ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾದ ಇನ್ಸ್​​ಪೆಕ್ಟರ್​ ಶ್ರೀಮಂತ್ ಇಲ್ಲಾಳ್ ಅವರು ನಿವೃತ್ತ ಯೋಧರಾಗಿದ್ದರು!

| Updated By: ಸಾಧು ಶ್ರೀನಾಥ್​

Updated on: Sep 28, 2022 | 5:47 PM

ನಮ್ಮ ತಂದೆ ಶ್ರೀಮಂತ್ ಇಲ್ಲಾಳ್ ಶಿಸ್ತಿನ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸವಾಗಲಿ ಎಷ್ಟೇ ಕಷ್ಟ ಬಂದರೂ ಮಾಡಿಮುಗಿಸುತ್ತಿದ್ದರು. ಸೇನೆಯಲ್ಲಿ ಇದ್ದಿದ್ದರಿಂದ ಸದಾ ಶಿಸ್ತಿನ ಶಿಪಾಯಿ. ಕರ್ತವ್ಯದಲ್ಲಿದ್ದಾಗಲೇ ಹಲ್ಲೆಯಾಗಿದ್ದು ದುರ್ದೈವದ ಸಂಗತಿ- ಶ್ರೀಮಂತ್ ಇಲ್ಲಾಳ್ ಪುತ್ರ ಕಿರಣ್

ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾದ ಇನ್ಸ್​​ಪೆಕ್ಟರ್​ ಶ್ರೀಮಂತ್ ಇಲ್ಲಾಳ್ ಅವರು ನಿವೃತ್ತ ಯೋಧರಾಗಿದ್ದರು!
ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾದ ಇನ್ಸ್​​ಪೆಕ್ಟರ್​ ಶ್ರೀಮಂತ್ ಇಲ್ಲಾಳ್ ಅವರು ನಿವೃತ್ತ ಯೋಧರಾಗಿದ್ದವರು!
Follow us on

ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಸರ್ಕಲ್ ಪೊಲೀಸ್ ಇನ್ಸ್​ಪೆಕ್ಟರ್ (ಸಿಪಿಐ)​ ಶ್ರೀಮಂತ್ ಇಲ್ಲಾಳ್ ಅವರು (Kalaburagi CPI Sreemanth Illal) ಈ ಹಿಂದೆ ನಿವೃತ್ತ ಯೋಧರಾಗಿದ್ದವರು! ಸೇನೆಯಿಂದ ನಿವೃತ್ತಿಯಾದ ಮೇಲೆ ಕೆಲ ಕಾಲ ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದ ಇಲ್ಲಾಳ್ ಅವರು ಪಿಎಸ್ಐ ಆಗಲೇಬೇಕು ಎಂಬ ಹಠದಿಂದ ಅಧ್ಯಯನ ಮಾಡಿ, ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರು. ಬಡತನದಲ್ಲಿ ಹುಟ್ಟಿಬೆಳೆದಿದ್ದ ಶ್ರೀಮಂತ್ ಇಲ್ಲಾಳ್, ಗಾಂಜಾ ಜಪ್ತಿ ಮಾಡಲು ಹೋದಾಗ, ಗಾಂಜಾ ದಂಧೆಕೋರರು ಹಲ್ಲೆ ಮಾಡಿದ್ದರಿಂದ ಇದೀಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಲ್ಲಾಳ್ ಆರೋಗ್ಯ ಚೇತರಿಕೆ ಕಾಣುತ್ತಿದೆ.

ಕರಾಳ ರಾತ್ರಿಯಲ್ಲಿ ನಡೆದ ಘಟನೆಯೇನು?

ಕಲಬುರಗಿ ಗ್ರಾಮಾಂತರ ಠಾಣೆಯ ಸಿಪಿಐ ಆಗಿರುವ ಶ್ರೀಮಂತ್ ಇಲ್ಲಾಳ್, ಇದೇ ಸೆಪ್ಟೆಂಬರ್ 21 ರಂದು ಕಲಬುರಗಿ ನಗರದ ಬಾಪು ನಗರದ ನವೀನ್ ಎಂಬುವ ಗಾಂಜಾ ಮಾರಾಟಗಾರನೊಬ್ಬನನ್ನು ಬಂಧಿಸಿದ್ದರು. ಅವನು ಕರ್ನಾಟಕ ಮತ್ತು ಮಹರಾಷ್ಟ್ರದ ಗಡಿಯಲ್ಲಿ ತಾನು ಗಾಂಜಾ ಬೆಳೆಯುತ್ತಿರುವ ಬಗ್ಗೆ (ganja -marijuana growers) ಮಾಹಿತಿ ನೀಡಿದ್ದ. ಆ ಖಚಿತ ಮಾಹಿತಿಯ ಮೇರೆಗೆ ಸೆಪ್ಟೆಂಬರ್ 23 ರಂದು ರಾತ್ರಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹೊನ್ನಳ್ಳಿ ಹೊರವಲಯದಲ್ಲಿ ಕೃಷಿ ಜಮೀನಿನಲ್ಲಿ ಗಾಂಜಾ ಜಫ್ತಿ ಮಾಡಲು ತಮ್ಮ ಸಿಬ್ಬಂದಿಯ ಜೊತೆ ಹೋಗಿದ್ದರು. ಗಾಂಜಾ ಜಫ್ತಿ ಮಾಡಲು ಹೋಗಿದ್ದ ಪ್ರದೇಶ ಕರ್ನಾಟಕ ಮತ್ತು ಮಹರಾಷ್ಟ್ರದ ಗಡಿಗೆ ಹೊಂದಿಕೊಂಡಿದೆ.

