ಲಕ್ಷ ಲಕ್ಷ ಜನ ಧರಿಸುವ ಹನುಮ ಮಾಲೆಯ ರೋಚಕ ಇತಿಹಾಸ!

| Updated By: guruganesh bhat

Updated on: Apr 15, 2021 | 2:21 PM

ಜನ ದತ್ತ ಮಾಲೆ ಹಾಕುವುದನ್ನು ಕೇಳಿದ್ದೇವೆ. ಆದರೆ, ಈಗ ಭಕ್ತರು ಹನುಮ ಮಾಲೆ ಧರಿಸಿ 41 ದಿನ ಕಠಿಣ ವೃತ ಆಚರಿಸುವ ಪದ್ಧತಿ ಈಗ ಉತ್ತರ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಡೆದುಬಂದಿದೆ.

ಲಕ್ಷ ಲಕ್ಷ ಜನ ಧರಿಸುವ ಹನುಮ ಮಾಲೆಯ ರೋಚಕ ಇತಿಹಾಸ!
ಹನುಮ ಮಾಲಾಧಾರಿಗಳು
Follow us on

ಹನುಮ ಹುಟ್ಟಿದ್ದು ಎಲ್ಲಿ ಎಂಬ ಹೊಸ ಗೊಂದಲದ ನಡುವೆ, ಕರ್ನಾಟಕದಲ್ಲಿ ಅದರಲ್ಲಿಯೂ ಬಳ್ಳಾರಿ ಮತ್ತು ಸುತ್ತಮುತ್ತಲಿನ ಕೊಪ್ಪಳ ಜಿಲ್ಲೆಯಲ್ಲಿನ ಹನುಮ ಭಕ್ತರು ಹನುಮ ಮಾಲೆ ಧರಿಸಲಾರಂಬಿಸಿದ್ದಾರೆ.  ಕೇವಲ ಏಳು ಜನರಿಂದ ಆರಂಭವಾದ ಹನುಮ ಮಾಲಾಧಾರಣೆ,ಇಂದು‌ ಲಕ್ಷ ಲಕ್ಷ ಜನರು ಹನುಮ‌ಮಾಲೆ ಧರಿಸೋ ಹಂತಕ್ಕೆ ಬಂದು ನಿಂತಿದೆ. ಇದಕ್ಕೆಲ್ಲ ಹನುಮನೇ ಕಾರಣ ಅನ್ನೋ ‌ನಂಬಿಕೆ ನಾಡಿನ ಜನರದ್ದು, ಅಷ್ಟಕ್ಕೂ ಆ ಏಳು ಜನ ಹನುಮ ಮಾಲಾಧಾರಣೆ ಆರಂಭಿಸಿದ್ದು,ಯಾವಾಗ ಹೇಗೆ ಅನ್ನೋದರ ಆಸಕ್ತಿಕರ ವಿಷಯ ಇಲ್ಲಿದೆ ನೋಡಿ.

ಅಂಜನಾದ್ರಿ ಪರ್ವತ ಸದ್ಯ ಸಾಕಷ್ಟು ಚರ್ಚೆಯಲ್ಲಿ ಇರೋ ಹೆಸರು. ಯಾಕಂದ್ರೆ ಹನುಮ ಹುಟ್ಟಿದ್ದು ಎಲ್ಲಿ ಅನ್ನೋ ಪ್ರಶ್ನೆಗಳು, ಹುಡುಕಾಟ,ಸಂಶೋಧನೆಗಳು ಆರಂಭವಾಗಿದೆ.ಇದಕ್ಕೆಲ್ಲ ಕಾರಣ ಟಿ.ಟಿ.ಡಿ.  ಹನುಮ‌ ಹುಟ್ಟಿದ್ದು ನಮ್ಮಲ್ಲಿ ಅದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡ್ತೀವಿ ಎಂದು ಟಿ.ಟಿ.ಡಿ.ಹೇಳಿದ್ದೇ ತಡ ಕರ್ನಾಟಕಕ್ಕೆ ಒಂದು ರೀತಿ ಬರ ಸಿಡಿಲು‌ ಬಡಿದಂತಾಗಿದೆ.ಯಾಕಂದ್ರೆ ಇಷ್ಟು ದಿನ‌ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದೆ ಪ್ರದೇಶದಲ್ಲಿ ಇರೋ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾಗಿತ್ತು.ಅಸಂಖ್ಯಾತ ಭಕ್ತ ಗಣ ಕೂಡಾ ಹನುಮ ಹುಟ್ಟಿದ್ದು ಇಲ್ಲೆ ಎಂದು ನಂಬಿಕೊಂಡಿದ್ರು. ಆದ್ರೆ ಟಿಟಿಡಿ ಹನುಮ ಹುಟ್ಟಿದ್ದು ನಮ್ಮಲ್ಲಿ ಎಂದ ಬಳಿಕ ಅನೇಕ ಇತಿಹಾಸಕಾರರು ಮತ್ತು ಭಕ್ತರು ಗೊಂದಲಕ್ಕೀಡಾಗಿದ್ದಾರೆ.

