ದಾಖಲೆ ದರಕ್ಕೆ ಮೆಣಸಿನಕಾಯಿ ಮಾರಾಟ: ಮೆಣಸಿನಕಾಯಿಗೆ ಸಿಕ್ಕ ದರವೆಷ್ಟು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Dec 18, 2020 | 3:52 PM

ಕಳೆದ ವರ್ಷ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ 35000 ರೂಪಾಯಿವರೆಗೆ ದರ ಸಿಕ್ಕಿತ್ತು. ಕಳೆದ ವಾರ‌ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ ಕ್ವಿಂಟಲ್​ಗೆ 35.555 ರೂಪಾಯಿ ದರ ಸಿಕ್ಕಿದ್ದು, ಆ ಮೂಲಕ ಅದರ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿತ್ತು. ಆದರೆ ಈ ವಾರ ಕ್ವಿಂಟಲ್​ಗೆ 36.999 ರೂಪಾಯಿ ದರ ಸಿಗುವ ಮೂಲಕ ಮೆಣಸಿನಕಾಯಿ ಹೊಸ ದಾಖಲೆ ನಿರ್ಮಿಸಿದೆ.

ದಾಖಲೆ ದರಕ್ಕೆ ಮೆಣಸಿನಕಾಯಿ ಮಾರಾಟ: ಮೆಣಸಿನಕಾಯಿಗೆ ಸಿಕ್ಕ ದರವೆಷ್ಟು ಗೊತ್ತಾ?
ಭರಪೂರ ಬ್ಯಾಡಗಿ ಮೆಣಸಿಕಾಯಿ
Follow us on

ಹಾವೇರಿ: ಜಿಲ್ಲೆಯ ಬ್ಯಾಡಗಿ ಎಂದಾಕ್ಷಣ ತಟ್ಟನೆ ನೆನಪಾಗುವುದು ಮೆಣಸಿನಕಾಯಿ. ಬ್ಯಾಡಗಿ ಹೆಸರಿನಿಂದಲೇ ಫೇಮಸ್ ಆಗಿರುವ ಈ ಮೆಣಸಿನಕಾಯಿ ದೇಶವಿದೇಶದಲ್ಲೂ ತನ್ನದೇ ಆದ ಹೆಸರು ಪಡೆದಿದೆ. ಇಂತಹ ಮೆಣಸಿನಕಾಯಿ ವರ್ಷದಿಂದ ವರ್ಷಕ್ಕೆ ದಾಖಲೆ ದರಕ್ಕೆ ಮಾರಾಟವಾಗುತ್ತಿದೆ. ಸದ್ಯ ಇಂದಿನ ಮಾರುಕಟ್ಟೆಯಲ್ಲಿ ರೈತರೊಬ್ಬರು ತಂದಿದ್ದ ಮೆಣಸಿನಕಾಯಿಗೆ ಬಂಪರ್ ದರ‌ ಸಿಕ್ಕಿದ್ದು, ಇದು ಮತ್ತೊಂದು ಹೊಸ ದಾಖಲೆಗೆ ಸಾಕ್ಷಿಯಾಗಿದೆ.

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಆವಲದಟ್ಟಿ ಗ್ರಾಮದ ರೈತ ಹನುಮ ರೆಡ್ಡಿ ಎಂಬುವರು 20 ಚೀಲ ಒಣಗಿದ ಕೆಂಪು ಬ್ಯಾಡಗಿ ಮೆಣಸಿನಕಾಯಿ ತಂದಿದ್ದರು. ಇದನ್ನು ಎಪಿಎಂಸಿಯಲ್ಲಿನ ವಿ.ಎಂ.ಬಾಗೋಜಿ ಎಂಬುವ ದಲ್ಲಾಳಿ ಅಂಗಡಿಯಲ್ಲಿ ಟೆಂಡರ್​ಗೆ ಹಾಕಿದ್ದರು.

ಒಣಗಿದ ಕೆಂಪು ಮೆಣಸಿನಕಾಯಿ ಉತ್ತಮ ಗುಣಮಟ್ಟ ಹೊಂದಿದ್ದರಿಂದ ಕ್ವಿಂಟಲ್​ಗೆ 36,999 ರೂಪಾಯಿಗೆ ಮಾರಾಟವಾಗಿದ್ದು, ಆ ಮೂಲಕ ಬ್ಯಾಡಗಿಯ ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ‌ ಸೃಷ್ಟಿಮಾಡಿದೆ. ಕೈಲಾಸಂ ಟ್ರೇಡರ್ಸ್ ಎಂಬುವವರು ಈ ದಾಖಲೆ ಬರೆದ 20 ಚೀಲ‌ ಮೆಣಸಿನಕಾಯಿ ಖರೀದಿ ಮಾಡಿದ್ದಾರೆ.

ದಾಖಲೆ ದರ ಪಡೆದ ರೈತನಿಗೆ ದಲ್ಲಾಳಿ ಅಂಗಡಿಯವರು ಹಾಗೂ ಎಪಿಎಂಸಿ ಸಿಬ್ಬಂದಿ ಸನ್ಮಾನಿಸಿದ ದೃಶ್ಯ

ಎಲ್ಲಾ ದಾಖಲೆ‌ ಮುರಿದು ಹೊಸ ದಾಖಲೆ‌ ನಿರ್ಮಿಸಿದ ಮೆಣಸಿನಕಾಯಿ ದರ :

ಕಳೆದ ವರ್ಷ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ 35,000 ರೂಪಾಯಿವರೆಗೆ ದರ ಸಿಕ್ಕಿತ್ತು. ಕಳೆದ ವಾರ‌ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ ಕ್ವಿಂಟಲ್​ಗೆ 35,555 ರೂಪಾಯಿ ದರ ಸಿಕ್ಕಿದ್ದು, ಆ ಮೂಲಕ ಅದರ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿತ್ತು. ಆದರೆ ಈ ವಾರ ಕ್ವಿಂಟಲ್​ಗೆ 36,999 ರೂಪಾಯಿ ದರ ಸಿಗುವ ಮೂಲಕ ಮೆಣಸಿನಕಾಯಿ ಹೊಸ ದಾಖಲೆ ನಿರ್ಮಿಸಿದೆ.

