ಅ.15ರವರೆಗೆ 3000 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶ ನೀಡಿರುವ ಹಿನ್ನೆಲೆ ಸೆ.29ರಂದು ಇಡೀ ಕರ್ನಾಟಕ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದ್ದು ಇಂದು ಕೂಡ ಪ್ರತಿಭಟನೆ ಮುಂದುವರೆದಿದೆ. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಇಂದು ಕೂಡ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ CWMA ಆದೇಶ ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧಾರ ಮಾಡಿದೆ. ಇಂದು CWMA, ಸುಪ್ರೀಂಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ಮುಂದಾಗಿದೆ. ಇದೆಲ್ಲದರ ನಡುವೆ ರಾಜ್ಯದಲ್ಲಿ ರಾಜ್ಯದಾದ್ಯಂತ ಮುಂದಿನ ಐದು ದಿನಗಳ ಕಾಲ ಸಂಚಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು (ಸೆ.30) ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಇನ್ನೂ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ನಮ್ಮ ಸರ್ಕಾರ ಸುಭದ್ರವಾಗಿದೆ, ಪಕ್ಷ ಬಿಟ್ಟು ಯಾರೂ ಹೋಗುವವರಿಲ್ಲ. ರಾಜ್ಯದ ಜನರಿಗೆ ನಾವು ನೀಡಿದ್ದ 5 ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. ಜನ ಒಳ್ಳೆಯ ಆಡಳಿತ ಬಯಸುತ್ತಿದ್ದಾರೆ, ಅದನ್ನು ನಾವು ಕೊಡುತ್ತಿದ್ದೇವೆ. ಜೆಡಿಎಸ್ ಪಾರ್ಟಿಯೇ ಇವತ್ತು ಕುದುರೆ ವ್ಯಾಪಾರ ಆಗಿಬಿಟ್ಟಿದೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ನಾಳೆ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಹಿನ್ನೆಲೆ ನಾಳೆ ಬೆಳಗ್ಗೆ 11.30ಕ್ಕೆ ನವದೆಹಲಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತೆರಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎರಡು ಸಲ ಸಿಎಂ ಆಗಿದ್ದವರು. ಅಧಿಕಾರ ಪಡೆದು ಕಳೆದುಕೊಂಡವರು, ಎಲ್ಲ ಅನುಭವದಿಂದ ಹೇಳಿದ್ದಾರೆ ಎಂದು ತುಮಕೂರಿನಲ್ಲಿ ಟಿವಿ9ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಗಲಭೆ ಪ್ರಕರಣ ಮ್ಯಾಜಿಸ್ಟ್ರೇಟ್ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ನಾನು ವರದಿ ನೋಡಿಲ್ಲ, ವರದಿ ನೋಡದೆ ಹೇಗೆ ಮಾತಾಡಲಿ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವದರ ಜೊತೆಗೆ ಜನಸಾಮಾನ್ಯರು ಸ್ವಾಭಿಮಾನದ ಬದುಕು ಸಾಗಿಸಲು ಸರಕಾರ ಸದಾ ಬದ್ಧವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಸರ್ಕಾರ ಎಸ್ಸಿ ಎಸ್ಟಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದಾರೆ. ಹಿಂದುಳಿದ ವರ್ಗಗಳಿಗೂ ನೀಡಿದ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಮೊದಲು ಎಸ್ಸಿ ಎಸ್ಟಿ ಹಣವನ್ನು ವಾಪಸ್ ಕೊಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಐಪಿಎಸ್ ಅಧಿಕಾರಿ ವರ್ಗಾವಣೆ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಗ್ನಿಶಾಮಕ ದಳದ ಡಿಐಜಿಯಾಗಿ ರವಿ ಡಿ ಚೆನ್ನಣ್ಣನವರ್ ವರ್ಗಾವಣೆ ಮಾಡಲಾಗಿದೆ.
