ಶಿವಮೊಗ್ಗ: ಟಿಪ್ಪು ಸುಲ್ತಾನ್ ವಿಚಾರ ಮತ್ತೆ ಚರ್ಚೆಯ ಮುನ್ನಡಿಗೆ ಬಂದಿದೆ. ಈ ಸಲ ಮೈಸೂರು ಹುಲಿ ಯಾವುದೇ ಪರ-ವಿರೋಧ, ಜಯಂತಿಯ ಚರ್ಚೆ ವಿವಾದಗಳಿಗಾಗಿ ಸುದ್ದಿಯಲಿಲ್ಲ. ಬದಲಾಗಿ ತೀವ್ರ ಗೊಂದಲವಾಗಿದ್ದ ಟಿಪ್ಪು ಸುಲ್ತಾನ್ (Tipu sultan) ಜನ್ಮ ದಿನಾಂಕಕ್ಕೆ (Birth Date) ಈಗ ಉತ್ತರ ಸಿಕ್ಕಿದೆ. ಮಲೆನಾಡಿನ ಸಂಶೋಧಕರಿಂದ ಖಚಿತ ಹುಟ್ಟಿದ ದಿನಾಂಕ ಹೊರಬಿದ್ದಿದೆ. ಕಳೆದ ಮೂರು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆ ಹೊಸನಗರ ನಗರ ಗ್ರಾಮದಲ್ಲಿ ಟಿಪ್ಪುವಿನ ಕಾಲದ ರಾಕೆಟ್ಗಳು ಸಿಕ್ಕಿದ್ದವು. ಈ ರಾಕೆಟ್ಗಳು ಸಿಕ್ಕ ಬಳಿಕ ಟಿಪ್ಪು ಸೈನ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಯುದ್ಧಗಳಲ್ಲಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿತ್ತು ಇದನ್ನೇ ಆಧಾರವಾಗಿಟ್ಟುಕೊಂಡು ಶಿವಮೊಗ್ಗದ ಸ್ವತಂತ್ರ ಸಂಶೋಧಕ ನಿಧಿನ್ ಒಲಿಕರ್ ಸಂಶೋಧನೆಗೆ ಮುಂದಾಗಿದ್ದಾರೆ.
ಈ ರಾಕೆಟ್ಗಳು ಕೇವಲ ಲಂಡನ್ ಮ್ಯೂಸಿಯಂನಲ್ಲಿ ಮಾತ್ರ ಇದ್ದವು. ರಾಕೆಟ್ಗಳ ಕುರಿತು ತಿಳಿದುಕೊಳ್ಳಲು ಶಿವಮೊಗ್ಗದ ಸ್ವತಂತ್ರ ಸಂಶೋಧಕ ನಿಧಿನ್ ಒಲಿಕರ್ ಅವರು ಲಂಡನ್ಗೆ ತೆರಳಿದ್ದರು. ಲಂಡನ್ನಲ್ಲಿರುವ ಮ್ಯೂಜಿಯಂನಲ್ಲಿ ಟಿಪ್ಪುವಿನ ಯುದ್ಧ ಮತ್ತು ಶಸ್ತ್ರಾಸ್ತ್ರ ಬಳಿಕ ನಡೆದ ಕೆಲವೊಂದು ಘಟನೆಗಳ ಬಗ್ಗೆ ಮಾಹಿತಿಗಳು ಇತ್ತು. ಈ ನಡುವೆ ನಿಧನ್ ಅವರಿಗೆ ಟಿಪ್ಪುವಿನ ಪರ್ಷಿಯನ್ ಭಾಷೆ ಪತ್ರಗಳು ಲಂಡನ್ ಗ್ರಂಥಾಲಯದಲ್ಲಿ ಓದಲು ಲಭ್ಯವಾದವು.
ಟಿಪ್ಪುವಿನ ಹಸ್ತಪ್ರತಿಯಲ್ಲಿ ಏನಿದೆ?
