AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಕರ್ನಾಟಕದಲ್ಲಿ ಹಿಜಾಬ್ ನಿಷೇಧದ ಆದೇಶ ಪ್ರಕರಣ; ಸುಪ್ರೀಂ ಕೋರ್ಟ್​​ನಲ್ಲಿಂದು ಮಹತ್ವದ ವಿಚಾರಣೆ

Karnataka Hijab Row: ಕರ್ನಾಟಕ ಸರ್ಕಾರ ಹೊರಡಿಸಿದ್ದ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಸಲ್ಲಿಸಲಾದ ಸುಮಾರು 23 ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ.

Big News: ಕರ್ನಾಟಕದಲ್ಲಿ ಹಿಜಾಬ್ ನಿಷೇಧದ ಆದೇಶ ಪ್ರಕರಣ; ಸುಪ್ರೀಂ ಕೋರ್ಟ್​​ನಲ್ಲಿಂದು ಮಹತ್ವದ ವಿಚಾರಣೆ
ಹಿಜಾಬ್ ವಿವಾದImage Credit source: Live Law
TV9 Web
| Edited By: |

Updated on:Aug 29, 2022 | 8:16 AM

Share

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್​ (Supreme Court) ಇಂದು (ಆಗಸ್ಟ್ 29) ಕರ್ನಾಟಕದ ಹಿಜಾಬ್ ನಿಷೇಧದ (Hijab Ban) ಪ್ರಕರಣದ ವಿಚಾರಣೆ ನಡೆಸಲಿದೆ. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ಸರ್ಕಾರ ಆದೇಶ ನೀಡಿದ್ದಕ್ಕೆ ರಾಜ್ಯಾದ್ಯಂತ ಭಾರೀ ಗಲಾಟೆ, ಪ್ರತಿಭಟನೆಗಳು ನಡೆದಿದ್ದವು. ಹಲವು ವಿದ್ಯಾರ್ಥಿನಿಯರು ಪರೀಕ್ಷೆಯನ್ನೂ ಬಹಿಷ್ಕರಿಸಿದ್ದರು. ಈ ಪ್ರಕರಣದ ಕುರಿತು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ (Karnataka High Court) ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಯೂನಿಫಾರ್ಮ್ ಮಾತ್ರ ಧರಿಸಬೇಕು, ಯಾವುದೇ ಧರ್ಮ ಸೂಚಕ ಉಡುಪನ್ನು ಧರಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಬಗ್ಗೆ ಕರ್ನಾಟಕ ಹೈಕೋರ್ಟ್​ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಹಿಜಾಬ್ ನಿಷೇಧದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ಕರ್ನಾಟಕ ಸರ್ಕಾರ ಹೊರಡಿಸಿದ್ದ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಸಲ್ಲಿಸಲಾದ ಸುಮಾರು 23 ಅರ್ಜಿಗಳ ವಿಚಾರಣೆಯನ್ನು ಇಂದು ನ್ಯಾಯಪೀಠ ನಡೆಸಲಿದೆ. ಇವುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಹಕ್ಕನ್ನು ಕೋರುವ ರಿಟ್ ಅರ್ಜಿಗಳು ಕೂಡ ಇವೆ.

ಇದನ್ನೂ ಓದಿ: ಹಿಜಾಬ್ ವಿವಾದದ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಪಿಯು ಕಾಲೇಜು ಸ್ಥಾಪನೆಗೆ ಮುಂದಾದ ಮುಸ್ಲಿಂ ಶಿಕ್ಷಣ ಸಂಸ್ಥೆಗಳು

ಭಾರತದ ಹಿಂದಿನ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್‌ವಿ ರಮಣ ಅವರ ಅವಧಿಯಲ್ಲಿ ಈ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ. ತುರ್ತು ವಿಚಾರಣೆಯ ತಿಂಗಳುಗಳ ನಂತರ ಈ ವಿಷಯವು ಇಂದು ವಿಚಾರಣೆಗೆ ಬರಲಿದೆ. ಇದು ಭಾರತದ ಹೊಸ ಮುಖ್ಯ ನ್ಯಾಯಮೂರ್ತಿಯಾಗಿರುವ ಯು.ಯು ಲಲಿತ್ ಅವರ ಮೊದಲ ಕೆಲಸದ ದಿನವಾಗಿದೆ ಎಂಬುದು ವಿಶೇಷ.

ಕಳೆದ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ, ಸರ್ಕಾರ, ಶಾಲಾ ಆಡಳಿತ ಮಂಡಳಿ, ಸಮಿತಿ ಇತ್ಯಾದಿಗಳು ಶಿಕ್ಷಣ ಸಂಸ್ಥೆಯಗಳ ವಿದ್ಯಾರ್ಥಿಗಳಿಗೆ ಹೊರಡಿಸಿದ ಏಕರೂಪದ ಡ್ರೆಸ್ ಕೋಡ್ ಅನ್ನು ವಿದ್ಯಾರ್ಥಿಗಳು ಅನುಸರಿಸಬೇಕು. ಈ ತೀರ್ಪಿನ ಮೂಲಕ ಹೈಕೋರ್ಟ್​ ಕರ್ನಾಟಕ ರಾಜ್ಯ ಸರ್ಕಾರವು ಫೆಬ್ರವರಿಯಲ್ಲಿ ಶಾಲಾ-ಪಿಯು ಕಾಲೇಜುಗಳಿಗೆ ವಿಧಿಸಿದ್ದ ಸ್ಕಾರ್ಫ್ (ಹಿಜಾಬ್) ನಿಷೇಧವನ್ನು ಎತ್ತಿ ಹಿಡಿದಿತ್ತು.

ಇದನ್ನೂ ಓದಿ: ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಇದುವರೆಗೆ ಇರದ ಅಕ್ಷೇಪಣೆ ಈಗ ಯಾಕೆ ಅಂತ ಪ್ರಶ್ನಿಸುತ್ತಾರೆ ಮಂಗಳೂರು ವಿದ್ಯಾರ್ಥಿನಿಯರು

ವಿದ್ಯಾರ್ಥಿಗಳಿಗೆ ಏಕರೂಪದ ಡ್ರೆಸ್ ಕೋಡ್‌ ಜಾರಿ ಮಾಡುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ಹೈಕೋರ್ಟ್​ ಹೇಳಿತ್ತು. ಇಸ್ಲಾಂ ಧರ್ಮವನ್ನು ಅನುಸರಿಸುವ ಮಹಿಳೆಯರಿಗೆ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕೂಡ ಕರ್ನಾಟಕ ಹೈಕೋರ್ಟ್ ಹೇಳಿತ್ತು. ನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ತಿ, ಕೃಷ್ಣ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಮಾರ್ಚ್ 15ರಂದು ಈ ಆದೇಶವನ್ನು ನೀಡಿತ್ತು. ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 am, Mon, 29 August 22