ಹುಬ್ಬಳ್ಳಿ: ಇಡೀ ದೇಶವೇ ಕೊರೊನಾ ಎರಡನೇ ಅಲೆಗೆ ನಲುಗಿದ್ದು, ರಾಜ್ಯದಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಈ ನಡುವೆ ಅಗತ್ಯ ಸೇವೆಗಳ ಪೂರೈಕೆಗಾಗಿ ಗೂಡ್ಸ್ ವಾಹನಗಳ ಓಡಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗುಂಪೊಂದು ಹೈವೆಯಲ್ಲಿ ನಿಂತು ಜೀವ ಬೇದರಿಕೆ ಹಾಕಿ ಹಣ ವಸೂಲಿ ಮಾಡುತ್ತಿತ್ತು. ಹಣ ನೀಡದೆ ಇದ್ದರೆ ಅಂತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿತ್ತು. ಸದ್ಯ ಹಾವೇರಿ ಪೊಲೀಸರು ಈ ಕೃತ್ಯಕ್ಕೆ ಪೂರ್ಣ ವಿರಾಮ ಹಾಕಿದ್ದು, ಕಳ್ಳರ ಗುಂಪನ್ನು ಬಂಧಿಸಿದೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಬೆಳಗಲಿ ಕ್ರಾಸ್ ಬಳಿಯಲ್ಲಿ ರಾತ್ರಿ ವೇಳೆ ಶಿರಾಜ್ ಕೋಳೂರ ಹಾಗೂ ಆತನ ಸ್ನೇಹಿತರಿಗೆ ಮೂವರು ಸುಲಿಗೆಕೋರರು ಚಾಕುವಿನಿಂದ ಹೊಡೆದು, ಗನ್ ತೋರಿಸಿ ಕಳ್ಳತನ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿ ಗ್ರಾಮೀಣ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದರು. ಅದರ ಫಲವಾಗಿ ಎರಡು ದಿನ ಕಳೆಯುವಷ್ಟರಲ್ಲಿ ಮೂವರು ಸುಲಿಗೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನ ಹುಬ್ಬಳ್ಳಿಯ ಸೆಟ್ಲ್ಮೆಂಟ್ ನಿವಾಸಿ ಶ್ರೀನಿವಾಸ ತಿರುಪತಿ, ಸಿದ್ಧಾರ್ಥ್ ನವಲಗುಂದ, ಸುಧಾಕರ್ ಗಬ್ಬೂರ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಬುಲೆಟ್ ಬೈಕ್, 7,500ರೂಪಾಯಿ ನಗದು ಸೇರಿದಂತೆ ಒಂದು ಏರ್ ಗನ್, ಒಂದು ಕತ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ ಬಂಧಿತ ಆರೋಪಿಯಲ್ಲಿ ಒಬ್ಬ ರೌಡಿಶೀಟರ್ ಆಗಿರುವುದು ತನಿಖೆಯ ನಂತರ ಬೆಳಕಿಗೆ ಬಂದಿದೆ. ಹೀಗಾಗಿ ಇವರು ಕೇವಲ ಈ ಒಂದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಅಥವಾ ಇನ್ನು ಹಲವು ದರೊಡೆ ಮಾಡಿದ್ದಾರಾ ಎನ್ನುವ ಬಗ್ಗೆಯು ತನೀಖೆ ನಡೆಯುತ್ತಿದೆ ಎಂದು ಧಾರವಾಡ ಎಸ್ಪಿ ಪಿ.ಕೃಷ್ಣಕಾಂತ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ರಾತ್ರಿಯಲ್ಲಿ ಹೈವೆ ಮೇಲೆ ನಿಂತು ರಾಬರಿ ಮಾಡುತ್ತಿದ್ದ ಕಳ್ಳರ ಗುಂಪನ್ನು ಬಂಧಿಸಲಾಗಿದೆ. ಮೂರು ಜನರ ಕಳ್ಳರ ತಂಡದಿಂದ ರಾಬರಿ ಮಾಡುತ್ತಿದ್ದ ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರು ಭಯಪಡದೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಒಟ್ಟಿನಲ್ಲಿ ಲಾಕ್ಡೌನ್ ಮಧ್ಯದಲ್ಲಿಯೂ ಜನರ ಸುಲಿಗೆಗಿಳಿದ್ದ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ವಿಚಾರ ಜನರ ಆತಂಕವನ್ನು ದೂರ ಮಾಡಿದೆ.
ಇದನ್ನೂ ಓದಿ:
ದಾವಣಗೆರೆಯಲ್ಲಿ ಹೆಚ್ಚಾದ ಅಡಿಕೆ ಕಳ್ಳತನ; ಒಂದು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆ
ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಖದೀಮರಿಗೆ ಧರ್ಮದೇಟು.. ಸ್ವಯಂ ಚಾಕು ಇರಿದುಕೊಂಡು ಅಸ್ವಸ್ಥನಾದ ಕಳ್ಳ