ಟಿಪ್ಪುವಿನ ಹಸ್ತಪ್ರತಿಯ ಹೆಸರು ಫತೇ ಉಲ್ ಮುಜಾಹಿದ್ದೀನ್. ಇದು ಟಿಪ್ಪು ತಾನೆ ಬರೆಸಿದ ಮಿಲಿಟರಿ ಕೈ ಲಿಪಿಯಾಗಿತ್ತು. ಇದಲ್ಲಿ ಟಿಪ್ಪುವಿನ ಹಸ್ತಾಕ್ಷರ ಮತ್ತು ಮುದ್ರೆ ಇದೆ. ಈ ಪತ್ರದಲ್ಲಿ ಪ್ರಮುಖವಾಗಿ ಆ ಒಂದು ದಿನ ದಾಖಲಿಸಿದ್ದು, ಆ ದಿನದಂದು ಸೈನ್ಯವು ತೋಪ್ ಸಲಾಮಿ (ಗನ್ ಸಲ್ಯೂಟ್) ನೀಡಬೇಕೆಂದು ಟಿಪ್ಪು ಆದೇಶವನ್ನು ನೀಡಿದ್ದನು. ಪತ್ರದಲ್ಲಿ ಟಿಪ್ಪು ತನ್ನ ಜನ್ಮ ದಿನಾಂಕವನ್ನು ಪ್ರಕಟಿಸಿದ್ದಾರೆ. ಜಕ್ರಿ ಮಾಸದ 14ನೇ ದಿನ ವರ್ಷ 1165 ಹಿಜ್ರಿ. ಪ್ರತಿ ವರ್ಷ ಈ ದಿನದಂದು ಸೂರ್ಯೋದಯ ಆದ ಹತ್ತು ಘಂಟೆಗಳ ನಂತರ ಮೂವತ್ತೊಂದು ತೋಪಿನ ಸಲಾಮಿಯನ್ನು ನೀಡಬೇಕು. ಇದರಲ್ಲಿ ಮೈಸೂರಿನ ಸಮಸ್ತ ಪ್ರಜೆಗಳು ಪಾಲ್ಗೊಳ್ಳಬೇಕೆಂದು ಉಲ್ಲೇಖಿಸಲಾಗಿದೆ ಎಂದು ಸ್ವತಂತ್ರ ಇತಿಹಾಸ ಸಂಶೋಧಕರಾದ ನಿಧಿನ್ ತಿಳಿಸಿದ್ದಾರೆ.
ಈ ಹಸ್ತಪ್ರತಿಯಲ್ಲಿ ಟಿಪ್ಪುವಿನ ಜನ್ಮ ದಿನಾಂಕ ನಿಧಿನ್ ಒಲಿಕೆರ ಅವರ ಗಮನ ಸೆಳೆಯುತ್ತಿದೆ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಹಿಜ್ರಿ 1163 ಎಂದು ಎಲ್ಲರೂ ಭಾವಿಸಿದ್ದು, ಟಿಪ್ಪು ಜನ್ಮ ದಿನವನ್ನು ನವೆಂಬರ್ 20, 1750 ರಂದು ಜನಸಿದ್ದಾರೆ ಎಂದು ದೇಶ-ವಿದೇಶದ ಜನರು ಒಪ್ಪಿಕೊಂಡಿದ್ದಾರೆ. ಆದರೆ ಟಪ್ಪುವಿನ ಪತ್ರದಲ್ಲಿ ಉಲ್ಲೇಖವಾಗಿರುವ ದಿನಾಂಕ ನೋಡಿ ನಿಧಿನ್ ಅವರು ಸಂಶೋಧನೆ ಆರಂಭಿಸಿದರು. ಆ ಮೂಲಕ ಸುಮಾರು ಒಂದೂವರೆ ವರ್ಷದ ಸಂಶೋಧನೆಯ ಬಳಿಕ ಟಿಪ್ಪುವಿನ ಅಸಲಿ ಜನ್ಮ ದಿನಾಂಕವನ್ನು ನಿಧಿನ್ ಪತ್ತೆ ಮಾಡಿದ್ದಾರೆ.