ಟಿಟಿಡಿ ಹನುಮ ಹುಟ್ಟಿದ್ದು ತಮ್ಮಲ್ಲಿ ಅನ್ನೋದಕ್ಕೆ ಕಾರಣ ಏನು?
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಿಷ್ಕಿಂದೆ ಪ್ರದೇಶದಲ್ಲಿರೋ ಅಂಜನಾದ್ರಿ‌ ಇಂದು ಲಕ್ಷ ಲಕ್ಷ ಭಕ್ತರನ್ನು ಹೊಂದಿದೆ. ದೇಶ,ಹೊರದೇಶದಿಂದ ಆಂಜನೇಯನ‌ ಭಕ್ತರು ಅಂಜನಾದ್ರಿಗೆ ಬಂದು ಹನುಮನ‌ ದರ್ಶನ ಪಡೆಯುತ್ತಾರೆ‌. ಕಳೆದ ಐದಾರು ವರ್ಷದಲ್ಲಿ ಅಂಜನಾದ್ರಿಯ ಖ್ಯಾತಿ ದೇಶದ ಉದ್ದಗಲಕ್ಕೂ ಬೆಳೆದಿದೆ. ಇದು ಟಿಟಿಡಿಗೆ ಸಹಿಸಲಾಗ್ತಿಲ್ಲ ಅನ್ನೋದು ಸ್ಥಳೀಯ ಭಕ್ತರ ಆರೋಪ. ಅಂಜನಾದ್ರಿ ಇಂದು ಹೆಮ್ಮರವಾಗಿ ಬೆಳೆದು, ಐತಿಹಾಸಿವಾಗಿ ನಮ್ಮ‌ ಜಿಲ್ಲೆಗೆ ಅಂಜನಾದ್ರಿ ಪರ್ವತ ಒಂದು ಹೆಮ್ಮೆ, ಪ್ರತಿ ವರ್ಷ ಹನುಮ ಜಯಂತಿಗೆ ದೇಶ, ರಾಜ್ಯಾದ ನಾನಾ ಭಾಗದಿಂದ ಹನುಮ ಮಾಲಾಧಾರಿಗಳು ಬಂದು ಸಂಭ್ರಮಿಸೋದು ಟಿಟಿಡಿಗೆ ಸಹಿಸಲಾಗುತ್ತಿಲ್ಲ ಅನ್ನೋದು ಸ್ಥಳೀಯರ ಆರೋಪ.

