
ದಾವಣಗೆರೆ: ಇದೇ 28 ರಂದು ದಾವಣಗೆರೆ ನಗರದ ಶಿವಯೋಗಿ ಮಂದಿರದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೆ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜೊತೆಗೆ ಹಿರಿಯ ಸಾಹಿತಿ ಕೆ.ಮರುಳಸಿದ್ದಪ್ಪ ಅವರಿಗೆ ಜಯದೇವಶ್ರೀ, ಪ್ರೊ.ಎಚ್.ಲಿಂಗಪ್ಪಗೆ ಶೂನ್ಯಪೀಠ ಚನ್ನಬಸವಣ್ಣ ಹಾಗೂ ಪತ್ರಕರ್ತ ಬಸವರಾಜಸ್ವಾಮಿ ಅವರಿಗೆ ಶೂನ್ಯಪೀಠ ಅಲ್ಲಮ ಪ್ರಭು ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ಡಿ.ರೂಪಾ ಬಗ್ಗೆ
ಡಿ.ರೂಪಾ ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ಹುಟ್ಟೂರು ದಾವಣಗೆರೆ. ತಂದೆಯ ಹೆಸರು ಜೆ.ಹೆಚ್.ದಿವಾಕರ್ ಮತ್ತು ತಾಯಿ ಹೇಮಾವತಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯನ್ನು ಪಡೆದ ಡಿ.ರೂಪಾ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಎಂಎ ಪದವಿಯನ್ನು ಪಡೆದರು. ಐಪಿಎಸ್ ಅಧಿಕಾರಿ ಡಿ.ರೂಪಾರವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯದ ತರಬೇತಿಯನ್ನು ಪಡೆದಿದ್ದಾರೆ.
ಡಿ.ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ತಿಕ್ಕಾಟ
ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ವಿಚಾರಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ನಡುವೆ ತಿಕ್ಕಾಟ ಶುರುವಾಗಿತ್ತು. ಇವರ ನಡುವಿನ ಗಲಾಟೆ ಬೆನ್ನಲ್ಲೆ ರಾಜ್ಯ ಸರ್ಕಾರ ಇವರಿಬ್ಬರನ್ನು ವರ್ಗಾವಣೆ ಮಾಡಿತ್ತು. ಆದರೆ ಆದೇಶಕ್ಕೆ ಅನುಗುಣವಾಗಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು (2020 ರ ಡಿಸೆಂಬರ್ 31) ಡಿ.ರೂಪಾ ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.
ನನ್ನ ವರ್ಗಾವಣೆ ಬಂದಿದೆ. ಕರಕುಶಲ ನಿಗಮದ ಎಂಡಿ ಎಂದು. ಸಿಬಿಐ ಈಗಾಗಲೇ ದೋಷಾರೋಪಣೆ ಸಲ್ಲಿಸಿ ನಿಂಬಾಳ್ಕರ್ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ಕಳೆದ ಡಿಸೆಂಬರ್ (1 ವರ್ಷದ ಹಿಂದೆ) ಶಿಫಾರಸ್ಸು ಮಾಡಿದ್ದರು. ಆದರೆ ಶಿಸ್ತುಕ್ರಮ ತೆಗೆದುಕೊಂಡಿಲ್ಲ. ಈ ವರ್ಗಾವಣೆ ನನ್ನನ್ನೂ ದೋಷಾರೊಪಣೆ ಎದುರಿಸುತ್ತಿರುವ ಅಧಿಕಾರಿಯನ್ನು ಒಂದೆ ತಕ್ಕಡಿಯಲ್ಲಿ ಅಳೆದಂತೆ ಎಂದು ಅಭಿಪ್ರಾಯಪಟ್ಟಿದ್ದರು.
ಡಿ.ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ತಿಕ್ಕಾಟಕ್ಕೆ ಕಾರಣ?
ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ನಲ್ಲಿ ಅವ್ಯವಹಾರ ನಡೆದಿದೆ ಎಂದು ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಿ.ರೂಪಾ ಮಾಡಿದ್ದರು. ಆದರೆ ಈ ಆರೋಪಕ್ಕೆ ಹೇಮಂತ್ ನಿಂಬಾಳ್ಕರ್ ನಿರಾಕರಿಸಿದ್ದರು.
ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಪರಿಚಯ
ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಕನ್ನಡದ ಖ್ಯಾತ ವಿಮರ್ಶಕರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರೂ ಆಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ
ಕಾವೇರಿ ಎಂಪೋರಿಯಂ ಕರಕುಶಲ ವಸ್ತುಗಳು ಇನ್ಮುಂದೆ ಆನ್ಲೈನ್ ಮಾರುಕಟ್ಟೆಯಲ್ಲೂ ಲಭ್ಯ -ಡಿ.ರೂಪಾ
ಇದು ನನ್ನನ್ನೂ ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತೆ: ಡಿ.ರೂಪಾ
Published On - 7:47 pm, Thu, 25 February 21