ಅದ್ಯಾವಾಗ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸೆಕ್ಸ್ ಸಿಡಿ ಸ್ಫೋಟವಾಯ್ತೋ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ರಾಜಕೀಯ ಜೀವನ ಏನಾಗಲಿದೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ ವಿಪಕ್ಷಗಳಿಗೂ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಿದ್ದು, ಸರ್ಕಾರದ ಮೇಲೆ ಪ್ರಹಾರ ಮಾಡಲಿದೆ. ಆದ್ರೆ ಇಂಥಾ ಸಮಯದಲ್ಲಿ ಸಾಹುಕಾರ್‌ಗೆ ರಾಜಕೀಯ ಸಂಕಷ್ಟಗಳಷ್ಟೇ ಅಲ್ಲ. ಇನ್ನೂ ಹಲವು ಕಂಟಗಳೂ ಎದುರಾಗಬಹುದು.
ಸಾಹುಕಾರ್ ವಿರುದ್ಧ FIR?
ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪವಿದೆ. ಜಾರಕಿಹೊಳಿ ಮೇಲೆ ಈಗ ಕಾನೂನಿನ ತೂಗುಗತ್ತಿ ನೇತಾಡ್ತಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈಗಾಗ್ಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ ಇದುವರೆಗೂ ಆ ಸಂತ್ರಸ್ತೆ ಯುವತಿ ದೂರು ನೀಡಿಲ್ಲ. ಪೊಲೀಸರು ಸಂತ್ರಸ್ತೆಯ ವಿಚಾರಣೆ ನಡೆಸಬಹುದು. ಅತ್ಯಾಚಾರ ಎಂದು ಹೇಳಿಕೆ ನೀಡಿದರೆ ಸಚಿವ ರಮೇಶ್ ವಿರುದ್ಧ ಎಫ್‌ಐಆರ್ ದಾಖಲಿಸಬಹುದು.
ಆಗ ರಮೇಶ್ ಜಾರಕಿಹೊಳಿ ಬಂಧನದ ಭೀತಿ ಎದುರಿಸಬೇಕಾಗುತ್ತೆ. ತನಿಖೆ ವೇಳೆ ಈ ವಿಡಿಯೋ ಮಾಡಿದ್ದು ಯಾರು? ಯಾವ ಉದ್ದೇಶದಿಂದ ವಿಡಿಯೋ ಮಾಡಲಾಗಿತ್ತು? ಲೈಂಗಿಕ ದೌರ್ಜನ್ಯ ನಡೆದಿದ್ದು ಎಲ್ಲಿ, ಸಂಪರ್ಕ ಹೇಗೆ? ಅದು ಬಲಾತ್ಕಾರವೇ ಅಥವಾ ಒಪ್ಪಿತ ಲೈಂಗಿಕ ಕ್ರಿಯೆಯೇ? ಇವೆಲ್ಲದ್ರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.
ಇನ್ನು ರಾಸಲೀಲೆಯ ವಿಡಿಯೋ ಹೊರ ಬಂದಿರೋದ್ರಿಂದ ಇದು ಪೂರ್ವಯೋಜಿತವೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಬಳಿಕವಷ್ಟೇ ಘಟನೆ ಹಿಂದಿರುವ ನಿಜವಾದ ಸತ್ಯ ಅನಾವರಣವಾಗಲಿದೆ. ಹೀಗಾಗಿ ಈ ಕೇಸ್ ಮುಂದೆ ಹಲವು ತಿರುವುಗಳನ್ನು ಪಡೆಯುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಮಹಿಳೆಯ ಹೇಳಿಕೆ ಪಡೆದು ಆಕೆಯನ್ನು ವಿಚಾರಣೆಗೆ ಒಳಪಡಿಸಿದ ನಂತರವಷ್ಟೇ ತನಿಖೆಯ ದಿಕ್ಕು ಸ್ಪಷ್ಟವಾಗಲಿದೆ. ಹೀಗಾಗಿ ಸಂಕಷ್ಟ ಮೈಮೇಲೆ ಎಳೆದುಕೊಂಡ ಸಾಹುಕಾರ್ ಮುಂದಿನ ಹಾದಿ ಬರೀ ಮುಳ್ಳು, ಮುಳ್ಳು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ‘ಸಾಹುಕಾರ್’?
