ಇದುವರೆಗೂ ಮೋದಿ ನನಗೆ ಅಗೌರವ ತೋರಿಲ್ಲ, ಮಂಡಿನೋವಿದ್ದ ಕಾರಣ ಅವರೇ ಬಾಗಿಲವರೆಗೂ ಬಿಟ್ಟರು: ಎಚ್​.ಡಿ. ದೇವೇಗೌಡ

| Updated By: Lakshmi Hegde

Updated on: Nov 30, 2021 | 3:05 PM

ಪರಿಷತ್​ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿಯರ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

ಇದುವರೆಗೂ ಮೋದಿ ನನಗೆ ಅಗೌರವ ತೋರಿಲ್ಲ, ಮಂಡಿನೋವಿದ್ದ ಕಾರಣ ಅವರೇ ಬಾಗಿಲವರೆಗೂ ಬಿಟ್ಟರು: ಎಚ್​.ಡಿ. ದೇವೇಗೌಡ
ಪ್ರಧಾನಿ ಮೋದಿ ಮತ್ತು ದೇವೇಗೌಡ
Follow us on

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಮಧ್ಯೆ ಇಂದು ಮಾಜಿ ಪ್ರಧಾನಿ ದೇವೇಗೌಡ (H D Devegowda)ರು ಪ್ರಧಾನಿ ನರೇಂದ್ರ ಮೋದಿ(PM Narendra Modi) ಯವರನ್ನು ಭೇಟಿಯಾದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವು ದೇವೇಗೌಡರ ಕೈ ಹಿಡಿದು ಕರೆತಂದು ಕುರ್ಚಿಯಲ್ಲಿ ಕೂರಿಸಿದ್ದಾರೆ. ಅದರ ಫೋಟೋಗಳು ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಸಹ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ದೇವೇಗೌಡರೊಂದಿಗೆ ಇರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಹಾಗೇ, ಎಚ್​.ಡಿ.ದೇವೇಗೌಡರೂ ಕೂಡ ತಮ್ಮ ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿಕೊಂಡು, ನಾನಿಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದೆ. ಅವರು ನನಗಾಗಿ ಸಮಯಕೊಟ್ಟು, ಆತ್ಮೀಯವಾಗಿ ಮಾತನಾಡಿದರು ಎಂದು ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಎಚ್​.ಡಿ.ದೇವೇಗೌಡರು, ಇದುವರೆಗೆ ನಾಲ್ಕೈದು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದೇನೆ. ಇದುವರೆಗೂ ನನ್ನ ಬಗ್ಗೆ ಮೋದಿಯವರು ಅಗೌರವವಾಗಿ ಮಾತನಾಡಿಲ್ಲ. ನಾನು ಅವರೆದುರು ಹೋದಾಗ ಯಾವುದೇ ಸಿಟ್ಟು, ರೋಷವನ್ನೂ ನನ್ನೆದುರು ತೋರಲಿಲ್ಲ. ತುಂಬ ಪ್ರೀತಿಯಿಂದ ಮಾತನಾಡಿಸಿದ್ದಾರೆ.  ಎಲ್ಲ ಬಾರಿ ಭೇಟಿಯಾದಾಗಲೂ ನನ್ನನ್ನು ಚೆನ್ನಾಗಿಯೇ ಮಾತನಾಡಿಸಿದ್ದಾರೆ. ನನಗೆ ಮಂಡಿನೋವು ಇರುವುದರಿಂದ ಅವರೇ ಬಾಗಿಲವರೆಗೂ ಬಿಟ್ಟರು ಎಂದು ತಿಳಿಸಿದ್ದಾರೆ.

ಪರಿಷತ್​ ಚುನಾವಣೆಯಲ್ಲಿ ಮೈತ್ರಿ?
ಪರಿಷತ್​ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿಯರ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಲ್ಹಾದ್​ ಜೋಶಿ ಅವರೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.  ಕರ್ನಾಟಕದಲ್ಲಿ ನಮ್ಮ ಪಕ್ಷದಿಂದ ಕುಮಾರಸ್ವಾಮಿ ಮತ್ತು ಬಿಜೆಪಿಯ ಯಡಿಯೂರಪ್ಪ ಸೇರಿ ತೀರ್ಮಾನ ಮಾಡುತ್ತಾರೆ. ಯಾವುದೇ ಗೊಂದಲವಾಗದಂತೆ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಬಿಜೆಪಿಯವರು ಏನು ನಿರ್ಣಯ ತೆಗೆದುಕೊಳ್ತಾರೆ ಎಂದು ಕಾದು ನೋಡಬೇಕು ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆಯ ವೇಳೆ ಮೈತ್ರಿ ಕುರಿತು ನಾವಿನ್ನೂ ಚರ್ಚೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆಗೆ ಜೆಡಿಎಸ್​ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮನಸಿದೆ. ಆದರೆ ಆ ಮನಸು ಕಾಂಗ್ರೆಸ್​ನ ಇತರ ನಾಯಕರಿಗೆ ಇಲ್ಲ. ಕಾಂಗ್ರೆಸ್​ನ ಹೈಕಮಾಂಡ್​ ಏನು ಹೇಳುತ್ತದೆ ಗೊತ್ತಿಲ್ಲ..ನಾವಂತೂ ಮೈಮೇಲೆ ಬಿದ್ದು ಮೈತ್ರಿಗಾಗಿ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಹಾಗೇ, ಪರಿಷತ್​ ಚುನಾವಣೆಯಲ್ಲಿ ನಾವು ಎಲ್ಲ ಕಡೆಗಳಲ್ಲೂ ಸ್ಪರ್ಧೆ ಮಾಡಿಲ್ಲ. ಹಣಕಾಸಿನ ತೊಂದರೆ ಇರುವ ಕಾರಣ ನಿಂತಿಲ್ಲ. ಕೇವಲ ಆರೇಳು ಕಡೆ ಸ್ಪರ್ಧೆ ಮಾಡಿದ್ದೇವೆ ಎಂದೂ ಸ್ಪಷ್ಟಪಡಿಸಿದರು.

ಹಾಸನ ಐಐಟಿ ಬಗ್ಗೆ ಚರ್ಚೆ
ಹಾಸನದಲ್ಲಿ ಐಐಟಿ ಸ್ಥಾಪನೆ ಮಾಡುವ ಬಗ್ಗೆ ಈ ಹಿಂದೆ ಸಚಿವ ಧರ್ಮೇಂದ್ರ ಪ್ರಧಾನ್​ ಅವರಿಗೆ ಮನವಿ ಮಾಡಿದ್ದೆ. ಆದರೆ ಸ್ಥಾಪನೆ ಸಾಧ್ಯವಿಲ್ಲ ಎಂದು ಅವರು ನನಗೆ ಮರುಪತ್ರ ಬರೆದಿದ್ದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ನೇರವಾಗಿಯೇ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಸಂಸತ್​ನಲ್ಲಿ ದೇವೇಗೌಡರ ಕೈ ಹಿಡಿದು ಕೂರಿಸಿ, ಆತಿಥ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ

Published On - 3:04 pm, Tue, 30 November 21