ಅಂಜನಾದ್ರಿಯಲ್ಲಿ ಹನುಮ ಮಾಲೆ ಆರಂಭವಾಗಿದ್ದು ಯಾವಾಗ?
ನಾವೆಲ್ಲ ಅಯ್ಯಪ್ಪ ಸ್ವಾಮಿಗೆ ಮಾಲಾಧಾರಣೆ ಮಾಡೋದು ಕೇಳಿದ್ವಿ, ಆದ್ರೆ 2007 ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಹನುಮ‌ಮಾಲಾ ಧಾರಣೆ ಕಾರ್ಯಕ್ರಮ ಆರಂಭವಾಯ್ತು. 2007 ರಲ್ಲಿ ಕೇವಲ ಏಳು ಜನರ ತಂಡ ಹನುಮ‌ಮಾಲಾ ಧಾರಣೆ ಕಾರ್ಯಕ್ರಮ ಆರಂಭಮಾಡಿದ್ರು. ಶಿವು ಅರಕೇರಿ, ನೀಲಕಂಠಪ್ಪ ನಾಗಶೆಟ್ಟಿ, ಅಯ್ಯನಗೌಡ ಹೇರೂರು ಹಾಗೂ ಚಂದ್ರು ಸೇರಿ ಏಳು ಜನರ ತಂಡ ಮೊದಲ ಬಾರಿಗೆ ಹನುಮ ಮಾಲಾಧಾರಣೆ ಕಾರ್ಯಕ್ರಮ ಆರಂಭಿಸಿದ್ರು.  ಈ ಹನುಮ ಮಾಲಾಧಾರಿಗಳು ಮೊದಲು‌ ಅಯ್ಯಪ್ಪ ಮಾಲೆಯನ್ನು ಧರಿಸುತ್ತಿದ್ದರು. ಸುಮಾರು ನಾಲ್ಕು ವರ್ಷಗಳ ಅಯ್ಯಪ್ಪ ಮಾಲೆ ಧರಿಸಿ ಆಂಧ್ರದ ಕಾಸಾಪೂರ ಬಳಿ ಆಂಜನೇಯ ದೇವಸ್ಥಾನಕ್ಕೆ ಹೋದಾಗ ನಾವೂ ಯಾಕೆ ಆಂಜನೇಯ ಮಾಲಾಧಾರಣೆ ಮಾಡಬಾರದು ಎಂದು ಮೂರು ವರ್ಷಗಳ ಕಾಲ ಮಾಲಾಧಾರಣೆ ಬಗ್ಗೆ ತಿಳಿದುಕೊಂಡು ಮಾಲಾಧಾರಣೆ ಆರಂಭಿಸಿದ್ರು.

ಹನುಮ ಭಕ್ತರು

ವಿವಿಧ ಆಂಜನೇಯ ದೇವಸ್ಥಾನ, ಮಹಾಗುರುಗಳನ್ನ ಭೇಟಿ ಮಾಡಿದ್ದ ತಂಡ
2007 ರಲ್ಲಿ ಹನುಮ ಮಾಲಾಧಾರಣೆ ಆರಂಭಿಸಿದ ತಂಡ ಸುಮಾರು ಆಂಜನೇಯ ದೇವಸ್ಥಾನಕ್ಕೆ ಭೇಟಿ ಮಾಡಿದೆ. ಆಂಧ್ರದಲ್ಲಿರೋ ಕಾಸಾಪೂರ, ಮಂತ್ರಾಲಯದಲ್ಲಿರೋ ಪಂಚಮುಖಿ ಆಂಜನೇಯನ‌ ದೇವಸ್ಥಾನಕ್ಕೆ ಭೇಟಿ ಕೊಟ್ಟು ಗುರುಗಳೊಂದಿಗೆ ಚರ್ಚೆ ಮಾಡಿ ಹನುಮ ಮಾಲಾಧಾರಣೆ ಆರಂಭಿಸಿದ್ದಾರೆ. ಮೈಸೂರಿನ ರಾಜು ಗುರು ಸ್ವಾಮಿ ಅನ್ನೋ ಮಹಾಸ್ವಾಮಿಗಳ ಬಳಿ‌ ಮಾಲಾಧಾರಣೆ ಮಾಡೋದು ಹೇಗೆ, ಇರುಮುಡಿ ಕಟ್ಟೋದರ ಬಗ್ಗೆ ಮಾಹಿತಿ ಪಡೆದು 2007 ರಲ್ಲಿ ಹನುಮ‌ಮಾಲಾ ಧಾರಣೆ ಆರಂಭಿಸಿದ್ದಾರೆ.