ಶಾಮನೂರು ಶಿವಶಂಕರಪ್ಪ ನೇರವಾಗಿ ಸಿಎಂ ಬಳಿ ಮಾತನಾಡಲಿ. ಸಿಎಂ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಾರೆ. ಡಿಸಿಎಂ ಸಿಎಂ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಎಲ್ಲರಿಗೂ ಅಂತಿಮ. ವೈಯಕ್ತಿಕ ಹೇಳಿಕೆ ಏನು ಬೇಕಾದರೂ ಕೊಡಬಹುದು. ಅದು ಅವರ ಹಕ್ಕು, ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ. ಈ ಕುರಿತು ಮೊನ್ನೆ ಬೆಂಗಳೂರಿನಲ್ಲಿ ನಡೆದ ಹಾನಗಲ್ ಕುಮಾರಸ್ವಾಮೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದೆ. ಆ ಹೇಳಿಕೆಗೆ ನಾನು ಬದ್ದ ಎಂದು ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ: ಈ ಸಂಬಂಧ ನಾನು ನೀಡಿರುವ ಹೇಳಿಕೆಗೆ ಬದ್ಧ: ಶಾಸಕ ಶಾಮನೂರು
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಯಲ್ಲಿ ಸತ್ಯ ಇದೆ ಎಂದು ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಲಿಂಗಾಯತ ಅಧಿಕಾರಿಗಳ ಮೂಲೆಗುಂಪು ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ನನಗೂ ಹಲವು IAS, IPS ಅಧಿಕಾರಿಗಳು ಕರೆ ಮಾಡಿ ಹೇಳಿದ್ದಾರೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಬಳಿ ಮಾಹಿತಿ ಇರಬಹುದು, ಹಾಗಾಗಿ ಹೇಳಿದ್ದಾರೆ. ಕಳೆದ 4 ತಿಂಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ. ಸಿಎಂ ಸಿದ್ದರಾಮಯ್ಯ ಬಗ್ಗೆ MLC ಬಿ.ಕೆ.ಹರಿಪ್ರಸಾದ್ ಮಾತಾಡಿದ್ದಾರೆ. ಇನ್ನೊಂದು ಕಡೆ ಸಹಕಾರ ಇಲಾಖೆ ಸಚಿವ ರಾಜಣ್ಣ ಮಾತಾಡಿದ್ದಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯು ಜಾತ್ಯಾತೀತವಾಗಿರುವುದು ಅಗತ್ಯ. ನಮ್ಮಲ್ಲಿ ಅನೇಕ ಜಾತಿ ಧರ್ಮಗಳಿವೆ. ಇದರಲ್ಲಿ ನಾವು ಏಕತೆಯನ್ನ ಕಾಣಬೇಕು. ಎಲ್ಲರಲ್ಲೂ ಮನುಷ್ಯತ್ವ ಕಾಣಬೇಕು. ಬೇರೆ ಸಮುದಾಯವರು ಈ ಕಟ್ಟಡಕ್ಕೆ ಸೌಹಾರ್ದ ಭವನ ಅಂತ ಹೆಸರು ಇಟ್ಟಿರುವುದು ತುಂಬಾ ಸಂತೋಷ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಒಂದು ಬಣ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ತೆಗಿಬೇಕು ಅಂತಿದೆ. ಇನ್ನೊಂದು ಬಣ ಡಿ.ಕೆ.ಶಿವಕುಮಾರ್ ಕಟ್ಟಿಹಾಕಲು ಪ್ಲ್ಯಾನ್ ಮಾಡುತ್ತಿದೆ. ಕಾಂಗ್ರೆಸ್ನ ಶಾಸಕರು ಹಾಗೂ ಸಚಿವರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಬಗ್ಗೆ ಕುಮಾರಸ್ವಾಮಿ ಮಾತಾಡಿ ಬಂದಿದ್ದಾರೆ. ಇದು ಸರಿಯೋ ಅಲ್ಲವೋ ಎಂಬ ಬಗ್ಗೆ ಹೆಚ್ಡಿಕೆ ಜತೆ ಚರ್ಚಿಸುವೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಹೆಚ್ಡಿಕೆ ದೆಹಲಿಗೆ ಹೋಗುವಾಗ ನನಗೆ ಒಂದು ಮಾತು ಹೇಳಿಲ್ಲ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದರು.
ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗ್ತಿಲ್ಲ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಕ್ಕೆ, ಲಿಂಗಾಯತರೇ 7 ಮಂದಿ ಸಚಿವರಿಲ್ವಾ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನನ್ನ ಬಳಿ ಅಂಕಿಅಂಶಗಳಿವೆ. ನಮ್ಮ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದರು. ಈಗ ಜನತಾ ದಳ ಉಳಿವಿಗಾಗಿ ಬಿಜೆಪಿ ಜೊತೆ ಸೇರುತ್ತಿದ್ದೇವೆ ಅಂತಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಅಧಿಕಾರ ಇರಲಿ ಇಲ್ಲದಿರಲಿ, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲ್ಲ. ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ ಎತ್ತಿಕಟ್ಟೋದು ರಾಜಕಾರಣನಾ? ಜನರನ್ನು ಬಿಟ್ಟು, ಸಮಾಜ ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ಜಾತ್ಯತೀತ ಪಕ್ಷ ಅಂತ ಯಾವುದಾದರು ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಸಿದ್ದರಾಮಯ್ಯ ಗುಡುಗಿದರು.
ರಾಯಚೂರು ನಗರದ ಜಲಾಲ್ ನಗರದಲ್ಲಿ ಸೆ.23ರಂದು ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್ ಮಾಡ್ತಾ ಕುಸಿದು ಬಿದ್ದು ಮಹಿಳೆ ಮೃತಪಟ್ಟಿದ್ದಾರೆ. ತೆಲುಗು ಹಾಡಿಗೆ ಹೆಜ್ಜೆ ಹಾಕುವ ವೇಳೆ ಹೃದಯಾಘಾತವಾಗಿ ಮಹಿಳೆ ಬಿದ್ದು ಮೃತಪಟ್ಟಿದ್ದಾರೆ. ಅನಂತಮ್ಮ(56) ಸಾವನ್ನಪ್ಪಿದ್ದ ಮಹಿಳೆ. ರಾಯಚೂರಿನ ಮಾರ್ಕೆಟ್ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಸಭಾ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಬಿಜೆಪಿಯಲ್ಲಿ ವಿಲೀನ ಆದರೂ ಅಚ್ಚರಿಪಡಬೇಕಿಲ್ಲ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚುನಾವಣೆ ವೇಳೆಗೆ JDS ಬಿಜೆಪಿಯಲ್ಲಿ ವಿಲೀನವಾದರೂ ಅಚ್ಚರಿಪಡಬೇಕಿಲ್ಲ. ಆದರೆ ಇದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡರು ಒಪ್ಪಿಗೆ ಇಲ್ಲ. ಹೀಗಾಗಿ ಚುನಾವಣೆಗೆ ಮಾತ್ರ ಜೆಡಿಎಸ್-ಬಿಜೆಪಿ ಮೈತ್ರಿ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಬಹುದು. ಕುಮಾರಸ್ವಾಮಿ, ಜೆಡಿಎಸ್ ನಾಯಕರು ಬಿಜೆಪಿಯಲ್ಲಿ ವಿಲೀನವಾಗಬಹುದು ಎಂದರು.
ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೆಚ್ಡಿ ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ 4 ವರ್ಷ 8 ತಿಂಗಳು ಇರುತ್ತೆ. ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆ. ಅದರ ಮೇಲೆ 5 ವರ್ಷ ಇರ್ತೀವಿ. ಕೆಲವು ಹಿರಿಯರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಮುಂದಕ್ಕೆ ಅವಕಾಶ ಸಿಗುತ್ತೆ. ನೂರಕ್ಕೆ ನೂರು ಭಾಗ ಸರ್ಕಾರ ಐದು ವರ್ಷ ಪೂರೈಸುತ್ತೆ ಎಂದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಕ್ತಾಪುರ ಗ್ರಾಮದ ಕಸ್ತೂರಿಬಾ ವಸತಿ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕಲುಷಿತ ನೀರು ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. THO ಡಾ.ಆರ್.ವಿ.ನಾಯಕ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಹುಧಾ ಪಾಲಿಕೆ ಮುಂದೆ ಗುತ್ತಿಗೆ ಪೌರ ಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಗುತ್ತಿಗೆ ಪೌರ ಕಾರ್ಮಿಕರ ಸಂಬಳ ನೀಡಿಲ್ಲ. ಸುಮಾರು 300ಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರಿಗೆ ಸಂಬಳ ಬಂದಿಲ್ಲ. ಕಳೆದ ಹಲವಾರು ವರ್ಷಗಳಿಂದ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿರೋ ಕಾರ್ಮಿಕರನ್ನು ಖಾಯಂ ಮಾಡಬೇಕು, ಸಂಬಳ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪೊರಕೆ ಹಿಡಿದು ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಲಾಗುತ್ತಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ CWMA ಸೂಚನೆ ಹಿನ್ನೆಲೆ ಚಾಮರಾಜನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ಮುಂದುವರೆದಿದ್ದು ಮಳೆಯ ನಡುವೆಯೂ ಕೈಯಲ್ಲಿ ತೆಂಗಿನ ಚಿಪ್ಪು ಹಿಡಿದು ವಿನೂತನ ಧರಣಿ ನಡೆಸಿದ್ದಾರೆ. ಹಾಲಾಲ್ ಟೋಪಿ ರಾಜಕಾರಣಿಗಳಿಗೆ ಧಿಕ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಹೆಚ್ಡಿಕೆ ಯಾವಾಗ ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ ಗೊತ್ತಿಲ್ಲ ಎಂದು ತುಮಕೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಇನ್ನು ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗ್ತಿಲ್ಲ ಎಂಬ ಶಾಮನೂರು ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಅದನ್ನೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಿಸುತ್ತಾರೆ. ಜಾತಿ ಆಧಾರದ ಮೇಲೆ ಅಧಿಕಾರಿಗಳನ್ನು ಹಾಕುವುದು ಮಾಡುವುದಿಲ್ಲ. ಯಾರು ಸಮರ್ಥ ಹಾಗೂ ಪ್ರಾಮಾಣಿಕರಿದ್ದಾರೆ ಅವರು ಕೆಲಸ ಮಾಡ್ತಾರೆ ಎಂದರು.
ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆದಿದ್ದ ಆರೋಪಿ ಬಂಧನ ಪ್ರಕರಣಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆದರಿಕೆ ಕರೆ ಬಂದಿರುವ ಬಗ್ಗೆ ಸಾಹಿತಿಗಳು ನನ್ನ ಬಳಿ ಹೇಳಿಕೊಂಡಿದ್ದರು. ಸಿಸಿಬಿ ಪೊಲೀಸರು ದಾವಣಗೆರೆ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಆ ಪತ್ರದ ಹಸ್ತಾಕ್ಷರ ನೋಡಿ ಆರೋಪಿ ಬಂಧಿಸಿದ್ದಾರೆ. ಬೆದರಿಕೆ ಪತ್ರ ಯಾರು ಬರೆಸುತ್ತಿದ್ದಾರೆ ಅನ್ನೋದು ತನಿಖೆ ಆಗಲಿದೆ ಎಂದರು.
