AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಸಿನಿಮಾಗೆ ಇನ್ನೊಂದು ಶಾಕ್: ಕ್ಯಾನ್ಸಲ್ ಆಯ್ತಾ 120 ಕೋಟಿ ರೂ. ಒಟಿಟಿ ಡೀಲ್?

ಇಷ್ಟು ದಿನ ಬಿಡುಗಡೆ ವಿಳಂಬದಿಂದ ತೊಂದರೆಗೆ ಸಿಲುಕ್ಕಿದ್ದ ‘ಜನ ನಾಯಗನ್’ ಚಿತ್ರಕ್ಕೆ ಈಗ ಇನ್ನೊಂದು ಸಮಸ್ಯೆ ಎದುರಾದಂತಿದೆ. ಈ ಮೊದಲೇ ಆಗಿದ್ದ ಒಟಿಟಿ ವ್ಯವಹಾರದ ಒಪ್ಪಂದ ಕ್ಯಾನ್ಸಲ್ ಆಗಿರುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ದಳಪತಿ ವಿಜಯ್ ಅವರ ಈ ಚಿತ್ರಕ್ಕೆ ಹೊಸ ಹೊಸ ವಿಘ್ನ ಎದುರಾಗುತ್ತಿದೆ.

‘ಜನ ನಾಯಗನ್’ ಸಿನಿಮಾಗೆ ಇನ್ನೊಂದು ಶಾಕ್: ಕ್ಯಾನ್ಸಲ್ ಆಯ್ತಾ 120 ಕೋಟಿ ರೂ. ಒಟಿಟಿ ಡೀಲ್?
Thalapathy Vijay
ಮದನ್​ ಕುಮಾರ್​
|

Updated on: Mar 12, 2026 | 6:54 PM

Share

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಚಿತ್ರವು ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಸೆನ್ಸಾರ್ ಮಂಡಳಿಯ ಜೊತೆಗಿನ ಸಂಘರ್ಷದಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ. ಅಲ್ಲದೇ, ಚಿತ್ರದ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಹೊಂದಿದ್ದ ಪ್ರಮುಖ ಒಟಿಟಿ ಸಂಸ್ಥೆ ‘ಅಮೇಜಾನ್ ಪ್ರೈಮ್ ವಿಡಿಯೋ’ (Amazon Prime Video) ತನ್ನ ಒಪ್ಪಂದದಿಂದ ಹಿಂದೆ ಸರಿದಿದೆ ಎಂಬ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಇದರಿಂದಾಗಿ ದಳಪತಿ ವಿಜಯ್ (Thalapathy Vijay) ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ‘ಅಮೇಜಾನ್ ಪ್ರೈಮ್ ವಿಡಿಯೋ’ ಈ ಹಿಂದೆ ‘ಜನ ನಾಯಗನ್’ ಸಿನಿಮಾದ ಪೋಸ್ಟ್-ಥಿಯೇಟ್ರಿಕಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಬರೋಬ್ಬರಿ 120 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದರೆ, ಚಿತ್ರದ ಬಿಡುಗಡೆಯ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಹಾಗೂ ಪದೇ ಪದೇ ಮುಂದೂಡಲ್ಪಡುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಒಪ್ಪಂದ ರದ್ದು ಮಾಡಿಕೊಂಡಿದೆ ಎನ್ನಲಾಗಿದೆ.

2026ರ ಸಂಕ್ರಾಂತಿ ಹಬ್ಬಕ್ಕೆ ತೆರೆಕಾಣಬೇಕಿದ್ದ ‘ಜನ ನಾಯಗನ್’ ಸಿನಿಮಾ ಸೆನ್ಸಾರ್ ಕಾರಣಕ್ಕೆ ಅತಂತ್ರ ಸ್ಥಿತಿಯಲ್ಲಿದೆ. ಸೆನ್ಸಾರ್ ಮಂಡಳಿ ಸದಸ್ಯರ ಪ್ರಕಾರ, ಈ ಚಿತ್ರದ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಸಶಸ್ತ್ರ ಪಡೆಗಳನ್ನು ಚಿತ್ರಿಸಿರುವ ರೀತಿ ಆಕ್ಷೇಪಾರ್ಹವಾಗಿದೆ. ಸದ್ಯ ಸಿನಿಮಾವು ರಿವೈಸಿಂಗ್ ಕಮಿಟಿಯ ಮುಂದಿದ್ದು, ಸಮಿತಿಯು ಮುಂಬರುವ ದಿನಗಳಲ್ಲಿ ಚಿತ್ರವನ್ನು ವೀಕ್ಷಿಸಿ ತೀರ್ಪು ನೀಡಲಿದೆ.

ಒಟಿಟಿ ಡೀಲ್ ಕ್ಯಾನ್ಸಲ್ ಆಗಿದೆ ಎಂಬ ಸುದ್ದಿಯನ್ನು ಚಿತ್ರೋದ್ಯಮದ ವಿಶ್ಲೇಷಕರು ಸಂಪೂರ್ಣವಾಗಿ ನಂಬಲು ಸಿದ್ಧರಿಲ್ಲ. ಸಿನಿಮಾ ಬಿಡುಗಡೆ ವಿಳಂಬವಾದಾಗ ಇಂತಹ ವದಂತಿಗಳು ಸಹಜ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ವಿಷಯದಲ್ಲೂ ಇಂತಹದ್ದೇ ವರದಿಗಳು ಬಂದಿದ್ದವು. ಆದರೆ ಒಟಿಟಿ ಸಂಸ್ಥೆಯು ಕೇವಲ ದರವನ್ನು ಮರುನಿಗದಿ ಮಾಡಿಕೊಂಡಿತ್ತೇ ಹೊರತು, ಒಪ್ಪಂದವನ್ನು ರದ್ದುಗೊಳಿಸಿರಲಿಲ್ಲ ಎಂಬುದು ನಂತರ ತಿಳಿಯಿತು.

ಇದನ್ನೂ ಓದಿ: ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ

‘ಜನ ನಾಯಗನ್’ ಸಿನಿಮಾದ ವಿಷಯದಲ್ಲೂ ‘ಅಮೇಜಾನ್ ಪ್ರೈಮ್ ವಿಡಿಯೋ’ ಸಂಸ್ಥೆ ಇದೇ ಹಾದಿ ತುಳಿಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಚಿತ್ರತಂಡ ಅಥವಾ ‘ಅಮೇಜಾನ್ ಪ್ರೈಮ್ ವಿಡಿಯೋ’ ಕಡೆಯಿಂದ ಅಧಿಕೃತವಾಗಿ ಹೇಳಿಕೆ ನೀಡುವವರೆಗೆ ಈ ಗೊಂದಲ ಮುಂದುವರಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us