ಕಲಬುರಗಿ: ರಾಜ್ಯದಲ್ಲಿ ವರುಣದೇವ (Karnataka Rain) ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಬರಗಾಲದ ಕಾರ್ಮೋಡ ಕರಗಿ ಇದೀಗ ಪ್ರವಾಹದ ಆತಂಕ ಆರಂಭವಾಗಿದೆ. ಆದರೆ ಅಬ್ಬರ ಮಳೆಯಿಂದ (Rain) ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದಡೆ ಭಾರಿ ಮಳೆ ಸರ್ಕಾರಿ ಶಾಲೆಗಳ (Government School) ದುಸ್ಥಿತಿಯನ್ನು ಅನಾವರಣ ಮಾಡಿದೆ. ಅನೇಕ ಕಡೆ ಸರ್ಕಾರಿ ಶಾಲೆಯ ಕೊಠಡಿಗಳು ಸೋರುತ್ತಿದ್ದರೇ, ಕೆಲವಡೇ ಮೇಲ್ಛಾವಣಿಯ ಸಿಮೆಂಟ್ ಉದುರಿ ಬೀಳುತ್ತಿದೆ. ಇದರಿಂದ ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲವನ್ನು ಮಕ್ಕಳು ಆನಂದಿಸುತ್ತಾರೆ. ಆದರೆ ಇದೀಗ ಕಲಬುರಗಿ ಜಿಲ್ಲೆಯಲ್ಲಿ ಮಳೆಗಾಲ ಮಕ್ಕಳಿಗೆ ಸಂಕಷ್ಟವನ್ನು ತಂದಿಟ್ಟಿದೆ. ಇದಕ್ಕೆ ಕಾರಣ ಶಾಲೆಯ ಕೊಠಡಿಗಳು ಸೋರುತ್ತಿರುವುದು. ಹೌದು ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಕೊಠಡಿಗಳು ಸೋರುತ್ತಿವೆ. ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದರೆ ಭಾರಿ ಮಳೆಗೆ ಮಕ್ಕಳು ಶಾಲೆಯಲ್ಲಿ ಪರದಾಡಿದ್ದಾರೆ. ಒಂದಡೆ ಕೊಠಡಿಗಳು ಸೋರಿದರೆ ಇನ್ನೊಂದಡೆ ಮಳೆ ನೀರು ಶಾಲೆಯ ಕೋಣೆಗಳಿಗೆ ನುಗ್ಗಿದ್ದರಿಂದ ಮಕ್ಕಳು ಮಳೆ ನೀರಲ್ಲಿಯೇ ಪಾಠ ಕೇಳಿದ್ದಾರೆ.
ಇದನ್ನೂ ಓದಿ: Kalaburagi News: ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಮಳೆ: ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳ ಸಭೆ
ಇನ್ನು ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 180 ಮಕ್ಕಳು ಓದುತ್ತಿದ್ದಾರೆ. ಹದಿನಾರು ಕೊಠಡಿಗಳು ಇವೆ. ಪಾಠ ಮಾಡಲು ಉತ್ತಮ ಶಿಕ್ಷಕರು ಇದ್ದಾರೆ. ಮಕ್ಕಳ ಸಂಖ್ಯೆ ಕೂಡಾ ಹೆಚ್ಚಾಗಿದೆ. ಆದರೆ ಶಾಲೆಗೆ ಬರಲು ಮಕ್ಕಳಿಗೆ ಭಯ ಕಾಡುತ್ತಿದೆ. ಇರುವ ಹದಿನಾರು ಕೊಠಡಿಗಳ ಪೈಕಿ ಮೂರು ಕೊಠಡಿಗಳು ಮಾತ್ರ ಚೆನ್ನಾಗಿದ್ದು, ಉಳಿದ ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿವೆ. ಇನ್ನು ಅನೇಕ ಕೊಠಡಿಗಳು ಸೋರುತ್ತಿವೆ. ಪ್ರತಿವರ್ಷ ಮಳೆಗಾಲ ಬಂದಾಗ ಮಕ್ಕಳು ಮಳೆಯಲ್ಲಿಯೇ ಕೂತು ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಲ ಭಾರಿ ಮಳೆಬಂದಾಗ, ಮಕ್ಕಳ ಪುಸ್ತಕಗಳು ಕೂಡ ಮಳೆ ನೀರಿನಿಂದ ಹಾಳಾಗಿ ಹೋಗಿವೆಯಂತೆ.