ಭರಪೂರ ಮೆಣಸಿನಕಾಯಿ:

ಅಂತರಾಷ್ಟ್ರೀಯ ಮಾರುಕಟ್ಟೆಯ ಖ್ಯಾತಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ. ಗುರುವಾರದ ಮಾರುಕಟ್ಟೆಗೆ 60,590 ಚೀಲ ಮೆಣಸಿನಕಾಯಿ ಬಂದಿದ್ದು, ಬ್ಯಾಡಗಿ, ಕಡ್ಡಿ, ಗುಂಟೂರ ಹೀಗೆ ವಿವಿಧ ತಳಿಯ ಮೆಣಸಿನಕಾಯಿ ಮಾರುಕಟ್ಟೆ ತಲುಪಿದೆ. ಕಣ್ಣು ಹಾಯಿಸಿದಲ್ಲೆಲ್ಲ ಕೆಂಪು ಮೆಣಸಿನಕಾಯಿ, ಅವುಗಳ ಘಾಟೇ ಪಸರಿಸುವಷ್ಟರ ಮಟ್ಟಿಗೆ ಇದರ ಪ್ರಮಾಣ ಹೆಚ್ಚಾಗಿದೆ.

ಬ್ಯಾಡಗಿ ಮೆಣಸಿನಕಾಯಿ

ದಾಖಲೆ ದರ ಪಡೆದ ರೈತ ಫುಲ್ ಖುಷ್ :

ರೈತ ಹನುಮರೆಡ್ಡಿ ತಂದಿದ್ದ 20 ಚೀಲ‌‌ ಮೆಣಸಿನಕಾಯಿ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಎಂಟೂವರೆ ಕ್ವಿಂಟಲ್‌ ತೂಕದಷ್ಟಿದ್ದ ಮೆಣಸಿನಕಾಯಿಗೆ ದಾಖಲೆ ದರ ದೊರೆತಿದೆ. ಕ್ವಿಂಟಲ್​ಗೆ 36,999 ರೂಪಾಯಿ ದರ ಪಡೆದ ಅನಂತಪುರ ಜಿಲ್ಲೆಯ ಹನುಮರೆಡ್ಡಿ ಎಂಬ ರೈತ ದಾಖಲೆ ದರ‌ ಸಿಕ್ಕಿದ್ದಕ್ಕೆ ಫುಲ್ ಖುಷಿ ಆಗಿದ್ದು, ಹೆಚ್ಚಿನ ದರ ನೀಡಿದ ವ್ಯಾಪಾರಸ್ಥರಿಗೆ ಧನ್ಯವಾದ ತಿಳಿಸಿದ್ದಾನೆ.

ಬ್ಯಾಡಗಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೆಣಸಿನಕಾಯಿ ದರ ಆರಂಭವಾಗುವುದು 20,000 ರೂಪಾಯಿಂದ. ಗುಣಮಟ್ಟದಲ್ಲೇ ಮತ್ತಷ್ಟು ಉತ್ಕೃಷ್ಟವಾಗಿದ್ದರೆ 25,000, 30,000 ಹೀಗೆ ದರ ದೊರೆಯುತ್ತದೆ. ಆದರೆ ಮಾರುಕಟ್ಟೆಗೆ ಬಂದಿದ್ದ ಎಲ್ಲಾ ರೈತರ ಮೆಣಸಿನಕಾಯಿಗಿಂತ ರೈತ ಹನುಮರೆಡ್ಡಿ ತಂದಿದ್ದ ಮೆಣಸಿನಕಾಯಿ ಹೆಚ್ಚಿನ ಗುಣಮಟ್ಟ ಹೊಂದಿದ್ದರಿಂದ ದಾಖಲೆ ದರ ದೊರೆತಿದೆ. ಗುಣಮಟ್ಟದ ಮೆಣಸಿನಕಾಯಿ ತಂದು ದಾಖಲೆ ದರ ಪಡೆದ ರೈತನಿಗೆ ದಲ್ಲಾಳಿ ಅಂಗಡಿಯವರು ಹಾಗೂ ಎಪಿಎಂಸಿ ಸಿಬ್ಬಂದಿ ಸನ್ಮಾನಿಸಿ ಗೌರವಿಸಿದ್ದಾರೆ.

ಈಗಾಗಲೇ ಮೆಣಸಿನಕಾಯಿ ಮಾರುಕಟ್ಟೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಮೂಲಕ ತನ್ನದೇ ಆದ ಖ್ಯಾತಿ ಹೊಂದಿದ್ದು, ಇದೀಗ ಅತಿ ಹೆಚ್ಚಿನ ದರಕ್ಕೆ ಮೆಣಸಿನಕಾಯಿ ಮಾರಾಟವಾಗುವ ಮೂಲಕ ಮಾರುಕಟ್ಟೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಏರುವಂತೆ ಮಾಡಿದೆ

ಮಂದಹಾಸ ತಂದ ಬ್ಯಾಡಗಿ, ಇಳುವರಿ ಕಮ್ಮಿಯಿದ್ರೂ ರೈತರಿಗೆ ಭರಪೂರ ಆದಾಯ