Karnataka News Live: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದಿನಿಂದ (ನ.24) ಮೂರು ದಿನಗಳ ಕಾಲ ಕಂಬಳ (Kambal) ಪಂದ್ಯಾವಳಿ ನಡೆಯಲಿದೆ. ಇದೇ ಮೊದಲ ಬಾರಿಗೆ ಉದ್ಯಾನವನ ನಗರಿಯಲ್ಲಿ ನಡೆಯುತ್ತಿದೆ. ನಾಳೆ(ನವೆಂಬರ್ 25) ಸಂಜೆ 3:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕಂಬಳ ಉದ್ಘಾಟನೆ ಮಾಡಲಿದ್ದಾರೆ. ಈ ಕಂಬಳವನ್ನು ವೀಕ್ಷಿಸಲು ಲಕ್ಷಾಂತರ ಜನರು ಬರುವ ನಿರೀಕ್ಷೆ ಇದೆ. ಇನ್ನು ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಶಾಸಕ ಮತ್ತು ಸಚಿವರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆಯ್ಕೆ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಸ್ವಪಕ್ಷದಲ್ಲೇ ಅಸಮಾಧಾನ ಬುಗಿಲೆದಿದ್ದೆ. ಆದರೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿನ್ನೆ (ನ.23) ರಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಭೇಟಿಯಾಗುವ ಮೂಲಕ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಜಾತಿ ಗಣತಿ ವರದಿ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ವಾಗ್ಯುದ್ದ ಶುರುವಾಗಿದೆ. ಇದರೊಂದಿಗೆ ರಾಜ್ಯ ಲೇಲೆಸ್ಟ್ ಅಪಡೇಟ್ಸ ಇಲ್ಲಿದೆ.
ವಿಜಯಪುರ: ಸಮಾರಂಭವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಪರ ಸಾಫ್ಟ್ ಆಗಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ಧರಾಮಯ್ಯನವರ ಸರಕಾರವೇ ಇರಲಿ. ಮತ್ಯಾರ ಸರಕಾರವಾದರೂ ಇರಲಿ. ವಿಜಯಪುರಕ್ಕೆ ನಾನೇ ಮುಖ್ಯಮಂತ್ರಿ, ನಾನೇ ಮಂತ್ರಿ. ಸಿದ್ಧರಾಮಯ್ಯನವರೂ ಸಹ ಸಿಕ್ಕಾಗ ನನಗೆ ಹೇಳುತ್ತಾರೆ. ಯತ್ನಾಳ್ ನೀನು ಖರೇ ಬಹಳ ಗಟ್ಟಿ ಇದ್ದೀರಿ ಅಂತಾರೆ. ನಂದ್ಯಾವಾಗಲೂ ನಿನ್ನಂಥವರಿಗೆ ಸಪೋರ್ಟ್ ಅಂತ ಹೇಳುತ್ತಿರುತ್ತಾರೆ. ಪಾಪ ಅವರಿಗೂ ಖಾಸಗಿಯಾಗಿ ಆತ್ಮೀಯತೆ ಇರುತ್ತದಲ್ಲ. ನಾವೇನು ಪಾಕಿಸ್ಥಾನ ಇಂಡಿಯಾ ಏನು ಹೊಡೆದಾಟವಾಡಲು. ಎಲ್ಲರ ಜೊತೆ ನಮಗೊಂದು ಒಳ್ಳೆಯ ಸಂಬಂಧ ಇರುತ್ತದೆ. ಅದಕ್ಕೆ ಏನೂ ಕೊರತೆಯಾಗುವುದಿಲ್ಲ ಎಂದರು.
ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಎಚ್ಎಎಲ್ ಏರ್ಪೋರ್ಟ್ ಬಳಿ ಮಾತನಾಡಿದ
ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅಜರಾಮವಾಗಿರುತ್ತಾರೆ. ದೇಶಕ್ಕೆ ತುಂಬಲಾಗದ ನಷ್ಟವಾಗಿದೆ. ವೀರಯೋಧನ ತಂದೆ ತಾಯಿಗೆ ದುಖಃ ಭರಿಸುವ ಶಕ್ತಿ ನೀಡಲಿ ಅಂತ ಭಗವಂತನಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.
ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಹುತಾತ್ಮರಾದ ಪ್ರಾಂಜಲ್ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೆಚ್ಎಎಲ್ ಏರ್ಪೋರ್ಟ್ನಲ್ಲಿ ಪ್ರಾಂಜಲ್ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಅವರು, ಉಗ್ರರ ವಿರುದ್ಧ ಕಾಳಗದಲ್ಲಿ ಎಂ.ವಿ.ಪ್ರಾಂಜಲ್ ಹುತಾತ್ಮರಾಗಿದ್ದಾರೆ. ದೇಶ ರಕ್ಷಣೆಗೆ ಹೋರಾಡಿ ಕ್ಯಾಪ್ಟನ್ ಪ್ರಾಂಜಲ್ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಕುಟುಂಬದ ಒಬ್ಬನೇ ಮಗನನ್ನು ಪೋಷಕರು ಕಳೆದುಕೊಂಡಿದ್ದಾರೆ. ದುಃಖ ಭರಿಸುವ ಶಕ್ತಿ ದೇವರು ಅವರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.
ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಹೆಚ್ಎಎಲ್ ಏರ್‌ಪೋರ್ಟ್‌ಗೆ ತಲುಪಿದ್ದು, ಇಂಧನ ಸಚಿವ ಕೆ.ಜೆಜಾರ್ಜ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆಗಮಿಸಿದ್ದಾರೆ.
ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಾಟಕದ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಹೆಚ್ಎಎಲ್ ಏರ್‌ಪೋರ್ಟ್‌ಗೆ ತಲುಪಿದೆ. ನವೆಂಬರ್ 22ರಂದು ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಪ್ರಾಂಜಲ್ ಹುತಾತ್ಮರಾಗಿದ್ದರು.
ಸಿಬಿಐ ಪತ್ರ ಬರೆದಿದ್ದಕ್ಕೆ ಸಿಎಂ ರೆಫರ್ ಮಾಡಿದ್ದೆಂದು ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆಯ್ತು ಅವರು ಕಾನೂನು ಪ್ರಕಾರ ಮಾಡಬೇಕು ಅಲ್ವಾ? ಎಂದು ಕೇಳಿದರು. ಕಾನೂನು ಪ್ರಕಾರ ಮಾಡಬೇಕು. ಅಡ್ವಕೋಟ್ ಜನರಲ್ ಅವರು ಅಭಿಪ್ರಾಯ ಹೇಳುವ ಮುನ್ನವೇ ಅನುಮತಿ ಕೊಡಲಾಗಿದೆ. ಯಾಕೆ ಮಿಸ್ಟರ್ ಯಡಿಯೂರಪ್ಪ ಮೌಖಿಕ ಹಿತಾಸಕ್ತಿ ಇಟ್ಟುಕೊಂಡು ರೆಫರ್ ಮಾಡಿದರು ಎಂದು ಕೇಳಿದರು. ಅಲ್ಲದೆ, ಡಿಕೆಶಿಯವರು ಸಿಟ್ಟಿಂಗ್ ಎಂಎಲ್ಎ, ಅನುಮತಿ ಕೊಡಬೇಕಾದ್ದು ಸ್ಪೀಕರ್. ಇವರು ಅನುಮತಿ ತಗೊಂಡಿದ್ದಾರಾ? ಇವರು ತಗೆದುಕೊಳ್ಳಲಿಲ್ಲ, ಅದಕ್ಕೆ ಸಿಬಿಐ ತನಿಖೆಗೆ ಅನುಮತಿ ನೀಡಿರುವುದನ್ನು ಕಾನೂನು ಬಾಹಿರ ಅಂತ ಹೇಳಿದ್ದೇವೆ. ನಾವು ಕೇಸ್ ವಾಪಸ್ ಮಾಡಿಲ್ಲ, ಕಾನೂನು ಪ್ರಕಾರ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.
ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆಯಲಾಗಿದ್ದು, ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಪಾಲು ಇದೆ ಅಂತ ಬಿಎಸ್ ಯಡಿಯೂರಪ್ಪ ಆರೋಪ ಮಾಡಿದ್ದರು. ಈ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ನಮ್ಗೂ ಅದಕ್ಕೂ ಏನ್ರಿ ಸಂಬಂಧ? ಸಂಪುಟ ನಿರ್ಧಾರ ಮಾಡಿರೋದು. ನಾವು ಕ್ಯಾಬಿನೆಟ್ ಮತ್ತು ಅಡ್ವಕೋಟ್ ಜನರಲ್ ಅವರ ಅಭಿಪ್ರಾಯ ತಗೆದುಕೊಂಡಿರುವುದು. ಇವರು ಮೌಖಿಕ ಆದೇಶ ಕೊಟ್ಟಿದ್ದರು. ಲಿಖಿತ ಆದೇಶ ಕೊಟ್ಟಿರಲಿಲ್ಲ ಎಂದರು.
