ಹಾವೇರಿ: ಜಿಲ್ಲೆಯಲ್ಲೊಂದು ಮಠವಿದೆ. ಮಠದಲ್ಲಿ ಮನುಷ್ಯ ಸ್ವಾಮೀಜಿ ಪೀಠಾಧಿಪತಿಗಳು ಆಗುವುದಿಲ್ಲ. ಮನುಷ್ಯ ಸ್ವಾಮೀಜಿ ಬದಲು ಎತ್ತುಗಳೆ ಇಲ್ಲಿನ ಪೀಠಾಧಿಪತಿಗಳು. ಆದರೆ ಪೀಠಾಧಿಪತಿಳಾಗಿರುವ ಎತ್ತು ಲಿಂಗೈಕ್ಯರಾದರೆ ನಂತರದಲ್ಲಿ ಮತ್ತೊಬ್ಬ ರೈತರ ಮನೆಯಲ್ಲಿ ಹುಟ್ಟಿ ಬರುತ್ತಾರೆ ಎನ್ನುವ ನಂಬಿಕೆ ಇದೆ. ಅದರಂತೆ ಈಗ ರೈತರೊಬ್ಬರ ಮನೆಯಲ್ಲಿ ಜನಿಸಿದ ಕರುವನ್ನು ಸಾಕ್ಷಾತ್ ಮೂಕಪ್ಪ ಶ್ರೀಗಳೆ ಜನ್ಮ ತಳೆದಿದ್ದಾರೆ ಅಂತಾ ಪೂಜೆ ಮಾಡಲಾಗುತ್ತಿದೆ.
ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದ ನಾಗರಾಜ ಮತ್ತೀಹಳ್ಳಿ ಎಂಬುವರ ಮನೆಯಲ್ಲಿ ಮಾರ್ಚ್ 14 ಕ್ಕೆ ಆಕಳು ಗಂಡು ಕರುವೊಂದಕ್ಕೆ ಜನ್ಮ ನೀಡಿದೆ. ಜನಿಸಿದ ಗಂಡು ಕರು ನಾಲ್ಕು ದಿನಗಳ ಕಾಲ ತಾಯಿಯ ಹಾಲು ಸೇವಿಸಲಿಲ್ಲವಂತೆ. ಪಶು ವೈದ್ಯರಿಗೆ ತೋರಿಸಿ ಏನೆಲ್ಲ ಮಾಡಿದರೂ ಕರು ಮಾತ್ರ ತಾಯಿಯ ಹಾಲು ಸೇವಿಸಲಿಲ್ಲವಂತೆ. ಆಗ ಕರುವಿನ ಮನೆಯವರು ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರದ ಮೂಕಪ್ಪ ಸ್ವಾಮೀಜಿಗಳ ಮಠದ ಧರ್ಮದರ್ಶಿಗಳ ಗಮನಕ್ಕೆ ತಂದಿದ್ದಾರೆ. ಆಗ ಕಳೆದ ಒಂದು ವರ್ಷದ ಹಿಂದೆ ಲಿಂಗೈಕ್ಯರಾಗಿರುವ ಮಠದ ಮೂಕಪ್ಪ ಸ್ವಾಮೀಜಿಗಳೆ ರೈತ ನಾಗರಾಜ ಮನೆಯಲ್ಲಿ ಜನ್ಮ ತಳೆದು ಬಂದಿದ್ದಾರೆ ಅಂತಾ ಭಾವಿಸಿಕೊಂಡರು. ನಂತರ ರೈತ ನಾಗರಾಜ ಮನೆಗೆ ತೆರಳಿ ಮಠದ ಸಂಪ್ರದಾಯದಂತೆ ಮೂರು ರೀತಿಯ ಪರೀಕ್ಷೆಗಳನ್ನು ನಡೆಸಿದರು. ಆಗ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ನಂಬಿಕೆಯಂತೆಯೆ ಕರು ಲಿಂಗೈಕ್ಯ ಸ್ವಾಮೀಜಿಗಳ ಅವತಾರದಲ್ಲಿ ಮರುಜನ್ಮ ತಳೆದು ಬಂದಿದೆ ಅಂತಾ ಖಚಿತ ಮಾಡಿಕೊಂಡರು. ಹೀಗಾಗಿ ಕರುವಿಗೆ ಒಂಬತ್ತು ತಿಂಗಳ ನಂತರ ಪಟ್ಟಾಧಿಕಾರ ಮಾಡುವುದಾಗಿ ಹೇಳಿದ್ದಾರೆ.