ಘತ್ತರಗಿ, ಕಡಗಂಚಿ ಗ್ರಾಮದಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಬಹುತೇಕ ಕಡೆ ಸರ್ಕಾರಿ ಶಾಲೆಯ ಕೊಠಡಿಗಳು ಸೋರುತ್ತಿವೆ. ಮಳೆಗಾಲದಲ್ಲಿ ಪ್ರತಿ ವರ್ಷ ಮಕ್ಕಳು ಮಳೆ ನೀರಲ್ಲಿಯೇ ಪಾಠ ಕೇಳಿದರೇ, ಶಿಕ್ಷಕರು ಅನಿವಾರ್ಯವಾಗಿ ಮಳೆ ನೀರಲ್ಲಿಯೇ ಪಾಠ ಮಾಡುತ್ತಿದ್ದಾರೆ.
ಇನ್ನು ಕೆಲವಡೇ ಮಳೆ ಬಂದಾಗ ಕೊಠಡಿಗಳು ಸೋರುತ್ತಿದ್ದರೆ, ಇನ್ನು ಕೆಲವಡೇ ಕೊಠಡಿಗಳ ಮೇಲ್ಛಾವಣಿ ಸಿಮೆಂಟ್ ಯಾವಾಗ ಕುಸಿದು ಬೀಳುತ್ತೋ ಅನ್ನೋ ಆತಂಕ ಮಕ್ಕಳನ್ನು ಕಾಡುತ್ತಿದೆ. ಕೆಲವಡೇ ಮಕ್ಕಳ ಮೇಲೆ ಸಿಮೆಂಟ್ ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಕೂಡ ಜಿಲ್ಲೆಯಲ್ಲಿ ಇವೆ. ಜೇವರ್ಗಿ ತಾಲೂಕಿನ ವಸ್ತಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮೇಲ್ಛಾವಣಿ ಸಿಮೆಂಟ್ ಕುಸಿದು ಬಿದ್ದಿದೆ. ಕೊಠಡಿ ಸೋರುತ್ತಿದ್ದರಿಂದ ಶಿಕ್ಷಕರು ಮಕ್ಕಳನ್ನು ಕಾರಾಡಾರ್ನಲ್ಲಿ ಕೂರಿಸಿದ್ದರು. ಹೀಗಾಗಿ ಸಂಭವನೀಯ ಅಪಾಯವೊಂದು ತಪ್ಪಿದೆ.
ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಎಂಟು ಕೊಠಡಿಗಳಿವೆ. ಆದರೆ ಅದರಲ್ಲಿ ನಾಲ್ಕು ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿವೆ. ಅನೇಕ ಕಡೆ ಬಿರುಕು ಬಿಟ್ಟಿದ್ದು, ಮೇಲ್ಛಾವಣಿ ಕುಸಿದು ಬೀಳುವ ಆತಂಕ ಕಾಡುತ್ತಿದೆ. ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಮಕ್ಕಳು ಕೊಠಡಿಯಲ್ಲಿದ್ದಾಗಲೇ ಕೆಲವು ಸಲ, ಕೊಠಡಿಯ ಮೇಲ್ಛಾವಣಿಯ ಸಿಮೆಂಟ್ ಉದುರಿ ಮಕ್ಕಳ ಮೇಲೆ ಬಿದ್ದಿರುವ ಘಟನೆಗಳು ಕೂಡ ನಡೆದಿವೆ.
ಕೊಠಡಿಗಳು ಸೋರುವುದು, ಬೀಳುವ ಆತಂಕ ಇರೋದು ಕೇವಲ ಎರಡು ಗ್ರಾಮಗಳಲ್ಲಿ ಮಾತ್ರವಲ್ಲ. ಜಿಲ್ಲೆಯ ಬಹುತೇಕ ಕಡೆ ಇದೇ ಸ್ಥಿತಿಯಿದೆ. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ವರಗೆ ಸರ್ಕಾರಿ ಮತ್ತು ಅನುಧಾನಿತ ಶಾಲೆಯಲ್ಲಿ ಐದುವರೆ ಲಕ್ಷ ಮಕ್ಕಳು ಓದುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಸದ್ಯ 1200 ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಸ್ವತಃ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮತ್ತು ಸೋರುತ್ತಿರುವ ಶಾಲೆಗಳ ದುರಸ್ಥಿಗೆ ಸರ್ಕಾರ ಮನಸು ಮಾಡುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳು ಆತಂಕದಲ್ಲಿಯೇ ಪಾಠ ಕೇಳುತ್ತಿದ್ದಾರೆ.
