ್ಲಾ ಸರ್ಜನ್ ಡಾ. ರವೀಂದ್ರ ನಿವಾಸ, ‘ಅಕ್ಷಯ ಗ್ಲೋಬಲ್ ಆಸ್ಪತ್ರೆ’ ಮೇಲೆ ದಾಳಿ:

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ರವೀಂದ್ರ ಹಾಗೂ ತೂಕ ಮತ್ತು ಅಳತೆ ಇಲಾಖೆ ಇನ್ಸ್‌ಪೆಕ್ಟರ್ ವೆಂಕಟೇಶ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಮತ್ತು ಡಿವೈಎಸ್‌ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿರುವ ಡಾ. ರವೀಂದ್ರ ಅವರ ‘ಪ್ರಸಾದ’ ನಿವಾಸ ಹಾಗೂ ಅವರಿಗೆ ಸೇರಿದ ಅಕ್ಷಯ ಗ್ಲೋಬಲ್ ಆಸ್ಪತ್ರೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಮತ್ತೊಂದೆಡೆ, ವಿದ್ಯಾನಗರದಲ್ಲಿರುವ ಇನ್ಸ್‌ಪೆಕ್ಟರ್ ವೆಂಕಟೇಶ್ ಮನೆ ಹಾಗೂ ಅವರಿಗೆ ಸೇರಿದ ‘ಮಹಾಲಕ್ಷ್ಮಿ’ ನಿವಾಸದ ಮೇಲೂ ದಾಳಿ ನಡೆದಿದೆ.

ಬಾಗಲಕೋಟೆ: ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ತಾ.ಪಂ. ಅಧಿಕಾರಿ ಸಂಜೀವ ಹಿಪ್ಪರಗಿ ಎರಡು ಮನೆಗಳ ಮೇಲೆ ದಾಳಿ

ಈ ಹಿಂದೆ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಜಮಖಂಡಿ ತಾಲೂಕು ಪಂಚಾಯತ್ ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕ (AD) ಸಂಜೀವ ಹಿಪ್ಪರಗಿ ಅವರಿಗೆ ಸೇರಿದ ಜಮಖಂಡಿ ನಗರದ ಎರಡು ಮನೆಗಳ ಮೇಲೆ ದಾಳಿ ನಡೆದಿದೆ. ಜಮಖಂಡಿಯ ವಿಜಯನಗರ (ಜಯನಗರ)ದಲ್ಲಿರುವ ಮನೆ ಹಾಗೂ ಮೈಗೂರು ರಸ್ತೆಯಲ್ಲಿರುವ ಅವರ ತಂದೆಯ ಮನೆ ಸೇರಿದಂತೆ ಎರಡು ಕಡೆಗಳಲ್ಲಿ ಬಾಗಲಕೋಟೆ ಲೋಕಾಯುಕ್ತ ಎಸ್‌ಪಿ ಮಹಾಲಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದ (ಬಾಗಲಕೋಟೆ, ಬೆಳಗಾವಿ ಹಾಗೂ ಕೊಪ್ಪಳ ತಂಡ) ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬೀದರ್: ಬ್ರೀಮ್ಸ್ ನರ್ಸಿಂಗ್ ಕಾಲೇಜು ಪ್ರಿನ್ಸಿಪಾಲ್ ಮನೆ, ಕಚೇರಿ ಮೇಲೆ ದಾಳಿ

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (BRIMS) ನರ್ಸಿಂಗ್ ಕಾಲೇಜು ಪ್ರಾಂಶುಪಾಲ ರಾಜಕುಮಾರ್ ಮಾಳಗೆ ಅವರಿಗೆ ಸೇರಿದ ಬೀದರ್ ನಗರದ ಗುರುನಗರದ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಹನುಮಂತರಾಯ ಅವರ ತಂಡ ದಾಳಿ ನಡೆಸಿ ಆಸ್ತಿಪಾಸ್ತಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಮಡಿಕೇರಿ ಪ್ರವಾಸಕ್ಕೆ ಹೋಗುವ ಮುನ್ನ ಗಮನಿಸಿ: ಮುಂದಿನ 15 ದಿನ ರಾಜಾಸೀಟ್‌ಗೆ ಪ್ರವೇಶವಿಲ್ಲ

ಹುಬ್ಬಳ್ಳಿ: ಸರ್ಕಾರಿ ಬಸ್ ಚಾಲಕ, ನಿರ್ವಾಹಕ ನಿವಾಸಕ್ಕೆ ಲೋಕಾಯುಕ್ತ ದಾಳಿ

ನಿಗದಿತ ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಆರೋಪದಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಅವರ ಹುಬ್ಬಳ್ಳಿಯ ಗಾಂಧಿನಗರದ ನಿವಾಸದ ಮೇಲೆ ದಾಳಿ ನಡೆದಿದೆ. ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us