ಬೆಳಗಾವಿ, ಚಿಕ್ಕಮಗಳೂರು ಸೇರಿ ಕರ್ನಾಟಕದ ಹಲವೆಡೆ ಭಾರಿ ಮಳೆ: ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಾವೇರಿ ಮತ್ತು ದಾವಣಗೆರೆಯಲ್ಲಿ ಅಡಕೆ ಹಾಗೂ ಬಾಳೆ ಬೆಳೆ ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಚಿಕ್ಕಮಗಳೂರಿನಲ್ಲಿ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

ಬೆಳಗಾವಿ, ಚಿಕ್ಕಮಗಳೂರು ಸೇರಿ ಕರ್ನಾಟಕದ ಹಲವೆಡೆ ಭಾರಿ ಮಳೆ: ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ
ಚಿಕ್ಕಮಗಳೂರಿನಲ್ಲಿ ಮಳೆ
Image Credit source: tv9

Updated on: May 13, 2026 | 6:45 AM

ಬೆಂಗಳೂರು, ಮೇ 13: ಕರ್ನಾಟಕದ (Karnataka) ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಬಿರುಗಾಳಿ ಸಹಿತ ಸುರಿದ ಮಳೆ ಅಪಾರ ಹಾನಿ ಉಂಟುಮಾಡಿದೆ. ಬೆಳಗಾವಿ, ಚಿಕ್ಕಮಗಳೂರು, ಬಾಗಲಕೋಟೆ ಮತ್ತು ಹಾವೇರಿ ಸೇರಿದಂತೆ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಗಾಳಿ ಸಹಿತ ಸುರಿದ ವರ್ಷಧಾರೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಬಿರುಗಾಳಿ ಮಳೆಗೆ ಬೃಹತ್ ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರ ಸ್ಥಗಿತಗೊಂಡಿದೆ.
  • ಚಿಕ್ಕಮಗಳೂರಿನಲ್ಲಿ ವಿದ್ಯುತ್ ಕಂಬಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ.
  • ಹಾವೇರಿ ಮತ್ತು ದಾವಣಗೆರೆಯಲ್ಲಿ ನೂರಾರು ಅಡಕೆ ಮತ್ತು ಬಾಳೆ ಮರಗಳು ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ರಾಜ್ಯಾದ್ಯಂತ ಮಳೆ ಅವಾಂತರ

ಬೆಳಗಾವಿ ಜಿಲ್ಲೆಯ ಕಕ್ಕೇರಿ ಗ್ರಾಮದಲ್ಲಿ ರಸ್ತೆ ಬದಿಯ ಬೃಹತ್ ಮರವೊಂದು ನೆಲಕ್ಕುರುಳಿದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ರಸ್ತೆಯಲ್ಲೂ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು, ನಂತರ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ತೆರವುಗೊಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಳ್ಳಿಯಲ್ಲಿ ವಿದ್ಯುತ್ ತಂತಿಗಳು ಸ್ಪರ್ಶಿಸಿ ಬೆಂಕಿ ಕಾಣಿಸಿಕೊಂಡಿದ್ದು, ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಕಳಸ ಮತ್ತು ಕೊಪ್ಪ ತಾಲೂಕುಗಳಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಬಾರ್ಗಲ್ ಗ್ರಾಮವೊಂದರಲ್ಲೇ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಬಾಗಲಕೋಟೆಯ ಬಾದಾಮಿಯಲ್ಲೂ ಧಾರಾಕಾರ ಮಳೆಗೆ ಮರಗಳು ಉರುಳಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಕಂಗಾಲಾದ ಅನ್ನದಾತ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ 200ಕ್ಕೂ ಹೆಚ್ಚು ಅಡಕೆ ಮರಗಳು ನಾಶವಾಗಿದ್ದು, ಕೋಳಿ ಶೆಡ್ ಕುಸಿದು ಬಿದ್ದಿದೆ. ಇದರಿಂದ ಸುಮಾರು 25 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದ್ದು, ಸಂತ್ರಸ್ತರು ಸರ್ಕಾರದ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಮುಂದಿನ 4 ದಿನಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆಯ ಮುನ್ಸೂಚನೆ!

ದಾವಣಗೆರೆಯ ಕೆರೆಯಾಗಲಹಳ್ಳಿಯಲ್ಲೂ ಬಾಳೆ ಮತ್ತು ಅಡಕೆ ತೋಟಗಳು ನಾಶವಾಗಿದ್ದು, ಶಾಸಕ ಬಸವಂತಪ್ಪ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us