Shivamogga Blast ಅಕ್ರಮ ಗಣಿಗಾರಿಕೆ ಸಕ್ರಮ ಮಾಡುತ್ತೇವೆಂದು ಸಿಎಂ ಹೇಳಿಲ್ಲ -ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಅಕ್ರಮ ಗಣಿಗಾರಿಕೆ ನಿಲ್ಲಿಸಿ, ಸಕ್ರಮವಾಗಿದ್ದರೆ ಮುಂದುವರಿಕೆಗೆ ಅನುಮತಿ ಕೊಡುತ್ತೇವೆ. ಆದರೆ, ಅಕ್ರಮ ಗಣಿಗಾರಿಕೆ ಸಕ್ರಮ ಮಾಡುತ್ತೇವೆಂದು ಸಿಎಂ ಹೇಳಿಲ್ಲ ಎಂದು ವಿಧಾನಸಭೆಯಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Shivamogga Blast ಅಕ್ರಮ ಗಣಿಗಾರಿಕೆ ಸಕ್ರಮ ಮಾಡುತ್ತೇವೆಂದು ಸಿಎಂ ಹೇಳಿಲ್ಲ -ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ಬಸವರಾಜ ಬೊಮ್ಮಾಯಿ

Updated on: Feb 01, 2021 | 6:11 PM

ಬೆಂಗಳೂರು: ಶಿವಮೊಗ್ಗ ಅಷ್ಟೇ ಅಲ್ಲ, ಬೇರೆಡೆಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿವಮೊಗ್ಗ ತಾಲೂಕಿನ ಹುಣಸೋಡು ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

2018, 2019ರಲ್ಲೂ ಗಣಿಗಾರಿಕೆ ಬಗ್ಗೆ ಕೇಸ್ ದಾಖಲಾಗಿದೆ. ಅಕ್ರಮ ಗಣಿ ಎಂದು ಗೊತ್ತಿದ್ದರೂ ಪರವಾನಗಿ ಕೊಟ್ಟಿದ್ದಾರೆ. ಲೈಸೆನ್ಸ್​ ನೀಡಿದ್ದ ಅಂದಿನ ಅಧಿಕಾರಿಗಳು ದುರಂತಕ್ಕೆ ಹೊಣೆ. ರಾಜ್ಯ ಸರ್ಕಾರ ಕಣ್ಣು ತಪ್ಪಿಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರ ಪರಿಣಾಮವೇ ಮೊನ್ನೆಯ ದುರಂತವೆಂದು ಬೊಮ್ಮಾಯಿ ಹೇಳಿದರು.

2014-15ರಲ್ಲಿ 4 ಸಾವಿರ ಪ್ರಕರಣ ದಾಖಲಾಗಿದ್ದವು. 2015-16ರಲ್ಲಿ 3 ಸಾವಿರ ಪ್ರಕರಣ ದಾಖಲಾಗಿದ್ದವು. 2016-17ರಲ್ಲಿ 2 ಸಾವಿರ ಪ್ರಕರಣ ದಾಖಲಾಗಿದ್ದವು. 2018-19ರಲ್ಲಿ 900 ಪ್ರಕರಣ ದಾಖಲಾಗಿದ್ದವು. 2020ರಲ್ಲೂ ಹುಣಸೋಡಿನಲ್ಲಿ‌‌ ಅಕ್ರಮ ಕ್ರಷರ್​ಗಳಿದ್ದವು. ಇದರ ವಿರುದ್ಧ ದೂರು ದಾಖಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಆಂಧ್ರಪ್ರದೇಶದಿಂದ ಅಕ್ರಮವಾಗಿ ಸ್ಫೋಟಕ ಬರುತ್ತಿತ್ತು. ಕ್ರಷರ್​ಗಳ ನಿಯಂತ್ರಣಕ್ಕೆ ಟಾಸ್ಕ್​ ಫೋರ್ಸ್​ ರಚನೆ ಮಾಡಿದ್ದೇವೆ. ಹಾವೇರಿ, ಧಾರವಾಡ, ಹಾಸನ, ಬೆಳಗಾವಿ, ದಾವಣಗೆರೆ ಸೇರಿದ 5 ಜಿಲ್ಲೆಗಳಲ್ಲಿ ISD ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಮನಗರ ತಾಲೂಕಿನ ಬಿಡದಿಯಲ್ಲಿ 13,600 ಜಿಲೆಟಿನ್​ ಸಿಕ್ಕಿದೆ. ಆರೋಪಿ ಆಂಧ್ರದ ಅನಂತಪುರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದರು.

