ನೀವು ಮೊಬೈಲ್ ನಲ್ಲಿ ಪೋನ್ ಪೇ, ಗೂಗಲ್ ಪೇ ಬಳಸ್ತೀರಾ? ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ

| Updated By: ಸಾಧು ಶ್ರೀನಾಥ್​

Updated on: Jul 25, 2022 | 7:31 PM

ಯಾಕಂದ್ರೆ ನಿಮ್ಮ ಮೊಬೈಲ್ ಗಳನ್ನು ಕದ್ದು, ನಿಮ್ಮ ಮೊಬೈಲ್ ನಲ್ಲಿರುವ ಪೋನ್ ಪೇ, ಗೂಗಲ್ ಪೇ ಸೇರಿದಂತೆ ಹಣ ವರ್ಗಾವಣೆಯ ಅಪ್ಲಿಕೇಷನ್ ಗಳಿಂದ ಹಣ ಎಗರಿಸೋ ಗ್ಯಾಂಗ್ ಗಳು ಹೆಚ್ಚಾಗಿವೆ. ಕಲಬುರಗಿ ಜಿಲ್ಲಾ ಸಿಇಎನ್ ಪೊಲೀಸರು ಇಂತಹ ಇಬ್ಬರು ಖತರ್ನಾಕ ಕಿಲಾಡಿಗಳನ್ನು ಬಂಧಿಸಿದ್ದಾರೆ.

ನೀವು ಮೊಬೈಲ್ ನಲ್ಲಿ ಪೋನ್ ಪೇ, ಗೂಗಲ್ ಪೇ ಬಳಸ್ತೀರಾ? ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ
ನೀವು ಮೊಬೈಲ್ ನಲ್ಲಿ ಪೋನ್ ಪೇ, ಗೂಗಲ್ ಪೇ ಬಳಸ್ತೀರಾ, ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ
Follow us on

ಕಲಬುರಗಿ: ನೀವು ನಿಮ್ಮ ಮೊಬೈಲ್ ನಲ್ಲಿ ಪೋನ್ ಪೇ, ಗೂಗಲ್ ಪೇ ಸೇರಿದಂತೆ ಹಣ ವರ್ಗಾವಣೆಯ ಅಪ್ಲಿಕೇಷನ್ ಗಳನ್ನು ಬಳಸುತ್ತಿದ್ದರೆ ಹೆಚ್ಚು ಜಾಗೃತರಾಗಿರಿ. ಯಾಕಂದ್ರೆ ನಿಮ್ಮ ಮೊಬೈಲ್ ಗಳನ್ನು ಕದ್ದು, ನಿಮ್ಮ ಮೊಬೈಲ್ ನಲ್ಲಿರುವ ಪೋನ್ ಪೇ, ಗೂಗಲ್ ಪೇ ಸೇರಿದಂತೆ ಹಣ ವರ್ಗಾವಣೆಯ ಅಪ್ಲಿಕೇಷನ್ ಗಳಿಂದ ಹಣ ಎಗರಿಸೋ ಗ್ಯಾಂಗ್ ಗಳು ಹೆಚ್ಚಾಗಿವೆ. ಕಲಬುರಗಿ ಜಿಲ್ಲಾ ಸಿಇಎನ್ ಪೊಲೀಸರು ಇಂತಹ ಇಬ್ಬರು ಖತರ್ನಾಕ ಕಿಲಾಡಿಗಳನ್ನು ಬಂಧಿಸಿದ್ದಾರೆ. ಆ ಇಬ್ಬರು ಕಿಲಾಡಿಗಳು, ಬೆಂಗಳೂರು ಸೇರಿದಂತೆ ರಾಜ್ಯ, ನೆರೆಯ ರಾಜ್ಯಗಳಲ್ಲಿ ಜನರ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿದ್ದಾರೆ.

