ಮಹಾರಾಷ್ಟ್ರದ ಹೃದಯ ಕನ್ನಡಿಗನಲ್ಲಿ ಮಿಡಿಯಿತು; ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ
ಮೆದುಳು ನಿಷ್ಕ್ರೀಯಗೊಂಡ 52 ವರ್ಷದ ವ್ಯಕ್ತಿಯ ಕುಟುಂಬದ ಜೊತೆ ಮಾತನಾಡಿ ಹೃದಯ ದಾನಕ್ಕೆ ಒಪ್ಪಿಗೆ ಪಡೆದಿದ್ದಾರೆ. ಅತ್ಯಾಧುನಿಕ ಆರ್ಥೋಟಾಪಿಕ್ ತಂತ್ರಜ್ಞಾನ ಬಳಸಿ ಹೃದಯ ಜೋಡಿಸಲಾಗಿದೆ.
ಬೆಳಗಾವಿ: 52 ವರ್ಷದ ವ್ಯಕ್ತಿಯ ಹೃದಯವನ್ನು 17 ವರ್ಷದ ಬಾಲಕನಿಗೆ ಕಸಿ ಮಾಡುವಲ್ಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆ ಯಶಸ್ವಿಯಾಗಿದೆ. ಪಾರ್ಶ್ವವಾಯುವಿನಿಂದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನ್ನು ಬಾಲಕನಿಗೆ ಕಸಿ ಮಾಡಲಾಗಿದೆ. ಸತತ 6 ಗಂಟೆಗಳ ಕಾಲ 19 ಸಿಬ್ಬಂದಿಯಿಂದ ಫೆಬ್ರವರಿ 26, 2021ರಂದು ಬಾಲಕನಿಗೆ ಹೃದಯ ಕಸಿ ಮಾಡಲಾಗಿತ್ತು. ಆರೋಗ್ಯ ಕರ್ನಾಟಕ, ಆಯುಷ್ಯಮಾನ್ ಭಾರತ್ ಅಡಿಯಲ್ಲಿ ಉಚಿತ ಚಿಕಿತ್ಸೆ ಮಾಡಿದ್ದು, ಕಸಿ ಮಾಡಿ 21 ದಿನ ಕಳೆದಿದ್ದು ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನುವುದು ಎಲ್ಲರಿಗೂ ಖುಷಿ ತಂದುಕೊಟ್ಟಿದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರದ ಮೃತ ವ್ಯಕ್ತಿಯ ಕುಟುಂಬಸ್ಥರ ಮನವೊಲಿಸಿ ಈ ಹೃದಯ ಕಸಿ ಮಾಡಲಾಗಿದೆ. ಬಾಲಕ ಡಯಲೇಟೆಡ್ ಕಾರ್ಡಿಯೋಮಯೊಪತಿ ಎಂಬ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ, ಇದರಿಂದಾಗಿ ಹೃದಯ ಕಸಿ ಮಾಡಲಾಗಿದೆ. ಒಟ್ಟಾರೆಯಾಗಿ ಈ ಹೃದಯ ಜೋಡಣೆಯಿಂದ ಒಂದು ಬಾಲಕನಿಗೆ ಜೀವದಾನ ಮಾಡಿದಂತಾಗಿದೆ.
ಕೆಎಲ್‌ಇ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ 2018ರ ಫೆಬ್ರವರಿಯಲ್ಲಿ ಹೃದಯ ಮರು ಜೊಡಣೆ ನಡೆದಿತ್ತು. ಬಳಿಕ ಈಗ ಮತ್ತೊಂದು ಹೃದಯ ಕಸಿ ಯಶಸ್ವಿಯಾಗಿದೆ. ಬಾಲಕ ಡಯಲೇಟೆಡ್ ಕಾರ್ಡಿಯೋಮಯೊಪತಿ ಎಂಬ ಹೃದಯ ಕಾಯಿಲೆಗೆ ಒಳಗಾಗಿದ್ದರು, ಇದರಿಂದ ಹೃದಯ ಅಶಕ್ತವಾಗಿ ರಕ್ತ ಪಂಪ್ ಮಾಡುತ್ತಿರಲಿಲ್ಲ. ಪರಿಣಾಮ ಬಾಲಕನಲ್ಲಿ ಉಸಿರಾಟದ ತೊಂದರೆ ಉಂಟಾಗಿತ್ತು. ಹೀಗಾಗಿ ಕೃತಕ ಆಮ್ಲಜನಕದ ಸಹಾಯ ಪಡೆಯುತ್ತಿದ್ದರು.
ಮರು ಜೋಡಣೆಯೊಂದೆ ಇದಕ್ಕೆ ಪರಿಹಾರ ಎಂದು ಮನಗಂಡ ವೈದ್ಯರ ತಂಡ. ರಾಜ್ಯ ಸರ್ಕಾರದ ಅಂಗಾಂಗ ಕಸಿ ಪ್ರಾಧಿಕಾರದ ಜೀವನ ಸಾರ್ಥಕತೆ ಕಾರ್ಯಕ್ರಮದಲ್ಲಿ ರೋಗಿಯ ಹೆಸರನ್ನು ನೋಂದಾಯಿಸಿದ್ದಾರೆ. ಬಳಿಕ ಮೆದುಳು ನಿಷ್ಕ್ರಿಯಗೊಂಡ 52 ವರ್ಷದ ವ್ಯಕ್ತಿಯ ಕುಟುಂಬದ ಜೊತೆ ಮಾತನಾಡಿ ಹೃದಯ ದಾನಕ್ಕೆ ಒಪ್ಪಿಗೆ ಪಡೆದಿದ್ದಾರೆ. ಅತ್ಯಾಧುನಿಕ ಆರ್ಥೋಟಾಪಿಕ್ ತಂತ್ರಜ್ಞಾನ ಬಳಸಿ ಹೃದಯ ಜೋಡಿಸಲಾಗಿದೆ. ಈ ಹಿಂದೆ ಬಾಲಕನಿಗೆ ಊಟ ಮಾಡಲಾಗುತ್ತಿರಲಿಲ್ಲ ಆದರೆ ಈಗ ಊಟ ಮಾಡುತ್ತಿದ್ದಾರೆ.
ಇದನ್ನೂ ಓದಿ:
ಉತ್ತಮ ಆರೋಗ್ಯಕ್ಕೆ ವೈದ್ಯರ ಸಲಹೆ: ಬ್ರೈನ್ ಟ್ರಾಮಾ ಮತ್ತು ಹೆಡ್ ಇಂಜ್ಯುರಿಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