ಪದವೀಧರ ಶಿಕ್ಷಕರ ಆಯ್ಕೆ: ಜಾತಿ, ಆದಾಯ ಪತ್ರ ಗೊಂದಲದಿಂದ ಅರ್ಹತೆಯಿದ್ದರೂ 2 ಸಾವಿರ ಮಹಿಳೆಯರಿಗೆ ಉದ್ಯೋಗ ಭಾಗ್ಯವಿಲ್ಲ!

| Updated By: ಸಾಧು ಶ್ರೀನಾಥ್​

Updated on: Dec 14, 2022 | 5:07 PM

ರಾಜ್ಯದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿಯನ್ನು ನ. 18 ರಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಆದರೆ, 2 ಸಾವಿರಕ್ಕೂ ಅಧಿಕ ಮಹಿಳೆಯರು, ನೇಮಕಾತಿಗೆ ಬೇಕಾಗುವಷ್ಟು ಅಂಕ ಇದ್ದರು ಕೂಡಾ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದೇ ಕಂಗಾಲಾಗಿದ್ದಾರೆ. ಕಾರಣವೇನು?

ಪದವೀಧರ ಶಿಕ್ಷಕರ ಆಯ್ಕೆ: ಜಾತಿ, ಆದಾಯ ಪತ್ರ ಗೊಂದಲದಿಂದ ಅರ್ಹತೆಯಿದ್ದರೂ 2 ಸಾವಿರ ಮಹಿಳೆಯರಿಗೆ ಉದ್ಯೋಗ ಭಾಗ್ಯವಿಲ್ಲ!
ಜಾತಿ, ಆದಾಯ ಪತ್ರ ಗೊಂದಲದಿಂದಾಗಿ ಅರ್ಹತೆಯಿದ್ದರೂ 2 ಸಾವಿರ ಮಹಿಳೆಯರಿಗೆ ಉದ್ಯೋಗ ಭಾಗ್ಯವಿಲ್ಲ!
Follow us on

ಕಲಬುರಗಿ: ರಾಜ್ಯದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು (Karnataka Graduate Teacher Recruitment 2022 selection list) ನವಂಬರ್ 18 ರಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಆದರೆ, ರಾಜ್ಯದಲ್ಲಿ ಎರಡು ಸಾವಿರಕ್ಕೂ ಅಧಿಕ ಮಹಿಳೆಯರು (bachelor primary school teacher), ನೇಮಕಾತಿಗೆ ಬೇಕಾಗುವಷ್ಟು ಅಂಕಗಳು ಇದ್ದರು ಕೂಡಾ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರೋದಕ್ಕೆ ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ ಮದುವೆಯಾಗಿರೋ ಮಹಿಳಾ ಅಭ್ಯರ್ಥಿಗಳ (women) ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕುರಿತಾದ ಗೊಂದಲ.

ಭಗ್ನವಾದ ಸರ್ಕಾರಿ ನೌಕರಿ ಕನಸು!

ತಮಗೆ ಸರ್ಕಾರಿ ನೌಕರಿ ಸಿಕ್ಕೇ ಸಿಗುತ್ತದೆ ಅನ್ನೋ ಬೆಟ್ಟದಷ್ಟು ಕನಸನ್ನು ಸಾವಿರಾರು ಮಹಿಳಾ ಅಭ್ಯರ್ಥಿಗಳು ಕಂಡಿದ್ದರು. ಅದಕ್ಕಾಗಿ ಅನೇಕ ವರ್ಷಗಳಿಂದ ನಿರಂತರವಾಗಿ ಪರಿಶ್ರಮ ಹಾಕಿ ಓದಿದ್ದರು. ಟಿಇಟಿ, ಸಿಇಟಿ ಪರೀಕ್ಷೆ ಪಾಸಾಗಿದ್ದರು. ಆದರೆ ಇನ್ನೇನು ಸರ್ಕಾರಿ ನೌಕರಿ ಸಿಕ್ಕೇ ಬಿಡ್ತು, ತಾವು ಕೂಡಾ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಮಾಡ್ತೇವೆ ಅನ್ನೋವಷ್ಟರಲ್ಲಿ ಅವರ ಆಸೆಯನ್ನು ಮದುವೆ ಭಗ್ನ ಮಾಡಿದೆ.

