
ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (104) ಬುಧವಾರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ ಅವರಿಗೆ ಬಳಲಿಕೆ ಇತ್ತು. ಮತ್ತೆ ಅಸ್ವಸ್ಥರಾದ ಕಾರಣ ಕೆಲ ದಿನಗಳ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ತಿಂಗಳಲ್ಲಿ 104ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು.

ಎಚ್.ಎಸ್.ದೊರೆಸ್ವಾಮಿ - ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ

ದೊರೆಸ್ವಾಮಿ ಅವರು ತಮ್ಮ 19ನೇ ವಯಸ್ಸಿನಲ್ಲಿ ಲಲಿತಮ್ಮ ಅವರನ್ನು ಮದುವೆಯಾಗಿದ್ದರು. ಲಲಿತಮ್ಮ ಅವರು 2019ರ ಡಿಸೆಂಬರ್ 17ರಂದು ನಿಧನರಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಎಚ್.ಎಸ್.ದೊರೆಸ್ವಾಮಿ

ಅಂದಿನ ಮೈಸೂರು ಪ್ರಾಂತ್ಯದಲ್ಲಿದ್ದ ಕನಕಪುರ ತಾಲ್ಲೂಕು ಹಾರೋಹಳ್ಳಿ ದೊರೆಸ್ವಾಮಿ ಅವರ ಜನ್ಮಸ್ಥಳ. ಕೇವಲ 5 ವರ್ಷದವರಿದ್ದಾಗ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡರು. ತಾತ ಶ್ಯಾನುಭೋಗ ಶಾಮಣ್ಣ ಅವರ ಪಾಲನೆಯಲ್ಲಿ ದೊರೆಸ್ವಾಮಿ ದೊಡ್ಡವರಾದರು. ದೊರೆಸ್ವಾಮಿ ಅವರ ಅಣ್ಣ ಸೀತಾರಾಮ್ ಬೆಂಗಳೂರಿನ ಮೇಯರ್ ಆಗಿದ್ದರು.

ವಿದ್ಯಾಭ್ಯಾಸ ಮುಗಿದ ನಂತರ ಜೂನ್ 1942ರಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.

ಬ್ರಿಟಿಷರ ಆಡಳಿತಕ್ಕೆ ಧಕ್ಕೆ ತರುವ ಉದ್ದೇಶದಿಂದ ದಾಖಲೆಗಳನ್ನು ಸುಟ್ಟುಹಾಕಲೆಂದು ಪೋಸ್ಟ್ಬಾಕ್ಸ್ಗಳು ಮತ್ತು ರೆಕಾರ್ಡ್ ರೂಮ್ಗಳಲ್ಲಿ ಟೈಮ್ಬಾಂಬ್ಗಳನ್ನು ಸ್ಫೋಟಿಸಿದ್ದರು. ಕಾರ್ಮಿಕ ಚಳವಳಿಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು. (ಈ ಮೇಲಿನ ಎಲ್ಲಾ ಚಿತ್ರಗಳು ಡೆಕ್ಕನ್ ಹೆರಾಲ್ಡ್, ದಿ ಹಿಂದೂ, ಡೆಕ್ಕನ್ ಕ್ರಾನಿಕಲ್, ಟೈಮ್ಸ್ ಸಮೂಹ ಮಾಧ್ಯಮ, ಕನ್ನಡಪ್ರಭ.ಕಾಂ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆ ಹಾಗೂ ಜಾಲತಾಣಗಳಿಗೆ ಸೇರಿದ್ದಾಗಿವೆ)
Published On - 3:03 pm, Wed, 26 May 21