ಟಿಪ್ಪು ಮರಣ ಹೊಂದಿದ ಮೂರು ವರ್ಷಗಳ ಬಳಿಕ ಹೈದರಾಲಿಯ ಜೀವನ ಚರಿತ್ರೆ ಕುರಿತು ಮೀರ್ ಹುಸೇನ್ ಕಿರ್ಮಾನಿ ಅವರು ನಿಶಾನ್ ಐ ಹೈದರ್ನಲ್ಲಿ ಟಿಪ್ಪು ಜನ್ಮದಿನಾಂಕ ಉಲ್ಲೇಖ ಮಾಡಿದ್ದರು. ಇದಾದ ಬಳಿಕ ಲಂಡನ್ನ ಬ್ರಿಟಿಷ್ ಸಂಗ್ರಹಾಲಯದ ಕ್ಯುರೆಟರ್ ಉರ್ಸುಲಾ ಸಿಮ್ಸ್ ವಿಲಿಯನ್ಸ್ ಈ ಹಸ್ತಪ್ರತಿಯಲ್ಲಿ ಟಿಪ್ಪುವಿನ ಜನ್ಮ ತಾರೀಖು ಉಲ್ಲೇಖ ಮಾಡಿರುವ ಪತ್ರಿ ನಿಧಿನ್ ಕೈಗೆ ಸಿಗುತ್ತದೆ. ಹೀಗೆ ಮೂರು ಮಹತ್ವದ ದಾಖಲೆಗಳು ನಿಧಿನ್ ಕೈಗೆ ಸಿಗುತ್ತವೆ. ಹಳೆಯ ಜನ್ಮದಿನಾಂಕ ಮತ್ತು ಹೊಸ ಜನ್ಮದಿನಾಂಕದ ಕೆಲವು ಪುರಾವೆಗಳು.
ಪರ್ಷಿಯನ್ ಭಾಷೆಯಲ್ಲಿ ಉಲ್ಲೇಖವಾಗಿರುವುದನ್ನು ಮೊದಲು ಆಂಗ್ಲ ಭಾಷೆಗೆ ತರ್ಜುಮೆ ಮಾಡಲಾಗುತ್ತದೆ. ಇನ್ನೂ ಇದರಲ್ಲಿ ಟಿಪ್ಪು ತನ್ನದೇ ಆದ ಮೌಲೂದಿ ಕ್ಯಾಲೇಂಡರ್ ಬಳಕೆ ಮಾಡುವುದು ಬಹಿರಂಗವಾಗುತ್ತದೆ. ಟಿಪ್ಪು ಬಳಕೆ ಮಾಡುತ್ತಿರುವ ಪಂಚಾಂಗ ಪ್ರಕಾರ 1165 ಹಿಜ್ರಿ ವರ್ಷದ ತುಳುವಿ ಮಾಸದ ಹದಿನಾಲ್ಕನೇಯ ತಾರೀಖಿ ಎಂದು ಉಲ್ಲೇಖಿಸಲಾಗಿದೆ. 14ನೇ ತುಳುವಿ ಎಂದರೇನು ಎಂದು ಕಂಡು ಹಿಡಿಲು ನಿಧಿನ್ ಅವರಿಗೆ ದೀರ್ಘಕಾಲ ಸಂಶೋಧನೆ ಮಾಡಬೇಕಾಯಿತು.
ಟಿಪ್ಪು ಮೈಸೂರಿನ ರಾಜ್ಯಭಾರದ ಚುಕ್ಕಾಣಿ ಹಿಡಿದು ಐದನೇ ವರ್ಷದಲ್ಲಿ ಮೌಲೂದಿ ಪಂಚಾಂಗವನ್ನು ಪ್ರಾರಂಭಿಸುತ್ತಾನೆ. ಮುಸಲ್ಮಾನರು ಚಂದ್ರನ ಗ್ರಹಗತಿ ಅವಲಂಬಿಸಿ ಹಿಜ್ರಿ ಪಂಚಾಂಗವನ್ನು ಅನುಸರಿಸುತ್ತಾರೆ. ಇನ್ನೂ ಕೆಲವರು ಸೂರ್ಯನ ಗ್ರಹಗತಿ ಅವಲಂಬಿಸಿ ಸೌರಮಾನ ಪಂಚಾಂಗವನ್ನು ಅನುಸರಿಸುತ್ತಾರೆ. ಇದರಿಂದ ಆಗುವ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಟಿಪ್ಪು ಮೌಲೂದಿ ಪಂಚಾಂಗವನ್ನು ತನ್ನ ಆಡಳಿತದಲ್ಲಿ ಪರಿಚಯಿಸುತ್ತಾನೆ. ಮೈಸೂರಿನಲ್ಲಿ ಕಂದಾಯವನ್ನು ಚಾಂದ್ರಾಮಾನ ಪಂಚಾಂಗ ಮತ್ತು ಭತ್ತದ ಕೊಯ್ಲಿನ ಮೇಲಿನ ಕರವನ್ನು ಸೌರಮಾನ ಪಂಚಾಂಗವನ್ನು ಅನುಸರಿಸುತ್ತಿದ್ದರು. ಇದರಿಂದ ಸೌರಮಾನ ಪಂಚಾಂಗ ಅನುಸರಿದರೆ 11 ದಿನಗಳು ಹೆಚ್ಚುವರಿ ಆಗುತ್ತಿದ್ದವು. ಇದರಿಂದ ರೈತರಿಗೆ ಹೆಚ್ಚುವರಿ ಕರವನ್ನ ಕಟ್ಟಬೇಕಾಗುತ್ತಿತ್ತು. ಈ ಸಮಸ್ಯೆ ಪರಿಹಾರಕ್ಕೆ ಟಿಪ್ಪು ಹೊಸ ಮೌಲೂದಿ ಕ್ಯಾಲೆಂಡರ್ ಪರಿಚಯಿಸುತ್ತಾನೆ.
