ಕಲಬುರಗಿ, ಜೂನ್ 12: ಜೇವರ್ಗಿ ವಿಧಾನಸಭಾ ಕ್ಷೇತ್ರ (Jewargi Assembly Constituency) ವ್ಯಾಪ್ತಿಯ ಯಡ್ರಾಮಿ (Yadrami) ತಾಲೂಕಿನ ವರವಿ ಮತ್ತು ಕುಕನೂರು ಗ್ರಾಮದ ಜನರು ಹಲವು ದಶಕಗಳಿಂದ ವರವಿ ಹಳ್ಳವನ್ನು ದಾಟಿಕೊಂಡು ತಮ್ಮ ತಮ್ಮ ಜಮೀನುಗಳಿಗೆ ಹೋಗುತ್ತಿದ್ದರು. ಆದರೆ ಈ ಬಾರಿ ಸುರಿದ ಭಾರಿ ಮಳೆಯಿಂದ ಹಳ್ಳ (Brook) ಅಪಯಾದ ಮಟ್ಟ ಮೀರಿ ಹರಿಯುತ್ತಿದ್ದು, ಜನರು ಅನಿವಾರ್ಯವಾಗಿ ಹಗ್ಗದ ಸಹಾಯದಿಂದ ಹಳ್ಳ ದಾಟಿ ಜಮೀನುಗಳಿಗೆ ತೆರಳುತ್ತಿದ್ದಾರೆ. ಕೊಂಚ ಆಯ ತಪ್ಪಿದರೆ ಸಾವಿನ ಮನೆ ಸೇರಬೇಕಾಗುತ್ತದೆ.
ಯಡ್ರಾಮಿ ತಾಲೂಕಿನ ವರವಿ ಮತ್ತು ಕುಕನೂರು ಗ್ರಾಮಗಳ ಮಧ್ಯೆ ಹರಿಯುವ ಹಳ್ಳವೇ ಇಲ್ಲಿನ ಜನರಿಗೆ ರಸ್ತೆ ಸಂಪರ್ಕ. ಹಳ್ಳದಲ್ಲಿ ನೀರಿಲ್ಲದಿದ್ದಾಗ ಆರಮಾವಾಗಿ ಹಳ್ಳದಲ್ಲಿ ನಡೆದುಕೊಂಡು ಮತ್ತೊಂದು ಬದಿಯಲ್ಲಿರುವ ತಮ್ಮ ಜಮೀನುಗಳಿಗೆ ತೆರಳುತ್ತಾರೆ. ಆದರೆ, ಈ ಬಾರಿ ಮಳೆಗಾಲದಲ್ಲಿ ಭಾರಿ ಪ್ರಮಾಣದ ಮಳೆಯಾದ ಪರಿಣಾಮ ವರವಿ ಗ್ರಾಮದ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಳ್ಳದ ಆ ಬದಿಯಲ್ಲಿರುವ ಜಮೀನಿಗಳಿಗೆ ತೆರಳುವ ರೈತರು, ಎರಡು ಬದಿಗೆ ಹಗ್ಗ ಕಟ್ಟಿ ಹಗ್ಗದ ಸಹಾಯದಿಂದಲೇ ಹಳ್ಳ ದಾಟುತ್ತಿದ್ದಾರೆ. ಕೊಂಚ ಆಯ ತಪ್ಪಿದರೂ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ.
ಪ್ರತಿವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗ ವರವಿ ಗ್ರಾಮಸ್ಥರ ಪರದಾಟ ಅಷ್ಟಿಷ್ಟಲ್ಲ. ಸದ್ಯ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ 3-4 ದಿನಗಳಿಂದ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಆದರೆ ಅನಿವಾರ್ಯವಾಗಿ ರೈತರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಳ್ಳದಲ್ಲೆ ಹಗ್ಗದ ಸಹಾಯದಿಂದ ಜೀವ ಪಣಕಿಟ್ಟು ಹಳ್ಳ ದಾಟುತ್ತಿದ್ದಾರೆ. ಇನ್ನು ವರವಿ ಮತ್ತು ಕುಕನೂರು ಗ್ರಾಮಸ್ಥರು ಹಳ್ಳದಲ್ಲಿ ಸೇತುವೆ ನಿರ್ಮಿಸುವಂತೆ ಶಾಸಕ ಡಾ. ಅಜಯ್‌ಸಿಂಗ್ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಹಲವಾರು ವರ್ಷಗಳಿಂದ ಜನ ಇದೇ ಅಪಾಯಕಾರಿ ಹಳ್ಳ ದಾಟಿಕೊಂಡು ಜಮೀನುಗಳಿಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ: ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್ ಕೇರ್
ಈ ಬಗ್ಗೆ ಜಿಲ್ಲಾ ಪಂಚಾಯತಿ ಸಿಇಓ ಭಂವರ್‌ಸಿಂಗ್ ಮೀನಾ ಮಾತನಾಡಿ, ಅಲ್ಲಿ ಸಣ್ಣ ಸೇತುವೆ ನಿರ್ಮಿಸಿಕೊಡುವ ಬೇಡಿಕೆ ಸಾಕಷ್ಟು ದಿನಗಳಿಂದ ಇದೆ. ಇದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತದೆ. ಮತ್ತು ಜನ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪ್ರದೇಶದಲ್ಲಿ ಓಡಾಡಬಾರದು ಎಂದು ಮನವಿ ಮಾಡಿದರು.
ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್ ಮಾತನಾಡಿ, ಕೆಕೆಆರ್‌ಡಿಬಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗುವುದೆಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡುತ್ತೆ. ಆದರೆ ಈ ಗ್ರಾಮಸ್ಥರ ಸಣ್ಣ ಬೇಡಿಕೆ ಮಾತ್ರ ಈಡೇರಿಸದೆ ಇರುವುದು ನಿಜಕ್ಕೂ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಿನಲ್ಲಿ ಜನ ಜೀವ ಕಳೆದುಕೊಳ್ಳುವ ಮುನ್ನ ಸೇತುವೆ ನಿರ್ಮಿಸಿಕೊಡುವ ಜವಾಬ್ದಾರಿ ಶಾಸಕರು ಮತ್ತು ಅಧಿಕಾರಿಗಳ ಹೆಗಲ ಮೇಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