ಇನ್ನು ಗಾಂಜಾ ಬೆಳೆದವರು ಮಹರಾಷ್ಟ್ರದ ತೊರ್ಲವಾಡಿಯವರು. ಗಾಂಜಾ ಜಫ್ತಿ ಮಾಡಿಕೊಳ್ಳಲು ಹೋಗಿದ್ದ ಪೊಲೀಸರ ಮೇಲೆ ದಂಧೆಕೋರರು ಹಲ್ಲೆ ಮಾಡಿದ್ದರು. ಉಳಿದ ಸಿಬ್ಬಂದಿ ಅಲ್ಲಿಂದ ಪಾರಾದರೂ ಕೂಡಾ ಸಿಪಿಐ ಶ್ರೀಮಂತ್ ಇಲ್ಲಾಳ್, ದಂಧೆಕೋರರ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಶ್ರೀಮಂತ್ ಇಲ್ಲಾಳ್ ಅವರ ಮೇಲೆ 30ಕ್ಕೂ ಹೆಚ್ಚು ದಂಧೆಕೋರರು ಹಲ್ಲೆ ಮಾಡಿದ್ದರು. ನಂತರ ಅವರನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 26 ರಂದು ಕಲಬುರಗಿಯಿಂದ ಏರ್ ಲಿಫ್ಟ್​ ಮೂಲಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. (ವರದಿ -ಸಂಜಯ್ ಚಿಕ್ಕಮಠ)

ಬಡತನದಲ್ಲಿ ಹುಟ್ಟಿ ಬೆಳದಿದ್ದ ಶ್ರೀಮಂತ್ ಇಲ್ಲಾಳ್ ನಿವೃತ್ತ ಯೋಧ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲೆಂಗಟಿ ಅನ್ನೋ ಗ್ರಾಮದಲ್ಲಿ ಜನವರಿ 8, 1968 ರಲ್ಲಿ ಜನಿಸಿದ್ದ ಇಲ್ಲಾಳ್, ಕಡು ಬಡತನವನ್ನೆ ಹೊದ್ದುಕೊಂಡವರು. ಆರಂಭದಿಂದಲೂ ದೇಶ ಸೇವೆ ಮಾಡಬೇಕು ಅಂತಾ ಕನಸು ಕಂಡಿದ್ದ ಶ್ರೀಮಂತ್, 17 ನೆ ವಯಸ್ಸಿಗೆ ಮಿಲಿಟರಿ ಸೇರಿದ್ದವರು. ಮಿಲಟರಿಯಲ್ಲಿ ಸಿಗ್ನಲ್ ಮ್ಯಾನ್ ಆಗಿ 16 ವರ್ಷ ಕೆಲಸ ಮಾಡಿದ್ದಾರೆ. ದೇಶದ ಕಾರ್ಗಿಲ್ ಸೇರಿದಂತೆ ಅನೇಕ ಕಡೆ ಕೆಲಸ ಮಾಡಿರುವ ಶ್ರೀಮಂತ್ ಇಲ್ಲಾಳ್, ಶಿಸ್ತಿನ ಮನುಷ್ಯ ಜೊತೆಗೆ ದೇಶಾಭಿಮಾನ ಹೊಂದಿದವರು.