ಇದೊಂದೇ ಒಂದು ಪ್ರಶ್ನೆ ಈಗ ಇಡೀ ರಾಜ್ಯವನ್ನೇ ಕಾಡ್ತಿದೆ. ಯಾವಾಗ ಜಲಸಂಪನ್ಮೂಲ ಸಚಿವರ ಕಾಮಕಾಂಡ ಜಗಜ್ಜಾಹೀರಾಯ್ತೋ, ಸಾಹುಕಾರ್ ಮಂತ್ರಿ ಕುರ್ಚಿ ಈಗ ಒಂದೇ ಸಮನೆ ಗಡ ಗಡ ಅಲ್ಲಾಡ್ತಿದೆ. ತಮ್ಮ ರಾಸಲೀಲೆ ಈಗ ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯಕ್ಕೇ ದೊಡ್ಡ ಕುತ್ತಾಗಿಬಿಟ್ಟಿದೆ.
ಹಾಗಿದ್ರೆ ಸಿಡಿ ಬಾಂಬ್ ಸ್ಫೋಟದಿಂದ ಕಂಗಾಲಾದ ಸಾಹುಕಾರ್ ಮುಂದಿನ ನಡೆಯೇನಿರಬಹುದು? ರಾಜ್ಯ ಯರಾಜಕೀಯದಲ್ಲಿ ಸಾಹುಕಾರ್ ಸಿಡಿಯಿಂದ ಸೃಷ್ಟಿಯಾದ ಸಂಚಲನವೇನು?
ರಾಜೀನಾಮೆ ನೀಡ್ತಾರಾ ರಮೇಶ್?
ಪಕ್ಷಕ್ಕೆ ಮುಜುಗರ ತಪ್ಪಿಸಲು ಸ್ವತ: ರಮೇಶ್ ಜಾರಕಿಹೊಳಿಯೇ ರಾಜೀನಾಮೆ ನೀಡಬಹುದು. ಇಲ್ಲವಾದಲ್ಲಿ ರಮೇಶ್ಗೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಬಹುದು. ರಾಜೀನಾಮೆ ಪಡೆಯಲು ಪಕ್ಷದ ನಾಯಕರು ಕೂಡ ಸಿಎಂಗೆ ಒತ್ತಡ ಹಾಕಬಹುದು. ರಮೇಶ್, ಬಿಜೆಪಿ, ಸಿಎಂ ಮೇಲೆ ಈಗಾಗ್ಲೇ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರಕರಣದ ಕುರಿತು ಬಿಜೆಪಿ ಹೈಕಮಾಂಡ್ ಕೂಡ ಮಾಹಿತಿ ಕೇಳಬಹುದು. ರಾಜ್ಯ ಬಿಜೆಪಿ ಘಟಕ ಅಥವಾ ಸಿಎಂಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲು ಸೂಚಿಸಬಹುದು.
ವಿಪಕ್ಷಗಳಿಗೆ ಬ್ರಹ್ಮಾಸ್ತ್ರ.. ಸಿಎಂ ಮೇಲೆ ಒತ್ತಡ!
ಇನ್ನೇನು ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುನ್ನ ಸಚಿವ ಜಾರಕಿಹೊಳಿಯ ಈ ರಾಸಲೀಲೆ ಕೇಸ್ ಬಯಲಾಗಿರೋದು ಸರ್ಕಾರ ಮತ್ತು ಮುಖ್ಯಮಂತ್ರಿಯನ್ನ ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಅತ್ತ, ವಿಪಕ್ಷಗಳ ಪಾಲಿಗೆ ಅಧಿವೇಶನದಲ್ಲಿ ಅಬ್ಬರಿಸೋಕೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.
