Mallikarjun Kharge: ಕಾಂಗ್ರೆಸ್ ಕಟ್ಟಾಳು, ಕನ್ನಡದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಪಟ್ಟ ಬಹುತೇಕ ಖಚಿತ?

| Updated By: ಸಾಧು ಶ್ರೀನಾಥ್​

Updated on: Sep 30, 2022 | 5:33 PM

AICC President: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಅನ್ನೋ ಗ್ರಾಮದಲ್ಲಿ ಜುಲೈ 21, 1942ರಲ್ಲಿ ಜನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೀಗ 80 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ವರವಟ್ಟಿಯಲ್ಲಿದ್ದ ಅವರ ಮನೆಗೆ ಬೆಂಕಿ ಬಿದ್ದಿದ್ದರಿಂದ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದ ಖರ್ಗೆ ಅವರು, ತಂದೆಯ ಜೊತೆಗೆ ಕಲಬುರಗಿಗೆ ಬಂದವರು.

Mallikarjun Kharge: ಕಾಂಗ್ರೆಸ್ ಕಟ್ಟಾಳು, ಕನ್ನಡದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಪಟ್ಟ ಬಹುತೇಕ ಖಚಿತ?
ಕಾಂಗ್ರೆಸ್ ಕಟ್ಟಾಳು, ಕನ್ನಡದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಪಟ್ಟ ಬಹುತೇಕ ಖಚಿತ?
Follow us on

ಕಲಬುರಗಿ: ಎಐಸಿಸಿಗೆ (ಅಖಿಲ ಭಾರತ ಕಾಂಗ್ರೆಸ್​​ ಸಮಿತಿ) ಗಾಂಧಿ ಪರಿವಾರದ ಹೊರತಾಗಿ ಬೇರೆಯವರು ಅಧ್ಯಕ್ಷರಾಗಲಿ ಅನ್ನೋ ಉದ್ದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆರಂಭವಾಗಿದೆ. ನಿನ್ನೆಯವರೆಗೆ ಅಧ್ಯಕ್ಷ ಸ್ಥಾನಕ್ಕೆ ಅನೇಕರ ಹೆಸರು ಕೇಳಿ ಬಂದಿತ್ತು. ಆದರೆ ಕಳೆದ ರಾತ್ರಿ ನಡೆದ ಅಚಾನಕ್ ಬೆಳವಣಿಗೆಯ ಲ್ಲಿ ಸೋನಿಯಾ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಅಕ್ಟೋಬರ್ 17 ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಕನ್ನಡಿಗನಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಬಹುತೇಕ ಫಿಕ್ಸ್ ಅಂತ ಹೇಳಲಾಗುತ್ತಿದೆ.

ಕಾಂಗ್ರೆಸ್ ಕಟ್ಟಾಳು ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ?

ಮಲ್ಲಿಕಾರ್ಜನ ಖರ್ಗೆ, ಕಾಂಗ್ರೆಸ್ ಪಕ್ಷದ ಕಟ್ಟಾಳು. ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು. ರಾಜಕಾರಣಿಗಳು ಸಿದ್ಧಾಂತದ ಮೇಲೆ ನಡೆಯಬೇಕು ಎಂದು ನಂಬಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಖಡಕ್ ಕಟ್ಟಾಳುವೇ ಸರಿ. ಇದೇ ಅವರನ್ನು ಗಾಂಧಿ ಪರಿವಾರಕ್ಕೆ ತುಂಬಾ ಹತ್ತಿರಮಾಡಿರುವುದು. ಹೌದು ಅಧಿಕಾರಕ್ಕಾಗಿ ಎಂದಿಗೂ ಕಾಂಗ್ರೆಸ್ ಮತ್ತು ತಾವು ನಂಬಿರುವ ಸಿದ್ದಾಂತವನ್ನು ಬಿಟ್ಟು ನಡೆಯದ ಮಲ್ಲಿಕಾರ್ಜುನ ಖರ್ಗೆ ಅವರು ಎಂದಿಗೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ, ತಮ್ಮ ನಾಯಕರಿಗೆ ಮುಜುಗರ ಆಗುವಂತೆ ನಡೆದುಕೊಂಡವರಲ್ಲ. (ವರದಿ -ಸಂಜಯ್ ಚಿಕ್ಕಮಠ)