ಹಣ ವರ್ಗಾವಣೆಯನ್ನು ಸುಲಭ ಮಾಡಿರೋ ಅಪ್ಲಿಕೇಷನ್ ಗಳು

ತಾಂತ್ರಿಕತೆ ಹೆಚ್ಚಾದಂತೆ ಜನರು ಇದೀಗ ಹೆಚ್ಚಾಗಿ ಮೊಬೈಲ್ ನಲ್ಲಿರುವ ಪೋನ್ ಪೇ, ಗೂಗಲ್ ಪೇ ಅಪ್ಲಿಕೇಷನ್ ಗಳ ಮೂಲಕ ಸುಲಭವಾಗಿ ತಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಅನೇಕರಿಂದ ತಮ್ಮ ಖಾತೆಗಳಿಗೆ ಹಣವನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಯಾವುದೇ ಶಾಪ್ ಗೆ ಹೋದರು ಕೂಡಾ ಅಲ್ಲಿ ಪೋನ್ ಪೇ, ಗೂಗಲ್ ಪೇ ಗಳು ಕಾಣಿಸುತ್ತವೆ. ಹಣ ನೀಡೋ ಬದಲಾಗಿ ನಾವು ಸ್ಕ್ಯಾನ್ ಮಾಡಿ, ಸುಲಭವಾಗಿ ನಾವು ಖರೀದಿಸಿದ ವಸ್ತುಗಳ ಹಣವನ್ನು ಮಾಲೀಕನಿಗೆ ಪೇ ಮಾಡುವ ಅವಕಾಶ ಇದೀಗ ಲಭ್ಯವಾಗಿದೆ. ಹೀಗಾಗಿ ಎಲ್ಲಡೆ ಇದೀಗ ಮನಿ ಟ್ರಾನ್ಸಪರ್ ಅಪ್ಲಿಕೇಷನ್ ಗಳ ದರ್ಬಾರು ಹೆಚ್ಚಾಗಿದೆ. ಆದ್ರೆ ನೀವು ಕೂಡಾ ಸ್ಮಾರ್ಟ್ ಪೋನ್ ಹೊಂದಿದ್ದು, ಸ್ಮಾರ್ಟ್ ಪೋನ್ ನಲ್ಲಿ ಹಣ ವರ್ಗಾವಣೆಯ ಅಪ್ಲಿಕೇಷನ್ ಗಳಿದ್ದರೆ ತುಸು ಎಚ್ಚರವಹಿಸೋದು ಅವಶ್ಯಕ. ಇಲ್ಲದಿದ್ದರೆ ನಿಮ್ಮ ಹಣ ಬೇರೆಯವರ ಪಾಲಾಗುವದು ಗ್ಯಾರಂಟಿ.

ಹೌದು ಮೊಬೈಲ್ ಗಳನ್ನು ಕದ್ದು, ಮೊಬೈಲ್ ನಲ್ಲಿರುವ ಹಣ ವರ್ಗಾವಣೆಯ ಅಪ್ಲಿಕೇಷನ್ ಗಳಿಂದ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಇಬ್ಬರು ಖತರ್ನಾಕ ಕಿಲಾಡಿಗಳನ್ನು ಕಲಬುರಗಿ ಜಿಲ್ಲಾ ಸಿಇಎನ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಸಸ್ವಿಯಾಗಿದ್ದಾರೆ. ತೆಲೆಂಗಾಣ ರಾಜ್ಯದ ಹೈದ್ರಾಬಾದ್ ಮೂಲದ ಕಿರಣ್ ಸಾತಪಾಟಿ, ಶಿವಾ ಉಪ್ಲಾ ಬಂಧಿತರು. ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ 22 ಮೊಬೈಲ್ ಗಳು, ಒಂದು ಕಾರ್ ನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಈ ಗ್ಯಾಂಗ್, ಹೈದ್ರಾಬಾದ್, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರಂತೆ. ಇವರ ವಿರುದ್ದ ಹೈದ್ರಾಬಾದ್, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೂಡಾ ಅನೇಕ ಪ್ರಕರಣಗಳಿದ್ದು, ಆರೋಪಿಗಳು ಪೊಲೀಸರಿಗೆ ಯಾಮಾರಿಸಿ ಅಡ್ಡಾಡುತ್ತಿದ್ದರು. ಇವರ ಜಾಲದ ಬಗ್ಗೆ ಮಾಹಿತಿ ಪಡೆದ ಕಲಬುರಗಿ ಸಿಇಎನ್ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಗ್ಯಾಂಗ್, ಅಂಗಡಿಗಳ ಮುಂದೆ ಜನರು ಪೋನ್ ಪೇ, ಗೂಗಲ್ ಪೇ ಬಳಸಿ ಹಣ ವರ್ಗಾವಣೆ ಮಾಡುತ್ತಿರುವವರ ಬಳಿ ನಿಂತು, ಅವರ ಪಾಸವರ್ಡ್ ಗಳನ್ನು ನೋಡಿಕೊಳ್ಳುತ್ತಿದ್ದರು. ನಂತರ ಅವರನ್ನು ಪಾಲೋ ಮಾಡಿ, ಅವರ ಮೊಬೈಲ್ ಗಳನ್ನು ಕದಿಯುತ್ತಿದ್ದರು. ನಂತರ ಹಣ ವರ್ಗಾಣೆಯ ಅಪ್ಲಿಕೇಷನ್ ಗಳನ್ನು ಬಳಸಿ ಹಣ ವರ್ಗಾವಣೆ ಮಾಡುತ್ತಿದ್ದರು.

