ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಬೇಕೆಂಬ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ ಭಾರತ ಸರ್ಕಾರ
Karnataka Needs Oxygen: ಈ ವಿಷಯವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಗಮನಕ್ಕೆ ತರುವಂತೆ ನ್ಯಾಯಮೂರ್ತಿ ಚಂದ್ರಚೂಡ್ ಸೂಚಿಸಿದರು.
ದೆಹಲಿ: ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ನಿಗದಿಪಡಿಸಿದ್ದ ವೈದ್ಯಕೀಯ ಆಮ್ಲಜನಕ ಸರಬರಾಜು ಮಿತಿಯನ್ನು 1200 ಮೆಟ್ರಿಕ್ ಟನ್ಗೆ ಹೆಚ್ಚಿಸಬೇಕೆಂದು ಕರ್ನಾಟಕ ಹೈಕೋರ್ಟ್ ನಿನ್ನೆ (ಮೇ 5) ನೀಡಿದ್ದ ಆದೇಶವನ್ನು ಭಾರತ ಸರ್ಕಾರವು ಇಂದು (ಮೇ 6) ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದೆ. ದೆಹಲಿಗೆ ಆಕ್ಸಿಜನ್ ಸರಬರಾಜು ಕುರಿತು ವಿಚಾರಣೆ ನಡೆಸುತ್ತಿದ್ದ ವೇಳೆ ಸಾಲಿಸಿಟ್ ಜನರಲ್ ತುಷಾರ್ ಮೆಹ್ತಾ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ ಎದುರು ವಿಶೇಷ ಮನವಿ ಸಲ್ಲಿಸಿದರು. ಈ ವಿಷಯವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಎದುರು ಸಲ್ಲಿಸುವಂತೆ ನ್ಯಾಯಮೂರ್ತಿ ಚಂದ್ರಚೂಡ್ ಸೂಚಿಸಿದರು. ಸಮರ್ಪಕ ದಾಖಲೆಗಳನ್ನು ಪರಿಶೀಲಿಸದೇ ನಾವಾದರೂ ಏನು ಮಾಡಲು ಸಾಧ್ಯ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದರು.
ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನಿನ್ನೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನಿಗದಿಪಡಿಸಿರುವ ಆಮ್ಲಜನಕದ ಮಿತಿಯನ್ನು ಹೆಚ್ಚಿಸಬೇಕೆಂದು ಆದೇಶಿಸಿತ್ತು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ನೀಡಿದ್ದ ಆದೇಶ ಹೀಗಿತ್ತು..
‘ಕರ್ನಾಟಕ ಸರ್ಕಾರವು ಏಪ್ರಿಲ್ 30ರಂದು ನೀಡಿದ್ದ ಮನವಿಯನ್ನು ಒಪ್ಪಿಕೊಳ್ಳುವಂತೆ ಭಾರತ ಸರ್ಕಾರಕ್ಕೆ ನಾವು ಈ ಪರಿಸ್ಥಿತಿಯಲ್ಲಿ ಸೂಚಿಸುವುದು ಬಿಟ್ಟು ಬೇರೆ ಆಯ್ಕೆಗಳು ನಮ್ಮೆದುರು ಇಲ್ಲ. ಮುಂದಿನ ಒಂದು ವಾರದ ಅವಧಿಗೆ ಬೇಕಾಗುವಷ್ಟು ಆಕ್ಸಿಜನ್ ಪ್ರಮಾಣವನ್ನು ಲೆಕ್ಕ ಹಾಕಿ ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ನಾವು ಕರ್ನಾಟಕ ಸರ್ಕಾರಕ್ಕೆ ಸೂಚಿಸುತ್ತಿದ್ದೇವೆ. ಈ ಮನವಿಯನ್ನು ಭಾರತ ಸರ್ಕಾರವು ನಾಲ್ಕು ದಿನಗಳ ಒಳಗೆ ಒಪ್ಪಿಕೊಳ್ಳಬೇಕು. ಕರ್ನಾಟಕ ಸರ್ಕಾರವು ಮನವಿ ಸಲ್ಲಿಸಿ, ಮನವಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವವರೆಗೆ ರಾಜ್ಯಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿದಿನ 1200 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.
ಕರ್ನಾಟಕ ಸರ್ಕಾರವು ಒಂದು ದಿನಕ್ಕೆ 1700 ಮೆಟ್ರಿಕ್ ಟನ್ ಆಕ್ಸಿಜನ್ಗೆ ಬೇಡಿಕೆಯಿಟ್ಟಿತ್ತು. ಆದರೆ ಕೇಂದ್ರ ಸರ್ಕಾರವು ಕೇವಲ 862 ಮೆಟ್ರಿಕ್ ಟನ್ ಮಾತ್ರ ನೀಡಿತ್ತು ಎಂದು ಕರ್ನಾಟಕ ಹೈಕೋರ್ಟ್ ಹೇಳಿತ್ತು.
(Centre Moves Supreme Court Challenging Karnataka High Court Direction To Increase Daily Oxygen Quota For Karnataka As 1200 MT)
ಇದನ್ನೂ ಓದಿ: Karnataka High Court: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಇದನ್ನೂ ಓದಿ: ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸ್ತೀರೋ ಇಲ್ಲವೋ? ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಎಚ್ಚರಿಕೆ