ಕಲಬುರಗಿ: ಕಲುಷಿತ ಆಹಾರ (Food Poisoning) ಸೇವಿಸಿ 21 ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ (Aland) ನಡೆದಿದೆ. ಅಸ್ವಸ್ಥರು ವಿಜಯಪುರ (Vijayapura) ಜಿಲ್ಲೆಯ ಚಡಚಣದ (Chadchan) ಡೋಣಿ ನಿವಾಸಿಗಳು ಎಂದು ತಿಳಿದುಬಂದಿದೆ. ಡೋಣಿ ನಿವಾಸಿಗಳು ನಿನ್ನೆ (ಜೂನ್.01) ರಂದು ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು ಬಂದಿದ್ದರು. ಊಟ ಸೇವಿಸಿದ್ದ ಬಳಿಕ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಿಗೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರು: ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಮೃತಪಟ್ಟ ಘಟನೆ ನಡೆದಿತ್ತು. ಈ ಸಂಬಂಧ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿತ್ತು. ಆದ್ರೆ ಈಗ ರೇಕಲಮರಡಿ ಗ್ರಾಮದ ಬಳಿಕ ಮತ್ತೊಂದು ಗ್ರಾಮದಲ್ಲಿ ಕಲುಷಿತ ನೀರು ಕುಡಿದು 20 ಕ್ಕು ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ಗ್ರಾಮದಲ್ಲಿ ಒಂದು ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಕಲುಷಿತ ನೀರಿನಿಂದಾಗಿ ಜನ ಜೀವದ ಜೊತೆ ಹೋರಾಡುವಂತಹ ಪರಿಸ್ಥಿತಿಯಲ್ಲಿದ್ದರು.
ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 25 ಜನ ಅಸ್ವಸ್ಥಗೊಂಡಿದ್ದು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಜನ ಬಳಲುತ್ತಿದ್ದರು. ಈ ಪೈಕಿ ಮೂವರಿಗೆ ಲಿಂಗಸುಗೂರು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮತ್ತೆ ಕೆಲವರಿಗೆ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಊರಿಗೆ ಸರಬರಾಜು ಆಗುತ್ತಿರುವ ನೀರಿನಿಂದ ಈ ಸಮಸ್ಯೆ ಉಂಟಾಗಿರುವ ಶಂಕೆ ವ್ಯಕ್ತವಾಗಿದ್ದು ಸದ್ಯ ಗೊರೆಬಾಳ ಗ್ರಾಮದಲ್ಲೇ ವೈದ್ಯರ ತಂಡ ಠಿಕಾಣಿ ಹೂಡಿತ್ತು. ಈಗಾಗಲೇ ಗ್ರಾಮದ ನೀರಿನ ಸ್ಯಾಂಪಲ್ಸ್ ಪಡೆದು ವೈದ್ಯರು ಪರೀಕ್ಷೆಗೆ ಕಳುಹಿಸಿದ್ದರು.
ಇದನ್ನೂ ಓದಿ: ಆರತಕ್ಷತೆ ಸಮಾರಂಭದಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಮೇ.26 ರಂದು ಬೆಳಗ್ಗೆ ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 30 ಜನ ಅಸ್ವಸ್ಥರಾದ ಘಟನೆ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿತ್ತು. ಹನುಮೇಶ್(5) ಮೃತ ಬಾಲಕ. ಇನ್ನು ಅಸ್ವಸ್ಥರಾದವರಿಗೆ ಸಿರವಾರ, ದೇವದುರ್ಗ, ಅರಕೇರಾ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ಈ ಘಟನೆಗೆ ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ಆರೋಪ ಕೇಳಿಬಂದಿದೆ. ಅಲ್ಲದೇ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿತ್ತು.
ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಬೀಡು ಬಿಟ್ಟಿದ್ದು, ಮಕ್ಕಳು, ವೃದ್ಧರು ಮೇಲೆ ನಿಗಾ ಇರಿಸಿದ್ದರು. ರೋಗದ ಲಕ್ಷಣಗಳಿರುವವರಿಗೆ ಗ್ಲುಕೋಸ್ ಜೊತೆ, ಔಷಧಿ ನೀಡುತ್ತಿದ್ದರು. ಇನ್ನು ಘಟನಾ ಸ್ಥಳಕ್ಕೆ ದೇವದುರ್ಗ ಕ್ಷೇತ್ರದ ಜೆಡಿಸ್ ಶಾಸಕಿ ಕರಿಯಮ್ಮ ನಾಯಕ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಇದೆ ವೇಳೆ ಮೃತ ಬಾಲಕ ಹನುಮೇಶ್ ಕುಟುಂಬಸ್ಥರಿಗೆ ಶಾಸಕಿ ಕರಿಯಮ್ಮ ನಾಯಕ್ ಸಾಂತ್ವಾನ ಹೇಳಿದ್ದರು.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶಾಸಕಿ ಕರಿಯಮ್ಮ ನಾಯಕ್ ಅಧಿಕಾರಿಗಳ ಜೊತೆ ಚರ್ಚಿಸಿ ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತೆ. ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಓ ಅವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Fri, 2 June 23