
ಬೆಂಗಳೂರು, ನವೆಂಬರ್ 15: ರಾಜದಲ್ಲಿ ಚಳಿಗಾಲದ ವಾತಾವರಣ ಆರಂಭವಾಗಿದೆ. ವಾಯು ಗುಣಮಟ್ಟ ಸೂಚ್ಯಂಕದ (AQI) ಪ್ರಕಾರ, ಕರ್ನಾಟಕದಾದ್ಯಂತ ಗಾಳಿಯ ಗುಣಮಟ್ಟವು ಬಹುತೇಕ ಮಧ್ಯಮ ಹಂತದಲ್ಲಿದೆ. ಉತ್ತರ ಭಾರತದ ನಗರಗಳಲ್ಲಿ ವಾಯು ಮಾಲಿನ್ಯ ತೀವ್ರವಾಗಿರುವ ಸಂದರ್ಭದಲ್ಲಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶುದ್ಧ ಹಾಗೂ ಉಸಿರಾಡಲು ಯೋಗ್ಯವಾದ ವಾತಾವರಣ ಕಂಡುಬಂದಿದೆ. ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ತಂಪಾದ ಹವಾಮಾನದೊಂದಿಗೆ ಗಾಳಿಯ ಗುಣಮಟ್ಟ ಅತ್ಯುತ್ತಮವಾಗಿದ್ದು, ಒಳನಾಡಿನ ನಗರಗಳಲ್ಲಿ ಧೂಳಿನ ಕಣಗಳ (PM2.5 ಮತ್ತು PM10) ಪ್ರಮಾಣ ನಿಯಂತ್ರಣದಲ್ಲಿದೆ.
ಇಂದು ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 85 ರಿಂದ 98ರ ಆಸುಪಾಸಿನಲ್ಲಿ ದಾಖಲಾಗಿದ್ದು, ಮಧ್ಯಮ ವರ್ಗದಲ್ಲಿದೆ. ನಗರದ ಬಿಟಿಎಂ ಲೇಔಟ್ನಲ್ಲಿ 82ರಷ್ಟು ಕಡಿಮೆ ಸೂಚ್ಯಂಕ ಕಂಡುಬಂದರೆ, ಕಾವೇರಿ ಭವನ ಸುತ್ತಮುತ್ತ 98ರವರೆಗೆ ದಾಖಲಾಗಿದೆ. ದೀಪಾವಳಿ ಹಬ್ಬದ ಬಳಿಕ ವಾತಾವರಣದಲ್ಲಿ ಮಾಲಿನ್ಯದ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮುಂಜಾನೆಯ 20 ಡಿಗ್ರಿ ಸೆಲ್ಸಿಯಸ್ ತಂಪಾದ ವಾತಾವರಣವಿದೆ.
ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಶುದ್ಧವಾಗಿದೆ. ಕೊಡಗಿನ ಮಡಿಕೇರಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 33, ಚಿಕ್ಕಮಗಳೂರಿನಲ್ಲಿ 40 ರಿಂದ 51, ಹಾಸನದಲ್ಲಿ 46 ಮತ್ತು ಚಾಮರಾಜನಗರದಲ್ಲಿ 45ರಷ್ಟು ದಾಖಲಾಗುವ ಮೂಲಕ ಅತ್ಯಂತ ಕಡಿಮೆ ಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮ ವಿಭಾಗದಲ್ಲಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.
ಇನ್ನು ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲೂ ಪರಿಸ್ಥಿತಿ ಸಮಾಧಾನಕರವಾಗಿದೆ. ಬೆಳಗಾವಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 90ರಷ್ಟಿದ್ದು, ಇಲ್ಲಿ PM10 ಧೂಳಿನ ಕಣಗಳ ಪ್ರಮಾಣ 87 µg/m³ ರಷ್ಟಿದೆ. ತುಮಕೂರು ಜಿಲ್ಲೆಯಲ್ಲಿ 58ರಷ್ಟು ಸೂಚ್ಯಂಕ ದಾಖಲಾಗಿದ್ದು, ಉತ್ತಮ ಗಾಳಿಯನ್ನು ಹೊಂದಿದೆ. ಇನ್ನು ಕರಾವಳಿಯ ಮಂಗಳೂರು ಸೇರಿದಂತೆ ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಭಾಗಗಳಲ್ಲಿಯೂ ಸೂಚ್ಯಂಕವು 100ರ ಒಳಗೆ ಇದ್ದು, ತೃಪ್ತಿದಾಯಕ ವಾತಾವರಣ ಮುಂದುವರಿದಿದೆ.
ಇದನ್ನೂ ಓದಿ: ಕರ್ನಾಟಕದ ವಾಯುಗುಣಮಟ್ಟ: ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಹೇಗಿದೆ? ಇತರೆ ನಗರಗಳಲ್ಲಿನ ಪರಿಸ್ಥಿತಿ ಏನು?
ಬೆಂಗಳೂರು ಮತ್ತು ಬೆಳಗಾವಿಯಂತಹ ನಗರಗಳಲ್ಲಿ ಸೂಚ್ಯಂಕವು 85 ರಿಂದ 98ರ ನಡುವೆ ಇರುವುದರಿಂದ, ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವವರು ಮುಂಜಾನೆ ಮತ್ತು ಸಂಜೆಯ ವೇಳೆ ದಟ್ಟ ವಾಹನ ಸಂಚಾರವಿರುವ ರಸ್ತೆಗಳಲ್ಲಿ ಓಡಾಡುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.