ಹಾವೇರಿ : ಲಾಕ್ಡೌನ್ ನಿಂದ ಮೆಣಸಿನಕಾಯಿ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ರೈತರು ಬೇಸಿಗೆ ಸಮಯದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ನೀರಾವರಿ ಕೃಷಿಯ ಮೂಲಕ ಭರಪೂರ ಮೆಣಸಿನಕಾಯಿ ಬೆಳೆದಿದ್ದಾರೆ. ರೈತರ ನಿರೀಕ್ಷೆ ಹುಸಿ ಮಾಡುವಂತೆ ಬಂಪರ್ ಆಗಿ ಬೆಳೆದಿರುವ ಮೆಣಸಿನಕಾಯಿ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೈತರು ತಾವು ಬೆಳೆದ ಬೆಳೆಯನ್ನು ನಾಶ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಹಾವೇರಿಯ ರೈತ ಶಂಕ್ರಪ್ಪ ಇಟಗಿ ಎಂಬುವರು ತಾವು ಬೆಳೆದಿದ್ದ ಐದು ಎಕರೆ ಮೆಣಸಿನಕಾಯಿಗೆ ರೋಟರ್ ಹೊಡೆದು ನಾಶ ಮಾಡಿದ್ದಾರೆ.
ಹಾವೇರಿ ತಾಲೂಕಿನ ದೇವಗಿರಿ ಸಮೀಪದ ಜಿಲ್ಲಾಡಳಿತ ಭವನದ ಸಮೀಪದಲ್ಲಿರುವ ರೈತ ಶಂಕ್ರಪ್ಪ ಇಟಗಿ ತಮ್ಮ ಐದು ಎಕರೆ ಜಮೀನಿನಲ್ಲಿ ಹಸಿ ಮೆಣಸಿನಕಾಯಿಯನ್ನು ಬೆಳೆದಿದ್ದರು. ಪ್ರತಿ ಎಕರೆಗೆ ಮೆಣಸಿನ ಗಿಡಗಳು, ಗೊಬ್ಬರ, ಆಳು ಅದು ಇದು ಎಂದು ನಲ್ವತ್ತರಿಂದ ಐವತ್ತು ಸಾವಿರ ರೂ. ಖರ್ಚು ಮಾಡಿದ್ದರು. ಪ್ರತಿವರ್ಷ ಮೆಣಸಿನಕಾಯಿ ಕ್ವಿಂಟಾಲ್ಗೆ ಕನಿಷ್ಠ ಎರಡೂವರೆ ಸಾವಿರ ರುಪಾಯಿಯಿಂದ ಗರಿಷ್ಠ ಏಳು ಸಾವಿರ ರುಪಾಯಿವರೆಗೆ ಬೆಲೆ ಸಿಗುತ್ತಿತ್ತು. ಪೂನಾ, ಬಾಂಬೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ವ್ಯಾಪಾರಸ್ಥರು ಬಂದು ಮೆಣಸಿನಕಾಯಿ ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈಗ ಕೊರೊನಾ ಎರಡನೆ ಅಲೆಯ ಅಬ್ಬರದಿಂದ ಲಾಕ್ಡೌನ್ ಘೋಷಣೆ ಆಗಿದೆ. ಹೀಗಾಗಿ ವ್ಯಾಪಾರಸ್ಥರು ಮೆಣಸಿನಕಾಯಿಗೆ ರೈತರ ಜಮೀನಿನತ್ತ ಬರುತ್ತಿಲ್ಲ. ರೈತರೆ ಮೆಣಸಿನಕಾಯಿ ಕಟಾವು ಮಾಡಿಕೊಂಡು ಮಾರಾಟಕ್ಕೆ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕ್ವಿಂಟಲ್ಗೆ ಆರು ನೂರು, ಏಳು ನೂರು ಮತ್ತು ಎಂಟು ನೂರು ರುಪಾಯಿ ಅಗ್ಗದ ದರಕ್ಕೆ ಮೆಣಸಿನಕಾಯಿ ಕೇಳುತ್ತಿದ್ದಾರೆ. ಇದರಿಂದ ಮಾಡಿದ ಖರ್ಚು ಬಾರದಂತಾಗಿ ಮೆಣಸಿನಕಾಯಿ ಬೆಳೆ ನಾಶ ಮಾಡಿದ್ದಾರೆ.
