ಅರಣ್ಯ ಇಲಾಖೆ ಸಿಬ್ಬಂದಿ ಪ್ರಮಾದದಿಂದ ಅರ್ಜುನ ಬಲಿ? ಆನೆ ಸಾವಿನ ಸತ್ಯ ಬಿಚ್ಚಿಟ್ಟ ಮಾವುತ

| Updated By: ರಮೇಶ್ ಬಿ. ಜವಳಗೇರಾ

Updated on: Dec 05, 2023 | 8:03 AM

ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ದಸರಾ ಆನೆ ಅರ್ಜುನನ ಸಾವಿನ ಸತ್ಯ ಬಯಲಾಗಿದೆ. ಅರ್ಜುನನ ಮೇಲೆ ಕಾಡಾನೆ ದಾಳಿ ಮಾಡುವ ಮುನ್ನವೇ ಅರ್ಜುನನ ಕಾಲಿಗೆ ಗುಂಡು ತಗುಲಿತ್ತು. ಈ ಕಾರಣದಿಂದ ವೀಕ್ ಆಗಿದ್ದ ಅರ್ಜುನನನ್ನು ಕಾಡಾನೆ ತಿವಿದು ಕೊಂದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಪ್ರಮಾದದಿಂದ ಅರ್ಜುನ ಬಲಿ? ಆನೆ ಸಾವಿನ ಸತ್ಯ ಬಿಚ್ಚಿಟ್ಟ ಮಾವುತ
ದಸರಾ ಆನೆ ಅರ್ಜುನ
Follow us on

ಹಾಸನ, ಡಿ.05: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysuru Dasara) 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ (Arjuna) ಆನೆ ಮೃತಪಟ್ಟಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ ಅರ್ಜುನ ಸಾವಿಗೀಡಾಗಿದ್ದಾನೆ ಎನ್ನಲಾಗುತ್ತಿದೆ. ಆದರೆ ಅರ್ಜುನ ಸಾವಿನ ಬಗ್ಗೆ ಮಾವುತರೊಬ್ಬರು ಸತ್ಯ ಬಿಚ್ಚಿಟ್ಟಿದ್ದಾರೆ (Dasara Elephant). ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಸಾವಾಗಿದೆ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದೆ.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಹಾ ಪ್ರಮಾದ ನಡೆದು ಹೋಗಿದೆ. ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಬಲ ಕಳೆದುಕೊಂಡು ಕಾದಾಡಲಾಗದೆ ಅರ್ಜುನ ಆನೆ ಮೃತಪಟ್ಟಿದೆ ಎನ್ನಲಾಗುತ್ತಿದೆ. ಮದದಲ್ಲಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ಮದದಲ್ಲಿರುವ ಕಾಡಾನೆ ಹುಚ್ಚನಂತೆ ಆಡುತ್ತದೆ ಎಂಬ ಮಾಹಿತಿ ಕೊತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಜ್ಞರು ಟೀಕೆ ಮಾಡಿದ್ದಾರೆ. ಇದರ ಜೊತೆಗೆ ಈಗ ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಂದು ಎಡವಟ್ಟು ಬಯಲಾಗಿದೆ.

ಗುಂಡೇಟಿಗೆ ಪ್ರಾಣ ಕಳೆದುಕೊಂಡನಾ ಅರ್ಜುನ?