ಇನ್ನು ಕೇವಲ ನಾಲ್ಕೈದು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಅನೇಕ ಶಾಲೆಯ ಕೊಠಡಿಗಳು ಕೂಡಾ ಸೋರುತ್ತಿವೆ. ಕೆಲವೆಡೆ ಬೀಳುವ ಹಂತಕ್ಕೆ ತಲುಪಿವೆ. ಇದಕ್ಕೆ ಕಾರಣ ಕಳಪೆ ಕಾಮಗಾರಿ. ಹೌದು ಗುತ್ತಿಗೆ ಪಡೆದವರು ಮತ್ತು ಅಧಿಕಾರಿಗಳು ಶಾಮೀಲಾಗಿ, ಕಳಪೆ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಕೆಲವೇ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕೊಠಡಿಗಳು ಕೂಡಾ ಸೋರುತ್ತಿವೆ. ಸರ್ಕಾರಿ ಶಾಲೆಯ ಕೊಠಡಿಗಳ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿದರೆ ದೊಡ್ಡ ಭ್ರಷ್ಟಾಚಾರವೇ ಹೊರಬರುತ್ತೆ ಅಂತಾರೆ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು.
ಜಿಲ್ಲೆಯಲ್ಲಿ ಅನೇಕ ಕಡೆ ಶಾಲಾ ಕೊಠಡಿಗಳು ಸೋರುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಸ್ವತಃ ನಾನು ಕೂಡಾ ನಿನ್ನೆ (ಜು.27) ಘತ್ತರಗಿ ಶಾಲೆಗೆ ಬೇಟಿ ನೀಡಿ ಬಂದಿದ್ದೇನೆ. ಸದ್ಯ ಸೋರುತ್ತಿರುವ ಕೋಣೆಯಲ್ಲಿ ಮಕ್ಕಳನ್ನು ಕೂರಿಸದೆ ಚೆನ್ನಾಗಿರುವ ಕೊಠಡಿಗಳಲ್ಲಿ ಮತ್ತು ಬೇರೆ ಕಡೆ ಚೆನ್ನಾಗಿರುವ ಸ್ಥಳದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲು ಶಿಕ್ಷಕರಿಗೆ ಸೂಚನೆ ನೀಡಿದ್ದೇನೆ ಎಂದು ಕಲಬುರಗಿ ಡಿಡಿಪಿಐ ಸಕ್ರೆಪ್ಪಗೌಡ ಹೇಳಿದ್ದಾರೆ.
ಇನ್ನು ತಾವು ಜೀವ ಭಯದಲ್ಲಿಯೇ ಪಾಠ ಕೇಳುತ್ತಿದ್ದೇವೆ. ಒಂದಡೆ ಮಳೆ ನೀರು ಮತ್ತೊಂದಡೆ ಮೇಲ್ಛಾವಣಿ ಸಿಮೆಂಟ್ ಉದುರಿ ಬೀಳೋ ಭಯ ಕಾಡುತ್ತಿದೆ. ಹೀಗಾಗಿ ಹೊಸ ಕೊಠಡಿ ನಿರ್ಮಾಣ ಮಾಡಿಕೊಡಬೇಕು. ಮಳೆಯಿಂದ ನಮ್ಮ ಪುಸ್ತಕಗಳು ಹಾಳಾಗುತ್ತಿವೆ ಎಂದು ವಿದ್ಯಾರ್ಥಿನಿ ಸರೋಜಾಳ ಆಗ್ರಹಿಸುತ್ತಿದ್ದಾರೆ.
ಬಾರಿ ಮಳೆ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ತೋರಿಸಿದೆ. ಇನ್ನಾದರು ಸರ್ಕಾರ ಕೊಠಡಿಗಳ ದುರಸ್ಥಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕಿದೆ. ಜೊತೆಗೆ ಕಳಪೆ ಗುಣಮಟ್ಟದ ಕೊಠಡಿಗಳ ನಿರ್ಮಾಣ ಮಾಡಿರುವವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಬೇಕಿದೆ.
ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದ ಅನೇಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಹತ್ತಾರು ಭಾಗ್ಯಗಳನ್ನು ನೀಡ್ತಿರುವ ಸರ್ಕಾರ, ಮಕ್ಕಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಶಾಲೆಗಳ ದುರಸ್ಥಿ ಮತ್ತು ಹೊಸ ಕೊಠಡಿಗಳ ನಿರ್ಮಾಣ ಭಾಗ್ಯವನ್ನು ಕೂಡಾ ನೀಡಬೇಕಿದೆ. ಆ ಮೂಲಕ ಮಕ್ಕಳು ಭಯಮುಕ್ತ, ಆತಂಕಮುಕ್ತವಾಗಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 am, Fri, 28 July 23