Kannada News Karnataka Kalaburagi Karnataka State Budget 2022-23 Update nothing much nothing less for Kalyana Karnataka Region in CM Basavaraj Bommai first Budget
Karnataka Budget 2022: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತುಸು ಹುಳಿ – ತುಸು ಸಿಹಿ ಅನ್ನುವಂತಹ ಸಿಎಂ ಬೊಮ್ಮಾಯಿ ಬಜೆಟ್
Karnataka Budget 2022 Kalyana Karnataka Region: ಇಂದು ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಕಲಬುರಗಿ ಜನರ ಎಲ್ಲಾ ನಿರೀಕ್ಷೆಗಳು ಸಾಕಾರವಾಗದೇ ಇದ್ದರು ಕೂಡಾ, ತೀರಾ ನಿರಾಸೆಯನ್ನು ಮಾಡಿಲ್ಲಾ. ಆದರೆ ಕೆಲ ನಿರೀಕ್ಷಿತ ಯೋಜನೆಗಳ ಪ್ರಸ್ತಾಪವೇ ಇಲ್ಲದೇ ಇರೋದರಿಂದ, ಕಲಬುರಗಿ ಜನರಿಗೆ ತುಸು ಹುಳಿ ತುಸು ಸಿಹಿ ಅನ್ನುವಂತಹ ಬಜೆಟ್ ಇದಾಗಿದೆ
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತುಸು ಹುಳಿ - ತುಸು ಸಿಹಿ ಅನ್ನುವಂತಹ ಬಜೆಟ್
Follow us on
ಕಲಬುರಗಿ: ಕಲಬುರಗಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ (Kalaburagi). ಜೊತೆಗೆ ಹಿಂದುಳಿದ ಪ್ರದೇಶ ಅನ್ನೋ ಅಪಕೀರ್ತಿಗೂ ಪಾತ್ರವಾಗಿರೋ ಜಿಲ್ಲೆಗಳಲ್ಲಿ ಕಲಬುರಗಿ ಕೂಡಾ ಒಂದು. ಈ ಜಿಲ್ಲೆಯ ಜನರು ಸಿಎಂ ಬಸವರಾಜ ಬೊಮ್ಮಾಯಿ ಅವರ (CM Basavaraj Bommai) ಚೊಚ್ಚಲ ಬಜೆಟ್ ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇಂದು ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಕಲಬುರಗಿ ಜನರ ಎಲ್ಲಾ ನಿರೀಕ್ಷೆಗಳು ಸಾಕಾರವಾಗದೇ ಇದ್ದರು ಕೂಡಾ, ತೀರಾ ನಿರಾಸೆಯನ್ನು ಮಾಡಿಲ್ಲಾ. ಬಜೆಟ್ ನಲ್ಲಿ ಕಲಬುರಗಿ ಗೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ (Kalyana Karnataka Region) ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಕೆಲ ನಿರೀಕ್ಷಿತ ಯೋಜನೆಗಳ ಪ್ರಸ್ತಾಪವೇ ಇಲ್ಲದೇ ಇರೋದರಿಂದ, ಕಲಬುರಗಿ ಜನರಿಗೆ ತುಸು ಹುಳಿ ತುಸು ಸಿಹಿ ಅನ್ನುವಂತಹ ಬಜೆಟ್ ಇದಾಗಿದೆ (Karnataka Budget 2022).
ಬಸವರಾಜ ಬೊಮ್ಮಾಯಿ ಅವರ ಮಂಡಿಸಿದ ಬಜೆಟ್ ನಲ್ಲಿ ಕಲಬುರಗಿಗೆ ಸಿಕ್ಕಿದ್ದೇನು:
ಕಲ್ಯಾಣ ಕರ್ನಾಟಕ ಭಾಗ ಈ ವರ್ಷ ಅಮೃತ ಮಹೋತ್ಸವ ವನ್ನು ಆಚರಿಸಿಕೊಳ್ಳುತ್ತಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈ ವರ್ಷ 3 ಸಾವಿರ ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ. ಕಳೆದ ಸೆಪ್ಟೆಂಬರ್17 ರಂದು ಕಲಬುರಗಿ ಯಲ್ಲಿ, ಕಲ್ಯಾಣ ಕರ್ನಾಟಕ ವಿಮೋಚನಾ ದಿನದಲ್ಲಿ ಭಾಗಿಯಾಗಿದ್ದಾಗ, ಈ ಹಿಂದೆ ನೀಡಿರೋ ಅನುದಾನವನ್ನು ಕಾಲಮಿತಿಯಲ್ಲಿ ಖರ್ಚು ಮಾಡಿದ್ರೆ ಮತ್ತೆ 1500 ಕೋಟಿ ಹಣವನ್ನು ಹೆಚ್ಚುವರಿಯಾಗಿ ನೀಡೋದಾಗಿ ಸಿಎಂ ಬೊಮ್ಮಾಯಿ ಹೇಳಿದ್ದರು. ಇನ್ನು ಮಂಡಳಿಗೆ ಈ ಮೊದಲು ಪ್ರತಿ ವರ್ಷ 1500 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿತ್ತು.