ಸಿಬಿಐ ತನಿಖೆಗೆ ನೀಡಿದ ಅನುಮತಿ ವಾಪಸ್ ಪಡೆಯಲು ಅಭಿಪ್ರಾಯ ನೀಡಿದ ಎಜಿ ಶಶಿಕಿರಣ್ ಶೆಟ್ಟಿ ಡಿಸಿಎಂ ಡಿ.ಕೆ.ಶಿವಕುಮಾರ್ ವಕೀಲರು ಎಂಬ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಎಜಿ ಆಗಿರುವವರು ಕಾನೂನು ಪ್ರಕಾರ ಅಭಿಪ್ರಾಯ ಕೊಡಬೇಕು. ಆದರೆ ಈಗಿನ ಎಜಿ ಕಾನೂನು ಮೀರಿ ಅಭಿಪ್ರಾಯ ನೀಡಿದ್ದಾರೆ. ಎಜಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ಹೀಗೆ ಅಭಿಪ್ರಾಯ ಕೊಡುವಂಥ ಸ್ಥಿತಿ ಬಂದಿದ್ದು ಗೌರವ ತರುವಂಥದ್ದಲ್ಲ. ಡಿಕೆ ಶಿವಕುಮಾರ್ಗೆ ಅನುಕೂಲ ಮಾಡಿಕೊಡುವಂಥ ಅಭಿಪ್ರಾಯವನ್ನೇ ನೀಡಿದ್ದಾರೆ. ನಾವು ಕೂಡಾ ಕೋರ್ಟ್ನಲ್ಲಿ ಹೋರಾಟ ಮಾಡುತ್ತೇವೆ. ಸಿಬಿಐಗೆ ಕೊಟ್ಟಿದ್ದ ಅನುಮತಿ ಸರ್ಕಾರ ಹಿಂಪಡೆದಿದ್ದನ್ನು ಕೋರ್ಟ್ ಒಪ್ಪಲ್ಲ. ಕೋರ್ಟ್ಗೆ ಹೆಚ್ಚಿನ ದಾಖಲೆ ನೀಡುವ ಸಂದರ್ಭ ಬಂದರೆ ಒದಗಿಸುತ್ತೇವೆ ಎಂದರು.
ಇಂದು ಕಾಂಗ್ರೆಸ್ ನಿಯೋಗವು ನಗರ ಪೊಲೀಸ್ ಆಯುಕ್ತರಿಗೆ ಜೆಡಿಎಸ್ ವಿರುದ್ಧ ದೂರು ನೀಡಿದೆ. ಜೆಡಿಎಸ್ ಕರುನಾಡು ಎಂಬ ಫೇಸ್ ಬುಕ್ ಪೇಜ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟರ್ ಹಾಕಿದ ಆರೋಪದಡಿ ಕಾಂಗ್ರೆಸ್ ಮುಖಂಡ ಮನೋಹರ್ ಅವರು ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಯಾವತ್ತು ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಇದು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಡಿಕೆಸಿ ಪ್ರಕರಣ ವಾಪಸ್ ಪಡೆಯಲು ಮುಂದಾಗಿದ್ದಾರೆ. ಇದು ನಾಚಿಕೆಗೇಡು, ಖಂಡನಿಯ ಎಂದು ಕೆಎಸ್ ಈಶ್ವರಪ್ಪ ಹೇಳಿದರು. ಈ ಪ್ರಕರಣಕ್ಕೆ ಸಂಬಂದಿಸಿದಂತೆ ರಾಜ್ಯದ ಪ್ರಮುಖರು ಸೇರಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವದು. ಡಿಕೆಶಿ ಮೇಲೆ ಆರೋಪ ಬಂದಿದೆ. ಮೊದಲು ರಾಜಿನಾಮೆ ಕೊಡಬೇಕು. ಡಿಕೆಶಿ ಸಚಿವ ಸಂಪುಟದಲ್ಲಿ ಇದ್ದು ಸಿಬಿಐ ದಾಖಲೆ ತಿದ್ದಬಹುದು. ಆದ್ದರಿಂದ ರಾಜೀನಾಮೆ ಕೊಡಬೇಕು. ಮುಟ್ಟಾಳ ಕೇಲಸ ಮಾಡುವದನ್ನ ಬಿಟ್ಟು ರಾಜ್ಯದ ಜನರ ಕ್ಷಮೆ ಕೇಳಬೇಕು. ಇವರು ಅಧಿಕಾರಕ್ಕೆ ಬಂದ ದಿನದಿಂದ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ನಾನು ನೇರವಾಗಿ ಹೇಳುತ್ತೆನೆ. ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲಿ ಎಷ್ಟು ಹಣ ಹೊಡೆದಿದ್ದಾರೆ ಎಂದು ನನ್ನಲ್ಲಿ ದಾಖಲೆಗಳಿವೆ. ಅಧಿಕಾರಿಗಳನ್ನ ಅವರ ಮುಂದೆ ನಿಲ್ಲಿಸುವೆ ಆದ್ದರಿಂದ ನ್ಯಾಯಾಂಗ ತನಿಖೆ ಮಾಡಬೇಕು ಎಂದರು.
ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ ಅನುಮತಿ ವಾಪಸ್ ಪಡೆದ ವಿಚಾರವಾಗಿ ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, 150 ಕೋಟಿ ಹಣ ಸಂಪಾದಿಸಿದ್ದಾರೆ. ತಿಹಾರ ಜೈಲಿಗು ಹೊಗಿಬಂದಿದ್ದಾರೆ. ಕೊರ್ಟನಲ್ಲಿ ಇವರ ಅರ್ಜಿ ಸಹ ವಜಾ ಆಗಿದೆ. ಸಿಬಿಐ ಕೊರ್ಟ್ ಹೋದಾಗ ಸ್ಪೀಕರ್ ಅನುಮತಿ ಪಡೆದಿಲ್ಲ ಅನ್ನುವ ವಿಚಾರ ಕೊರ್ಟ
ಗಮನಿಸಿರಲಿಲ್ಲವೆ? ದೇಶದ ಇತಿಹಾಸದಲ್ಲಿ ಇಂದು ರಾಜ್ಯದ ಮರ್ಯಾದೆ ಹೋಗಿದೆ. ಸಚಿವ ಸಂಪುಟ ದೇವಸ್ಥಾನದ ವಿಶೇಷ ಪವಿತ್ರ ಜಾಗ. ಕರ್ನಾಟಕದ ಕಾಂಗ್ರೆಸ್ ಸರಕಾರ ಪಾವಿತ್ರತೆಯನ್ನು ಇಡಿ ದೇಶದಲ್ಲಿ ಹಾಳುಮಾಡಿದೆ. ದೇಶದ ಯಾವದೆ ರಾಜ್ಯದಲ್ಲಿ ಸಿಬಿಐ ಕೇಸನ್ನ ಸಚಿವ ಸಂಪುಟದ ಮುಖಾಂತರ ಮಂತ್ರಗಳ ಮೇಲೆ ಬಿದ್ದ ಕೇಸನ್ನ ವಾಪಸ್ ಪಡೆದಿಲ್ಲ. ಸುಪ್ರಿಂ ಕೋರ್ಟ್ ನ್ಯಾಯಾದೀಶರು ಸಿಬಿಐ ಕೊಡುವ ಅಧಿಕಾರ ವಿನಹ ವಾಪಸ್ ಪಡೆಯುವ ಅಧಿಕಾರ ಇಲ್ಲ. ಸಿದ್ದರಾಮಯ್ಯ ಅವರು ಮಾತೆತ್ತಿದರೆ ಸಂವಿಧಾನ ಎನ್ನುತ್ತಾರೆ, ಆದರೆ ಇಂದು ಸಂವಿಧಾನವನ್ನು ಗಾಳಿಗೆ ತೂರಿ ಡಿಕೆಸಿ ಮೇಲಿನ ಕೇಸ ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಆಸಕ್ತಿ ತೋರಿ ಅನುಮತಿ ವಾಪಸ್ ಪಡೆದಿಲ್ಲ. ರಾಹುಲ್ ಗಾಂಧಿ, ಸೊನಿಯಾ ಗಾಂಧಿ ಒತ್ತಡದಿಂದ ಕೇಸ್ ವಾಪಸ್ ಪಡೆಯಲಾಗಿದೆ. ಇದು ಸಿದ್ದರಾಮಯ್ಯನವರಿಗೆ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದರು.
ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ಇವತ್ತು ಡಿಕೆ ಶಿವಕುಮಾರ್ ಅವರ ಪಾದದಡಿ ಇದೆ. ಶಿವಕುಮಾರ್ ಅವರು ಕಾನೂನು ಬಾಹಿರ ಚಟುವಟಿಕೆ ಮಾಡಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಕನಕಪುರದ ಜನ ಒಂದುಕಾಲು ಲಕ್ಷದಲ್ಲಿ ಗೆಲ್ಲಿಸಿದಾರೆ ಅಂತಾರಲ್ಲ. ಪಾಪಾ ಅವರೆಲ್ಲಾ ಬಡತನದಲ್ಲೇ ಇದ್ದಾರೆ. ಇನ್ನೂ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿ ಇದೆ. ಅವರಿಗೂ ಈ ರೀತಿ 1400 ಕೊಟಿ ಸಂಪಾದನೆ ಎರಡು ಮೂರು ವರ್ಷದಲ್ಲಿ ಹೇಗೆ ಮಾಡುವುದು? ಎರಡೇ ವರ್ಷದಲ್ಲಿ ಅದಾಯ 30%, 40 %, 200%, 300% ಏರಿಕೆ ಮಾಡುವುದು ಹೇಗೆ ಎಂದು ಬಡವರಿಗೂ ಹೇಳಿಕೊಡಲಿ. ಬಡವರು ಪುಣ್ಯವಂತರಾಗುತ್ತಾರೆ ಎಂದರು.
ವಿಧಾನಸಭೆ ವಿಪಕ್ಷನಾಯಕ ಆರ್.ಅಶೋಕ್ ಅವರನ್ನು ಮಾಜಿ ಸಚಿವ ಸಿ.ಟಿ.ರವಿ ಅವರು ಭೇಟಿಯಾದರು. ಬೆಂಗಳೂರಿನ ಅಶೋಕ್ ಅವರ ಖಾಸಗಿ ನಿವಾಸದಲ್ಲಿ ಭೇಟಿಯಾಗಿ ವಿಪಕ್ಷನಾಯಕರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ವಿಜಯಪುರ: ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವೆ. ನಮ್ಮ ಪಕ್ಷದ ಇಬ್ಬರು ಪ್ರಮುಖರಿದ್ದಾರೆ, ಅವರೂ ಇದಕ್ಕೆ ಕೈಜೋಡಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ತುಮಕೂರು: ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಎಂ ಸಿದ್ದರಾಮಯ್ಯ ಆಕ್ಟ್, ಸೆಕ್ಷನ್ ಬಗ್ಗೆ ಮಾತನಾಡುತ್ತಾರೆ. ಅಂದು ಸಿಬಿಐನವರು ಅನುಮತಿ ಕೇಳಿದ್ದರು. ಸರ್ಕಾರ ಅನುಮತಿ ನೀಡಿತ್ತು. ರಾಜ್ಯದ ಡಿಸಿಎಂ ನ್ಯಾಯಾಲಯಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ. ನ್ಯಾಯಾಲಯದ ಮುಂದೆಯೇ ಕ್ಲೀನ್ ಚೀಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್. ಇಂತಹ ಪ್ರಕರಣಗಳನ್ನು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುವುದು ಸೂಕ್ತವಾಗಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡಿಸುತ್ತೇನೆ ಎಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.
