ಹಾವೇರಿ: ಸಾವಿನಲ್ಲೂ ಮಗನ ಅಂಗಾಂಗ ದಾನ ಮಾಡಿ ಬಡ ಕುಟುಂಬ ಸಾರ್ಥಕತೆ ಮೆರೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಮಗನ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಮಗನ ಅಂಗಾಂಗ ದಾನ ಮಾಡಿ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ ಬೈಕ್ ಅಪಘಾತಕ್ಕೆ ಒಳಗಾಗಿ ಪ್ರಕಾಶ್(43) ಎಂಬುವವರ ಮೆದುಳು ನಿಷ್ಕ್ರೀಯಗೊಂಡಿತ್ತು. ಇದನ್ನರಿತ ಆತನ ಮನೆಯವರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆಯೋ ಕೆಲಸ ಮಾಡಿದ್ದಾರೆ. ಎದೆಯಲ್ಲಿ ದುಃಖ ಮಡುಗಟ್ಟಿದ್ರೂ ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿವಪುರ ತಾಂಡಾದಲ್ಲಿ ಗ್ರಾಮದ ಹನುಮಂತಪ್ಪ ಮತ್ತು ಲಕ್ಕವ್ವ ಲಮಾಣಿ ದಂಪತಿಗೆ ಇಬ್ಬರು ಗಂಡು ಮಕ್ಕಳು. ದಂಪತಿಯದ್ದು ಕಡುಬಡತನದ ಕುಟುಂಬ. ಹಿರಿಯ ಮಗ ಕೆಲಸ ಅರಸಿಕೊಂಡು ದೂರದ ಊರಿಗೆ ದುಡಿಯೋಕೆ ಹೋಗಿದ್ದಾನೆ. ಕಿರಿಯ ಮಗ ಪ್ರಕಾಶ ತಂದೆ ತಾಯಿ ಜೊತೆಗೆ ಶಿವಪುರ ತಾಂಡಾದಲ್ಲಿ ವಾಸವಾಗಿದ್ದ. ಪ್ರಕಾಶ್ಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದು, ಇಬ್ಬರು ಹೆಣ್ಣು ಮತ್ತು ಓರ್ವ ಗಂಡು ಮಗನಿದ್ದಾನೆ. ತಂದೆ, ತಾಯಿ, ಪತ್ನಿ ಮತ್ತು ಮೂವರು ಮಕ್ಕಳ ದೊಡ್ಡ ಕುಟುಂಬ ಸಾಗಿಸಲು ಪ್ರಕಾಶ್ ಗ್ರಾಮದ ಬಳಿ ಇರೋ ಖಾಸಗಿ ಕಂಪನಿಯೊಂದರಲ್ಲಿ ಕೂಲಿ ಕೆಲಸಕ್ಕೆ ಹೋಗ್ತಿದ್ದ. ಆಗಸ್ಟ್ 13ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಪ್ರಕಾಶ ಸಂಜೆ ತನ್ನ ಬೈಕ್ ನಲ್ಲಿ ಮನೆಗೆ ಬರ್ತಾ ಇದ್ದ.
ಆಗ ಬೈಕ್ ಅಪಘಾತಕ್ಕೆ ಒಳಗಾಗಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದ. ಪ್ರಕಾಶನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಪ್ರಕಾಶ್ಗೆ ಗಂಭೀರ ಗಾಯವಾಗಿದ್ದರಿಂದ ಪ್ರಕಾಶ್ ದೇಹ ಚಿಕಿತ್ಸೆಗೆ ಸ್ಪಂಧಿಸ್ತಿರ್ಲಿಲ್ವಂತೆ. ಇವತ್ತು ಪ್ರಕಾಶ್ ಮೆದುಳು ಸಂಪೂರ್ಣ ನಿಷ್ಕ್ರೀಯಗೊಂಡಿತ್ತು. ಮಗ ಬದುಕೋದಿಲ್ಲ ಅನ್ನೋದನ್ನರಿತ ಪ್ರಕಾಶ್ ಹೆತ್ತವರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅಂಗಾಂಗಳನ್ನು ದಾನ ಮಾಡಿದ್ದಾರೆ.
ಸತ್ತನಂತರವೂ ಅನ್ಯರ ಬಾಳು ಬೆಳಗಿದ ಪ್ರಕಾಶ್
ಪ್ರಕಾಶ ಮೆದುಳು ನಿಷ್ಕ್ರಿಯ ಆಗ್ತಿದ್ದಂತೆ ಅಂಗಾಂಗಳನ್ನು ದಾನ ಮಾಡಲು ಪ್ರಕಾಶ್ ಮನೆಯವರು ಒಪ್ಪಿಗೆ ಸೂಚಿಸಿದ್ರು. ಅದ್ರಂತೆ ರೋಗಿಯೊಬ್ಬರಿಗೆ ತುರ್ತು ಅಗತ್ಯವಿದ್ದಿದ್ದರಿಂದ ಜೀರೋ ಟ್ರಾಫಿಕ್ ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಪ್ರಕಾಶನ ಲೀವರ್ ತೆಗೆದುಕೊಂಡು ಹೋಗಲಾಯ್ತು. ನಂತರ ವಿಮಾನದ ಮೂಲಕ ಪ್ರಕಾಶನ ಲೀವರ್ ಅನ್ನು ಕಳಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯ್ತು. ಅಂಗಾಂಗಗಳನ್ನು ದಾನ ಮಾಡಿದ ನಂತರ ಪ್ರಕಾಶ ಮೃತದೇಹವನ್ನು ಪ್ಯಾಕ್ ಮಾಡಿ ಮೃತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯ್ತು. ಪ್ರಕಾಶನ ಮೃತದೇಹವನ್ನು ಶಿವಪುರ ತಾಂಡಾದ ನಿವಾಸಕ್ಕೆ ತಂದು ಮನೆಯವರು ಪೂಜೆ ಸಲ್ಲಿಸಿದ್ರು. ಪ್ರಕಾಶ್ ಮೃತದೇಹ ಮನೆಗೆ ಬರ್ತಿದ್ದಂತೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತನ ತಂದೆ, ತಾಯಿ, ಪತ್ನಿ ಮತ್ತು ಮಕ್ಕಳ ಆಕ್ರಂದನ ಹೇಳತೀರದಾಗಿತ್ತು. ಮೃತದೇಹಕ್ಕೆ ಪೂಜೆ ಸಲ್ಲಿಸಿದ ನಂತರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಯಿತು. ಎದೆಯಲ್ಲಿ ಮಗನನ್ನು ಕಳೆದುಕೊಂಡು ಸಾಕಷ್ಟು ನೋವಿದ್ರೂ ತಾಯಿಯಲ್ಲಿ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಭಾವವಿತ್ತು.
Published On - 10:55 pm, Wed, 17 August 22