Haveri News: ಆರತಕ್ಷತೆ ಸಮಾರಂಭದಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಆರತಕ್ಷತೆ ಸಮಾರಂಭದಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಪ್ಪದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾವೇರಿ: ಆರತಕ್ಷತೆ ಸಮಾರಂಭದಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ರಟ್ಟಿಹಳ್ಳಿ(Rattihalli) ತಾಲೂಕಿನ ಚಪ್ಪದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೊನ್ನೆ(ಮೇ.22) ರಾತ್ರಿ ನಡೆದ ಚಪ್ಪದಹಳ್ಳಿಯ ಶಂಕರಪ್ಪ ಹಿತ್ತಲಮನಿ ಎಂಬುವರ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದರು. ನಿನ್ನೆ(ಮೇ.23) ರಾತ್ರಿಯಿಂದ 50ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಶುರುವಾಗಿದೆ. ಇನ್ನು ಕೂಡಲೇ ಅಸ್ವಸ್ಥಗೊಂಡವರಿಗೆ ರಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಾನ್ನ ಸೇವಿಸಿದ್ದ 9 ವಿದ್ಯಾರ್ಥಿಗಳು ಅಸ್ವಸ್ಥ
ಕೋಲಾರ: ಇನ್ನು ಇಂತಹ ಘಟನೆಗಳು ಇದೆ ಮೊದಲಲ್ಲ ಇದೇ ಪೆಬ್ರುವರಿ 17 ರಂದು ಹಾಸ್ಟೆಲ್‌ನಲ್ಲಿ ಚಿತ್ರಾನ್ನ ಸೇವಿಸಿದ್ದ 9 ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಆಗಿ, ಹೊಟ್ಟೆನೋವು ಹಾಗೂ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಅಸ್ವಸ್ಥಗೊಂಡವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೌದು ಇಲ್ಲಿನ ದರ್ಗಾ ಮೊಹಲ್ಲಾ ಮೌಲನಾ ಆಜಾದ್ ವಸತಿ ನಿಲಯದಲ್ಲಿ ಮಧ್ಯಾಹ್ನದ ಊಟ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡಿದ್ದರು. ವಸತಿ ನಿಲಯದಲ್ಲಿ ಮಧ್ಯಾಹ್ನದ ಭೋಜನಕ್ಕೆ ಚಿತ್ರಾನ್ನವನ್ನು ಮಾಡಲಾಗಿದ್ದು, ಇದನ್ನು ಸೇವಿಸಿರುವ 9 ಮಕ್ಕಳಿಗೆ ವಾಂತಿ, ಭೇದಿಯಾಗಿತ್ತು. 1Oನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡುತ್ತಿದ್ದಂತೆ ಹೊಟ್ಟೆ ನೋವು ಆರಂಭವಾಗಿ, ಬಹಳವೇ ಸುಸ್ತಾಗಿದ್ದರು. ಬಳಿಕ ಒಬ್ಬೊಬ್ಬರಿಗೇ ವಾಂತಿ-ಭೇದಿ ಶುರುವಾಗಿದೆ. ಅಸ್ವಸ್ಥಗೊಂಡವರನ್ನು ಕೂಡಲೇ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ:Tamil Nadu: ತಮಿಳುನಾಡಿನಲ್ಲಿ ನಕಲಿ ಮದ್ಯ ಸೇವಿಸಿ 10 ಮಂದಿ ಸಾವು, ಹಲವರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಶಿವಮೊಗ್ಗದಲ್ಲಿ ಮೂರು ಮೊರಾರ್ಜಿ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥ; 60ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಹೌದು ಜನವರಿ 17 ರಂದು ತಾಲೂಕಿನ ಮೂರು ಮೊರಾರ್ಜಿ ಶಾಲೆಗಳ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಇದು ಆಹಾರ ಪೂರೈಕೆ ಸಮಸ್ಯೆಯೇ ಎಂಬ ಅನುಮಾನವೂ ಮೂಡಿತ್ತು. ಹನಸವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಭೋಜನ ಸೇವಿಸಿ ಅಸ್ವಸ್ಥಗೊಂಡಿದ್ದ 63 ಮಕ್ಕಳನ್ನು ಅಂದು ರಾತ್ರಿಯೇ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇವರೆಲ್ಲರೂ ಗುಣಮುಖರಾದ ಹಿನ್ನೆಲೆಯಲ್ಲಿ ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಗಾಜನೂರಿನ 20, ಮಲವಗೊಪ್ಪದ 30 ಹಾಗೂ ಹೊಳಲೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ಮಕ್ಕಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಒಟ್ಟು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದರು ಎಂಬ ಮಾಹಿತಿ ಬಂದಿತ್ತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