ಬೆಂಗಳೂರಿನ HBR ಲೇಔಟ್ನಲ್ಲಿರುವ ಬ್ಯಾರಿ ಸೌಹಾರ್ದ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದರು. ಸಚಿವರಾದ ಜಾರ್ಜ್, ದಿನೇಶ್ ಗುಂಡೂರಾವ್, ಸ್ಪೀಕರ್ ಖಾದರ್, ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ನಜೀರ್ ಅಹ್ಮದ್ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ವಂಚಕರ ಜಾಲ ಬಯಲಾಗಿದೆ. ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸರಿಂದ ವಂಚಕರ ತಂಡ ಬಂಧನವಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನೀಡಿದರು. 84 ಬ್ಯಾಂಕ್ ಅಕೌಂಟ್ನಲ್ಲಿ 854 ಕೋಟಿ ಹಣದ ವಹಿವಾಟು ಪತ್ತೆಯಾಗಿದೆ. ದೇಶಾದ್ಯಂತ ಸೈಬರ್ ಕ್ರೈಮ್ ಸಂಬಂಧ 5013 ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 17 ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿತ್ತು.
ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀ ಸೇರಿ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಸಚಿವ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪ್ರೀಯಾಂಕ್ ಖರ್ಗೆ ಹಾಗೂ ಹಲವು ಪ್ರಗತಿಪರರು ವಿಚಾರವಾದಿಗಳಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಕಳೆದ ತಿಂಗಳಷ್ಟೆ ನಿಜಗುಣಾನಂದ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ಅದೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ನಿಷ್ಕಲಮಂಟಪಕ್ಕೆ ಪತ್ರ ಬಂದಿದೆ. ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ.ಅಥವಾ ಸಾವಿನ ಪತ್ರವಂತಾದರೂ ತಿಳಿ, ನಾನು ನಿನ್ನ ಜತೆ ತಮಾಷೆ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೆ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿರುವ ಹಾಸ್ಟೆಲ್ಗೆ ಎಸಿ ಹಾಗೂ ತಹಶೀಲ್ದಾರ್ ಧಿಡೀರ್ ಭೇಟಿ ನೀಡಿ ಹಾಸ್ಟಲ್ ಪರಿಶೀಲನೆ ನಡೆಸಿದ್ದಾರೆ. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಎಸಿ ಗೌರವ್ ಕುಮಾರ್ ಶೆಟ್ಟಿ, ಗುಬ್ಬಿ ತಹಶೀಲ್ದಾರ್ ಆರತಿ.ಬಿ ಧಿಡೀರ್ ಭೇಟಿ ನೀಡಿದ್ದು ಹಾಸ್ಟೆಲ್ ಸಿಬ್ಬಂದಿ ತಬ್ಬಿಬ್ಬಾದರು. ಹಾಸ್ಟೆಲ್ನ ಅಡುಗೆ ಕೊಠಡಿ, ಶೌಚಾಲಯ, ವಿದ್ಯಾರ್ಥಿಗಳ ಕೊಠಡಿ ಪರಿಶೀಲಿಸಿ ಹಾಸ್ಟೆಲ್ನಲ್ಲಿ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ನಡೆಸಿದರು. ಸಂಜೆ ವೇಳೆ ವಾರ್ಡನ್ ಕರ್ತವ್ಯದಲ್ಲಿ ಇಲ್ಲದನ್ನ ಪ್ರಶ್ನಿಸಿದ ಅಧಿಕಾರಿಗಳು ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ದೇಗುಲದಲ್ಲಿ ಚನ್ನಕೇಶವಸ್ವಾಮಿ ದೇಗುಲದ ಭಕ್ತರು, ಆಡಳಿತ ಮಂಡಳಿ ನಡುವೆ ಜಟಾಪಟಿ ನಡೆದಿದೆ. ಅಡ್ಡೆಗಾರರಿಗೆ ಅಗೌರವ ಆರೋಪ ಉತ್ಸವದಲ್ಲಿ ಅಡ್ಡೆಹೊರಲು ನಿರಾಕರಿಸಲಾಗಿದೆ. ಆಡಳಿತಾಧಿಕಾರಿ ತಹಶೀಲ್ದಾರ್ ಮಮತಾ ವಿರುದ್ಧ ಅಡ್ಡೆಗಾರರು ಆಕ್ರೋಶ ಹೊರ ಹಾಕಿದ್ದು ಚನ್ನಕೇಶವಸ್ವಾಮಿ ಅನಂತ ಪದ್ಮನಾಭ ಉತ್ಸವಕ್ಕೆ ಅಡ್ಡೆಗಾರರು ಬಂದಿಲ್ಲ.
ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬೆನ್ನು ಅವರಿಗೆ ಕಾಣುವುದಿಲ್ಲ, ನಾಲಿಗೆಗೂ ಮೂಳೆ ಇರುವುದಿಲ್ಲ. ಸಿಎಂ ಸೀಟಿನಲ್ಲಿ ಕೂತರೂ ‘ಸಿದ್ದಸುಳ್ಳು'ಗಳಿಗೆ ಕೊರತೆಯೇನೂ ಇಲ್ಲ. ಜಾತ್ಯತೀತ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಎಂದು ಟಂಗ್ ಕೊಟ್ಟಿದ್ದಾರೆ.
ಅವರ ಬೆನ್ನು ಅವರಿಗೆ ಕಾಣುವುದಿಲ್ಲ. ನಾಲಿಗೆಗೂ ಮೂಳೆ ಇರುವುದಿಲ್ಲ. ಸಿಎಂ ಸೀಟಿನಲ್ಲಿ ಕೂತರೂ 'ಸಿದ್ದಸುಳ್ಳು'ಗಳಿಗೆ ಕೊರತೆಯೇನೂ ಇಲ್ಲ.
' ಜಾತ್ಯತೀತ ' ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ… pic.twitter.com/MeyrSH2mHa
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 30, 2023
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಿಳ್ಳೇನಹಳ್ಳಿಯಲ್ಲಿ ದಾಯಾದಿಗಳ ಕಲಹಕ್ಕೆ ಒಂದು ಎಕರೆ ಅಡಕೆ ತೋಟ ನಾಶವಾಗಿದೆ. ಕಿಡಿಗೇಡಿಗಳು ರಾತ್ರೋರಾತ್ರಿ 400 ಅಡಕೆ ಗಿಡಗಳನ್ನ ಕಡಿದು ಹಾಕಿದ್ದಾರೆ. ದಾಯಾದಿಗಳ ನಡುವಿನ ಆಸ್ತಿ ಗಲಾಟೆಗೆ ಗ್ರಾಮದ ರಮೇಶ್ ಎಂಬುವವರಿಗೆ ಸೇರಿದ ಅಡಕೆ ತೋಟ ನಾಶವಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಶಂಕರ್ ನಾಯಕ, ರವಿ ನಾಯಕ, ಧನ್ಪಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಬಸ್ನಲ್ಲಿ ಮಂಗಳಮುಖಿಯನ್ನ ಅಪಹಾಸ್ಯ ಮಾಡಿ, ನಿಂದಿಸಿ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮಂಗಳಮುಖಿ ಸಾನ್ವಿಕ ಬಿಎಂಟಿಸಿ ಬಸ್ ಕಂಡಕ್ಟರ್ ವಿರುದ್ಧ ದೂರು ನೀಡಿದ್ದಾರೆ. ಮಾದನಾಯಕನಹಳ್ಳಿ ಬಳಿಯಿಂದ ನೆಲಮಂಗಲ ಟೌನ್ಗೆ ಬರುತ್ತಿದ್ದಾಗ ಟಿಕೆಟ್ ಖರೀದಿ ವಿಚಾರದಲ್ಲಿ ಕಂಡಕ್ಟರ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನೆಲಮಂಗಲ ಟೌನ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಒಂದೇ ವಾರದಲ್ಲಿ ಎರಡು ಬಂದ್ ಹಿನ್ನೆಲೆ ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ಲಾಸ್ ಆಗಿದೆ. ಕಾವೇರಿ ನೀರಿಗಾಗಿ ಕರೆದಿದ್ದ ಮಂಗಳವಾರದ ಬೆಂಗಳೂರು ಬಂದ್, ಶುಕ್ರವಾರದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಿಎಂಟಿಸಿ ಕೆಎಸ್ಆರ್ಟಿಸಿ ಹಾಗೂ ಮೆಟ್ರೋ ನಿಗಮಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಮೂರು ನಿಗಮಗಳಿಗೆ ಅಂದಾಜು 15 ಕೋಟಿ ರುಪಾಯಿ ನಷ್ಟ ಉಂಟಾಗಿದೆ. ಮಂಗಳವಾರ ಮತ್ತು ಶುಕ್ರವಾರದ ಬಂದ್ ನಿಂದ ಬೆಂಗಳೂರಿನ ಹೋಟೆಲ್ಗಳಿಗೆ ಅಂದಾಜು- 100 ರಿಂದ 120 ಕೋಟಿ ರೂಪಾಯಿ ನಷ್ಟವಾಗಿದೆ.
ಕರ್ನಾಟಕ ಮತ್ತು ಬೆಂಗಳೂರು ಬಂದ್ನಿಂದ ರಾಜ್ಯಕ್ಕೆ ಕೋಟಿ ಕೋಟಿ ರೂ. ಲಾಸ್#KarnatakaBandh #BengaluruBandh #KarnatakaGovernmenthttps://t.co/FDZHKVnKRC
— TV9 Kannada (@tv9kannada) September 30, 2023
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಗರಿಷ್ಠಮಟ್ಟ 124.80 ಅಡಿ ಇದೆ. ಇಂದಿನ ಮಟ್ಟ 97.78 ಅಡಿ, ಒಳಹರಿವು 4153 ಕ್ಯೂಸೆಕ್, ಹೊರಹರಿವು 2176 ಕ್ಯೂಸೆಕ್, ಟಿಎಂಸಿ ಲೆಕ್ಕದಲ್ಲಿ 49.452. ಇಂದಿನ ಟಿಎಂಸಿ 21.12 ಇದೆ.
ಸಾಹಿತಿಗಳಿಗೆ ಜೀವ ಬೆದರಿಕೆ ಹಾಕಿದ್ದ ಶಿವಾಜಿ ರಾವ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಆರೋಪಿಯನ್ನು 10 ದಿನ ಕಸ್ಟಡಿಗೆ ಪಡೆದಿದ್ದಾರೆ. ಒಟ್ಟು 7 ಪ್ರಕರಣಗಳನ್ನು ಸಿಸಿಬಿಗೆ ನೀಡಿ ಆದೇಶ ಮಾಡಲಾಗಿತ್ತು. ಆರೋಪಿ ಶಿವಾಜಿ ರಾವ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಕುಂ.ವೀರಭದ್ರಪ್ಪ, ಬಿ.ಟಿ.ಲಲಿತ ನಾಯಕ್, ಬಂಜಗೆರೆ ಸೇರಿದಂತೆ ಎಡ ಪಂಥೀಯ ವಿಚಾರವುಳ್ಳ ಸಾಹಿತಿಗಳಿಗೆ ಬೆದರಿಕೆ ಹಾಕಲಾಗಿತ್ತು.