ಬೆಂಗಳೂರು: ನಗರದಲ್ಲಿ ಕಂಬಳ ನಡೆಸಬೇಕು ಎಂಬುವುದು ನಮ್ಮ ಸಂಕಲ್ಪ. ಕರಾವಳಿ ಭಾಗದ ಎಲ್ಲಾ ಸಂಘ ಸಂಸ್ಥೆ ಒಟ್ಟಿಗೆ ಸೇರಿಸಿ ಎಲ್ಲಾ ಜಾತಿಯವರು ಸಮಾಲೋಚನೆ ನಡೆಸಿ ತೀರ್ಮಾನ ಮಾಡಿದ್ದೇವೆ. ಅದರಂತೆ ಅರಮನೆ ಮೈದಾನದಲ್ಲಿ ಕಂಬಳ ನಡೆಸುತ್ತಿದ್ದೇವೆ. ಕಾಂತಾರ ಸಿನಿಮಾ ನೋಡಿದಮೇಲೆ ಕಂಬಳ ಕ್ರೇಜ್ ಜಾಸ್ತಿ ಆಗಿದೆ. ಶನಿವಾರ ಕಂಬಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಕೀಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಸುಪ್ರೀಂಕೋರ್ಟ್ ನೀಡಿದ್ದ ಹಲವು ತೀರ್ಪುಗಳು ನನ್ನ ಕಣ್ಮುಂದೆ ಇದೆ. ಇದೇ ವಿಷಯವಾಗಿ ಎರಡು ಬಾರಿ ಹೈಕೋರ್ಟ್ನಲ್ಲಿ ಚರ್ಚೆ ಆಗಿದೆ. ಈ ಕೇಸ್ ಕೋರ್ಟ್ನಲ್ಲಿ ಇದ್ದಾಗ ರಾಜ್ಯ ಸರ್ಕಾರದ ನಿರ್ಧಾರ ತಪ್ಪು. ಕಾನೂನಿಗಿಂತ ದೊಡ್ಡವರು ಎಂಬುದನ್ನು ಪ್ರದರ್ಶನ ಮಾಡಿಕೊಂಡಿದ್ದಾರೆ. ಲೂಟಿ ಮಾಡುವವರಿಗೆ ನಮ್ಮ ಸರ್ಕಾರ ಎಂಬುದನ್ನು ನಿರೂಪಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಬೆಂಗಳೂರು: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷವನ್ನು ಮುಗಿಸಬೇಕು ಅಂತ ಸಂಚು ಮಾಡುತ್ತಿದೆ. ವಿಪಕ್ಷದವರ ಧ್ವನಿ ಕಟ್ಟಿಹಾಕಲು ಕೆಲವರನ್ನು ಐಟಿ ಮತ್ತು ಇಡಿ ಮೂಲಕ ಹೆದರಿಸುತ್ತಿದೆ. ಎಐಸಿಸಿ ಅಧ್ಯಕ್ಷರಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರ ತನಕವೂ ನಾಯಕರ ವಿರುದ್ದ ಸಂಚು ರೂಪಿಸುತ್ತಿದೆ. ಅನವಶ್ಯಕವಾಗಿ ಡಿಕೆ ಶಿವಕುಮಾರ್ ಅವರ ವಿರುದ್ದ ಹಿಂದಿನ ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಸಂಚು ರೂಪಿಸುವ ಕೆಲಸ ಮಾಡಿತ್ತು. ಕೊಲೆ ಮಾಡಿದರೂ ಪರವಾಗಿಲ್ಲ ಅಂತವರಿಗೆ ಏನೂ ಆಗಿಲ್ಲ. ಆದರೆ ನಮ್ಮನ್ನು ಮಾತ್ರ ಹೆದರಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಚಿನ್ನದಂತಹ ಅವಕಾಶವಿದೆ. ತಾವು ಸತ್ಯಹರಿಶ್ಚಂದ್ರ ಅಂತ ಸಾಬೀತು ಮಾಡುವ ಅವಕಾಶ ಇದೆ. ನೀವು ತಪ್ಪು ಮಾಡಿಲ್ಲ ಅನ್ನೋದನ್ನು ತನಿಖೆ ಎದುರಿಸಿ ತೋರಿಸಿ. ಸಚಿವ ಸಂಪುಟ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಯಾವ ರೀತಿ ಹೋರಾಟ ಮಾಡಬೇಕೆಂದು ಚರ್ಚೆ ನಡೆಸಿ ನಿರ್ಧಾರ. ನಮ್ಮ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತವಲ್ಲ. ಪ್ರಾಥಮಿಕ ತನಿಖೆ ಮಾಹಿತಿ ಆಧರಿಸಿ ಸಿಬಿಐ ತನಿಖೆಗೆ ಕೊಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬೆಂಗಳೂರು: ರಾಜ್ಯ ಸರ್ಕಾರದ ಈ ನಿರ್ಣಯ ಸಂಪೂರ್ಣ ಕಾನೂನು ಬಾಹಿರ. ಐಟಿ ದಾಳಿ ವೇಳೆ ರಾಜ್ಯ ಮತ್ತು ಬೇರೆ ಕಡೆ ಸಾಕಷ್ಟು ಹಣ ಸೀಜ್ ಆಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ಕಾನೂನಿನ ವಿರುದ್ಧವಾಗಿ ಈ ನಿರ್ಣಯ ಕೈಗೊಂಡಿದೆ. ಡಿ.