ಮೌಲೂದಿ ಕ್ಯಾಲೆಂಡರ್ ಆರಂಭ
ಅರಬ್ ಪದವಾದ ಮೌಲೂದಿ ಐ ಮಹ್ಮದ್ ಅಂದರೆ ಮಹ್ಮದ್ ಪೈಂಗಂಬರ್ ಜನ್ಮ ವರ್ಷ. ಇದನ್ನು ಆಧರಿಸಿ ಮೌಲೂದಿ ಪಂಚಾಂಗ್ ಸಿದ್ಧಪಡಿಸಲಾಗಿತ್ತು. ಪೈಗಂಬರ್ ಅವರು ಹುಟ್ಟಿದ ಕ್ರಿ.ಪೂ. 572 ಇಂದ ಪ್ರಾರಂಭಗೊಂಡ ಅಹ್ಮದಿ ಮಾಸದಿಂದ ಶುರುವಾಗಿ ಹನ್ನೇರಡನೆಯ ಮಾಸವಾದ ಬಯಾಜಿ(ರಬಾನಿ) ಜತೆಗೆ ಅಂತ್ಯವಾಗುತ್ತದೆ. ಇನ್ನೊಂದು ವಿಶೇಷ ಅಂದರೆ ಮೌಲೂದಿ ಪಂಚಾಂಗವು ಹಿಂದೂಗಳ ಚಾಂದ್ರಾಮಾನ ಪಂಚಾಂಗಕ್ಕೆ ಸರಿಸಮವಾಗಿದೆ. ಅಹ್ಮದಿ ಮಾಸ ಚೈತ್ರ ಮಾಸಕ್ಕೆ ಸಮಾನವಾದರೆ ಕೊನೆಯ ಮಾಸ ಬಯಾಜಿ ಪಾಲ್ಗುಣ ಮಾಸಕ್ಕೆ ಸಮಾನವಾಗಿರುತ್ತದೆ. ಇನ್ನೂ ಮೌಲೂದಿನ ಪಂಚಾಂಗದ ಒಂಭತ್ತನೆಯ ಮಾಸದ ಹೆಸರು ತುಳುವಿ ಅಗಿದ್ದು, ಇದು ಹಿಂದು ಪಂಚಾಂಗದ ಮಾರ್ಗಶಿರ ಮಾಸಕ್ಕೆ ಸಮನಾಗಿದೆ.
ಈ ಸುದೀರ್ಘ ಪಂಚಾಂಗ ಮತ್ತು ಹುಟ್ಟಿದ ದಿನಾಂಕದ ಸಂಶೋದನೆ ಬಳಿಕ 1165 ಹಿಜ್ರಿ ವರ್ಷದ ತುಳುವಿ ಮಾಸದ ಹದಿನಾಲ್ಕನೆಯ ತಾರೀಖು ಆಂಗ್ಲ(ಗ್ರೆಗೋರಿಯನ್) ಕ್ಯಾಲೆಂಡರ್ ಪ್ರಕಾರ, ಟಿಪ್ಪುವಿನ ಜನ್ಮ ದಿನ 1ನೇ ಡಿಸೆಂಬರ್ 1751 ಆಗಿರುತ್ತದೆ. ಮೌಲೂದಿ ಪಂಚಾಂಗ ದೃಢಿಕರಿಸಲು ಅನೇಕ ಪರೀಕ್ಷಾ ಪ್ರಯೋಗಗಳನ್ನು ನಿಧಿನ್ ಮಾಡಿದ್ದಾರೆ. ವಿಶ್ವಾಸ್ (ಮಾಜಿ ಗೂಗಲ್ ಸಂಸ್ಥೆಯ ಉದ್ಯೋಗಿ) ಮತ್ತು ಪ್ರೋ. ರಾಮನ್ (ಐಐಟಿ ಮದ್ರಾಸ್) ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದ್ದಾರೆ. ಇದರ ಫಲಶೃತಿಯಾಗಿ ಇಂದು ಆನ್ಲೈನ್ನಲ್ಲಿ ಮೌಲೂದಿ ಪಂಚಾಂಗವನ್ನು ವಿಶ್ವದೆಲ್ಲಡೆ ಎಲ್ಲ ಸಂಶೋಧಕರು ಬಳಸಿಕೊಳ್ಳಬಹುದಾಗಿದೆ.