ಈ ವರ್ಷ ಹೊಸದಾಗಿ 1500 ಕೋಟಿ ರೂಪಾಯಿ ಹೆಚ್ಚುವರಿ ಅನುಧಾನ ನೀಡಲಾಗಿದೆ. ಇದರಲ್ಲಿ 1500 ಕೋಟಿ ಅನುದಾನ ಮೈಕ್ರೋ ಯೋಜನೆಗಳಿಗೆ ನೀಡಿದರೆ, 1500 ಕೋಟಿ ಅನುದಾನವನ್ನು ಶಿಕ್ಷಣ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗಿದೆ. ಆದರೆ ಮೂರು ಸಾವಿರ ಕೋಟಿ ಹಣವನ್ನು ಈ ವರ್ಷಕ್ಕೆ ಮಾತ್ರ ನೀಡದೆ ಪ್ರತಿ ವರ್ಷ ಮೂರು ಸಾವಿರ ಕೋಟಿ ಅನುಧಾನ ನೀಡುವ ಘೋಷಣೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಅನ್ನೋದು ಈ ಭಾಗದ ಜನರ ಅನಿಸಿಕೆಯಾಗಿದೆ.
ರಾಜ್ಯದ ತೊಗರಿ ಕಣಜ ಅನ್ನೋ ಖ್ಯಾತಿಯನ್ನು ಪಡೆದಿರುವದು ಕಲಬುರಗಿ. ಕಲಬುರಗಿ ತೊಗರಿಗೆ ಬೌಗೋಳಿಕ ಸೂಚ್ಯಂಕ ಸ್ಥಾನ ಕೂಡಾ ಸಿಕ್ಕಿದೆ. ಬಜೆಟ್ ನಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿ ಬೇಳೆಯನ್ನು ಭೀಮಾ ಪಲ್ಸ್ ಬ್ರ್ಯಾಂಡ್ ನಡಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಆದರೆ ಸರ್ಕಾರದ ಅಧೀನದಲ್ಲಿ ಯಾವುದೇ ದಾಲ್ ಮಿಲ್ ಗಳಿಲ್ಲಾ. ಹೀಗಾಗಿ ಸರ್ಕಾರ ಯಾವ ರೀತಿ ತೊಗರಿ ಬೇಳೆಯನ್ನು ಬ್ರ್ಯಾಂಡ್ ಮಾಡಿ ಮಾರಾಟ ಮಾಡುತ್ತದೆ ಅನ್ನೋದರ ಬಗ್ಗೆ ಉಲ್ಲೇಖಿಸಿಲ್ಲಾ.
ಕಲಬುರಗಿ ಜಿಲ್ಲೆಯ ಶಹಾಬಾದ್ ನಲ್ಲಿರುವ ಕಲ್ಲನ್ನು ಹೊಸ ವಿನ್ಯಾಸ ಮತ್ತು ತಂತ್ರಜ್ಞಾನ ಅಳವಡಿಸಿ, ವ್ಯಾಪಕ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸಲಾಗುವದು.
ಕಲಬುರಗಿ ಜಿಲ್ಲೆಯ ಜನರು ಬಜೆಟ್ ನಲ್ಲಿ ಹೆಚ್ಚು ನಿರೀಕ್ಷಿಸಿದ್ದು ಟೆಕ್ಸಟೈಲ್ ಪಾರ್ಕ್.ಕಲಬುರಗಿ ಜಿಲ್ಲೆಗೆ ಟೆಕ್ಸಟೈಲ್ ಪಾರ್ಕ್ ನ್ನು ಮಂಜೂರು ಮಾಡಬೇಕು. ಇದರಿಂದ ಐವತ್ತು ಸಾವಿರ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಆದರೆ ಇಂದಿನ ಬಜೆಟ್ ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ್ ನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಸ್ಥಾಪಿಸಲು, ಪ್ರಸ್ತಾವನೆಯನ್ನು ಸಲ್ಲಿಸಲಾಗುವದು ಅಂತ ಸಿಎಂ ಹೇಳಿದ್ದಾರೆ. ಆದರೆ ಕಲಬುರಗಿ ಜೊತೆಗೆ ವಿಜಯಪುರ ಜಿಲ್ಲೆಯ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಯಾವುದೇ ಹಣವನ್ನು ಕೂಡಾ ನಿಗದಿ ಮಾಡಿಲ್ಲಾ.