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗುಂಡು ಹಾರಿಸಿದಾಗ ಅದು ಅರ್ಜುನನ ಕಾಲಿಗೆ ತಗುಲಿದೆ ಎಂದು ಹೇಳಲಾಗುತ್ತಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಭರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ. ಕಾರ್ಯಾಚರಣೆ ವೇಳೆ ಅರಿವಳಿಕೆ ಇಂಜೆಕ್ಷನ್ ನೀಡಲಾಯಿತು. ಅದು ಗುರಿ ತಪ್ಪಿ ಪ್ರಶಾಂತ್ ಎಂಬ ಸಾಕಾನೆಗೆ ಬಿತ್ತು. ನಂತರ ಇನ್ನೊಂದು ಇಂಜೆಕ್ಷನ್ ನೀಡಿ ಪ್ರಶಾಂತ್ ಆನೆಯನ್ನು ಸುಧಾರಿಸಲಾಯಿತು. ಆ ಮೇಲೆ ಅರ್ಜುನ ಆನೆ ಮೊದಲ‌ ಬಾರಿಗೆ ಕಾಡಾನೆ ಮೇಲೆ ದಾಳಿ ಮಾಡಿತು. ಕಾಡಾನೆ ಸಾಕಾನೆ ಕಾಳಗದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೋವಿನಿಂದ ಗುಂಡು ಹಾರಿಸಿದರು. ಆಗ ಅರ್ಜುನನ ಕಾಲಿಗೆ ಗುಂಡು ತಗುಲಿತು. ಗುಂಡು ಬೀಳುತ್ತಲೇ ಅರ್ಜುನ ಬಲ ಕಳೆದುಕೊಂಡ. ದೊಡ್ಡ ಆನೆ ಆದ್ದರಿಂದ ಸುತ್ತಮುತ್ತಲಿನ ಮರಗಳನ್ನು ಬೀಳಿಸಿದ. ನಾವು ಆನೆ ಮೇಲಿಂದ ಇಳಿದು ಓಡಿದೆವು. ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಕಾಡಾನೆ ಸಾಕಾನೆ ಅರ್ಜುನನ ಮೇಲೆ ಹಠಾತ್ ದಾಳಿ ಮಾಡಿತು ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಹಾಸನ: ಕಾಡಾನೆ ಮತ್ತಿನಲ್ಲಿ ಇದ್ದರೂ ಕಾಳಗಕ್ಕಿಳಿದಿದ್ದ ಅರ್ಜುನ; ದಸರಾ ಆನೆ ಸಾವಿನ ಬಗ್ಗೆ ಡಿಎಫ್​ಓ ನೀಡಿದ ವಿವರ ಇಲ್ಲಿದೆ

ಅರಣ್ಯ ಅಧಿಕಾರಿಗಳ ಎಡವಟ್ಟಿಗೆ ಅರ್ಜುನ ಬಲಿ?

ಇನ್ನು ಕಾರ್ಯಾಚರಣೆ ತಂಡದಿಂದ ಆಕಸ್ಮಿಕವಾಗಿ ಆದ ಯಡವಟ್ಟಿನಿಂದ ಅರ್ಜನ ಬಲಿಯಾಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಗುಂಡೇಟಿನಿಂದ ಕಾಡಾನೆ ಎದುರು ಬಲ ಕಳೆದುಕೊಂಡು ಅರ್ಜನ ಬಲಿಯಾದ ಎನ್ನಲಾಗುತ್ತಿದೆ. ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ.

ಇಂದು ಅರ್ಜುನನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಕಾಡಾನೆ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ ಅರ್ಜುನನಿಗೆ ಇಂದು ಬೆಳಿಗ್ಗೆ 11 ಗಂಟೆ ಬಳಿಕ ಸಕಲ ಸರ್ಕಾರಿ ಗೌರವ ಹಾಗು ರಾಜ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ನೆಡುತೋಪಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರ್ಜುನ ದಸರಾ ಅಂಬಾರಿ ಹೊತ್ತ ಆನೆಯಾದ ಕಾರಣ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಹಾಗೂ ಮೈಸೂರು ಅರಮನೆಯ ರಾಜ ವಂಶಸ್ಥರೂ ಅರ್ಜುನನಿಗೆ ಅಂತಿಮ ಗೌರವ ಸಲ್ಲಿಸಲಿದ್ದಾರೆ. ಅರಮನೆಯ ಪೊರೋಹಿತರು ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ.

ಹಾಸನದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:54 am, Tue, 5 December 23