ರಾಮನಗರ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಾಮನಗರ ತಾಲೂಕಿನ ಪಾಲಭೋವಿದೊಡ್ಡಿ ಗ್ರಾಮದ ಬಳಿ ಜಮೀನು, ಮನೆಗಳು ಜಲಾವೃತಗೊಂಡಿದ್ದು, ರಾಮನಗರ ಪಟ್ಟಣ, ಅರ್ಕೇಶ್ವರ ಕಾಲೋನಿ ಮುಳುಗಡೆಯಾಗಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಮನಗರ, ಚನ್ನಪಟ್ಟಣದಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆಯಾ ಬ್ಲಾಕ್ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಳೆಯ ಆರ್ಭಟಕ್ಕೆ ರಾಮನಗರದ ಹನುಮಂತನಗರದಲ್ಲಿ ರಂಗರಾಯನದೊಡ್ಡಿ ಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದಲ್ಲಿ ನೀರು ಹರಗೆ ಹರಿದು ಬರುತ್ತಿದೆ. ಪರಿಣಾಮವಾಗಿ ಸುಮಾರು 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಮಮತಾ, ರಾಮಣ್ಣ, ರಾಜೀವ್ ಎಂಬವರ ಮೂರು ಮನೆಗಳು ಜಲಾವೃತಗೊಂಡು ಕುಟುಂಬಸ್ಥರು ಹೊರಬರಲಾಗದೆ ಪರದಾಡುವಂತಾಗಿದೆ.
ಇನ್ನು, ಚನ್ನಪಟ್ಟಣದಲ್ಲಿ ಸುರಿದ ಮಳೆಗೆ ಎಲೆಕೇರಿ-ರಾಂಪುರ ರಸ್ತೆ ಜಲಾವೃತಗೊಂಡು 4 ಅಡಿಗೂ ಹೆಚ್ಚು ನೀರು ರಸ್ತೆ ಮೂಲಕ ಹರಿದು ಹೋಗುತ್ತಿದೆ. ಅಲ್ಲದೆ ಈ ಭಾಗದಲ್ಲಿ ಪ್ರವಾಹದಂತೆ ನೀರು ಹರಿದು ಹೋಗುತ್ತಿರುವ ಪರಿಣಾಮ ಅಕ್ಕಪಕ್ಕದ ಬಡಾವಣೆ, ಮನೆಗಳು ಸಂಪೂರ್ಣ ಜಲಾವೃತವಾಗಿ ಜನರು ಪರಿತಪಿಸುವಂತಾಗಿದೆ. ವಾಹನ ಸವಾರರಿಗೆ ವಾಹನಗಳನ್ನು ಓಡಿಸಲು ಹರಸಾಹಸ ಪಡುವಂತಾಗಿದೆ.
ಅಂಡರ್‌ಪಾಸ್‌ನಲ್ಲೇ ನಿಂತ ಮಳೆ ನೀರು
ರಾಮನಗರ ತಾಲೂಕಿನಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಬಸವನಪುರ ಗ್ರಾಮದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದರಿಂದಾಗಿ ಮಳೆಯ ನೀರು ಅಂಡರ್ಪಾಸ್ನಲ್ಲಿ ತುಂಬಿಕೊಂಡಿದೆ. ಇದರಿಂದಾಗಿ ಬೆಂಗಳೂರಿನಿಂದ ರಾಮನಗರಕ್ಕೆ ಹೋಗುತ್ತಿದ್ದ ಮೂರು ಕಾರುಗಳು, ಬಸ್ ಅಂಡರ್ಪಾಸ್ನಲ್ಲಿ ಸಿಲುಕಿಕೊಂಡಿವೆ.
ಬೆಂಗಳೂರು-ಮೈಸೂರು ಸಂಪರ್ಕ ಕಟ್
ರಾಮನಗರದ ಕನಕಪುರ ಸರ್ಕಲ್ ಬಳ ಜಲಾವೃತಗೊಂಡ ಪರಿಣಾಮ ಬೆಂಗಳೂರು ಮೈಸೂರು ಸಂಪರ್ಕ ಕಡಿತಗೊಂಡಿದೆ. ರಂಗರಾಯನದೊಡ್ಡಿ ಕೆರೆ ಕೊಡಿ ಬಿದ್ದ ರಸ್ತೆ ಮೇಲೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೂ ನೀರು ಹರಿದು ಹೋಗುತ್ತಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಕಿಲೋ ಮೀಟರ್ಗೂ ಹೆಚ್ಚು ವಾಹನಗಳು ಹೆದ್ದಾರಿಯಲ್ಲಿ ನಿಲ್ಲುವಂತಾಗಿದೆ.
ಸಮಸ್ಯೆಗೆ ಸ್ಪಂದಿಸುವಂತೆ ಎಚ್ಡಿಕೆ ಮನವಿ
ರಾಮನಗರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಮುಖ್ಯ ಕಾರ್ಯರ್ದಶಿ ಮತ್ತು ರಾಮನಗರ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಕುಮಾರಸ್ವಾಮಿ, ನೀರಿನಲ್ಲಿ ಸಿಲುಕಿಕೊಂಡಿರುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತಕ್ಷಣ ಎರಡು ಬೋಟ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Mon, 29 August 22