ಹನುಮ‌ ಮಾಲಾಧಾರಣೆ ಹೇಗೆ‌, ಯಾವಾಗ?
ಹನುಮ ಮಾಲಾಧಾರಣೆಯಲ್ಲಿ ಸುಮಾರು‌ 41 ದಿನಗಳ ಕಾಲ ಮಾಲಾಧರಣೆ ಮಾಡುತ್ತಾರೆ.  ಕೆಂಪು ಬಟ್ಟೆ ಧರಿಸಿದ 41 ದಿನಗಳ ಕಾಲ ವೃತ ಆಚರಣೆ ಮಾಡ್ತಾರೆ‌. 41 ದಿನಗಳ ಕಾಲ ಮಾಲಾಧಾರಿಗಳು ನಿತ್ಯ ತಣ್ಣೀರು ಸ್ನಾನ ಮಾಡಿ, ಹನುಮನ‌ ಪೂಜೆ ಮಾಡ್ತಾರೆ. ದಿನಕ್ಕೆ ಕೇವಲ‌ ಒಂದು ಹೊತ್ತು ಮಾತ್ರ ಊಟ, ಅದು ಅವರೇ ಅಡುಗೆ ಮಾಡಿಕೊಂಡು ಊಟ ಮಾಡಿ ವೃತ ಆಚರಣೆ ಮಾಡ್ತಾರೆ. ಕೆಲವರು 41 ದಿನ, ಕೆಲವರು 21 ದಿನ, ಕೆಲವರು 18 ದಿನ ಹನುಮನ‌ ವೃತ ಆಚರಣೆ ಮಾಡ್ತಾರೆ. ಏಪ್ರಿಲ್​ನಲ್ಲಿ‌ ಬರೋ ಹನುಮ ಜಯಂತಿ, ಅಂದ್ರೆ ಧವನದ ಹುಣ್ಣಿಮೆ ದಿನ ಹನುಮ‌ ಜಯಂತಿಗೆ ಭಕ್ತರು ಮಾಲಾಧಾರಣೆ ಮಾಡ್ತಾರೆ. ಮಾಲಾಧಾರಣೆ ಮಾಡಿ ಹನುಮ‌ ಜಯಂತಿ ದಿನ ಅಂಜನಾದ್ರಿ ಪರ್ವತದಲ್ಲಿ ಮಾಲೆ ವಿಸರ್ಜನೆ ಮಾಡ್ತಾರೆ. ಇದಲ್ಲದೆ ಡಿಸೆಂಬರ್ ನಲ್ಲಿ ಬರೋ ಹನುಮ ಭಕ್ತರು ‌ಮಾಲೆ ಧರಿಸುತ್ತಾರೆ. ಹನುಮದ್​ ವೃತ ಅಂದ್ರೆ ಪಾಂಡವರು ವನವಾಸದಿಂದ ಹೊರಬರಲಿ‌ ಎಂದು ಧರ್ಮರಾಯ, ಹನುಮಂತನಿಗೆ ವೃತ ಆಚರಣೆ ಮಾಡಿದ್ದರಂತೆ, ಹೀಗಾಗಿ‌ ಹನುಮ ವೃತಕ್ಕೂ ಮಾಲೆಯನ್ನು ಧರಿಸೋ ಪ್ರತೀತಿ ಇದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಹೇಗೋ ಹಾಗೆ ಹನುಮ ಮಾಲಾಧಾರಣೆ ಅದೇ ರುದ್ರಾಕ್ಷಿ ಮಣಿಗಳಿಗೆ ಇಲ್ಲಿನ ಭಕ್ತರು ಹನುಮಂತನ‌ ಡಾಲಾರ್ ಹಾಕಿ ಮಾಲಾಧಾರಣೆ ಮಾಡ್ತಾರೆ. ಇಲ್ಲೂ ಇರುಮುಡಿ ಇರತ್ತೆ, ಅಯ್ಯಪ್ಪ ಸ್ವಾಮಿ ಇರುಮುಡಿಗೆ ತುಪ್ಪದ ಅಭಿಷೇಕವಾದ್ರೆ ಇಲ್ಲಿ ಇರುಮಡಿಯಲ್ಲಿ ಅವಲಕ್ಕಿ, ಕಲ್ಲು ಸಕ್ಕರೆ, ದ್ರಾಕ್ಷಿ, ಗೋಡಂಬಿ, ಸಿಂಧೂರ ಹಾಕಿ ಇರುಮುಡಿ ಕಟ್ಟಲಾಗಿರುತ್ತೆ.