‘ಹುಣಸೋಡು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’
ಹುಣಸೋಡು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಂದಾಯ ಇಲಾಖೆ ಕಾರ್ಯದರ್ಶಿಯಿಂದ ತನಿಖೆ ಮಾಡಿಸುತ್ತೇವೆ. IPC ಸೆಕ್ಷನ್ 304ರಡಿ ಕೇಸ್​ ದಾಖಲಿಸಿ ತನಿಖೆ ನಡೀತಿದೆ. ತನಿಖೆ ವೇಳೆ ಸಿಗುವ ಸುಳಿವು ಆಧರಿಸಿ ಪರಿವರ್ತಿಸಲು ಸಿದ್ಧ. IPC ಸೆಕ್ಷನ್ 302ರಡಿ ಕೇಸ್​ ದಾಖಲಿಸಲು ಸರ್ಕಾರ ಸಿದ್ಧ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಎಷ್ಟು ಪ್ರಮಾಣದ ಸ್ಫೋಟ ಆಗಿದೆ ಎಂದು ಗೊತ್ತಾಗುತ್ತದೆ. ಸ್ಫೋಟಕ ಪೂರೈಸಿದ್ದವರು, ಏಜೆಂಟ್​ಗಳನ್ನು ಹಿಡಿಯುತ್ತೇವೆ. 65 ಸಾವಿರ ಸ್ಫೋಟಕ, 1,250 ಕೆ.ಜಿ ಜಿಲೆಟಿನ್​ ಮತ್ತು 1,500 ಮೀಟರ್​ ಸೇಫ್ಟಿ ಫ್ಯೂಸ್​ ಜಪ್ತಿ ಮಾಡಿದ್ದೇವೆ ಎಂದು ಸಚಿವರು ಹೇಳಿದರು.

‘ಹಗಲು ರಾತ್ರಿ ಗಣಿಗಾರಿಕೆಗೆ ಪ್ರಸ್ತಾವನೆ ಬರುತ್ತಿವೆ’
ಹಗಲು ರಾತ್ರಿ ಗಣಿಗಾರಿಕೆಗೆ ಪ್ರಸ್ತಾವನೆ ಬರುತ್ತಿವೆ. ಆದರೆ, ನಮ್ಮ ಸರ್ಕಾರ ಗಣಿಗಾರಿಕೆಗೆ ಅವಕಾಶ ಕೊಟ್ಟಿಲ್ಲ. ಅಕ್ರಮ ಗಣಿಗಾರಿಕೆ ನಿಲ್ಲಿಸಿ, ಸಕ್ರಮವಾಗಿದ್ದರೆ ಮುಂದುವರಿಕೆಗೆ ಅನುಮತಿ ಕೊಡುತ್ತೇವೆ. ಆದರೆ, ಅಕ್ರಮ ಗಣಿಗಾರಿಕೆ ಸಕ್ರಮ ಮಾಡುತ್ತೇವೆಂದು ಸಿಎಂ ಹೇಳಿಲ್ಲ ಎಂದು ವಿಧಾನಸಭೆಯಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸ್ಪೋಟದಲ್ಲಿ ತೀರಿ ಹೋದವರು ಕಾರ್ಮಿಕರಲ್ಲ.. ಸಮಾಜ ದ್ರೋಹಿಗಳು; ಇವರಿಗೆ ಪರಿಹಾರ ನೀಡಬೇಡಿ -ಆಯನೂರು ಮಂಜುನಾಥ್

Published On - 6:03 pm, Mon, 1 February 21