ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಪರೀಕ್ಷೆಗೆ ಒಳಪಟ್ಟ ಮಾದರಿಗಳ ಪೈಕಿ ಶೇಕಡಾ 29.83ರಲ್ಲಿ ಪಾಸಿಟಿವ್ ಪತ್ತೆ

|

Updated on: May 07, 2021 | 11:01 AM

ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಮೇ 6ರ ಅಂತ್ಯಕ್ಕೆ ಕರ್ನಾಟಕದಲ್ಲಿ 5,17,095 ಕೊರೊನಾ ಪ್ರಕರಣಗಳು ಸಕ್ರಿಯವಾಗಿದ್ದು, ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 17,90,104ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಪರೀಕ್ಷೆಗೆ ಒಳಪಟ್ಟ ಮಾದರಿಗಳ ಪೈಕಿ ಶೇಕಡಾ 29.83ರಲ್ಲಿ ಪಾಸಿಟಿವ್ ಪತ್ತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಅವಾಂತರ ಇಡೀ ವೈದ್ಯಕೀಯ ವ್ಯವಸ್ಥೆಯನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ 24 ತಾಸಿನಲ್ಲಿ ರಾಜ್ಯದಲ್ಲಿ ಪರೀಕ್ಷೆಗೆ ಒಳಪಟ್ಟ ಮಾದರಿಗಳ ಪೈಕಿ ಶೇ.29.83ರಷ್ಟು ಮಾದರಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಸೋಂಕಿತರ ಪರಿಸ್ಥಿತಿ ಅಲ್ಪಾವಧಿಯಲ್ಲಿ ದ್ವಿಗುಣವಾಗುವ ಅಪಾಯವಿದೆ ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ. ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಮೇ 6ರ ಅಂತ್ಯಕ್ಕೆ ಕರ್ನಾಟಕದಲ್ಲಿ 5,17,095 ಕೊರೊನಾ ಪ್ರಕರಣಗಳು ಸಕ್ರಿಯವಾಗಿದ್ದು, ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 17,90,104ಕ್ಕೆ ಏರಿಕೆಯಾಗಿದೆ. ಈ ಪೈಕಿ ಇಲ್ಲಿಯ ತನಕ 12,55,797 ಜನ ಗುಣಮುಖರಾಗಿದ್ದು, 17,212 ಜನ ಮೃತಪಟ್ಟಿದ್ದಾರೆ.

ದೇಶದಲ್ಲಿ ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಕರ್ನಾಟಕವೇ ಅತ್ಯಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ತಜ್ಞರ ಅಂದಾಜಿನ ಪ್ರಕಾರ ಪರಿಸ್ಥಿತಿ ಹತೋಟಿಗೆ ಬಾರದೇ ಇದ್ದರೆ ಜೂನ್​ ವೇಳೆಗೆ ರಾಜ್ಯ ಅತ್ಯಂತ ಗಂಭೀರಾವಸ್ಥೆಗೆ ತಲುಪಲಿದೆ. ಕರ್ನಾಟಕದಲ್ಲಿ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಗುಣಮುಖರಾಗುತ್ತಿರುವವರ ಪ್ರಮಾಣಕ್ಕಿಂತ ಸುಮಾರು ಎರಡರಿಂದ ಎರಡೂವರೆ ಪಟ್ಟು ಅಧಿಕ ಇರುವುದರಿಂದ ವೈದ್ಯಕೀಯ ಸೌಲಭ್ಯಗಳ ಅಭಾವವೂ ಹೆಚ್ಚಾಗಿ ಕಾಡುತ್ತಿದೆ.

ಇನ್ನೊಂದೆಡೆ, ಕರ್ನಾಟಕದಂತೆಯೇ ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್, ಹರ್ಯಾಣ ರಾಜ್ಯಗಳಲ್ಲೂ ಕೊರೊನಾ ಆತಂಕ ಸೃಷ್ಟಿಸಿದೆ. ಆರಂಭದಲ್ಲಿ ನಗರ ಭಾಗದಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಸೋಂಕು ಈಗ ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿರುವುದರಿಂದ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದೆ. ನಮ್ಮ ರಾಜ್ಯದಲ್ಲಿಯೂ ಸದ್ಯ ದಾಖಲಾಗುತ್ತಿರುವ ಪ್ರಕರಣಗಳ ಅರ್ಧದಷ್ಟು ಭಾಗ ಬೆಂಗಳೂರಿನಲ್ಲಿದ್ದು, ದಿನ ಕಳೆದಂತೆ ಬೇರೆ ಜಿಲ್ಲೆಗಳ ಸೋಂಕಿತರ ಪ್ರಮಾಣವೂ ಏರುಗತಿಯಲ್ಲಿ ಸಾಗುತ್ತಿವೆ. ಒಂದು ವೇಳೆ ಉಳಿದ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹಬ್ಬಿದಂತೆ ಕರ್ನಾಟಕದಲ್ಲೂ ಆದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇದೆಲ್ಲದರ ನಡುವೆ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ದಾದಿಯರ ಕೊರತೆಯೂ ಕಾಣಿಸಿಕೊಳ್ಳುತ್ತಿರುವುದರಿಂದ ಸಮಸ್ಯೆ ಗಂಭೀರವಾಗುತ್ತಿದೆ.

ಇದನ್ನೂ ಓದಿ:
Covid-19 Karnataka Update: ಕರ್ನಾಟಕದಲ್ಲಿ ಇಂದು ಒಂದೇ ದಿನ 49,058 ಜನರಲ್ಲಿ ಕೊರೊನಾ ಸೋಂಕು, 328 ಜನರು ನಿಧನ 

ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್​ ಪೂರೈಸಬೇಕೆಂಬ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋದ ಭಾರತ ಸರ್ಕಾರ