ಹುಬ್ಬಳ್ಳಿಯಲ್ಲಿ ನೆಲಕ್ಕುರಳಿದ ಬೃಹತ್ ಗಾತ್ರದ ಶಿವಾಜಿ ಪುತ್ಥಳಿ: ಕಳಪೆ ಕಾಮಗಾರಿ ವಿರುದ್ಧ ಮರಾಠ ಸಮುದಾಯ ಆಕ್ರೋಶ
17.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಬೃಹತ್ ಗಾತ್ರದ ಶಿವಾಜಿ ಪುತ್ಥಳಿ ಛತ್ತಿಸಘಡದಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಮೂರ್ತಿಯ ರುಂಡ-ಮುಂಡ ಎಲ್ಲವೂ ಪ್ರತ್ಯೇಕವಾಗಿ ನೆಲಕ್ಕುರುಳಿದ್ದು, ಸಂಪೂರ್ಣವಾಗಿ ನಾಶವಾಗಿದೆ.

ಹುಬ್ಬಳ್ಳಿ: ಪಾಲಿಕೆ ಕಚೇರಿ ಪಕ್ಕದ ಉದ್ಯಾನವನದಲಿದ್ದ ಶಿವಾಜಿ ಪುತ್ಥಳಿ ನೆಲಕ್ಕೆ ಉರುಳಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕುದುರೆ ಮೇಲೆ ಕೂತಿದ್ದ ಬೃಹತ್ ಗಾತ್ರದ ಲೋಹದ ಮೂರ್ತಿ ಮೂರು ವರ್ಷದ ಹಿಂದೆಯಷ್ಟೇ ಪ್ರತಿಷ್ಠಾಪನೆಗೊಂಡಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಈಗ ಶಿವಾಜಿ ಮೂರ್ತಿ ನೆಲಕ್ಕೆ ಉರುಳಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಮರಾಠ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
17.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಬೃಹತ್ ಗಾತ್ರದ ಶಿವಾಜಿ ಪುತ್ಥಳಿ ಛತ್ತೀಸಗಡದಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಮೂರ್ತಿಯ ರುಂಡ-ಮುಂಡ ಎಲ್ಲವೂ ಪ್ರತ್ಯೇಕವಾಗಿ ನೆಲಕ್ಕುರುಳಿದ್ದು, ಸಂಪೂರ್ಣವಾಗಿ ನಾಶವಾಗಿದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಉಪನಗರ ಠಾಣಾ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಉದ್ಧವ್ ಠಾಕ್ರೆ ಟ್ವೀಟ್: ಇನ್ನು ಶಿವಾಜಿ ಅಥವಾ ಮರಾಠಿ ಭಾಷಿಗರು ಸದಾ ಕಾಲ ಸುದ್ದಿಯಲ್ಲಿರುತ್ತಾರೆ. ಈ ಹಿಂದೆಯೂ ಕೂಡ ಮರಾಠಿ ಭಾಷಿಗರ ಕುರಿತು ಉದ್ಧವ್ ಠಾಕ್ರೆ ನೀಡಿದ ಹೇಳಿಕೆಯೊಂದು ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಮರಾಠರು ಹೆಚ್ಚಿರುವ ಕರ್ನಾಟಕ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿತ್ತು.
ಕರ್ನಾಟಕ ವಶದಲ್ಲಿರುವ ಮರಾಠಿ ಭಾಷಿಗರ ಹಾಗೂ ಸಾಂಸ್ಕೃತಿಕ ಪ್ರದೇಶವನ್ನು ಮತ್ತೆ ಮಹಾರಾಷ್ಟ್ರದ ಸುಪರ್ದಿಗೆ ತರುವುದು ಗಡಿ ಹೋರಾಟದಲ್ಲಿ ಮೃತಪಟ್ಟವರಿಗೆ ನಾವು ನೀಡುವ ಗೌರವ. ಈ ಕಾರ್ಯ ಮಾಡಲು ನಾವು ಬದ್ಧರಾಗಿದ್ದೇವೆ. ಈ ಭರವಸೆಯೊಂದಿಗೆ ಹುತಾತ್ಮರಿಗೆ ಗೌರವ ಸೂಚಿಸುತ್ತಿದ್ದೇವೆ ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದರು.
ಬೆಳಗಾವಿ ಹಾಗೂ ಗಡಿ ಭಾಗದ ಕೆಲ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದೆ ಎಂಬುದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಆಗ್ರಹವಾಗಿತ್ತು. ಆದರೆ, ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟುಕೊಡುವುದಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿದ್ದು, ಇಂದಿಗೂ ಕೂಡ ಈ ಕುರಿತು ಅಲ್ಲಲ್ಲಿ ಹೋರಾಟ ಅಥವಾ ಪ್ರತಿಭಟನೆ ನಡೆಯುತ್ತಲೇ ಬಂದಿದೆ.
ಹೀಗಿರುವಾಗಲೇ ಈಗ ಅಧಿಕಾರಿಗಳ ಕಳಪೆ ಕಾಮಗಾರಿಯಿಂದ ಶಿವಾಜಿ ಮೂರ್ತಿ ನಾಶವಾಗಿದ್ದು, ಮತ್ತಷ್ಟು ಜನರ ಆಕ್ರೋಶಕ್ಕೆ ಅಣಿ ಮಾಡಿಕೊಟ್ಟಂತೆ ಆಗಿದೆ. ಇನ್ನಾದರೂ ಸರ್ಕಾರದಿಂದ ನಡೆಯುವ ಕಾಮಗಾರಿಗಳು ಮೂರು -ನಾಲ್ಕು ವರ್ಷಕ್ಕೆ ಹಾಳಾಗದೆ ಜನರ ಉಪಯೋಗಕ್ಕೆ ಬರಲಿ ಎಂಬುವುದೇ ಎಲ್ಲರ ಆಶಯ.
ಇದನ್ನೂ ಓದಿ:
ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಪುಣ್ಯತಿಥಿ ಹಿನ್ನೆಲೆ: ಸಮಾಧಿ ಸ್ಥಳಕ್ಕೆ ಗಣ್ಯರ ಭೇಟಿ