ಇದನ್ನು ಮನಗಂಡೇ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪಕ್ಷದ ಕೆಲಸವನ್ನು ತಲೆಯ ಮೇಲೆ ಹೊತ್ತಿಕೊಂಡು ಮಾಡ್ತೇನೆ. ನಾನು ಯಾವತ್ತೂ ಅಧಿಕಾರವನ್ನು ಕೇಳಿಲ್ಲಾ. ಪಕ್ಷ ನೀಡಿದ ಅಧಿಕಾರವನ್ನು ಕಾಯಾ ವಾಚಾ ಮನಸಾ ಪಾಲಿಸುತ್ತೇನೆ ಅಂತ ಹೇಳುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಬಹುತೇಕ ಫಿಕ್ಸ್ ಆಗಿದೆ. ಆ ಮೂಲಕ ಕನ್ನಡಿಗರೊಬ್ಬರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಒಲಿಯುತ್ತಿರುವದು, ಅವರ ಬೆಂಬಲಿಗರಲ್ಲಿ ಉತ್ಸಾಹವನ್ನು ನೂರ್ಮಡಿಸಿದೆ.

ವಿದ್ಯಾರ್ಥಿ ಒಕ್ಕೂಟದಿಂದ ಎಐಸಿಸಿ ಸ್ಥಾನದವರಗೆ ಖರ್ಗೆ ಪಯಣ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಅನ್ನೋ ಗ್ರಾಮದಲ್ಲಿ ಜುಲೈ 21, 1942ರಲ್ಲಿ ಜನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೀಗ ಎಂಬತ್ತು ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ವರವಟ್ಟಿಯಲ್ಲಿದ್ದ ಅವರ ಮನೆಗೆ ಬೆಂಕಿ ಬಿದ್ದಿದ್ದರಿಂದ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ತಂದೆಯ ಜೊತೆಗೆ ಕಲಬುರಗಿಗೆ ಬಂದವರು.

ಪದವಿ ಓದುತ್ತಿದ್ದಾಗಲೇ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಂತರ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. ಎಲ್ಎಲ್ ಬಿ ಪದವಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ನಗರದಲ್ಲಿರುವ ಎಂ ಎಸ್ ಕೆ ಮಿಲ್ ನೌಕರರ ಕಾನೂನು ಸಲಹೆಗಾರರಾಗಿ, ಕಾರ್ಮಿಕ ಹಕ್ಕಗಳಿಗಾಗಿ ಹೋರಾಟ ನಡೆಸಿದ್ದರು. 1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಖರ್ಗೆಗೆ ಇದುವರೆಗೆ 12 ಚುನಾವಣೆ-11 ಗೆಲವು-1 ಸೋಲು

1972 ರಲ್ಲಿ ಅನಿರೀಕ್ಷಿತವಾಗಿ ಅಂದಿನ ಕಲಬುರಗಿ ಜಿಲ್ಲೆಯ ಗುರಮಠಕಲ್ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದರು. 1976 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು. 2004 ರವರಗೆ ಗುರುಮಠಕಲ್ ಕ್ಷೇತ್ರದಿಂದ ಎಂಟು ಬಾರಿ ಸ್ಪರ್ಧಿಸಿ, ಎಂಟು ಬಾರಿ ಗೆಲವು ಸಾಧಿಸಿದ್ದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2008 ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ 9 ನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ, ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದಾರೆ.