ಕಲಬುರಗಿ ಮತ್ತು ಬೀದರ್ ಕೋಟೆಗಳ ಪುನರುಜ್ಜೀವನ. ರೇಷ್ಮೆ ಬೆಳೆಗಾರರಿಗೆ ಅತ್ಯಾಧುನಿಕ ಮಾರುಕಟ್ಟೆ ಸೌಲಭ್ಯ ಒದಗಿಸಲು ಕಲಬುರಗಿ ಜಿಲ್ಲೆಯಲ್ಲಿ ನಬಾರ್ಡ್ ನೆರವಿನೊಂದಿಗೆ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ.
ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯ. ದೀನದಯಾಳ ಉಪಾಧ್ಯಾಯ ಸೌಹಾರ್ದ ವಸತಿ ನಿಲಯವನ್ನು ಮಂಜೂರು ಮಾಡಲಾಗಿದೆ.
ಹುಸಿಯಾದ ಕೆಲ ನಿರೀಕ್ಷೆಗಳು: ಕಲಬುರಗಿ ಜನರು ಈ ಭಾಗದಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ತೊಗರಿ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುಧಾನ ನೀಡಿ, ಕೆ ಎಮ್ ಎಪ್ ಮಾದರಿಯಲ್ಲಿ ಅಭಿವೃದ್ಧಿಯ ನಿರೀಕ್ಷೆ ಇತ್ತು. ಇದರ ಪ್ರಸ್ತಾಪ ಬಜೆಟ್ ನಲ್ಲಿ ಆಗಿಲ್ಲಾ. ಕಲಬುರಗಿ ಜಿಲ್ಲೆಯಲ್ಲಿ ಕೌಶಲ್ಯ ವಿವಿ ಸ್ಥಾಪನೆ ಮಾಡಬೇಕು ಅನ್ನೋ ಬೇಡಿಕೆ ಇತ್ತು. ಇದರ ಬಗ್ಗೆ ಕೂಡ ಯಾವುದೇ ಪ್ರಸ್ತಾಪವಿಲ್ಲಾ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಗಾಗಿ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಬೇಕು ಅನ್ನೋ ಆಗ್ರಹವಿತ್ತು. ಅದರ ಬಗ್ಗೆ ಕೂಡಾ ಯಾವುದೇ ಪ್ರಸ್ತಾಪವಿಲ್ಲಾ. ಈ ಭಾಗದ ರೈಲ್ವೆ ವಿಭಾಗ ಮಂಜೂರಾತಿಗೆ ಹಣ ಮತ್ತು ಈ ಭಾಗದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಹಣ ನೀಡಬೇಕು ಅನ್ನೋ ಆಗ್ರಹವಿತ್ತು.
ಲಕ್ಷ್ಮಣ್ ದಸ್ತಿ, ಅಧ್ಯಕ್ಷ, ಕರ್ನಾಟಕ ಜನಪರ ಹೋರಾಟ ಸಮಿತಿ ಅನಿಸಿಕೆ: ಕೆಕೆಆರ್ ಡಿ ಬಿ ಗೆ ಮೂರು ಸಾವಿರ ಕೋಟಿ ನೀಡಲಾಗಿದೆ. ತೊಗರಿ ಬೇಳೆಯನ್ನು ಬ್ರ್ಯಾಂಡ್ ಮಾಡಿ ಮಾರಾಟ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದು ಸ್ವಾಗತಾರ್ಹವಾಗಿದೆ. ಆದರೆ ಬಜೆಟ್ ನಲ್ಲಿ ಹೇಳಿದ್ದು ಕಾಲಮಿತಿಯೊಳಗೆ ಜಾರಿಯಾದರೆ ಮಾತ್ರ ಅನಕೂಲವಾಗಲಿದೆ.
ಶರಣು ಪಪ್ಪಾ, ಗೌರವ ಕಾರ್ಯದರ್ಶಿ, ಚೇಂಬರ್ ಆಪ್ ಕಾಮರ್ಸ್ ಅಭಿಪ್ರಾಯ: ಟೆಕ್ಸಟೈಲ್ ಪಾರ್ಕ್ ಸ್ಥಾಪನೆ ಬಗ್ಗೆ ಪ್ರಸ್ತಾಪ ಸಲ್ಲಿಸಿರುವದು ಉತ್ತಮ ಬೆಳವಣಿಗೆ. ಆದ್ರೆ ಅದು ಮಂಜೂರಾಗುವಂತೆ ಸಿಎಂ ನೋಡಿಕೊಳ್ಳಬೇಕು. ಇನ್ನು ಅನೇಕ ಯೋಜನೆಗಳ ಬಗ್ಗೆ ಚೇಂಬರ್ ನಿಂದ ಮನವಿ ಸಲ್ಲಿಸಲಾಗಿತ್ತು. ಅವುಗಳ ಬಗ್ಗೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಿಲ್ಲ.