ವಿಪಕ್ಷಗಳಿಗೆ ‘ಸಿಡಿ’ ಅಸ್ತ್ರ
ರಮೇಶ್ ರಾಸಲೀಲೆ ಬಗ್ಗೆ ಅಧಿವೇಶನದಲ್ಲಿ ವಿಪಕ್ಷಗಳು ದೊಡ್ಡ ಮಟ್ಟದಲ್ಲಿ ಪ್ರಸ್ತಾಪಿಸೋ ಸಾಧ್ಯತೆ ಇದೆ. ಮೇಟಿ ಪ್ರಕರಣದಲ್ಲಿ ಕಾಂಗ್ರೆಸ್ ರಾಜೀನಾಮೆ ತೆಗೆದುಕೊಂಡಿತ್ತು. ಹೀಗಾಗಿ ರಮೇಶ್ ಕೇಸ್ನಲ್ಲಿ ರಾಜೀನಾಮೆಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಡ ಹೇರಬಹುದು. ಇನ್ನು ಅಧಿವೇಶನಕ್ಕೂ ಮುನ್ನ ರಾಜೀನಾಮೆ ಪಡೆಯದೇ ಇದ್ರೆ ಸಿಎಂ ಬಿಎಸ್ವೈಗೆ ಅಧಿವೇಶನದಲ್ಲಿ ಉತ್ತರ ಕೊಡೋದು ಕಷ್ಟವಾಗುತ್ತೆ. ಹೀಗಾಗಿ ಅನಿವಾರ್ಯವಾಗಿ ರಮೇಶ್ರಿಂದ ರಾಜೀನಾಮೆ ಪಡೆಯಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಾಹುಕಾರ್‌ಗೆ ‘ರಾಸಲೀಲೆ’ ಸಂಕಷ್ಟ
ಅಧಿವೇಶನದ ಮೊದಲ 2 ದಿನ ರಮೇಶ್ ವಿಚಾರಕ್ಕೆ ಬಲಿಯಾಗಬಹುದು. ಸಾಹುಕಾರ್ ಬಗ್ಗೆ ಕೆಲ ಬಿಜೆಪಿ ನಾಯಕರಿಗೆ ಅಸಮಾಧಾನವೂ ಇದೆ. ರಮೇಶ್ ಬಿಜೆಪಿ ಪ್ರಭಾವಿ ನಾಯಕರಾಗಿ ಬೆಳೆಯೋ ಸಾಧ್ಯತೆ ಇತ್ತು. ಹೈಕಮಾಂಡ್ ಜೊತೆ ರಮೇಶ್ ಉತ್ತಮ ಸಂಪರ್ಕ ಹೊಂದಿದ್ರು. ಈಗ ರಮೇಶ್ರನ್ನ ಹಣಿಯಲು ಬಿಜೆಪಿಯ ಕೆಲ ನಾಯಕರಿಗೆ ಅವಕಾಶ ಸಿಕ್ಕಂತಾಗಿದೆ. ಕಾಮಕಾಂಡದ ಕೇಸ್ ಇಟ್ಕೊಂಡು ರಮೇಶ್ರನ್ನ ಸೈಡ್ಲೈನ್ ಮಾಡೋ ಸಾಧ್ಯತೆ ಇದೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಯಾವುದೇ ಕೆಲಸಕ್ಕೆ ಬಾರದವನಾಗುತ್ತೇನೆ :ಟಿವಿ9ಗೆ ರಮೇಶ್ ಜಾರಕಿಹೊಳಿ ಫಸ್ಟ್ ರಿಯಾಕ್ಷನ್
Published On - 7:21 am, Wed, 3 March 21