ಕಲಬುರಗಿ,ಅ.11: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ತಂಡ ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣದ ರನ್‌ವೇ ರಿ-ಕಾರ್ಪೆಟಿಂಗ್ ಬಳಿಕದ ರನ್‌ವೇ ಘರ್ಷಣೆ ಗುಣಾಂಕ ಪರೀಕ್ಷೆಯನ್ನು ನಡೆಸಿತು. AAI ಒಡೆತನದ ಸರ್ಫೇಸ್ ವೋಲ್ವೋ ಫ್ರಿಕ್ಷನ್ ಟೆಸ್ಟರ್ (SVFT) ಮೂಲಕ ಸ್ಕ್ಯಾಂಡಿನೇವಿಯನ್ ಏರ್‌ಪೋರ್ಟ್ ಮತ್ತು ರೋಡ್ ಸಿಸ್ಟಮ್ಸ್ (SARSYS) ಅನ್ನು ಬಳಸಿಕೊಂಡು ಪರೀಕ್ಷೆಯನ್ನು ನಡೆಸಲಾಗಿದೆ.
2019ರ ನವೆಂಬರ್ 22ರಂದು ವಿಮಾನ ಹಾರಾಟಕ್ಕೆ ತೆರೆದುಕೊಂಡ ನಿಲ್ದಾಣದ ರನ್‌ವೇಗೆ ಇದೇ ನ.22ಕ್ಕೆ ನಾಲ್ಕು ವರ್ಷ ತುಂಬಲಿದೆ. ವಿಮಾನವು ಸುರಕ್ಷಿತವಾಗಿ ಇಳಿಯಲು ಮತ್ತು ಹಾರಲು ₹30 ಕೋಟಿ ವೆಚ್ಚದಲ್ಲಿ ಎಎಐ ಮಾನದಂಡ ಅನುಸಾರ ರನ್‌ವೇ ಅನ್ನು ರಿಕಾರ್ಪೆಟಿಂಗ್ ಮಾಡಲಾಗುತ್ತಿದೆ.
ನಿಲ್ದಾಣದ ಎಂಜಿನಿಯರ್‌ಗಳು ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 2.7 ಕಿ.ಮೀ. ಉದ್ದದ ರನ್‌ವೇ ಮೇಲೆ ಮೊದಲ ಪದರಿನ ರಿಕಾರ್ಪೆಟಿಂಗ್ ಪೂರ್ಣಗೊಳಿಸಿದ್ದಾರೆ. ಮೊದಲ ಹಂತದ ಪರೀಕ್ಷೆ ಯಶಸ್ವಿಯಾಗಿದ್ದು, ಈಗ ಎರಡನೇ ಪದರಿನ ಕಾಮಗಾರಿಗೆ ಮುಂದಾಗಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಘರ್ಷಣೆ ಗುಣಾಂಕವು (ಫ್ರಿಕ್ಷನ್ ಕೊಎಫಿಸೆಂಟ್) ರನ್‌ವೇ ಮೇಲೆ ವಿಮಾನ ಎಷ್ಟು ಜಾರುತ್ತದೆ ಎಂಬುದರ ಅಳತೆಯಾಗಿದೆ. ಮತ್ತು ರನ್‌ವೇಗಳಲ್ಲಿ ಹೆಚ್ಚಿನ ಘರ್ಷಣೆ ಗುಣಾಂಕವನ್ನು ನಿರ್ವಹಿಸುವುದು ಮುಖ್ಯವಾಗಿದೆ. ವಿಮಾನವು ರನ್‌ವೇ ಮೇಲಿಂದ ಸುರಕ್ಷಿತ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಆಗಲು ಮಧ್ಯಮ ಘರ್ಷಣೆಯ ಗುಣಾಂಕ ಪ್ರಮುಖವಾಗುತ್ತದೆ. ಕಡಿಮೆ ಘರ್ಷಣೆ ಗುಣಾಂಕವು ವಿಮಾನವನ್ನು ರನ್‌ವೇ ಆಚೆಗೆ ಇಲ್ಲವೇ ಎಡ ಅಥವಾ ಬಲಕ್ಕೆ ಎಳೆದೊಯ್ಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ಘರ್ಷಣೆ ಗುಣಾಂಕವನ್ನು ಮಧ್ಯದ ಮಾಪನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಿಯಮಿತ ಘರ್ಷಣೆ ಪರೀಕ್ಷೆಗಳು ರನ್‌ವೇಯಲ್ಲಿ ಸಂಭವನೀಯ ಸುರಕ್ಷತಾ ಅಪಾಯಗಳನ್ನು ಗುರುತಿಸಲು ಮತ್ತು ಪರಿಹರಿಸಲು AAI ಅನ್ನು ಸಕ್ರಿಯಗೊಳಿಸುತ್ತದೆ. ರನ್‌ವೇ ಘರ್ಷಣೆ ಪರೀಕ್ಷೆಯು ವಿಮಾನವು ಸುರಕ್ಷಿತವಾಗಿ ಇಳಿಯಬಹುದು ಮತ್ತು ಟೇಕ್ ಆಫ್ ಆಗುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಸಿಎಂ ನಿವಾಸದ ಮೇಲೆ ಕಲ್ಲು ಎಸೆದವ ಅರೆಸ್ಟ್, ಸಚಿವರ ಬಳಿ ಸಮಸ್ಯೆ ಹೇಳಿಕೊಂಡಿದ್ದ ಆರೋಪಿ
ಸುರಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಉತ್ತಮ ಖ್ಯಾತಿಯನ್ನು ಹೊಂದಿರುವ ವಿಮಾನ ನಿಲ್ದಾಣಗಳಿಗೆ ವಿಮಾನಯಾನ ಸಂಸ್ಥೆಗಳು ಹೆಚ್ಚು ಹಾರಾಟ ನಡೆಸುತ್ತವೆ. ನಿಯಮಿತ ಘರ್ಷಣೆ ಪರೀಕ್ಷೆಗಳನ್ನು ನಡೆಸುವ ಮೂಲಕ, ಕಲಬುರಗಿ ವಿಮಾನ ನಿಲ್ದಾಣವು ಸುರಕ್ಷತೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ ಮತ್ತು ಹೊಸ ವಿಮಾನಯಾನ ಸಂಸ್ಥೆಗಳನ್ನು ಆಕರ್ಷಿಸುತ್ತದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕಿ ಚಿಲ್ಕಾ ಮಹೇಶ್ ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