ಗಾಯದ ಮೇಲೆ ಬರೆ ಎಳೆದ ಲಾಕ್ಡೌನ್
ಕಳೆದ ವರ್ಷವೂ ರೈತರು ಬೆಳೆದ ಹಸಿ ಮೆಣಸಿನಕಾಯಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಮೊದಲನೇ ಅಲೆಯ ಲಾಕ್ಡೌನ್ ಘೋಷಣೆ ಆಗಿತ್ತು. ಆಗಲೂ ಹಸಿ ಮೆಣಸಿನಕಾಯಿ ಬೆಳೆದ ರೈತರಿಗೆ ಬೆಲೆ ಕುಸಿತವಾಗಿ ತೊಂದರೆ ಎದುರಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ ಎನ್ನುವಷ್ಟರಲ್ಲಿ ಎರಡನೇ ಅಲೆಯಿಂದ ಲಾಕ್ಡೌನ್ ಘೋಷಣೆ ಆಗಿದೆ. ಈ ಭಾರಿಯಂತೂ ಹಸಿ ಮೆಣಸಿನಕಾಯಿ ದರ ಸಂಪೂರ್ಣ ಕುಸಿದು ಹೋಗಿದೆ. ಕಳೆದ ವರ್ಷದ ಲಾಕ್ಡೌನ್ನಿಂದ ತೊಂದರೆಗೆ ಸಿಲುಕಿದ್ದ ಮೆಣಸಿನಕಾಯಿ ಬೆಳೆದ ರೈತರಿಗೆ ಭರಪೂರ ಬೆಳೆದಿದ್ದ ಮೆಣಸಿನಕಾಯಿ ಹೊಸ ಭರವಸೆ ಮೂಡಿಸಿತ್ತು. ಆದರೆ ಎರಡನೇ ಅಲೆಯ ಲಾಕ್ಡೌನ್ ರೈತರ ಭರವಸೆಯನ್ನು ಹುಸಿಗೊಳಿಸಿದೆ.
ಬೇಸಿಗೆ ಸಮಯದಲ್ಲಿ ನೀರು ಹಾಯಿಸುವ ಮೂಲಕ ಕಷ್ಟಪಟ್ಟು ಮೆಣಸಿನಕಾಯಿ ಬೆಳೆದಿದ್ದೆವು. ಹಲವಾರು ವರ್ಷಗಳಿಂದ ಹಸಿ ಮೆಣಸಿನಕಾಯಿ ಬೆಳೆಯುತ್ತಿದ್ದೇವೆ. ಪ್ರತಿ ವರ್ಷ ಮೆಣಸಿನಕಾಯಿಗೆ ಉತ್ತಮ ದರ ಸಿಗುತ್ತಿತ್ತು. ಕಳೆದ ವರ್ಷದಿಂದ ಮೆಣಸಿನಕಾಯಿಗೆ ಬೆಲೆ ಸಿಗದೆ ಹಾನಿ ಅನುಭವಿಸುತ್ತಿದ್ದೇವೆ. ಪ್ರಸಕ್ತ ವರ್ಷವಂತೂ ಮೆಣಸಿನಕಾಯಿ ಕೇಳುವವರೆ ಇಲ್ಲದಂತಾಗಿದೆ. ತೀರಾ ಅಗ್ಗದ ದರಕ್ಕೆ ಕೇಳುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಮಾರಾಟಕ್ಕೆ ಒಯ್ದರೂ ಆಳು, ಮಾರುಕಟ್ಟೆಗೆ ಒಯ್ದ ಖರ್ಚು ಬರುವುದಿಲ್ಲ. ಇದರಿಂದಾಗಿ ಕಷ್ಟಪಟ್ಟು ಬೆಳೆಸಿದ ಮೆಣಸಿನಕಾಯಿ ಬೆಳೆ ನಾಶ ಮಾಡಿದೆವು ಎಂದು ರೈತ ಶಂಕ್ರಪ್ಪ ಇಟಗಿ ಅಳಲು ತೋಡಿಕೊಂಡಿದ್ದಾರೆ.
ರೈತರು ಬೆಳೆ ನಾಶ ಮಾಡಬಾರದು. ಬೆಳೆ ನಾಶ ಮಾಡಿದ ತಕ್ಷಣ ಪರಿಹಾರ ಬರುವುದಿಲ್ಲ. ಬೆಳೆ ರೈತರ ಮಕ್ಕಳಿದ್ದಂತೆ. ಬೆಳೆಯನ್ನು ನಾವೇ ನಾಶ ಮಾಡುವುದು ಸರಿಯಲ್ಲ. ರೈತರು ಸ್ವಲ್ಪ ದಿನಗಳ ಕಾಲ ಕಾಯ್ದರೆ ಒಳ್ಳೆಯ ದಿನಗಳು ಬರುತ್ತವೆ. ಹೀಗಾಗಿ ರೈತರು ಬೆಳೆ ನಾಶ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ
ಬೆಳಗಾವಿಯಲ್ಲಿ ಒಂದೇ ಹಗ್ಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಮಿಶ್ರಣ; 6 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ
(Haveri farmer has destroyed Chilli Crop Not getting right price)