ಇನ್ನು ತಮ್ಮ ಖಾತೆಗೆ ಇವರು ಹಣ ವರ್ಗಾವಣೆ ಮಾಡಿಕೊಂಡರೆ ಸಿಕ್ಕು ಬೀಳುತ್ತೇವೆ ಅಂತ ಹೇಳಿ, ಅಪರಿಚಿತರ ಮುಂದೆ ಹೋಗಿ, ತಮ್ಮ ಅಕೌಂಟ್ ನಲ್ಲಿ ಹಣವಿದೆ. ಆದ್ರೆ ಸದ್ಯ ಅರ್ಜೆಂಟ್ ಆಗಿ ಕ್ಯಾಶ್ ಬೇಕಾಗಿದೆ. ದಯವಿಟ್ಟು ನಿಮ್ಮ ಅಕೌಂಟ್ ಗೆ ಹಣ ವರ್ಗಾವಣೆ ಮಾಡುತ್ತೇವೆ, ನಮಗೆ ಕ್ಯಾಶ್ ಕೊಡಿ ಅಂತ ಹೇಳಿ ಕ್ಯಾಶ್ ಪಡೆಯುತ್ತಿದ್ದರು. ಇನ್ನು ಕೆಲವಡೇ ಮೊಬೈಲ್ ಕದ್ದು, ಮೊಬೈಲ್ ನಲ್ಲಿ ಮನಿ ಟ್ರಾನ್ಸಪರ್ ಅಪ್ಲಿಕೇಷನ್ ಗಳ ಪಾಸವರ್ಡ್ ರಿಸೆಟ್ ಮಾಡಿ, ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ವ್ಯಕ್ತಿಯೋರ್ವನ ಮೊಬೈಲ್ ಕದ್ದು, ಆತನ ಆಕೌಂಟ್ ನಲ್ಲಿದ್ದ ಎರಡು ಲಕ್ಷ ಹಣವನ್ನು ಈ ಕಿಲಾಡಿಗಳು ಎಗರಿಸಿದ್ದರು. ಈ ಬಗ್ಗೆ ಕಲಬುರಗಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಜಾಡು ಹಿಡಿದ ಸಿಇಎನ್ ಪೊಲೀಸರು ಹೈದ್ರಾಬಾದ್ ನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನೀವು ಪೋನ್ ಪೇ, ಗೂಗಲ್ ಪೇ ಯಂತಹ ಅಪ್ಲಿಕೇಷನ್ ಗಳನ್ನು ಸಾರ್ವಜನಿಕವಾಗಿ ಬಳಸುವಾಗ ಎಚ್ಚರವಹಿಸಬೇಕು. ನಿಮ್ಮ ಪಾಸವರ್ಡ್ ಬೇರೆಯವರಿಗೆ ಗೊತ್ತಾಗಂದಂತೆ ನೋಡಿಕೊಳ್ಳಬೇಕು. ಜೊತೆಗೆ ಮೊಬೈಲ್ ಕಳ್ಳತವಾಗದಂತೆ ಜಾಗೃತಿ ವಹಿಸಬೇಕು. ಮೊಬೈಲ್ ಕಳ್ಳತನವಾದರೆ, ಕೂಡಲೇ ಬ್ಯಾಂಕ್ ಗೆ ಸಂಪರ್ಕಿಸಿ, ನಿಮ್ಮ ಖಾತೆಗಳನ್ನು ಬ್ಲಾಕ್ ಮಾಡಿಸಬೇಕು. ಜೊತೆಗೆ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಕಲಬುರಗಿ ಎಸ್ಪಿ ಇಶಾ ಪಂತ್ ಎಚ್ಚರಿಸಿದ್ದಾರೆ.

– ಸಂಜಯ್ ಚಿಕ್ಕಮಠ