2014 ರಲ್ಲಿ ಎರಡನೇ ಬಾರಿಗೆ ಕೂಡಾ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದ್ರೆ 2018 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಸೋಲನ್ನು ಅನುಭವಿಸಿದ್ದರು. ತಾನು ಸಾಕಷ್ಟು ಕೆಲಸ ಮಾಡಿದರೂ ಕೂಡಾ ಜನ ನನ್ನನ್ನು ಸೋಲಿಸಿದ್ದಾರೆ. ಇದು ನನ್ನ ಸೋಲಲ್ಲಾ, ನಾನು ನಂಬಿರುವ ಸಿದ್ದಾಂತಕ್ಕೆ ಆದ ಸೋಲು ಅಂತ ಖರ್ಗೆ ಅವರು ಆಗಾಗ ಹೇಳುತ್ತಿದ್ದರು.

ಇನ್ನು 2014 ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸರ್ಕಾರದ ವಿರುದ್ದ ತಮ್ಮ ಮೊನಚಾದ ಮಾತುಗಳಿಂದ ತಿವಿದು, ಪ್ರತಿಪಕ್ಷದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದರು. ಇದೇ ಕಾರಣಕ್ಕೆ ಸೋನಿಯಾ ಗಾಂಧಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿಸಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ನೀಡಿದ್ದರು. ಪಕ್ಷ ನೀಡಿದ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸುವುದು, ನಂಬಿರುವ ಸಿದ್ದಾಂತ ಬಿಟ್ಟು ನಡೆಯದೇ ಇರುವ ಮಲ್ಲಿಕಾರ್ಜುನ ಖರ್ಗೆ ಅವರ ಆಚಾರ, ವಿಚಾರಗಳಿಂದ ಇದೀಗ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ನಿಲ್ಲಿಸಿವೆ.

ಖರ್ಗೆ ಬೆಂಬಲಿಗರಲ್ಲಿ ನೂರ್ಮಡಿಯಾದ ಉತ್ಸಾಹ

ಸೋಲಿಲ್ಲದ ಸರದಾರ ಅನಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು 2018ರಲ್ಲಿ ಸೋತಾಗ ಸ್ವತಃ ಅವರಷ್ಟೇ, ಅವರ ಬೆಂಬಲಿಗರು ಕೂಡಾ ನೊಂದಿದ್ದರು. ಆದರೆ ಇದೀಗ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಹತ್ತಿರವಾಗಿರುವುದು ಅವರ ಬೆಂಬಲಿಗರ ಸಂತೋಷ ಕೂಡಾ ನೂರ್ಮಡಿಯಾಗಿದೆ. ಕಲಬುರಗಿಯ ಕುವರ ಎಐಸಿಸಿ ಅಧ್ಯಕ್ಷ ರಾಗುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ ಅಂತಿದ್ದಾರೆ ಅವರ ಬೆಂಬಲಿಗರು.

ತಾವು ನಂಬಿರುವ ತಮ್ಮದೇ ಆದ ಸಿದ್ದಾಂತದ ಮೇಲೆ ರಾಜಕೀಯ ಮಾಡುವ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ನಮಗೆಲ್ಲಾ ಸಂತೋಷ ತಂದಿದೆ. ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಬಡಕುಟುಂಬದಲ್ಲಿ ಹುಟ್ಟಿ, ಎಐಸಿಸಿ ಅಧ್ಯಕ್ಷ ಸ್ಥಾನದವರೆಗಿನ ಅವರ ಬೆಳವಣಿಗೆ ಎಲ್ಲರಿಗೂ ಆದರ್ಶವಾಗಿದೆ ಎನ್ನುತ್ತಾರೆ ಖರ್ಗೆ ಬೆಂಬಲಿಗ ತಿಪ್ಪಣ್ಣಪ್ಪ ಕಮಕನೂರ್.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಗ್ತಾಯಿರುವದು ನಮಗೆಲ್ಲಾ ಸಂಭ್ರಮ ತರಿಸಿದೆ. ನುಡಿದಂತೆ ನಡೆಯುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶರಣು ಮೋದಿ, ಕೆಪಿಸಿಸಿ ಕಾರ್ಯದರ್ಶಿ ಹೇಳುತ್ತಾರೆ.

Published On - 5:30 pm, Fri, 30 September 22