ದೆಹಲಿ: ದೇಶದಲ್ಲಿ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ದಂಧೆ ಜೋರಾಗಿದೆ. ಖದೀಮರು ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನ ತಯಾರಿಸಿ ಅಸಲಿ ರೆಮ್ಡಿಸಿವಿರ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಧ್ಯಪ್ರದೇಶ, ಗುಜರಾತ್ ಪೊಲೀಸರು ಈ ನಕಲಿ ರಹಸ್ಯವನ್ನ ಬಯಲಿಗೆಳೆದಿದ್ದಾರೆ.
ಗುಜರಾತ್ನ ಸೂರತ್ ಬಳಿ ಫಾರ್ಮ್ ಹೌಸ್ನಲ್ಲಿ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಕಾರ್ಖಾನೆಯೇ ಆರಂಭವಾಗಿತ್ತು. ಕೌಶಲ್ ವೋಹ್ರಾ ಎಂಬಾತನೇ ಇದರ ಕಿಂಗ್ ಪಿನ್.
ನಕಲಿ ದಂಧೆ ರಹಸ್ಯ
ಕಿಂಗ್ಪಿನ್ ಕೌಶಲ್ ವೋಹ್ರಾ, ತನ್ನ ಫಾರ್ಮ್ ಹೌಸ್ನಲ್ಲಿ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ತಯಾರಿಸುತ್ತಿದ್ದ. ತಾನು ತಯಾರಿಸಿದ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು ಒಂದಕ್ಕೆ 1,700 ರೂಪಾಯಿಗೆ ಸುನಿಲ್ ಮಿಶ್ರಾ ಎಂಬಾತನಿಗೆ ಸೇಲ್ ಮಾಡ್ತಿದ್ದ. ಬಳಿಕ ಸುನಿಲ್ ಮಿಶ್ರಾ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು ದೇಶದ ವಿವಿಧೆಡೆ ಸಾಗಿಸಿ ದುಬಾರಿ ಬೆಲೆಗೆ ಸೋಂಕಿತರಿಗೆ ಮಾರಾಟ ಮಾಡ್ತ್ತಿದ್ದ. ಸುನಿಲ್, ತಾನು 1,700 ರೂಪಾಯಿಗೆ ಖರೀದಿಸಿದ್ದ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು 35 ರಿಂದ 40 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಮುಂಬೈನಲ್ಲಿ ಇಂಜೆಕ್ಷನ್ ಮೇಲಿನ ಸ್ಟಿಕರ್ಗಳನ್ನ ಪ್ರಿಂಟ್ ಮಾಡಲಾಗುತ್ತಿತ್ತು. ಅವುಗಳನ್ನ ತಂದು ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಬಾಟಲಿ ಮೇಲೆ ಹಾಕಿ ಮಾರುತ್ತಿದ್ದರು.
ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಖರೀದಿಸುತ್ತಿದ್ದ ಸುನಿಲ್, ಮಧ್ಯಪ್ರದೇಶದ ಇಂದೋರ್ ಸೇರಿ ವಿವಿಧೆಡೆ ತನ್ನ ಸಹಚರರಿಗೆ ನೀಡಿ ಮಾರಾಟ ಮಾಡಿಸುತ್ತಿದ್ದ. ಇಂದೋರ್ನ ವಿಜಯನಗರದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರಿಗೆ ಮಾತ್ರ ಮಾರುತ್ತಿದ್ದ. ಪುರುಷರಿಗೆ ಇಂಜೆಕ್ಷನ್ ಮಾರುತ್ತಿರಲಿಲ್ಲ. ರೆಮ್ಡಿಸಿವಿರ್ ಇಂಜೆಕ್ಷನ್ ಬೇಕಾಗಿದ್ದ ಮಹಿಳೆಯೊಬ್ರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ರು. ಈ ಮಾಹಿತಿ ಆಧರಿಸಿ ರಹಸ್ಯ ದಾಳಿ ನಡೆಸಿದ ಖಾಕಿ ಟೀಂ, ಅಸಲಿ ರೆಮ್ಡಿಸಿವಿರ್ ಇಂಜೆಕ್ಷನ್ ಅಲ್ಲ. ನಕಲಿ ಇಂಜೆಕ್ಷನ್ ಅನ್ನೋದನ್ನ ಖಚಿತ ಪಡಿಸಿಕೊಂಡಿದೆ. ತಕ್ಷಣ ದಿನೇಶ್, ಧೀರಜ್ ಎಂಬಿಬ್ಬರನ್ನು ಖೆಡ್ಡಾಗೆ ಕೆಡವಿದೆ. ಈ ವೇಳೆ, ಸುನಿಲ್ ಮಿಶ್ರಾ ಹೆಸರು ರಿವೀಲ್ ಆಗಿದ್ದು, ಪೊಲೀಸರು ಆತನನ್ನೂ ಬಂಧಿಸಿದ್ದಾರೆ. ಸದ್ಯಕ್ಕೆ 1,200 ನಕಲಿ ಇಂಜೆಕ್ಷನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯಪ್ರದೇಶ, ಗುಜರಾತ್ ಮಾತ್ರವಲ್ಲದೇ,Remdesivir ಭಾರತ-ನೇಪಾಳ ಗಡಿಯಲ್ಲೂ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ದಂಧೆ ನಡೆಯುತ್ತಿದ್ದು, ಅಲ್ಲೂ ಇಬ್ಬರನ್ನ ಪೊಲೀಸ್ರು ಬಂಧಿಸಿದ್ದಾರೆ. ದೆಹಲಿಯಲ್ಲಿ 5 ಸಾವಿರ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಇದನ್ನೂ ಓದಿ: ರೆಮ್ಡಿಸಿವಿರ್ ಇಂಜೆಕ್ಷನ್ ಅಭಾವ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಘನಾ ಅಧ್ಯಕ್ಷ ಡಾ. ಹೆಚ್ ಎಮ್ ಪ್ರಸನ್ನ