ಹೌದು ಕಳೆದ ಮಾರ್ಚ್ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಆರರಿಂದ ಎಂಟನೇ ತರಗತಿ ಮಕ್ಕಳಿಗೆ ಪಾಠ ಮಾಡಲು 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಇದರ ಪರೀಕ್ಷೆ ಕೂಡಾ ಮುಗಿದು, ಇದೇ ನವಂಬರ್ 18 ರಂದು ಇಲಾಖೆ, ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದ್ರೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನೋಡಿದ ರಾಜ್ಯದ 2 ಸಾವಿರಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಶಾಕ್ ಆಗಿದ್ದಾರೆ. ಯಾಕಂದ್ರೆ ಅವರಿಗಿಂತ ಕಡಿಮೆ ಅಂಕ ಪಡೆದವರ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದು, ಹೆಚ್ಚು ಅಂಕ ಪಡೆದಿದ್ದರು ಕೂಡಾ ಅನೇಕರು ನೌಕರಿಯಿಂದ ವಂಚಿತರಾಗಿದ್ದಾರೆ.

ಕಲಬುರಗಿ ನಗರದ ಮಧುಮತಿ ಕಂಬಾರ್ ಅನ್ನೋರು, 2ಎ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದರು. ಇವರು ಶೇಕಡಾ 67 ರಷ್ಟು ಅಂಕಗಳನ್ನು ಪಡೆದಿದ್ದಾರೆ. ಆದ್ರೆ 2ಎ ದಲ್ಲಿ ಶೇಕಡಾ 63 ರಷ್ಟು ಅಂಕ ಪಡೆದವರು ಆಯ್ಕೆಯಾಗಿದ್ದಾರೆ. ಅದೇ ಶೇಕಡಾ 67 ರಷ್ಟು ಅಂಕ ಪಡೆದಿದ್ದ ಮಧುಮತಿ ಕಂಬಾರ್ ಅವರು ಆಯ್ಕೆಯಾಗಿಲ್ಲ! ಇದೇ ರೀತಿ ವಿವಿಧ ಜಾತಿಗಳ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದ ಅನೇಕರು ಹೆಚ್ಚಿನ ಅಂಕ ಪಡೆದಿದ್ದರೂ ಸಹ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣ, ಅವರುಗಳ ಮದುವೆ!

ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಗೊಂದಲ

ಹೌದು ಅನೇಕರು, ನೌಕರಿಗೆ ಅರ್ಜಿ ಹಾಕುವಾಗ, ನೀವು ವಿವಾಹಿತರೇ ಅನ್ನೋ ಕಾಲಂನಲ್ಲಿ ಹೌದು ಅಂತ ನಮೂದಿಸಿದ್ದಾರೆ. ಆದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತಂದೆಯದು ನೀಡಿದ್ದಾರೆ. ಮದುವೆಯಾದ ಮೇಲೆ ಪತಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸದೇ, ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಿದ್ದಾರೆ ಅನ್ನೋ ಕಾರಣ ನೀಡಿ, ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದ ಅನೇಕರನ್ನು ಮೀಸಲಾತಿ ಅಡಿ ಪರಿಗಣಿಸದೇ, ಸಾಮಾನ್ಯ ಕೋಟಾದಲ್ಲಿ ಪರಿಗಣಿಸಲಾಗಿದೆ.

ಆದ್ರೆ ಅನೇಕರು ಸಾಮಾನ್ಯ ಕೋಟಾದಲ್ಲಿ ಆಯ್ಕೆಯಾಗಿಲ್ಲ. ತಮ್ಮನ್ನು ಮೀಸಲಾತಿ ಅಡಿ ಪರಿಗಣಿಸಿದ್ದರೆ, ತಾವು ಆಯ್ಕೆಯಾಗುತ್ತಿದ್ದೆವು, ಸಾಮಾನ್ಯ ಕೋಟಾದಲ್ಲಿ ಪರಿಗಣಿಸಿದ್ದರಿಂದ ಆಯ್ಕೆಯಾಗಿಲ್ಲಾ ಅಂತಿದ್ದಾರೆ ಅನೇಕ ನೊಂದ ಮಹಿಳೆಯರು. ವಿಶೇಷವೆಂದ್ರೆ, ಅನೇಕ ವಿವಾಹಿತ ಮಹಿಳೆಯರು ಅರ್ಜಿ ಸಲ್ಲಿಸುವಾಗ, ಅಭ್ಯರ್ಥಿ ವಿವಾಹಿತರೇ? ಎಂಬ ಕಾಲಂ ನಲ್ಲಿ ಇಲ್ಲಾ ಅಂತ ನಮೂದಿಸಿದ್ದಾರೆ. ಅವರುಗಳು ಆಯ್ಕೆಯಾಗಿದ್ದಾರೆ. ಆದ್ರೆ ಪ್ರಾಮಾಣಿಕತೆ ತೋರಿಸಲು ಹೋಗಿದ್ದ ಅನೇಕರು ಇದೀಗ ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದಾರೆ.

