
ಚಿಕ್ಕಬಳ್ಳಾಪುರ/ತುಮಕೂರು, ಅಕ್ಟೋಬರ್ 26: ರಸ್ತೆ ಅಪಘಾತಗಳ ಸಂಖ್ಯೆ ಬೆಂಗಳೂರಿನಲ್ಲಿ ಐದು ವರ್ಷಗಳಲ್ಲಿ ಸುಮಾರು ಶೇ 70ರಷ್ಟು ಹೆಚ್ಚಾಗಿರುವ ಆಘಾತಕಾರಿ ಅಂಕಿಅಂಶ ಬಹಿರಂಗಗೊಂಡಿರುವ ನಡುವೆಯೇ ರಾಜ್ಯದ ವಿವಿಧೆಡೆ ನಡೆದಿರುವ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು 6 ಮಂದಿ ದಾರುಣ ಅಂತ್ಯಕಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ದಂಪತಿ, ತುಮಕೂರಿನ ಶಿರಾದಲ್ಲಿ ಇಬ್ಬರು ಯುವತಿಯರು ಸೇರಿದಂತೆ ಚಿತ್ರದುರ್ಗದ ಹಿರಿಯೂರು ಮತ್ತು ಉಡುಪಿಯ ಕೋಟದಲ್ಲಿ ತಲಾ ಓರ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆಯಲ್ಲಿ ಕಾರುಗಳ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ. ನಿಸರ್ಗ(20) ಮತ್ತು ರೂಪಾ(21) ಮೃತರಾಗಿದ್ದು, ಅಪಘಾತದಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತುದೆ. ಮೃತ ಯುವತಿಯರು ಜಾಬ್ ಇಂಟರ್ವ್ಯೂಗೆಂದು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಒಟ್ಟು ಮೂವರು ಯುವತಿಯರು ಹಾಗೂ ಚಾಲಕ ಸೇರಿ ನಾಲ್ವರು ಕಾರಲ್ಲಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿಯಾದ ಬಳಿಕ ಮತ್ತೊಂದು ಕಾರಿಗೆ ಗುದ್ದಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಶಿರಾ ಡಿವೈಎಸ್ಪಿ, ಶಿರಾ ಗ್ರಾಮಾಂತರ ಸಿಪಿಐ ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಅಪಘಾತಗಳ ರಾಜಧಾನಿಯಾದ ಬೆಂಗಳೂರು! ಆ್ಯಕ್ಸಿಡೆಂಟ್ ಪ್ರಮಾಣ ತೀವ್ರ ಹೆಚ್ಚಳ
ಸ್ಕೂಟರ್ಗೆ ಕಾರು ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಅಸುನೀಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ ನಡೆದಿದೆ. ಚಿಂತಾಮಣಿಯ ಷಣ್ಮುಖ(27), ಮಿಥುಲ್(24) ಮೃತ ದುರ್ದೈವಿಗಳಾಗಿದ್ದಾರೆ. ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಇವರು ಕಾಲಿಟ್ಟಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮಾರುತಿ(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಮಧು ಎಂಬವರಿಗೆ ಹಿರಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಉಡುಪಿ ಜಿಲ್ಲೆಯ ಕೋಟ ಜಂಕ್ಷನ್ನಲ್ಲಿಯೂ ನಡೆದ ಭೀಕರ ಅಪಘಾತಕ್ಕೆ ಸ್ಥಳೀಯ ಆರ್‌ಎಸ್‌ಎಸ್ ಮುಖಂಡ ದಾರುಣವಾಗಿ ಪ್ರಾಣಬಿಟ್ಟಿದ್ದಾರೆ. ಗುರುದಾಸ್ ಶೆಣೈ ಮೃತರಾಗಿದ್ದು, ಸೈಕಲ್ ತಳ್ಳಿಕೊಂಡು ರಸ್ತೆ ದಾಟುತ್ತಿದ್ದ ಇವರಿಗೆ ವೇಗವಾಗಿ ಬಂದ ಕಾರು ಗುದ್ದಿದೆ. ನಿಯಂತ್ರಣ ಕಳೆದುಕೊಂಡು ಕಾರೂ ಪಲ್ಟಿಯಾದ ಪರಿಣಾಮ, ಚಾಲಕ ಪ್ರದೀಪ್ ಕಾಂಚನ್ ಎಂಬವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.