ಹನುಮ ಮಾಲೆ

ಏಳು ಜನರಿಂದ ಆರಂಭವಾದ ಹನುಮ ಮಾಲೆ ಇಂದು‌ ಲಕ್ಷ ಭಕ್ತರು ಹನುಮ ಮಾಲೆ ಧರಿಸುವಂತಾಗಿದೆ

2007 ರಲ್ಲಿ ಏಳು‌ ಜನರಿಂದ ಆರಂಭವಾದ ಹನುಮ ಮಾಲಾಧಾರಣೆ ಇಂದು ಲಕ್ಷ ಲಕ್ಷ ಜನರು ಹನುಮ ಮಾಲೆ ಧರಿಸುವಂತಾಗಿದೆ. ರಾಜ್ಯವೊಂದೇ ಅಲ್ಲದೇ ಹೊರ ರಾಜ್ಯದಿಂದಲೂ ಹನುಮ‌ಮಾಲೆ ಧರಿಸಿ ಭಕ್ತರು ಆಂಜನೇಯನ‌ ದರ್ಶನಕ್ಕೆ ಬರ್ತಾರೆ. ಕರ್ನಾಟಕದ ಕೊಪ್ಪಳ, ಬಳ್ಳಾರಿ, ಗದಗ, ವಿಜಯಪೂರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸಾವಿರಾರು‌ ಜನ ಹನುಮ ಮಾಲೆ ಧರಿಸುತ್ತಿದ್ದಾರೆ. ಏಳು ಜನರಿಂದ ಆರಂಭವಾದ ಮಾಲಾಧಾರಣೆ ಇಂದು ದೇಶದ ಉದ್ದಗಲಕ್ಕೂ ಬೆಳೆದಿದ್ದು ಹನುಮಂತನ ಪವಾಡವೇ ಸರಿ‌ ಅನ್ನೋದು‌‌ ಮಾಲಾಧಾರಿಗಳ‌ ನಂಬಿಕೆ.

 ‘2007 ರಲ್ಲಿ ನಾವು ಏಳು ಜ‌ನ ಮೊದಲ ಬಾರಿಗೆ ಹನುಮ ಮಾಲೆ ಧರಿಸಿದ್ವಿ, ಹನುಮ‌ ಮಾಲಾಧಾರಣೆಗೂ ಮುನ್ನ ಅನೇಕ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಮಾಹಿತಿ ಪಡೆದುಕೊಂಡಿದ್ವಿ, ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಅಂತೆಯೆ ನಾವು ಆಂಜನೇಯ ಮಾಲಾಧಾರಣೆ ಕಾರ್ಯಕ್ರಮ ಮಾಡಲು ಮುಂದಾಗಿದ್ವಿ, ಅಂದು ಏಳು ಜನ ಆರಂಭಿಸಿದ ಮಾಲಾಧಾರಣೆ ಇಂದು ಅತ್ಯಂತ ಪ್ರಸಿದ್ದಿ ಪಡೆದುಕೊಂಡಿದೆ. ದೇಶದ ನಾನಾ ಭಾಗದ ಸುಮಾರು ಒಂದು ಲಕ್ಷ ಜನ ಮಾಲಾಧಾರಣೆ ಮಾಡ್ತಾರೆ, ಕಳೆದ ಕೆಲ ವರ್ಷಗಳಿಂದ ಅಂಜನಾದ್ರಿ ಹೆಸರು ಉನ್ನತ ಮಟ್ಟಕ್ಕೆ ಹೋಗಿರೋದ್ರಿಂದ ಟಿಟಿಡಿ ಇದು ಸಹಿಸಲಾಗದೆ, ಇಂತಹ ಹೊಸ ವಿವಾದ ಉಂಟು ಮಾಡಿದೆ ಅಂತಾರೆ. ಹನುಮ ಹುಟ್ಟಿದ್ದು ನಮ್ಮ ಕಿಷ್ಕಿಂಧೆ ಪ್ರದೇಶದಲ್ಲಿಯೇ ನಾವು ಅದನ್ನು ಪ್ರೂವ್ ಮಾಡಲು ಸಿದ್ದ’ ಎಂದು ಹನುಮ‌ ಮಾಲಾಧಾರಣೆ ಕಾರ್ಯಕ್ರಮ ರೂವಾರಿ ಶಿವು ಅರಕೇರಿ ಅವರು ವಿವರಿಸುತ್ತಾರೆ.

ಇದನ್ನೂ ಓದಿ: ಕೊಪ್ಪಳದ ಕಿಷ್ಕಿಂದೆಯೇ ಹನುಮ ಹುಟ್ಟಿದ ಸ್ಥಳ; ಇಲ್ಲಿವೆ ಖಚಿತ ದಾಖಲೆಗಳು

ಹನುಮನ ಹುಟ್ಟಿದ ಸ್ಥಳ ವಿವಾದ: ಟಿಟಿಡಿ ಹೇಳಿಕೆ ಖಂಡಿಸಿ ತಿರುಪತಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ ಅಂಜನಾದ್ರಿಯ ಅರ್ಚಕ

ತಿರುಪತಿ ಆಡಳಿತ ಮಂಡಳಿಯಿಂದ ಅಪಚಾರ; ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ ತಿರುಪತಿಯಲ್ಲಂತೆ!

(Interesting ritual in Karnataka of lakhs of devotees wearing Hanumamale and worshipping Hanuma for 41 days )