
ಬೆಂಗಳೂರು, ಏಪ್ರಿಲ್ 13: ಅಸ್ತಿತ್ವಕ್ಕೆ ಬರುವ ಎಷ್ಟೋ ವರ್ಷಗಳ ಮೊದಲೇ, ಇಲ್ಲದ ಕಂಪನಿಯೊಂದಕ್ಕೆ ಸುಮಾರು 53 ಎಕರೆ 26 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ (Karnataka High Court) ‘ಸಂವಿಧಾನಕ್ಕೆ ಮಾಡಿದ ವಂಚನೆ’ ಎಂದು ಕರೆದಿದೆ. ಈ ಬಹುಕೋಟಿ ಹಗರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಆದೇಶಿಸಿರುವ ನ್ಯಾಯಾಲಯ, ಸಂಬಂಧಪಟ್ಟ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಹೆಬ್ಬಾಳದ ಅಮಾನಿಕೆರೆ ಬಳಿಯ ಅತೀ ಹೆಚ್ಚು ಮೌಲ್ಯದ ಜಮೀನನ್ನು 2004ರಲ್ಲಿ ರೈತರಿಂದ ಎಕರೆಗೆ ಕೇವಲ 15 ಲಕ್ಷ ರೂಪಾಯಿಯಂತೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು ‘ಲೇಕ್‌ವ್ಯೂ ಟೂರಿಸಂ ಕಾರ್ಪೊರೇಷನ್’ ಎಂಬ ಸಂಸ್ಥೆಗೆ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿತ್ತು. ವಿಶೇಷವೆಂದರೆ, ಈ ಸಂಸ್ಥೆಯು ಜಮೀನಿಗಾಗಿ 2000ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿತ್ತು, ಆದರೆ ಸಂಸ್ಥೆ ಅಧಿಕೃತವಾಗಿ ನೋಂದಣಿಯಾಗಿದ್ದೇ 2011ರಲ್ಲಿ! ಅಂದರೆ, ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಭೂಮಿ ನೀಡಲು ಅಂದಿನ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು.
ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠವು ಈ ಪ್ರಕರಣದಲ್ಲಿ ಸರ್ಕಾರದ ಒಳಸಂಚನ್ನು ಬಯಲಿಗೆಳೆದಿದೆ. ನ್ಯಾಯಾಲವು ಉಲ್ಲೇಖಿಸಿರುವ ಅಂಶಗಳು ಹೀಗಿವೆ;
‘ಈ ಭೂಸ್ವಾಧೀನ ಪ್ರಕ್ರಿಯೆಯೇ ಸಾರ್ವಜನಿಕ ಉದ್ದೇಶದ್ದಾಗಿರಲಿಲ್ಲ. ಸರ್ಕಾರದ ಅಧಿಕಾರಿಗಳೇ ಖಾಸಗಿಯವರೊಂದಿಗೆ ಒಳಸಂಚು ನಡೆಸಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಗಳಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲದ ಕಾರಣ ಸಿಬಿಐಗೆ ವಹಿಸಲಾಗುತ್ತಿದೆ’ ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