ಹಠ ಬಿಡದೇ, ಪೊಲೀಸ್​ ಅಧಿಕಾರಿಯಾಗುವ ಕನಸು ನನಸು ಮಾಡಿಕೊಂಡಿದ್ದ ಇಲ್ಲಾಳ್

ಇನ್ನು ಸೇನೆಯಿಂದ 2001 ರಲ್ಲಿ ನಿವೃತ್ತರಾದ ನಂತರ ಶ್ರೀಮಂತ್ ಇಲ್ಲಾಳ್, ಸರ್ಕಾರಿ ಬಸ್ ಕಂಡಕ್ಟರ್ ಆಗಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದ್ರೆ ಸೇನೆಯಲ್ಲಿ ಕೆಲಸ ಮಾಡಿದ್ದರಿಂದ ಪಿಎಸ್ಐ ಆಗಬೇಕು ಅನ್ನೋ ಕನಸು ಕಂಡಿದ್ದರು. ಅದಕ್ಕಾಗಿ ತಯಾರಿಯನ್ನು ಕೂಡಾ ಮಾಡಿಕೊಂಡಿದ್ದರು. 2005 ರಲ್ಲಿ ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದರು. ಇನ್ನು ಪಿಎಸ್ಐ ಪರೀಕ್ಷೆಯ ದೇಹದಾರ್ಢ್ಯತೆಯ ಪರೀಕ್ಷೆಯ ಹಿಂದಿನ ದಿನ, ಅವರು ಕೆಳಗೆಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರಂತೆ.

ಆದ್ರೆ ರಕ್ತ ಸೋರುತ್ತಿದ್ದರೂ ಕೂಡಾ ಚಿಕಿತ್ಸೆ ಪಡೆದು, ದೇಹದಾರ್ಢ್ಯತೆಯ ಪರೀಕ್ಷೆಯ ದಿನ ಓಡಿ, ಅದರಲ್ಲಿ ಪಾಸಾಗಿದ್ದ ಕೆಚ್ಚೆದೆಯ ಪ್ರತಾಪಿ. ಮುಂದೆ ಪರೀಕ್ಷೆ ಬರೆದು ಅದರಲ್ಲಿಯೂ ಕೂಡಾ ಪಾಸಾಗಿದ್ದರು. ಇದನ್ನು ನಮ್ಮ ತಂದೆ ಆಗಾಗ ನಮಗೆ ಹೇಳುತ್ತಿದ್ದರು ಎಂದು ತಂದೆಯ ಸಾಹಸದ ಬಗ್ಗೆ ಅವರ ಪುತ್ರ ಕಿರಣ್ ಹೇಳುತ್ತಾರೆ.

2005 ರ ಬ್ಯಾಚಿನ ಪಿಎಸ್ಐ ಆಗಿದ್ದ ಶ್ರೀಮಂತ್ ಇಲ್ಲಾಳ್ ಅವರು ಕಲಬುರಗಿ, ಬೀದರ್ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಸಿಪಿಐ ಆಗಿ ಬಡ್ತಿ ಸಹ ಪಡೆದಿದ್ದರು. ಕಳೆದ 9 ತಿಂಗಳಿಂದ ಕಲಬುರಗಿ ಗ್ರಾಮಾಂತರ ಠಾಣೆಯ ಸಿಪಿಐ ಆಗಿ ಕೆಲಸ ಮಾಡುತ್ತಿದ್ದರು. ಅಕ್ರಮಗಳನ್ನು ಮಟ್ಟಹಾಕಬೇಕು ಅಂತ ಕನಸು ಕಾಣುವ ಇಲ್ಲಾಳ್, ಗಾಂಜಾ ದಂಧೆಕೋರರು ಹೆಡಮುರಿ ಕಟ್ಟಲು ಹೋದಾಗ, ಅವರ ಮೇಲೆಯೇ ದುಷ್ಕರ್ಮಿಗಳು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ.

ನಮ್ಮ ತಂದೆ ಶಿಸ್ತಿನ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸವಾಗಲಿ, ಅದನ್ನು ಮಾಡಬೇಕು ಅಂತ ನಿರ್ಧಾರ ಮಾಡಿದರೆ ಎಷ್ಟೇ ಕಷ್ಟ ಬಂದರೂ ಮಾಡಿಮುಗಿಸುತ್ತಿದ್ದರು. ಸೇನೆಯಲ್ಲಿ ಇದ್ದಿದ್ದರಿಂದ ಅವರು ಸದಾ ಶಿಸ್ತಿನ ಶಿಪಾಯಿಯಾಗಿದ್ದವರು. ಕರ್ತವ್ಯದಲ್ಲಿದ್ದಾಗಲೇ ಅವರ ಮೇಲೆ ಹಲ್ಲೆಯಾಗಿದ್ದು ದುರ್ದೈವದ ಸಂಗತಿಯಾಗಿದೆ ಎಂದು ಶ್ರೀಮಂತ್ ಇಲ್ಲಾಳ್ ಪುತ್ರ ಕಿರಣ್ ಹೇಳುವಾಗ ಅಲ್ಲಿದ್ದವರು ಮಮ್ಮಲಮರುಗಿದ್ದು ಸುಳ್ಳಲ್ಲ.