Karnataka High Court: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ತುರ್ತಾಗಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್​ನಿಂದ ನಿರ್ದೇಶನ ನೀಡಲಾಗಿದೆ.

Karnataka High Court: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್
Follow us
|

Updated on: May 05, 2021 | 4:52 PM

ಬೆಂಗಳೂರು: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಿ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಉತ್ಪಾದಿಸುವ ಆಕ್ಸಿಜನ್ ಬಳಕೆಗೆ ಅವಕಾಶ ನೀಡಿ, ಈ ಬಗ್ಗೆ ತೀರ್ಮಾನಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆಯನ್ನು ನೀಡಿದೆ. ದೇಶದಲ್ಲೇ ಅತ್ಯಧಿಕ ಸೋಂಕು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಚಾಮರಾಜನಗರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ಸೋಂಕಿತರು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಹೆಚ್ಚಿನ ಸಾವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್​ನ ಆದೇಶ ಮಹತ್ವದ್ದಾಗಿದೆ. ಅಂದ ಹಾಗೆ ರಾಜ್ಯಕ್ಕೆ 1,792 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ವಿಶಾಖಪಟ್ಟಣ, ಒಡಿಶಾದಿಂದ ರಾಜ್ಯಕ್ಕೆ ಆಮ್ಲಜನಕ ತರುವುದು ವಿಳಂಬ ಆಗುತ್ತಿದೆ. ಕೇಂದ್ರ ಸರ್ಕಾರದಿಂದ 965 ಮೆಟ್ರಿಕ್ ಟನ್ ಒದಗಿಸುವುದಾಗಿ ಈಗಾಗಲೇ ಹೇಳಲಾಗಿದೆ. ಇನ್ನು ಕರ್ನಾಟಕದಲ್ಲಿ 4.62 ಲಕ್ಷ ಕೊರೊನಾ ಸೋಂಕಿತರಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರ್ತವ್ಯ. ಕರ್ನಾಟಕಕ್ಕೆ ರೆಮ್​ಡಿಸಿವಿರ್ ಹಂಚಿಕೆ‌ಯನ್ನು ಹೆಚ್ಚಿಸಬೇಕು. 2 ದಿನದಲ್ಲಿ ಇಂಜೆಕ್ಷನ್ ಹಂಚಿಕೆ ಹೆಚ್ಚಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಹೇಳಿದೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟ ಘಟನೆಯ ನಂತರ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಇದರ ಜತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸಲಹೆಯನ್ನು ಕೂಡ ಮಂಗಳವಾರ ನೀಡಿತ್ತು. ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಕೋರ್ಟ್, ಬುಧವಾರ ಬೆಳಗ್ಗೆ 10.30ರೊಳಗೆ ನಿರ್ಧಾರ ತಿಳಿಸುವಂತೆ ಹೇಳಿತ್ತು. ಅಂದಹಾಗೆ ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾ.ಅರವಿಂದ್ ಒಳಗೊಂಡ ಪೀಠವು ಈ ಆದೇಶ ನೀಡಿತ್ತು.

ಆರೋಗ್ಯದ ಹಕ್ಕು ಎಂಬುದು ಎಲ್ಲರ ಬದುಕಿನ ಹಕ್ಕಾಗಿದೆ. ಮೇ 5ನೇ ತಾರೀಕಿನ ಹೊತ್ತಿಗೆ 1792 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯ ಇದೆ. ಕನಿಷ್ಠ 1162 ಮೆಟ್ರಿಕ್ ಟನ್ ಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು ಆದರೆ ಕೇಂದ್ರದಿಂದ 802 ಮೆಟ್ರಿಕ್​ ಟನ್​ನಿಂದ 865 ಮೆಟ್ರಿಕ್​ ಟನ್​ಗೆ ಮಾತ್ರ ಏರಿಸಿದ್ದಾರೆ ಎಂದು ಕೋರ್ಟ್ ಮಂಗಳವಾರ ಹೇಳಿತ್ತು. ಸೋಂಕು ಕಡಿಮೆ ಇರುವ ರಾಜ್ಯಗಳಿಗೆ ಹೆಚ್ಚಿನ ಆಕ್ಸಿಜನ್ ಒದಗಿಸುತ್ತಿದ್ದೀರಿ. ಕೊರೊನಾ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕಕ್ಕೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆ ಆಗಿಲ್ಲ. ಸಾವಿನ ಪ್ರಮಾಣ ಹೆಚ್ಚಿರುವುದರಿಂದ ಕೋಟಾಗಿಂತ ಹೆಚ್ಚಿನ ಆಕ್ಸಿಜನ್ ಒದಗಿಸಿ ಎಂದು ತಿಳಿಸಿತ್ತು. ಕೋರ್ಟ್​ನ ಪ್ರಶ್ನೆಗಳಿಗೆ ಉತ್ತರಿಸಿದ್ದ ಕೇಂದ್ರದ ಪರ ವಕೀಲರಾದ ಕ್ರಿಫ್ಟನ್ ರೊಸಾರಿಯೋ, ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳುವುದಕ್ಕೆ ಬುಧವಾರ ಮಧ್ಯಾಹ್ನದ ತನಕ ಕಾಲಾವಕಾಶ ಕೇಳಿದ್ದರು.

ಇದನ್ನೂ ಓದಿ: ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸ್ತೀರೋ ಇಲ್ಲವೋ? ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಎಚ್ಚರಿಕೆ

(High court of Karnataka directs centre to provide 1200 metric ton of oxygen to Karnataka. On Wednesday bench discussed covid situation of the Karnataka state)