ಕಲಬುರಗಿ: ಲಿಂಗಾಯತ್ ಪಂಚಮಸಾಲಿ (Panchamasali) ಮತ್ತು ಒಕ್ಕಲಿಗ ಮೀಸಲಾತಿ (Reservation) ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಕೆಟಗರಿಗಳನ್ನು ಗುರುವಾರ (ಡಿ.29) ಸಂಪುಟ ಸಭೆಯಲ್ಲಿ ಅಸ್ತಿತ್ವಕ್ಕೆ ತಂದಿದೆ. ಆದರೆ ಎಷ್ಟು ಪ್ರಮಾದಲ್ಲಿ ಮಿಸಲಾತಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿರಲಿಲ್ಲ. ಈ ಕುರಿತಾಗಿ ಇಂದು (ಡಿ. 30) ಕಲಬುರಗಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ. ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಕ್ಯಾಟಗರಿ ಸೃಷ್ಟಿ ವಿಚಾರವಾಗಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಸಮುದಾಯಕ್ಕೆ ಮೀಸಲಾತಿ ಹೆಚ್ಚು ಕಡಿಮೆ ಮಾಡಿಲ್ಲ. ಹೊಸದಾಗಿ ಸೃಷ್ಟಿ ಮಾಡಿರುವ 2ಸಿ ಮತ್ತು 2ಡಿ ಯವರಿಗೆ ಸದ್ಯಕ್ಕಿಂತ ಶೇಕಡಾ ನಾಲ್ಕರಷ್ಟು ಹೆಚ್ಚು ಮೀಸಲಾತಿ ಸಿಗಲಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತರಿಗೆ ಶೇ.7ರಿಂದ 8ರಷ್ಟು ಮೀಸಲಾತಿ ಸಿಗಲಿದೆ. ಒಕ್ಕಲಿಗ ಸಮುದಾಯಕ್ಕೆ 6% ಮೀಸಲಾತಿ ಸಿಗುವ ಸಾಧ್ಯತೆ ಇದೆ. 2010ರಲ್ಲಿ ಪಂಚಮಸಾಲಿ ಸಮಾಜವನ್ನು ನಾವೇ 3ಬಿಗೆ ಸೇರಿಸಿದ್ದೆವು. 2013-18ರಲ್ಲಿ 2ಎ ಮೀಸಲಾತಿಗೆ ಯಾರೂ ಹೋರಾಟ ಮಾಡಲಿಲ್ಲ. ಜಾತಿಗಳ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡ್ತೇವೆ. 2ಸಿ ಮತ್ತು 2ಡಿಗೆ ಸದ್ಯಕ್ಕೆ ಶೇ.4ಕ್ಕಿಂತ ಹೆಚ್ಚು ಮೀಸಲಾತಿ ಸಿಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಆದರೆ, ಸರ್ಕಾರ ಇಡೀ ಲಿಂಗಾಯತ ಸಮುದಾಯವನ್ನೇ 2D ಕೆಟಗರಿ ಸೇರಿಸಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಕೆಟಗರಿ ಸೃಷ್ಟಿಸಿಲ್ಲ. ಬದಲಾಗಿ 2ಡಿ ಕೆಟಗರಿಯಲ್ಲೇ ಪಂಚಮಸಾಲಿ ಸಮುದಾಯವನ್ನು ಸೇರಿಸಲಾಗಿದೆ. ವೀರಶೈವ ಲಿಂಗಾಯತರು ಇದುವರೆಗೆ 3ಬಿ ಕೆಟಗರಿಯಲ್ಲಿದ್ದರು. ಈಗ 2ಡಿ ಕೆಟಗರಿಯಲ್ಲಿ ಒಟ್ಟಾರೆ ಲಿಂಗಾಯತರಿಗೆ ಮೀಸಲಾತಿ ಫಿಕ್ಸ್ ಮಾಡಲು ಸರ್ಕಾರ ತೀರ್ಮಾನಿಸಿದೆ.
ಇನ್ನು ಎರಡು ಹೊಸ ಕೆಟಗರಿ ರಚನೆ ಮಾಡುವುದೊಂದಿಗೆ ಈಗಾಗಲೇ 3ಎ ಮತ್ತು 3ಬಿನಲ್ಲಿದ್ದ ಉಳಿದ ಸಮುದಾಯಗಳು ಯಥಾಸ್ಥಿತಿಯಲ್ಲೇ ಇರಲಿವೆ. ಸದ್ಯ ಸಿಗುತ್ತಿರುವ ಮೀಸಲಾತಿ ಹಾಗೇ ಇರಲಿದೆ. ಆದ್ರೆ ಮುಂದಿನ ದಿನಗಳಲ್ಲಿ ಈ ಮೀಸಲಾತಿ ಪ್ರಮಾಣ ಹೆಚ್ಚು ಕಡಿಮೆ ಆಗುತ್ತಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸರ್ಕಾರವಂತೂ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಮೂಲಕ ಮೀಸಲಾತಿ ಸಂಕಷ್ಟದಿಂದ ಪಾರಾಗಿದೆ.
ಬಿಜೆಪಿ ಸರ್ಕಾರ ಚುನಾವಣೆ ಹೊತ್ತಲ್ಲಿ ಎರಡು ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳದೇ ಮೀಸಲಾತಿ ಅಸ್ತ್ರ ಪ್ರಯೋಗಿಸಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಆದರೆ ಸರ್ಕಾರದ ಈ ನಡೆಯನ್ನು ಎರಡು ಸಮುದಾಯಗಳು ಒಪ್ಪಿಕೊಳ್ಳುತ್ತಾವೆಯೋ ಅಥವಾ ವಿರೋಧಿಸುತ್ತವೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:11 pm, Fri, 30 December 22