ಹಾಸನದಲ್ಲಿ ಕೊರೊನಾ ತಡೆಗೆ ಕ್ರಮ; ವಾರದಲ್ಲಿ ಮೂರು ದಿನ ಕಟ್ಟುನಿಟ್ಟಿನ ಲಾಕ್ಡೌನ್
ನನ್ನ ಕ್ಷೇತ್ರದಲ್ಲಿ 1400 ಮಂದಿ ಹೋಂ ಐಸೊಲೇಶನ್ನಲ್ಲಿದ್ದಾರೆ. ಬೆಡ್ಗಳು ಸಿಗುತ್ತಿಲ್ಲ. ಇವರಿಂದ ಇನ್ನಷ್ಟು ಜನರಿಗೆ ಕೊರೊನಾ ಹರಡಬಹುದು ಎಂಬ ಭೀತಿಯಿದೆ.
ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರವೇಗದಲ್ಲಿ ಹರಡುತ್ತಿದೆ. ತಡೆಯಲು ಲಾಕ್ಡೌನ್ ನಿರ್ಧಾರ ಅನಿವಾರ್ಯವಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಾರದಲ್ಲಿ ಮೂರು ದಿನ ಕಟ್ಟುನಿಟ್ಟಿನ ಲಾಕ್ಡೌನ್ ಮಾಡಲು ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಬೇಕು ಎಂಬ ಬಗ್ಗೆ ಪಕ್ಷಾತೀತವಾಗಿ ಎಲ್ಲ ಶಾಸಕರು ಜಿಲ್ಲಾಡಳಿತದ ಬೆಂಬಲಕ್ಕೆ ನಿಂತಿದ್ದಾರೆ. ‘ನನ್ನ ಕ್ಷೇತ್ರದಲ್ಲಿ 1400 ಮಂದಿ ಹೋಂ ಐಸೊಲೇಶನ್ನಲ್ಲಿದ್ದಾರೆ. ಬೆಡ್ಗಳು ಸಿಗುತ್ತಿಲ್ಲ. ಇವರಿಂದ ಇನ್ನಷ್ಟು ಜನರಿಗೆ ಕೊರೊನಾ ಹರಡಬಹುದು ಎಂಬ ಭೀತಿಯಿದೆ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಅನಿವಾರ್ಯವಾಗಿತ್ತು. ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಜಿಲ್ಲಾಡಳಿತ, ಸರ್ಕಾರವನ್ನು ಈ ನಿಟ್ಟಿನಲ್ಲಿ ಬೆಂಬಲಿಸುತ್ತಿದ್ದೇವೆ’ ಎಂದು ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಕೊವಿಡ್ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಬೇಕು. ಮೆಡಿಕಲ್ ಆಕ್ಸಿಜನ್ ಸರಬರಾಜು ವ್ಯವಸ್ಥೆಯ ಜವಾಬ್ಧಾರಿಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ. ರೆಮ್ಡೆಸಿವರ್ ಪೂರೈಕೆ ನಿರ್ವಹಣೆ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ ಸಿ.ಎನ್. ಆಶ್ವತ್ಥನಾರಾಯಣ ಅವರು ವಹಿಸಿಕೊಳ್ಳಲಿದ್ದಾರೆ. ಆಸ್ಪತ್ರೆಗಳಲ್ಲಿನ ಬೆಡ್ಗಳ ಹೊಣೆಗಾರಿಕೆಯನ್ನು ಸಚಿವ ಆರ್. ಅಶೋಕ್ ನೋಡಿಕೊಳ್ಳಲಿದ್ದಾರೆ. ಹಾಗೇ, ಅರಣ್ಯ ಸಚಿವ ಅರವಿಂದ್ ಲಿಂಬಾವಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೂ ಕೆಲ ಜವಾಬ್ದಾರಿ ಹೊರಿಸಲಾಗಿದೆ. ರಾಜ್ಯದಲ್ಲಿ ಮಾಧ್ಯಮದವರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ನಿನ್ನೆ ತಿಳಿಸಿದ್ದರು.
ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಣಗೊಳಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ಹೆಗಲಿಗೇ ಈ ಹೊಣೆ ನೀಡಲಾಗಿದೆ. ನಾಳೆಯಿಂದಲೇ ಜಿಲ್ಲಾ ಉಸ್ತುವರಿ ಸಚಿವರು ಅವರ ಜಿಲ್ಲೆಗಳಿಗೆ ಹೋಗಬೇಕು. ಅಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಬೇಕು. ಈ ಬಗ್ಗೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದರು.
ಇದನ್ನೂ ಓದಿ: ಲಾಕ್ಡೌನ್ ಮಾಡುವಂತೆ ನಾನು ಮಾರ್ಚ್ 15ರಂದೇ ಹೇಳಿದ್ದೆ, ಇವರು ಇನ್ನೂ ಸಂಪೂರ್ಣ ಲಾಕ್ಡೌನ್ ಮಾಡಿಲ್ಲ: ಹೆಚ್.ಡಿ.ಕುಮಾರಸ್ವಾಮಿ
ಇದನ್ನೂ ಓದಿ: Rahul Gandhi: ಕೊರೊನಾ ವಿರುದ್ಧ ಹೋರಾಡಲು ಲಾಕ್ಡೌನ್ ಒಂದೇ ಅಸ್ತ್ರ: ರಾಹುಲ್ ಗಾಂಧಿ ಟ್ವೀಟ್
Published On - 4:18 pm, Wed, 5 May 21