ಬೆಂಗಳೂರಿನಲ್ಲಿ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ARO ಚಂದ್ರಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಖಾತೆ ಮಾಡಿಕೊಡಲು 60,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಂದ್ರಪ್ಪ 10,000 ರೂ. ಪಡೆಯುವಾಗ ARO ಚಂದ್ರಪ್ಪ ಬೀರಜ್ಜೀನವರ್ ಬಂಧಿಸಲಾಗಿದೆ. ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರಿದಿದೆ. ಇದರ ಬೆನ್ನಲ್ಲೇ ಚಂದ್ರಪ್ಪ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಿದ್ದು ಬೆಂಗಳೂರಿನ ಕೆ.ಆರ್.ಪುರಂ ನಿವಾಸದ ಮೇಲೆ ದಾಳಿ, ಪರಿಶೀಲನೆ ನಡೆಸಲಾಗುತ್ತಿದೆ. ದಾಳಿ ವೇಳೆ 5 ಲಕ್ಷ ನಗದು ಹಣ, 30x40 ಅಳತೆಯ ಫ್ಲ್ಯಾಟ್, ರಾಣೆಬೆನ್ನೂರು ತಾಲೂಕಿನಲ್ಲಿ 6 ಎಕರೆ ಜಮೀನು ದಾಖಲೆ ಪತ್ರ, ಕೆ.ಆರ್.ಪುರಂನಲ್ಲಿ ಮೂರು ಹಂತಸ್ತಿನ ಕಟ್ಟಡದ ದಾಖಲೆ ಪತ್ರ ಪತ್ತೆಯಾಗಿದೆ.
ಗದಗ ಜಿಲ್ಲೆ ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ. ಅ.10ರಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದೇನೆ ಎಂದು ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿಯಲ್ಲಿ ಮಾಜಿ ಶಾಸಕ ರಾಮಣ್ಣ ತಿಳಿಸಿದರು. ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ, ನಾನು ಬಿಜೆಪಿಗೆ ಸೇರುತ್ತೇವೆ. ಇದೇ ವೇಳೆ ಬಿಜೆಪಿಯ ಹಲವು ಮಾಜಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು.
ಕೋಲಾರ ಶಾಸಕ ಹಾಗೂ ಸಂಸದ ಜಟಾಪಟಿಗೆ ಸಂಬಂಧಿಸಿ ಸಂಸದ ಮುನಿಸ್ವಾಮಿ, ಶಾಸಕ ನಾರಾಯಣಸ್ವಾಮಿ ವಿರುದ್ಧ FIR ದಾಖಲಾಗಿದೆ.
ಕೋಲಾರ ಶಾಸಕ-ಸಂಸದ ಜಟಾಪಟಿ: ಎಸ್ ಮುನಿಸ್ವಾಮಿ, ಎಸ್.ಎನ್ ನಾರಾಯಣಸ್ವಾಮಿ ವಿರುದ್ಧ FIR ದಾಖಲು#FIR #Kolar #SNNarayanaswamy #SMuniswamyhttps://t.co/N8mgoWSNN5
— TV9 Kannada (@tv9kannada) September 30, 2023
ಅ.15ರವರೆಗೆ 3000 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶ ವಿಚಾರಕ್ಕೆ ಸಂಬಂಧಿಸಿ ಪ್ರಾಧಿಕಾರದ ಆದೇಶ ಖಂಡಿಸಿ ಇಂದು ಮಂಡ್ಯದಲ್ಲಿ ಸಾಲು ಸಾಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯಿಂದ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ. ನಂತರ ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಕಾರ್ಯಕರ್ತರಿಂದ ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರಿಂದ ಶ್ರೀರಂಗಪಟ್ಟಣದಲ್ಲಿ ಬಾರುಕೋಲು ಚಳವಳಿ ನಡೆಯಲಿದೆ.
ಅ.15ರವರೆಗೆ 3000 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶ ಹಿನ್ನೆಲೆ ಆದೇಶ ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧಾರ ಮಾಡಿದೆ. ಇಂದು CWMA, ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ಕಷ್ಟ ಹೇಳಿಕೊಳ್ಳಲು ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ಮುಂದಾಗಿದೆ.
Published On - 7:59 am, Sat, 30 September 23