ಪಂಚಾಂಗದ ವೆಬ್ಸೈಟ್ ನಿಯೋಟೆಕ್ ಸಂಸ್ಥೆಯ ಮಂಜುನಾಥ್ ಗಾಂವ್ಕರ್ ಮಾಡಿದ್ದಾರೆ. ಮೂರು ದಾಖಲೆಗಳು ಪರ್ಷಿಯನ್ ಭಾಷೆಯಲ್ಲಿವೆ. ಅದನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಲು ವಿದ್ವಾಂಸ ಅದ್ನಾನ್ ರಶೀದ್ ಸಹಾಯ ಮಾಡಿದ್ದಾರೆ. ಇನ್ನೂ ಈ ಎಲ್ಲ ಸಂಶೋಧನೆಯ ಟಿಪ್ಪುವಿನ ನಿಜವಾದ ಜನ್ಮ ದಿನಾಂಕದ ಸಂಶೋಧನೆಗೆ ಮಂಗಳೂರು ಮತ್ತು ಗೋವಾ ವಿವಿಯ ಮಾಜಿ ಕುಲಪತಿ ಮತ್ತು ಮೈಸೂರಿನ ಪ್ರಸಿದ್ಧ ಇತಿಹಾಸಕಾರ ಪ್ರೋ. ಶೇಖ್ ಅಲಿ ಅವರು ಅನುಮೋದನೆ ನೀಡಿದ್ದಾರೆ ಎಂದು ಇತಿಹಾಸ ಸಂಶೋಧಕರಾದ ಅಜಯ್ ಶರ್ಮಾ ತಿಳಿಸಿದ್ದಾರೆ.
ಬ್ರಿಟೀಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಟಿಪ್ಪುವಿನ ಅಸಲಿ ಜನ್ಮದಿನವನ್ನು ಸದ್ಯ ಮಲೆನಾಡಿನ ಸಂಶೋಧಕರು ಹೊರಹಾಕಿದ್ದಾರೆ. ಶೀಘ್ರವೇ ಅವರ ಸಂಶೋಧನೆಯ ವರದಿಯನ್ನು ಪುರಾತ್ವ ಇಲಾಖೆ ಮತ್ತು ಸರಕಾರಕ್ಕೆ ನೀಡಲಿದ್ದಾರೆ. ಟಿಪ್ಪುವಿನ ಜನ್ಮದಿನದ ರಹಸ್ಯವು ಹೊಸ ಮೌಲೂದಿ ಪಂಚಾಗದ ಮೇಲೆ ಬೆಳಕು ಚೆಲ್ಲಿದೆ. ಸದ್ಯ ಈ ಮೌಲೂದಿ ಪಂಚಾಂಗವು ದೇಶ ಮತ್ತು ವಿದೇಶದ ಅನೇಕ ಸಂಶೋಧಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಈ ಹೊಸ ಟಿಪ್ಪು ಜನ್ಮ ದಿನವನ್ನು ಸರಕಾರ ಮತ್ತು ರಾಜ್ಯದ ಜನರು ಯಾವ ರೀತಿ ಸ್ವೀಕಾರ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ವರದಿ: ಬಸವರಾಜ್ ಯರಗಣವಿ
ಇದನ್ನೂ ಓದಿ:
ದೇಶಪ್ರೇಮಿ ಟಿಪ್ಪುವಿನ ಜನ್ಮಸ್ಥಳ ದೇವನಹಳ್ಳಿಯಿಂದ ಕಾಂಗ್ರೆಸ್ ಜನಧ್ವನಿ ಯಾತ್ರೆ ಆರಂಭ: ಸಿದ್ದರಾಮಯ್ಯ
105 ವರ್ಷ ಇತಿಹಾಸವಿರುವ ಬೆಂಗಳೂರಿನ ದೊಡ್ಡಜಾಲ ರೈಲ್ವೆ ನಿಲ್ದಾಣದ ನವೀಕರಣಕ್ಕೆ ಚಾಲನೆ
Published On - 12:27 pm, Sun, 18 July 21