ಮೂರು ಪರೀಕ್ಷೆಗಳು
ವೃಷಭರೂಪಿ ಆಗಿರುವ ಮಠದ ಮೂಕಪ್ಪ ಸ್ವಾಮೀಜಿ ಲಿಂಗೈಕ್ಯರಾದ ನಂತರ ರೈತರೊಬ್ಬರ ಮನೆಯಲ್ಲಿ ಮರುಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕರು ಜನಿಸಿದ ನಂತರದಲ್ಲಿ ತಾಯಿಯ ಹಾಲು ಕುಡಿಯುವುದಿಲ್ಲ. ಆಗ ಮಠದ ಧರ್ಮದರ್ಶಿಗಳು ಕರುವಿಗೆ ಮೂರು ರೀತಿಯ ಪರೀಕ್ಷೆಗಳನ್ನ ಒಡ್ಡುತ್ತಾರಂತೆ. ಆಗ ಕರು ಮೂರು ರೀತಿಯ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಕರುವಿನ ರೂಪದಲ್ಲಿ ಮೂಕಪ್ಪ ಸ್ವಾಮೀಜಿ ಜನಿಸಿ ಬಂದಿದ್ದಾರೆ ಅಂತಾ ನಂಬಿ ಒಂಬತ್ತು ತಿಂಗಳ ಬಳಿಕ ಕರುವಿಗೆ ಪಟ್ಟಾಧಿಕಾರ ಮಾಡಲಾಗುತ್ತದೆ. ಅದರಂತೆ ರೈತ ನಾಗರಾಜರ ಮನೆಯಲ್ಲಿ ಜನಿಸಿದ ಕರು ಹಾಲು ಸೇವಿಸದ ವಿಚಾರ ತಿಳಿದು ಮಠದ ಧರ್ಮದರ್ಶಿಗಳು ರೈತನ ಮನೆಗೆ ಬಂದು ಪರೀಕ್ಷಿಸಿದರು. ಮಠದ ಧರ್ಮದರ್ಶಿ ಬಂದು ಕೂತರೆ ಸಾಕ್ಷಾತ್ ಲಿಂಗೈಕ್ಯ ಶ್ರೀಗಳ ರೂಪದಲ್ಲಿ ಜನಿಸಿರುವ ಕರು ಅವರನ್ನ ಗುರುತಿಸಬೇಕು. ನಂತರದಲ್ಲಿ ಧರ್ಮದರ್ಶಿ ಮಠದಿಂದ ತಂದಿರುವ ಪ್ರಸಾದದ ಚೀಲವನ್ನ ಗುರುತಿಸಬೇಕು. ಕೊನೆಯದಾಗಿ ಮಠದಿಂದ ತಂದಿದ್ದ ಪ್ರಸಾದ ತಿನ್ನಿಸಿ ತಾಯಿಯ ಹಾಲು ಕುಡಿಸುತ್ತಾರೆ. ಆಗ ಕರು ತಾಯಿಯ ಹಾಲು ಕುಡಿಯುತ್ತದೆ. ಮಠದ ಧರ್ಮದರ್ಶಿ ಈ ಮೂರು ರೀತಿಯ ಪರೀಕ್ಷೆ ನಡೆಸಿದ ಮೇಲೆ ಮಠದ ಲಿಂಗೈಕ್ಯ ಸ್ವಾಮೀಜಿ ಜನಿಸಿ ಬಂದಿದ್ದಾರೆ ಎಂದು ನಂಬಲಾಗುತ್ತದೆ. ಈ ರೀತಿಯ ನಂಬಿಕೆಯ ಮೇಲೆ ಮಠದ ಪೀಠಾಧಿಪತಿಗಳನ್ನ ನೇಮಿಸಲಾಗುತ್ತದೆ. ಮಠದಲ್ಲಿ ವೃಷಭರೂಪಿ ಆಗಿರುವ ಹಿರಿಯ ಮತ್ತು ಕಿರಿಯ ಎಂದು ಇಬ್ಬರು ಸ್ವಾಮೀಜಿಗಳು ಇರುತ್ತಾರೆ. ಒಬ್ಬರು ಲಿಂಗೈಕ್ಯರಾದ ನಂತರ ಮಠದಲ್ಲಿ ಒಂದು ವರ್ಷದಿಂದ ಒಬ್ಬರೆ ಸ್ವಾಮೀಜಿ ಇದ್ದರು. ಕಳೆದ ಎಂಟು ದಿನಗಳ ಹಿಂದೆ ರೈತನ ಮನೆಯಲ್ಲಿ ಲಿಂಗೈಕ್ಯ ಸ್ವಾಮೀಜಿ ಜನಿಸಿ ಬಂದಿದ್ದಾರೆ ಎನ್ನುವುದು ರೈತ ನಾಗರಾಜನ ಕುಟುಂಬದಲ್ಲಿ ಸಂತಸ ಮೂಡಿಸಿದೆ.
ಲಿಂಗೈಕ್ಯ ಸ್ವಾಮೀಜಿಯ ಪ್ರತಿರೂಪವಾಗಿ ಜನಿಸಿ ಬಂದಿರುವ ಕರುವಿಗೆ ದಿನಕ್ಕೆ ಮೂರು ಬಾರಿ ಪೂಜೆ ಮಾಡಲಾಗುತ್ತಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಮೂಕಪ್ಪ ಸ್ವಾಮೀಜಿ ಜನಿಸಿದ್ದಾರೆ ಎಂಬುದು ತಿಳಿದು ಆಗಾಗ ಬಂದು ಕರುವನ್ನ ನೋಡಿಕೊಂಡು ಕರುವಿನ ರೂಪದಲ್ಲಿರುವ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ
ಯುವರತ್ನ ಸಿನಿಮಾ ರಿಲೀಸ್ ಗೆ ರೆಡಿ: ಬಳ್ಳಾರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಮಹಾರಾಷ್ಟ್ರದ ಹೃದಯ ಕನ್ನಡಿಗನಲ್ಲಿ ಮಿಡಿಯಿತು; ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