ಇನ್ನು ಅರ್ಜಿ ಭರ್ತಿ ಮಾಡುವಾಗ ಎಲ್ಲಿಯೂ ಕೂಡಾ ವಿವಾಹಿತರು, ಪತಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು ಅಂತ ಉಲ್ಲೇಖಿಸಿರಲಿಲ್ಲ. ತಾವು ವಿದ್ಯಾಭ್ಯಾಸ ಮಾಡಿದ್ದು, ತಂದೆಯ ಜಾತಿ ಮತ್ತು ಆಧಾಯ ಪ್ರಮಾಣ ಪತ್ರದ ಮೇಲೆ. ಇನ್ನು ಈ ಹಿಂದೆ ಪಡೆದಿದ್ದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅವಧಿ ಇನ್ನೂ ಅನ್ವಯವಾಗುವುದರಿಂದ ಅದರಂತೆ ಅರ್ಜಿ ಹಾಕಿದ್ದೆವು.

ಸರ್ಕಾರ ಪತಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೇಳಿದ್ದರೆ, ದಾಖಲಾತಿಗಳ ಪರಿಶೀಲನೆ ವೇಳೆ ನೀಡ್ತಿದ್ದೆವು. ಆದ್ರೆ ಈ ಹಿಂದೆ ಒಂದು ಹುದ್ದೆಗೆ ಇಬ್ಬರಂತೆ ನಡೆದ ದಾಖಲಾತಿಗಳ ಪರಿಶೀಲನೆ ವೇಳೆ ಕೂಡಾ ಏನನ್ನೂ ಕೇಳಿಲ್ಲಾ. ಆದ್ರೆ ಇದೀಗ ದಿಢೀರನೆ ನಮ್ಮ ಕೈ ಬಿಟ್ಟಿದ್ದಾರೆ. ಇದರಿಂದ ಅನೇಕ ವರ್ಷಗಳ ತಮ್ಮ ಕನಸು ನುಚ್ಚು ನೂರಾಗಿದೆ ಅಂತ ನೊಂದ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ನಮಗೆ ಅವಕಾಶ ನೀಡಿದರೆ ಪತಿಯ ಜಾತಿ ಮತ್ತು ಆದಾಯ ಪತ್ರ ಸಲ್ಲಿಸಲು ನಾವು ಸಿದ್ದರಿದ್ದೇವೆ. ಆದ್ರೆ ಸರ್ಕಾರ ಯಾವುದನ್ನೂ ಹೇಳದೆ, ನಮ್ಮನ್ನು ಕತ್ತಲೆಯ ಕೋಣೆಯಲ್ಲಿಟ್ಟು ನಮಗೆ ಅನ್ಯಾಯ ಮಾಡಿದೆ. ನಮಗೆ ನ್ಯಾಯ ಬೇಕು, ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ ಅನ್ನುತ್ತಾರೆ ಮಧುಮತಿ ಸೇರಿದಂತೆ ಅನೇಕ ಅಭ್ಯರ್ಥಿಗಳು. ಸರ್ಕಾರ ಈ ನಿಟ್ಟಿನಲ್ಲಿ ಅನ್ಯಾಯಕ್ಕೊಳಗಾದವರಲ್ಲಿ ಅರ್ಹರಿದ್ದರೆ, ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವುದು ಒಳಿತು. (ವರದಿ: ಸಂಜಯ್ ಚಿಕ್ಕಮಠ, ಟಿವಿ 9, ಕಲಬುರಗಿ)

Published On - 5:15 pm, Thu, 24 November 22