ಕೆ.ಶಿವಕುಮಾರ್ರನ್ನು ಉಳಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಕಾನೂನಿನ ಭಯ ಇದೆಯಾ? ಡಿಕೆ ಶಿವಕುಮಾರ್ ಅವರೇ ಸರ್ಕಾರದ ನಿರ್ಧಾರ ವಿರೋಧಿಸಬೇಕಿತ್ತು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸರ್ಕಾರ ವಾಪಸ್ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ದರೋಡೆಕೋರರನ್ನು ರಕ್ಷಣೆ ಮಾಡಲು ಈ ಸರ್ಕಾರ ಇರುವುದು. ಕೋರ್ಟ್ನಲ್ಲಿ ಏನು ನಿರ್ಧಾರ ಆಗುತ್ತೆಂದು ನೋಡಿ ಮಾತಾಡುತ್ತೇನೆ. ಮರ್ಯಾದೆ ಇಲ್ಲದವರಿಗೆ ಕೋರ್ಟ್ನಲ್ಲಿ ಇದ್ದರೇನು, ಎಲ್ಲಿದ್ದರೇನು? ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಳ್ಳುತ್ತೇವೆ ಅನ್ನೋ ದುರಹಂಕಾರ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪರೋಕ್ಷವಾಗಿ ಕಡಿಕಾರಿದ್ದಾರೆ.
ಶಿವಮೊಗ್ಗ: ಸರ್ಕಾರದ ಈ ತೀರ್ಮಾನ ಕಾನೂನು ಬಾಹಿರ. ಹೈಕೋರ್ಟ್ನಲ್ಲಿ ಇನ್ನೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನ ಬದ್ಧ ಸಂಸ್ಥೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ರಾಜ್ಯಕ್ಕೆ ಇದೊಂದು ಕೆಟ್ಟ ಸಂದೇಶ ರವಾನೆಯಾಗಿದೆ. ಇದನ್ನು ಸಮಾಜ ಮತ್ತು ನ್ಯಾಯಾಂಗ ಗಮನಿಸುತ್ತದೆ. ಪ್ರತಿರೋಧ ಬರುವ ತೀರ್ಪು ಬಂದರೇ ಅಚ್ಚರಿ ಪಡಬೇಕಿಲ್ಲ. ಅವರ ತಪ್ಪುನ್ನು ಮುಚ್ಚಿಕೊಳ್ಳುವುದಕ್ಕೆ ಹೋರಟಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದವರಿಗೆ ದಲಿತರಿಗೆ ದ್ರೋಹ ಮಾಡುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ನ್ಯಾಯಲಯಕ್ಕೆ ಅಲೆಯುತ್ತಿದ್ದಾರೆ. ಸಚಿವ ಸಂಪುಟದ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ. ನೂರಕ್ಕೆ ನೂರರಷ್ಟು ಡಿಕೆ ಶಿವಕುಮಾರ್ ವಿರುದ್ಧವಾಗಿ ತೀರ್ಪು ಬರಲಿದೆ. ನೂರಕ್ಕೆ ನೂರರಷ್ಟು ಡಿಕೆ ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಡಿಕೆ ಶಿವಕುಮಾರ್ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡರು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಬೆಂಗಳೂರು: ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು (ನ.24) ಬೆಂಗಳೂರಿಗೆ ಆಗಮಿಸಲಿದೆ. ಹೆಚ್ಎಎಲ್ ಏರ್‌ಪೋರ್ಟ್‌ಗೆ ಬರಲಿರುವ ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಸರ್ಕಾರ ವತಿಯಿಂದ ಗೌರವ ಸಲ್ಲಿಸಲಾಗುತ್ತದೆ. ನಂತರ ಬನ್ನೇರುಘಟ್ಟ ಸಮೀಪ ನಂದನವನ ಲೇಔಟ್ ನಿವಾಸಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಇಲ್ಲಿ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸುತ್ತಾರೆ. ಪ್ರಾಂಜಲ್ ಅವರ ತಂದೆ ವೆಂಕಟೇಶ್ ಎಂಆರ್ಪಿಎಲ್ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ. ಎಂಆರ್ಪಿಎಲ್ ಅಧಿಕಾರಿ ಸುದರ್ಶನ್ ಸೇರಿದಂತೆ 10 ಜನ ಸಿಬ್ಬಂದಿ ಪ್ರಾಂಜಲ್ ಅವರ ಮನೆಯಲ್ಲಿ ಮೊಕ್ಕಾಂ ಹೋಡಿದ್ದಾರೆ. ಸಿಬ್ಬಂದಿ ಮನೆಯ ಬಳಿ ಅಂತಿಮ ದರ್ಶನಕ್ಕೆ ಎಲ್ಲಾ ಸಿದ್ಧತೆ ಮಾಡುತ್ತಿದ್ದಾರೆ. ಸೋಮಸಂದ್ರಪಾಳ್ಯದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಅರಮನೆ ಮೈದಾನದಲ್ಲಿ ಇಂದಿನಿಂದ 3 ದಿನ ಕಂಬಳ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಾಹನ ಮಾರ್ಗಸೂಚಿ ನೀಡಿದ್ದಾರೆ. ಕಂಬಳ ವೀಕ್ಷಣೆಗೆ ಬರುವವರ ಪ್ರವೇಶ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ. ಸಿಬಿಡಿ ಏರಿಯಾ, ಮೇಖ್ರಿ ಸರ್ಕಲ್ ಬಳಿಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೆಬ್ಬಾಳ, ಮೇಖ್ರಿ ಸರ್ಕಲ್ ಅಂಡರ್ ಪಾಸ್, ಯಶವಂತಪುರ ಕಡೆಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ರ ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕ್ಯಾಬ್ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶಿಸಬೇಕು. ಗೇಟ್ ನಂಬರ್ 3ರ ಮೂಲಕ ಕ್ಯಾಬ್ಗಳು ನಿರ್ಗಮಿಸಬೇಕು ಎಂದು ತಿಳಿಸಿದ್ದಾರೆ.
ಅರಮನೆ ರಸ್ತೆ, ಬಿಡಿಎ ಜಂಕ್ಷನ್ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್ನಿಂದ ಹಳೇ ಉದಯ ಟಿವಿ ಜಂಕ್ಷನ್ವರೆಗೆ ಎಂ.ವಿ ಜಯರಾಂ ರಸ್ತೆ ಬಳಸುವಂತೆ ಸೂಚಿಸಿದ್ದಾರೆ. ಮೇಖ್ರಿ ವೃತ್ತದಿಂದ LRDE ಜಂಕ್ಷನ್ವರೆಗೆ ಬಳ್ಳಾರಿ ರಸ್ತೆ ಬಳಸಬೇಕು. ಅರಮನೆ ರಸ್ತೆಯಲ್ಲಿ ಸಂಚರಿಸುವವರು ಜಯಮಹಲ್ ರಸ್ತೆ ಬಳಸಬೇಕು. ಪ್ಯಾಲೆಸ್ ರಸ್ತೆ, ಎಂ.ವಿ.ಜಯರಾಂ ರಸ್ತೆ, ಸಿ.ವಿ.ರಾಮನ್ ರಸ್ತೆ, ವಸಂತ ನಗರ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ಮೌಂಟ್ ಕಾರ್ಮಲ್ ರಸ್ತೆ ಬಳಿ ವಾಹನ ನಿಲುಗಡೆಗೆ ನಿರ್ಬಂಧಿಸಲಾಗಿದೆ.
ಬೆಂಗಳೂರು: ಬೆಂಗಳೂರು ಅರಮೆನೆ ಮೈದಾನದಲ್ಲಿ ಇಂದಿನಿಂದ (ನ.24) ಮೂರು ದಿನಗಳ ಕಾಲ ಕಂಬಳ ಪಂದ್ಯ ನಡೆಯಲಿದೆ. ಇಂದು ಬೆಳಗ್ಗೆ 10 ಗಂಟೆಗೆ ಕಂಬಳ ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ. ಕಂಬಳದಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗಿಯಾಗಲಿವೆ. ಕಂಬಳಕ್ಕೆಂದೇ ರಾಜಮಹಾರಾಜ ಹೆಸರಿನ ಟ್ರ್ಯಾಕ್ ತಯಾರಾಗಿದೆ. 157 ಮೀಟರ್ ಉದ್ದ, 8 ಮೀಟರ್ ಅಗಲ ಟ್ರ್ಯಾಕ್ ಒಳಗೊಂಡಿದೆ. ಕಂಬಳ ವೀಕ್ಷಣೆಗೆ ಸುಮಾರು 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದೆ.
Published On - 8:01 am, Fri, 24 November 23